ಈ ಚುನಾವಣೆ ನಂತರ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ತೆರೆ; ಸಾಗರದಲ್ಲಿ ಮತ್ತೆ ಗುಡುಗಿದ ಕೆ.ಎಸ್.ಈಶ್ವರಪ್ಪ

ಈ ಚುನಾವಣೆ ನಂತರ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ತೆರೆ; ಸಾಗರದಲ್ಲಿ ಮತ್ತೆ ಗುಡುಗಿದ ಕೆ.ಎಸ್.ಈಶ್ವರಪ್ಪ
ಸಾಗರ : ಕಾಂಗ್ರೇಸ್‍ನಲ್ಲಿದ್ದ ಜಗದೀಶ್ ಶೆಟ್ಟರ್ ಅವರ ಮನೆಗೆ ಹೋಗಿ ಬಿಜೆಪಿಗೆ ಕರೆತಂದು ಟಿಕೇಟ್ ಕೊಡುತ್ತಾರೆ. ನಾವು ಟಿಕೇಟ್ ಕೇಳಿದರೆ ನಿರಾಕರಿಸುತ್ತಾರೆ. ಯಡಿಯೂರಪ್ಪ ಕೇಂದ್ರದ ವರಿಷ್ಟರ ಮೇಲೆ ತಮ್ಮ ಪ್ರಭಾವ ಬಳಸಿ ಟಿಕೇಟ್ ಹಂಚಿಕೆ ಮಾಡಿದ್ದಾರೆ. ಅದರ ಪರಿಣಾಮ ಏನು ಎನ್ನುವುದು ಲೋಕಸಭಾ ಚುನಾವಣೆ ನಂತರ ಗೊತ್ತಾಗಲಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಇಲ್ಲಿನ ಮಲೆನಾಡುಸಿರಿ ಸಭಾಂಗಣದಲ್ಲಿ ಭಾನುವಾರ ಕರೆಯಲಾಗಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ನಲವತ್ತು ವರ್ಷಗಳಿಂದ ಬಿಜೆಪಿಯಲ್ಲಿ ನಾನು ನಿಷ್ಟೆಯಿಂದ ಕೆಲಸ ಮಾಡಿದ್ದೇನೆ. ಲೋಕಸಭಾ ಚುನಾವಣೆ ಸಂದರ್ಭದ ಎರಡು ತಿಂಗಳು ನಾನು ಬಿಜೆಪಿಯಲ್ಲಿ ಇಲ್ಲ ಎನ್ನುವ ನೋವು ನನ್ನನ್ನು ಕಾಡುತ್ತದೆ. ಆದರೆ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೆದ್ದು ಮತ್ತೆ ಬಿಜೆಪಿಗೆ ಹೋಗುತ್ತೇನೆ ಎಂದು ಹೇಳಿದರು.
ದೇಶ ಮತ್ತು ರಾಜ್ಯದಲ್ಲಿ ಈಶ್ವರಪ್ಪ ಸ್ಪರ್ಧೆ ಮಾಡಿರುವ ಬಗ್ಗೆ ದೊಡ್ಡಮಟ್ಟದ ಚರ್ಚೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಕುಟುಂಬ ರಾಜಕಾರಣ ವಿರೋಧಿಸಿಕೊಂಡು ಬಂದಿದ್ದಾರೆ. ಈ ಲೋಕಸಭಾ ಚುನಾವಣೆ ನಂತರ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಕೊನೆಯಾಗಲಿದೆ. ನನ್ನ ಸ್ಪರ್ಧೆ ಬಿಜೆಪಿ ವಿರುದ್ದವಲ್ಲ. ಕುಟುಂಬ ರಾಜಕಾರಣದ ವಿರುದ್ದ ಎಂದ ಅವರು, ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ತೊಲಗಬೇಕು ಎಂದು ಪುನರುಚ್ಚರಿಸಿದರು.
ಸಾಮಾಜಿಕ ಕಾರ್ಯಕರ್ತ ಅಬಸೆ ದಿನೇಶಕುಮಾರ್ ಜೋಷಿ ಮಾತನಾಡಿ, ಭಾರತೀಯ ಸಂಸ್ಕøತಿ, ಹಿಂದುತ್ವ, ಸನಾತನ ಧರ್ಮ ಮತ್ತು ಸೈದ್ದಾಂತಿಕ ನೆಲಗಟ್ಟಿನ ಮೇಲೆ ರಾಜಕಾರಣ ಮಾಡಿಕೊಂಡು ಬಂದಿರುವುದು ಜನಸಂಘ ಮತ್ತು ಬಿಜೆಪಿ. ಅದನ್ನು ಕಾಲಕಾಲಕ್ಕೆ ಮುಂದುವರೆಸಿಕೊಂಡು ಬರಲಾಗುತ್ತಿದೆ. ಹಿಂದಿನಿಂದಲೂ ನಾನು ಕೆ.ಎಸ್.ಈಶ್ವರಪ್ಪ ಅವರ ಕುಟುಂಬದ ಹಿತೈಷಿ.  ವೈಯಕ್ತಿಕ ಹಿತಚಿಂತನೆ ಬದಿಗಿಟ್ಟು ದೇಶದ ಬಗ್ಗೆ ಚಿಂತನೆ ಮಾಡುವವರು ಈಶ್ವರಪ್ಪ. ಹಿಂದಿನಿಂದಲೂ ಅದನ್ನು ನಡೆಸಿಕೊಂಡು ಬಂದಿದ್ದಾರೆ. ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ಈಶ್ವರಪ್ಪ ಅವರು ಧ್ವನಿ ಎತ್ತಿದ್ದರೆ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇತ್ತು. ಅದೇನೆ ಇದ್ದರೂ ಪ್ರಸ್ತುತ ಈಶ್ವರಪ್ಪ ಅವರ ತೆಗೆದುಕೊಂಡ ತೀರ್ಮಾನಕ್ಕೆ ಜನಾಭಿಪ್ರಾಯ ಸಂಗ್ರಹವಾಗುತ್ತಿರುವುದು ಗಮನಾರ್ಹ ಬೆಳವಣ ಗೆಯಾಗಿದೆ ಎಂದರು.
ವೇದಿಕೆಯಲ್ಲಿ ಎಸ್.ವಿ.ಕೃಷ್ಣಮೂರ್ತಿ, ಪ್ರಕಾಶ್ ಕುಂಠೆ, ಎಸ್.ಎಲ್.ಮಂಜುನಾಥ್, ಕಸ್ತೂರಿ ಸಾಗರ್, ಸತೀಶ್ ಹಕ್ರೆ, ನಾಗರಾಜ್ ಮೊಗವೀರ ಇನ್ನಿತರರು ಹಾಜರಿದ್ದರು.