ಏ. 12 ರಿಂದ 22 ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ನಿಷೇದಾಜ್ಞೆ ಜಾರಿ*

*ಏ. 12 ರಿಂದ 22 ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ನಿಷೇದಾಜ್ಞೆ ಜಾರಿ*

ಶಿವಮೊಗ್ಗ

ಲೋಕಸಭೆ ಚುನಾವಣೆ-2024 ರ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು ನಾಮಪತ್ರ ವೇಳಾಪಟ್ಟಿಯನ್ನು ನೀಡಿದ್ದು, ಏ. 12 ರಂದು ಅಧಿಸೂಚನೆ ಹೊರಡಿಸುವುದು, ಏ.19 ನಾಮಪತ್ರ ಸಲ್ಲಿಸಲು ಕೊನೆಯ ದಿನ, ಏ.20 ನಾಮಪತ್ರಗಳ ಪರಿಶೀಲನೆ ಹಾಗೂ ಏ.22 ನಾಮಪತ್ರ ಹಿಂಪಡೆಯುವ ದಿನಾಂಕವಾಗಿದ್ದು, ಈ ಅವಧಿಯಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಸುಗಮ ಮತ್ತು ಶಾಂತಿಯುತವಾಗಿ ನಡೆಯಬೇಕಾಗಿರುವುದರಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಏ-12 ರ ಬೆಳಗ್ಗೆ 6 ರಿಂದ ಏ-22 ರ ಸಂಜೆ 6.00 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದ 100 ಮೀ. ವ್ಯಾಪ್ತಿಯ ಸುತ್ತಮುತ್ತ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.
ನಿಷೇದಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳ ವಾಹನ ಒಳಗೊಂಡಂತೆ 3 ವಾಹನಗಳಿಗೆ ಮಾತ್ರ ಕಚೇರಿ ಆವರಣದಲ್ಲಿ ನಿಲುಗಡೆಗೆ ಅನುಮತಿ ನೀಡಿದೆ. ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕಚೇರಿ ಪ್ರವೇಶಿಸುವ ಅಭ್ಯರ್ಥಿಯನ್ನು ಒಳಗೊಂಡಂತೆ 5 ಜನರಿಗೆ ಮಾತ್ರ ಅನುಮತಿ ನೀಡಿದೆ. 5 ಮಂದಿಗಿಂತ ಹೆಚ್ಚು ಮಂದಿ ಗುಂಪುಗಾರಿಕೆ ನಡೆಸುವುದು, ಆಯುಧ ಶಸ್ತ್ರಾಸ್ತ್ರ ಮತ್ತು ಮಾರಾಕಾಸ್ತ್ರಗಳನ್ನು ಹಿಡಿದು ತಿರುಗುವುದನ್ನು ನಿರ್ಭಂದಿಸಿದೆ. ಚುನಾವಣಾ ಕಾರ್ಯದ ಮೇಲೆ ನಿರತವಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಅಭ್ಯರ್ಥಿಗಳು, ಅನುಮತಿ ಹೊಂದಿದ ರಕ್ಷಣಾ ಇಲಾಖೆಯವರು ಹಾಗೂ ಅನುಮತಿ ಪಡೆದ ಮಾಧ್ಯಮದವರನ್ನು ಹೊರತುಪಡಿಸಿ, ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ.
ಯಾವುದೇ ರೀತಿಯ ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು, ಮೆರವಣಿಗೆ ನಡೆಸುವುದು ಹಾಗೂ ಶಾಂತಿ ಶಿಸ್ತು ಪಾಲನೆಗೆ ಭಂಗ ತರುವ ರೀತಿಯಲ್ಲಿ ವರ್ತಿಸುವಂತಿಲ್ಲ. ಯಾವುದೇ ರೀತಿಯ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡವಂತಿಲ್ಲ. ಸಾರ್ವಜನಿಕವಾಗಿ ಯಾವುದೇ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಗಾಂಭಿರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳನ್ನು ನಿಷೇಧಿಸಿದೆ.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಆದೇಶವು ಪೊಲೀಸ್ ಅಧಿಕಾರಿಗಳಿಗೆ ಹಾಗೂ ಚುನಾವಣಾ ಕಾರ್ಯನಿರತ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ.
———————–