ಗೀತಾ ಶಿವರಾಜ್ ಕುಮಾರ್;  ಬಂಗಾರಪ್ಪರಂತೆ ನಾನೂ ಗೆದ್ದು ಜನರ ಋಣ ತೀರಿಸುವೆ   ಮಧು ಬಂಗಾರಪ್ಪ; ಪಂಚ ಗ್ಯಾರಂಟಿಗಳಿಂದಲೇ ಗೆಲುವು   ಗೋಪಾಲಕೃಷ್ಣ ಬೇಳೂರು; ಮತದಾರರಿಗೆ ಮೋಸ ಮಾಡಿದ ಬಿಜೆಪಿ   ಆಯನೂರು ಮಂಜುನಾಥ್; ಆಸ್ತಿ ಇದ್ದ ಕಡೆ ಸಂಸದರ ಅಭಿವೃದ್ಧಿ

ಗೀತಾ ಶಿವರಾಜ್ ಕುಮಾರ್;  ಬಂಗಾರಪ್ಪರಂತೆ ನಾನೂ ಗೆದ್ದು ಜನರ ಋಣ ತೀರಿಸುವೆ
ಮಧು ಬಂಗಾರಪ್ಪ; ಪಂಚ ಗ್ಯಾರಂಟಿಗಳಿಂದಲೇ ಗೆಲುವು
ಗೋಪಾಲಕೃಷ್ಣ ಬೇಳೂರು; ಮತದಾರರಿಗೆ ಮೋಸ ಮಾಡಿದ ಬಿಜೆಪಿ
ಆಯನೂರು ಮಂಜುನಾಥ್; ಆಸ್ತಿ ಇದ್ದ ಕಡೆ ಸಂಸದರ ಅಭಿವೃದ್ಧಿ
ಸಾಗರ : ಮಲೆನಾಡಿನ ಅರಣ್ಯಭೂಮಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗೀತಾ ಶಿವರಾಜ ಕುಮಾರ್ ಅವರನ್ನು ಗೆಲ್ಲಿಸುವಂತೆ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.
ಇಲ್ಲಿನ ಈಡಿಗರ ಸಭಾಭವನದಲ್ಲಿ ಸೋಮವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರು, ವಾಸ ಮಾಡುತ್ತಿರುವವರು ತೀವೃ ಸಂಕಷ್ಟದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪಾ ಅವರ ಕನಸು ಸಹ ಅಂತಹವರಿಗೆ ಹಕ್ಕುಪತ್ರ ಕೊಡಬೇಕು ಎನ್ನುವುದು ಆಗಿತ್ತು. ಈತನಕ ಈಡೇರದ ಬಯಕೆಯನ್ನು ಗೀತಾ ಶಿವರಾಜ ಕುಮಾರ್ ನಿಮ್ಮ ಧ್ವನಿಯಾಗಿ ಈಡೇರಿಸುತ್ತಾರೆ. ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಗೀತಾ ಶಿವರಾಜ ಕುಮಾರ್ ಗೆಲುವಿನಲ್ಲಿ ಪ್ರಮುಖಪಾತ್ರ ವಹಿಸಲಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗೀತಾ ಅವರ ಪರವಾದ ಅಲೆಯಿದೆ. ಮುಂದಿನ ದಿನಗಳಲ್ಲಿ ಗೀತಾ ಮತ್ತು ಶಿವರಾಜ ಕುಮಾರ್ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಮತಯಾಚನೆ ನಡೆಸಲಿದ್ದಾರೆ ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಶೇ. 95ಕ್ಕೂ ಹೆಚ್ಚು ಯಶಸ್ವಿಯಾಗಿದೆ. ಕಾಂಗ್ರೇಸ್ ಸರ್ಕಾರದ ಸಾಧನೆ ರಾಜ್ಯದ ಮನೆಮನೆಯಲ್ಲಿ ಚರ್ಚೆಯಾಗುತ್ತಿದೆ. ಹಿಂದಿನ ಸರ್ಕಾರದಲ್ಲಿ ದುಷ್ಟಕೂಟವೊಂದು ಯಾವುದೇ ಅಭಿವೃದ್ದಿ ಕೆಲಸ ಮಾಡದೆ ಮತದಾರರನ್ನು ವಂಚಿಸಿದೆ. ಬಡವರ ಕಲ್ಯಾಣಕ್ಕಾಗಿ ಇರುವ ಉದ್ಯೋಗ ಖಾತ್ರಿ ಯಶಸ್ವಿಯಾಗಿಲ್ಲ, ಆಶ್ರಯ, ಅಕ್ರಮಸಕ್ರಮ ಯಾವುದೂ ಜನರಿಗೆ ಪರಿಣಾಮಕಾರಿಯಾಗಿ ತಲುಪಿಲ್ಲ. ಸಂಸದ ರಾಘವೇಂದ್ರ ನಾಲ್ಕೂವರೆ ವರ್ಷ ಎಲ್ಲಿಯೂ ಕಾಣ ಸಿಕೊಳ್ಳದೇ ಈಗ ಪ್ರತ್ಯಕ್ಷವಾಗಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಈಡಿಗರ ಸಮಾವೇಶ ಮಾಡಿ ಕಾಗೋಡು ತಿಮ್ಮಪ್ಪ ಅವರನ್ನು ಬಿಟ್ಟು ಯಡಿಯೂರಪ್ಪ ಅವರನ್ನು ಮಾಜಿ ಶಾಸಕ ಹಾಲಪ್ಪ ಸನ್ಮಾನಿಸಿದ್ದಾರೆ. ಅಭಿವೃದ್ದಿ ಯೋಜನೆಗೆ ಅನುದಾನ ತಂದಿದ್ದೇನೆಂದು ಸುಳ್ಳು ಪ್ರಚಾರ ಪಡೆಯುತ್ತಿರುವ ಹಿಂದಿನ ಶಾಸಕ ಹಾಲಪ್ಪ ಹಾಗೂ ಬಿಜೆಪಿ ಪಕ್ಷದ ವಿರುದ್ದ ಸೂಕ್ತ ದಾಖಲೆ ಹಾಜರು ಪಡಿಸಿ ತನಿಖೆ ನಡೆಸುತ್ತೇನೆ. ಕ್ಷೇತ್ರವ್ಯಾಪ್ತಿಯಲ್ಲಿ ಗೀತಾ ಶಿವರಾಜ ಕುಮಾರ್ ಅವರಿಗೆ ಅತಿಹೆಚ್ಚು ಮತ ಕೊಡಿಸಲು ಎಲ್ಲ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅಭಿವೃದ್ದಿ ಮಾಡಿದ್ದಾಗಿ ಹೇಳುತ್ತಾರೆ. ಅವರು ಅಭಿವೃದ್ದಿ ಮಾಡಿದ್ದು ಅವರ ಆಸ್ತಿ ಇರುವ ಕಡೆ ಮಾತ್ರ. ಇದರಿಂದ ಅವರ ಆಸ್ತಿಯ ಬೆಲೆ ಹೆಚ್ಚಿದಂತೆ ಆಗಿದೆ. ಯಡಿಯೂರಪ್ಪ ದೃತರಾಷ್ಟ್ರನಂತೆ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಪರದಾಡುತ್ತಿದ್ದಾರೆ. ಬಿಜೆಪಿ ಹಿಂದುಳಿದ ವರ್ಗಗಳ ಮತಗಳನ್ನು ವಿಭಜನೆ ಮಾಡಲು ಈಶ್ವರಪ್ಪ ಅವರನ್ನು ಪಕ್ಷೇತರವಾಗಿ ಕಣಕ್ಕೆ ಇಳಿಸಿದೆ. ಈಶ್ವರಪ್ಪ ಮತ್ತು ಯಡಿಯೂರಪ್ಪ ಆಸ್ತಿ ಮಾಡಿದ್ದೆ ಅವರ ಸಾಧನೆಯಾಗಿದೆ ಎಂದು ಹೇಳಿದರು.
ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ ಕುಮಾರ್ ಮಾತನಾಡಿ, ಲೋಕಸಭೆಯಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುವ ಆಸೆ ಇದ್ದು, ಮತದಾರರು ಅದಕ್ಕೆ ಅವಕಾಶ ಮಾಡಿಕೊಡಬೇಕು. ನಮ್ಮ ತಂದೆ ಬಂಗಾರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮಾಡಿರುವ ಸಾಧನೆ ಇಡೀ ರಾಜ್ಯದ ಜನರ ಮೆಚ್ಚುಗೆ ಗಳಿಸಿತ್ತು. ತಂದೆಯಂತೆ ನಾನೂ ಚುನಾವಣೆಯಲ್ಲಿ ಜಯಗಳಿಸಿ ಕ್ಷೇತ್ರದ ಜನರ ಋಣ ತೀರಿಸುತ್ತೇನೆ. ಈ ಬಾರಿ ಒಂದು ಅವಕಾಶವನ್ನು ಮತದಾರರು ಮಾಡಿಕೊಡಬೇಕು ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಚಿತ್ರನಟ ಶಿವರಾಜ್ ಕುಮಾರ್, ಆರ್.ಎಂ.ಮಂಜುನಾಥ ಗೌಡ, ಕಲಸೆ ಚಂದ್ರಪ್ಪ, ಬಿ.ಆರ್.ಜಯಂತ್, ಮಹಮ್ಮದ್ ಖಾಸಿಂ,ಅನಿತಾಕುಮಾರಿ,  ಅಶೋಕ್ ಬೇಳೂರು, ತಸ್ರೀಫ್ ಇಬ್ರಾಹಿಂ, ಮಕ್ಬೂಲ್ ಅಹ್ಮದ್, ಸುಮಂಗಲ ರಾಮಕೃಷ್ಣ ಇನ್ನಿತರರು ಹಾಜರಿದ್ದರು.