ಈಶ್ವರಪ್ಪರಿಗೆ ಧೈರ್ಯ ತುಂಬಿರುವುದು ಓಂ ಶಕ್ತಿ ಮಹಿಳೆಯರು ಮತ್ತು ಮೋದಿ ಮುಖದ ಫೋಟೋ!*
*ಈಶ್ವರಪ್ಪರಿಗೆ ಧೈರ್ಯ ತುಂಬಿರುವುದು ಓಂ ಶಕ್ತಿ ಮಹಿಳೆಯರು ಮತ್ತು ಮೋದಿ ಮುಖದ ಫೋಟೋ!*
ಕೆ.ಎಸ್.ಈಶ್ವರಪ್ಪ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಸೆಡ್ಡು ಹೊಡೆದಿರುವುದು ಗೊತ್ತಿರುವಂಥದ್ದೇ. ಆದರೆ, ಶಿವಮೊಗ್ಗ ಜಿಲ್ಲಾ ಬಿಜೆಪಿಯ ಅಷ್ಟೂ ಮಹಿಳಾ ಮಣಿಗಳ ಮೂಲಕ ಅವರು ಒಳ ಹೊಡೆತ ಆರಂಭಿಸಿದ್ದಾರೆ. ಬಹುತೇಕ ಬಿಜೆಪಿಯ ಮಹಿಳೆಯರು ಈ ಚುನಾವಣೆಯಲ್ಲಿ ಈಶ್ವರಪ್ಪ ಪರ ಕೆಲಸ ಮಾಡಿದ್ದಾರೆ. ಆ ಮಹಿಳೆಯರೆಲ್ಲ ಕೆಎಸ್ ಈ ಮನೆ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ದಿನಕಳೆದಂತೆಲ್ಲ ಬಿಜೆಪಿ ಅಭ್ಯರ್ಥಿಯ ಮುಖದ ಮೇಲಿನ ಮಂದಹಾಸ ಕಾಣೆಯಾಗುವಂತೆ ಈಶ್ವರಪ್ಪ ಚುನಾವಣಾ ನೀತಿ ರೂಪಿಸುತ್ತಿದ್ದಾರೆ. ಮೊದಲ ಹಂತದಲ್ಲಿ ಬಿಜೆಪಿಯ ಪ್ರಮುಖ ಮಹಿಳೆಯರ ಮೂಲಕ ಮಹಿಳಾ ಸಂಘಗಳನ್ನೆಲ್ಲ ಒಗ್ಗೂಡಿಸಿಕೊಂಡು ಮನೆ ಮನೆಗೆ ಪ್ರಚಾರಕ್ಕೆ ತೆರಳುವ ಸಿದ್ಧತೆಯಲ್ಲಿದ್ದಾರೆ. ಈ ಮಹಿಳಾ ಪ್ರಮುಖರ ಹತ್ತು ಹಲವು ಸಭೆಗಳು ಈಗಾಗಲೇ ಈಶ್ವರಪ್ಪ ಮನೆಯಲ್ಲಿ ಜರುಗಿವೆ, ಪ್ರತಿನಿತ್ಯ ಜರುಗತ್ತಲೂ ಇವೆ.
ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹೊರಟಿರುವ ಈಶ್ವರಪ್ಪ ಪ್ರಧಾನಿ ಮೋದಿಯವರ ಮುಖವನ್ನು ಮಾತ್ರ ಎಲ್ಲಿಯೂ ಬಿಡುತ್ತಿಲ್ಲ.
ಒಂದು ಕಡೆ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಕ್ಕಳನ್ನು ಉಗಿಯುತ್ತಲೇ ಬಿಜೆಪಿ ಸ್ವಚ್ಛತಾ ಆಂದೋಲನ ಹಾಕಿಕೊಂಡಿರುವ ಈಶ್ವರಪ್ಪ, ತಾವು ಪಕ್ಷೇತರವಾಗಿ ಗೆದ್ದು ಮತ್ತೆ ಮೋದಿ ಪಾದಕ್ಕೆ ಬೀಳುವ ಮಾತಾಡುತ್ತಲೇ ಇದ್ದಾರೆ.
ಯಡಿಯೂರಪ್ಪ ವಿರೋಧಿ ತಾನೆಂದು ಈಗಾಗಲೇ ಬಿಂಬಿಸಿಕೊಂಡಿರುವ ಈಶ್ವರಪ್ಪ ಎಲ್ಲಾ ಎಲ್ಲೆಗಳನ್ನೂ ಮೀರಿ ಪಕ್ಷೇತರ ಗೆಲುವು ಸಾಧಿಸುವ ಇರಾದೆಯಲ್ಲಿದ್ದಾರೆ. ಈ ಇರಾದೆ ಅಷ್ಟು ಸುಲಭದ್ದಲ್ಲ. ಇಲ್ಲಿ ಅವರಿಗೆ ಊರುಗೋಲಾಗಿ ಪ್ರಧಾನಿ ಮೋದಿ ಮುಖ ಬೇಕೇಬೇಕು. ಇಲ್ಲದಿದ್ದರೆ, ಅವರೇ ಭಾವಿಸಿದಂತೆ ಈಶ್ವರಪ್ಪ ಒಬ್ಬಂಟಿ ಎಂದಾಗಿಬಿಡುತ್ತಾರೆ.
ಮೋದಿಯ ಮುಖವನ್ನು ತಮ್ಮ ಜೊತೆಗೆ ಒಯ್ದರಷ್ಟೇ ರಾಜಕೀಯ ರಾಕ್ಷಸ ಯಡಿಯೂರಪ್ಪರನ್ನು, ಅವರ ಮಕ್ಕಳನ್ನು ಮಣಿಸಲು ಸಾಧ್ಯ ಎಂಬುದು ಈಶ್ವರಪ್ಪ ಲೆಕ್ಕಾಚಾರ.
ಅಂದಹಾಗೆ, ಈಶ್ವರಪ್ಪರಿಗೆ ಈಗ ಪಕ್ಷೇತರರಾಗಿ ನಿಲ್ಲಲು ಧೈರ್ಯ ತುಂಬಿರುವುದು ಓಂ ಶಕ್ತಿ ಮಹಿಳೆಯರು ಮತ್ತು ಮೋದಿ ಮುಖದ ಫೋಟೋ!
ಆದರೆ, ಈಶ್ವರಪ್ಪರ ಈ ಪ್ರಯತ್ನ ಶಿವಮೊಗ್ಗ ನಗರಕ್ಕೆ ಮಾತ್ರ ಸೀಮಿತವಾಗಿ ಕಾಣುತ್ತಿದೆ!!
– *ಶಿ.ಜು.ಪಾಶ*