ಬಿ.ವೈ.ರಾಘವೇಂದ್ರರವರು ಸುದ್ದಿಗೋಷ್ಠಿಯಲ್ಲಿ ಮಾತಾಡಿದ್ದೇನು?   ‘ಶರಾವತಿ ಸಂತ್ರಸ್ಥರ ಮತ್ತು ವಿ.ಐ.ಎಸ್.ಎಲ್. ಕಾರ್ಖಾನೆ ಕಾರ್ಮಿಕರ ಸಮಸ್ಯೆಯನ್ನು  ಖಂಡಿತ ಬಗೆಹರಿಸುತ್ತೇನೆ’   ಸಂಸ್ಕೃತಿ ಮರೆತ ಕಾಂಗ್ರೆಸ್- ಮಧುಗೆ ಹೇಗೆ ಮಾತಾಡಬೇಕೆಂಬುದೇ ಗೊತ್ತಿಲ್ಲ’

ಬಿ.ವೈ.ರಾಘವೇಂದ್ರರವರು ಸುದ್ದಿಗೋಷ್ಠಿಯಲ್ಲಿ ಮಾತಾಡಿದ್ದೇನು?
‘ಶರಾವತಿ ಸಂತ್ರಸ್ಥರ ಮತ್ತು ವಿ.ಐ.ಎಸ್.ಎಲ್. ಕಾರ್ಖಾನೆ ಕಾರ್ಮಿಕರ ಸಮಸ್ಯೆಯನ್ನು  ಖಂಡಿತ ಬಗೆಹರಿಸುತ್ತೇನೆ’
ಸಂಸ್ಕೃತಿ ಮರೆತ ಕಾಂಗ್ರೆಸ್- ಮಧುಗೆ ಹೇಗೆ ಮಾತಾಡಬೇಕೆಂಬುದೇ ಗೊತ್ತಿಲ್ಲ’
ಶಿವಮೊಗ್ಗ,
ಶರಾವತಿ ಸಂತ್ರಸ್ಥರ ಮತ್ತು ವಿ.ಐ.ಎಸ್.ಎಲ್. ಕಾರ್ಖಾನೆ ಕಾರ್ಮಿಕರ ಸಮಸ್ಯೆಯನ್ನು ನಾನು ಖಂಡಿತ ಬಗೆಹರಿಸುತ್ತೇನೆ ಈಗಾಗಲೇ ಈ ಬಗ್ಗೆ ಪ್ರಯತ್ನದ ಹಾದಿ ಮುಂದುವರೆದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಾವತಿ ಸಂತ್ರಸ್ಥರ ಮತ್ತು ವಿ.ಐ.ಎಸ್.ಎಲ್. ಕಾರ್ಖಾನೆ ಸಮಸ್ಯೆ ಬಿಜೆಪಿ ಸರ್ಕಾರದ್ದಲ್ಲ. ೧೯೮೦ರವರೆಗು ಮತ್ತು ಅದಾದ ನಂತರವು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು. ನಾಡಿನ ಬೆಳಕಿಗಾಗಿ ಭೂಮಿ ಕಳೆದುಕೊಂಡ ಮುಳುಗಡೆ ಸಂತ್ರಸ್ಥರ ಸಮಸ್ಯೆಯನ್ನು ಆಗಿನ ಕಾಂಗ್ರೆಸ್ ಸರ್ಕಾರ ಏಕೆ ಬಗೆಹರಿಸಲಿಲ್ಲ. ಈಗ ನಮ್ಮ ಕಡೆ ಬೆರಳು ತೋರಿಸುತ್ತಿದ್ದಾರೆ ಎಂದರು.
ಕಾಗೋಡು ತಿಮ್ಮಪ್ಪನವರು ವಿಧಾನಸಭಾ ಅಧ್ಯಕ್ಷರಾಗಿದ್ದಾಗ ಮತ್ತು ಸಚಿವರಾಗಿದ್ದಾಗ ಈ ಬಗ್ಗೆ ಒಂದಿಷ್ಟು ಕಾಯಕಲ್ಪ ನೀಡಿದ್ದರು ಎಂದು ನಾನು ಒಪ್ಪಿಕೊಳ್ಳುತ್ತೇನೆ ೯೯೦೦ ಎಕರೆಯಲ್ಲಿ ಸುಮಾರು ೫೦೦೦ ಎಕರೆಯನ್ನು ಡಿ.ನೋಟಿಪೀಕೇಷನ್‌ಗಾಗಿ ಅವರು ಪ್ರಯತ್ನಪಟ್ಟಿದ್ದರು. ಆದರೆ ಆಗ ಕೇಂದ್ರದ ಒಪ್ಪಿಗೆ ಪಡೆಯಬೇಕಿತ್ತು. ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯದೇ ಇದ್ದುದ್ದರಿಂದ ಸುಪ್ರೀಂ ಕೋರ್ಟ್ ಇದಕ್ಕೆ ಒಪ್ಪಿಲ್ಲ ಎಂದರು.
ಇದು ಕಾಂಗ್ರೆಸ್ಸಿನ ಸರ್ಕಾರದ ತಪ್ಪಾಗಿದೆ. ಈ ತಪ್ಪನ್ನು ನಾವು ಸರಿಮಾಡಲು ಸತತ ಹೋರಾಟ ಮಾಡುತ್ತಿದ್ದೇವೆ. ಸಂಸತ್‌ನಲ್ಲಿ ಮಾತನಾಡಿಲ್ಲ ಎಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ಆದರೆ ನಾನು ಮಾತನಾಡಿರುವುದನ್ನು ರಾಜ್ಯದ ಎಲ್ಲಾ ಪತ್ರಿಕೆಗಳು ವರದಿ ಮಾಡಿದೆ ಎಂದು ಪತ್ರಿಕಾ ವರದಿಯನ್ನು ತೋರಿಸಿದರು.
ಶರಾವತಿ ಸಂತ್ರಸ್ಥರು ಭಿಕ್ಷೆ ಕೇಳುತ್ತಿಲ್ಲ. ಅದು ಅವರ ಹಕ್ಕು, ಅವರ ಸಮಸ್ಯೆಯನ್ನು ನಾನು ಖಂಡಿತ ಬಗೆಹರಿಸುತ್ತೇನೆ. ಆ ಪ್ರಯತ್ನ ಈಗಾಗಲೇ ಮುಂದುವರೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಸಂತ್ರಸ್ಥರ ಸಮಸ್ಯೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ಗೆ ಆಫಿಡವೆಟ್ ಕೂಡ ಹಾಕಿಲ್ಲ ಎಂದರು.
ಹಾಗೆಯೇ, ವಿ.ಐ.ಎಸ್.ಎಲ್. ಕಾರ್ಖಾನೆ ಸಂಕಷ್ಟದಲ್ಲಿದ್ದಾಗ ರಾಜ್ಯ ಸರ್ಕಾರ ಅದನ್ನು ಕೇಂದ್ರಕ್ಕೆ ವಹಿಸಿಕೊಟ್ಟಿತ್ತು. ಒಂದು ಪಕ್ಷ ವಿ.ಐ.ಎಸ್.ಎಲ್. ಕಾರ್ಖಾನೆ ನಷ್ಟ ಹೊಂದಿದರೆ ಅದನ್ನು ಮತ್ತೆ ರಾಜ್ಯ ಸರ್ಕಾರಕ್ಕೆ ವಾಪಾಸ್ಸು ಕೊಡಬೇಕು ಎಂಬ ನಿಯಮವನ್ನು ಅಂದಿನ ರಾಜ್ಯ ಸರ್ಕಾರ ಮಾಡಲಿಲ್ಲ. ಇದು ಕೂಡ ಕಾಂಗ್ರೆಸ್ ಸರ್ಕಾರದ ತಪ್ಪು, ಆದರೆ ನಾನು ಸಂಸದನಾದ ಮೇಲೆ ವಿ.ಐ.ಎಸ್.ಎಲ್. ಕಾರ್ಖಾನೆಗೆ ಬೀಗ ಹಾಕಲು ಬಿಟ್ಟಿಲ್ಲ. ಹಾಗೆಯೇ ಎಂಪಿಎಂ ಕಾರ್ಖಾನೆಯ ಪುನಶ್ಚೇತನಕ್ಕೂ ನಾನು ಪ್ರಯತ್ನಿಸುತ್ತಿದ್ದೇನೆ ಎಂದರು.
ಹಾಗೆಯೇ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಇದು ಪಾರದರ್ಶಕವಾಗಿದೆ. ಸುಪ್ರೀಂ ಕೋರ್ಟ್‌ಗೆ ಈಗಾಗಲೇ ನಮ್ಮ ಪಕ್ಷ ವಿವರವನ್ನು ತಿಳಿಸಿದೆ. ತನಿಖಾ ಸಂಸ್ಥೆಗಳು ತಮ್ಮ ಕೆಲಸ ತಾವು ಮಾಡುತ್ತವೆ ಎಂದರು.
*ಸಂಸ್ಕೃತಿ ಮರೆತ ಕಾಂಗ್ರೆಸ್- ಮಧುಗೆ ಹೇಗೆ ಮಾತಾಡಬೇಕೆಂಬುದೇ ಗೊತ್ತಿಲ್ಲ’
ಸಾರ್ವಜನಿಕ ಸಭೆಗಳಲ್ಲಿ ಹೇಗೆ ಮಾತನಾಡಬೇಕು ಎಂಬ ಅರಿವೇ ಮಧುಬಂಗಾರಪ್ಪನವರಿಗೆ ಗೊತ್ತಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ತೀಕ್ಷ್ಣ ಪ್ರತಿಕ್ರಿಯಿಸಿದರು.
ಅವರು ಇಂದು ಬಿಜೆಪಿ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ, ಸಂಸ್ಕೃತಿ ಇದೆ, ಆದರೆ ಕಾಂಗ್ರೆಸ್ಸಿಗರಿಗೆ ಇದರ ಅರಿವೇ ಇಲ್ಲ. ಚುನಾವಣೆಗಳು ಬಂದಾಗ ಅಭಿವೃದ್ಧಿ, ಸಾಧನೆ, ವೈಪಲ್ಯ ಕುರಿತಂತೆ ಚರ್ಚೆಗಳು ನಡೆಯುವುದು ಸಹಜವೇ. ಆದರೆ, ಈ ಚರ್ಚೆಗಳು ಮತ್ತು ಮಾತುಗಳು ಉಪಯೋಗಿಸುವ ರೀತಿ ಮಾತ್ರ ಬೇರೆಯದೇ ಆಗಿದ್ದು, ಕಾಂಗ್ರೆಸ್‌ನವರು ತಮ್ಮ ಸಂಸ್ಕೃತಿಯನ್ನೇ ಮರೆತಿದ್ದಾರೆ ಎಂದರು.
ಶಿಕಾರಿಪುರದ ಸಭೆಯೊಂದರಲ್ಲಿ ಮಧುಬಂಗಾರಪ್ಪನವರು ಬಿಜೆಪಿ ಕಾರ್ಯಕರ್ತರನ್ನು ಚೇಲಗಳು ಎಂದು ಕರೆದಿದ್ದಾರೆ. ಆದರೆ ಇವರಿಗೆ ನೆನಪಿರಲಿ ಇದೇ ಚೇಲಗಳು ಇವರ ತಂದೆ ಬಂಗಾರಪ್ಪನವರ ಪರವಾಗಿ ಕೆಲಸ ಮಾಡಿದ್ದರು ಎಂದರು.
ಪ್ರಧಾನಿ ಮೋದಿಯವರಿಗೆ ಗೌರವ ಕೊಟ್ಟರೆ ದೇಶ ಭಕ್ತ ಎಂದು ಕರೆದರೆ, ಇವರಿಗೇಕೆ ಸಿಟ್ಟು, ಮಧುಬಂಗಾರಪ್ಪ ಜೆಡಿಎಸ್‌ನಲ್ಲಿ ಇದ್ದಾಗ ದೇವೇಗೌಡರನ್ನು ದೇವರು ಎಂದು ಕರೆದಿರಲಿಲ್ಲವೇ? ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯ ೧೦ ವರ್ಷದ ಸಾಧನೆ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ೬೮ ವರ್ಷಗಳ ಕಾಲ ಏನು ಮಾಡಿದ್ದೇವೆ ಎಂದು ತಿರುಗಿ ನೋಡಲಿ. ಶಿವಮೊಗ್ಗದಲ್ಲಿ ಆದ ಅಭಿವೃದ್ಧಿಯ ಬಗ್ಗೆ ಇವರಿಗೆ ಮಾತನಾಡುವ ಹಕ್ಕಾದರೂ ಏನಿದೆ? ಸೇತುವೆ, ರೈಲ್ವೆ, ವಿಮಾನ ಇವೆಲ್ಲವೂ ಇವರಿಗೆ ಕಾಣಿಸುದಿಲ್ಲವೇ ಎಂದು ಪುನರುಚ್ಛರಿಸಿದರು.
ಕಾಂಗ್ರೆಸ್ಸ್‌ನವರ ಟೀಕೆಗೆ ಅವರ ಅಸಭ್ಯತನ ಮಾತುಗಳಿಗೆ ಮತದಾರ ಖಂಡಿತ ಉತ್ತರ ಕೊಡುತ್ತಾನೆ. ಈ ಬಾರಿ ನಾವು ೪೦೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಈಗಾಗಲೇ ಲೋಕಸಭೆಯಲ್ಲಿ ಕಾಂಗ್ರೆಸ್ಸಿಗೆ ವಿರೋಧ ಪಕ್ಷದ ಸ್ಥಾನವು ಸಿಕ್ಕಿಲ್ಲ. ಮುಂದೆ ಅವರಿಗೆ ಗ್ಯಾಲರಿಯೇ ಗತಿಯಾಗಬಹುದು ಎಂದು ಹಂಗಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರುದ್ರೇಗೌಡ, ಆರ್.ಕೆ.ಸಿದ್ರಾಮಣ್ಣ, ಟಿ.ಡಿ.ಮೇಘರಾಜ್, ಡಿ.ಎಸ್.ಅರುಣ್, ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಬಳಿಗಾರ್, ಗಾಯಿತ್ರಿ ಮಲ್ಲಪ್ಪ, ಶಿವರಾಜ್, ಜಗದೀಶ್ ಸೇರಿದಂತೆ ಹಲವರಿದ್ದರು.ಬಾಕ್ಸ್ : ಸೂಕ್ತ ಸಮಯದಲ್ಲಿ ಕೆ.ಎಸ್.ಈಶ್ವರಪ್ಪನವರ ಬಗ್ಗೆ ಪಕ್ಷದ ಹಿರಿಯರು ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಪ್ರಮಯ ಬರಲಾರದು ಎಂಬ ವಿಶ್ವಾಸ ನನಗಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಕೆ.ಎಸ್.ಈಶ್ವರಪ್ಪನವರು ಈಗಾಗಲೇ ಬಂಡಾಯ ಎದಿದ್ದಾರೆ. ನಿಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಆದರು ನಿಮ್ಮ ತಾಳ್ಮೆ ಏಕಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ತಾಳ್ಮೆ ಬಹು ಮುಖ್ಯ ಅವರು ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಪಕ್ಷದ ಹಿರಿಯರು ಅವರ ಚಟುವಟಿಕೆಯನ್ನು ಗಮನಿಸುತ್ತಿದ್ದಾರೆ. ಖಂಡಿತ ಸೂಕ್ತ ಸಂದರ್ಭದಲ್ಲಿ ಕ್ರಮ ತೆಗೆದುಕೊಳ್ಳುತಾರೆ ಎಂದರು.
ಈಶ್ವರಪ್ಪನವರ ಬಗ್ಗೆ ಅವರು ಹಿಂದುತ್ವದ ಬಗ್ಗೆ ನಮಗೂ ಗೌರವಿದೆ. ಹಿಂದುತ್ವಕ್ಕೆ ಬಿ.ಎಸ್.ಯಡಿಯೂರಪ್ಪನವರ ಕೊಡುಗೆ ಏನು ಇಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಅವರಿಗೆ ನೆನಪು ಇರಲಿ, ನಾನುಕೂಡ ಆರ್‌ಎಸ್‌ಎಸ್ ಶಾಲೆಯಲ್ಲಿಯೇ ಕಲಿತವನು, ರಾಮಮಂದಿರ ವಿಷಯ ಬಂದಾಗ, ಈದ್ಗಾ ಮೈದಾನ ವಿಷಯ ಬಂದಾಗ, ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ಬಿ.ಎಸ್.ಯಡಿಯೂರಪ್ಪನವರು ಏನು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಮೋದಿಗಿಂತ ಹಿಂದುತ್ವ ಬೇಕಾ, ಅವರು ಹೀಗೆ ಮಾತನಾಡಿದ್ದಕ್ಕೆ ಖಂಡಿತ ಬೇಜರಿದೆ. ಕಾಲ ಹೀಗೆ ಇರುವುದಿಲ್ಲ. ಆದಷ್ಟು ಬೇಗ ಒಳ್ಳೆಯ ದಿನಗಳು ಬರುತ್ತವೆ. ಬೆಳಗಾವಿ ದಾವಣಗೆರೆಯಲ್ಲಿ ಭಿನ್ನಮತ ಶಮನವಾಗಿದೆ. ಶಿವಮೊಗ್ಗದಲ್ಲಿಯೂ ಆಗಲಿದೆ ಎಂದರು.