ಕುಟುಂಬದಿಂದ ಬಿಜೆಪಿ ಅಪಹರಣ ಆಗಲು ಬಿಡುವುದಿಲ್ಲ : ಕೆ.ಎಸ್.ಈಶ್ವರಪ್ಪ

ಕುಟುಂಬದಿಂದ ಬಿಜೆಪಿ ಅಪಹರಣ ಆಗಲು ಬಿಡುವುದಿಲ್ಲ : ಕೆ.ಎಸ್.ಈಶ್ವರಪ್ಪ
ಸಾಗರ: ಈಡಿಗರು, ಲಿಂಗಾಯತರು ಎಲ್ಲಾ ಸೇರಿ ಇಡೀ ಹಿಂದೂ ಸಮಾಜ ನನ್ನ ಕಡೆ ಇದೆ. ನಾನು ರಾಷ್ಟ್ರೀಯವಾದಿ ಎಂದು ಜನ ನನಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ, ಕೆ.ಎಸ್‌.ಈಶ್ವರಪ್ಪ ಹೇಳಿದರು.
ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ರಾಷ್ಟ್ರ ಭಕ್ತರ ಬಳಗ ಸಾಗರ ವಿಭಾಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯರ್ತರ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ನವರು ಎಲ್ಲಾ ಈಡಿಗರು ನಮ್ಮ ಜೊತೆ ಇದ್ದಾರೆ ಎನ್ನುತ್ತಾರೆ. ಯಡಿಯೂರಪ್ಪ ಮಗ ಎಲ್ಲಾ ಲಿಂಗಾಯತರು ನಮ್ಮ ಕಡೆ ಇದ್ದಾರೆ ಎನ್ನುತ್ತಾರೆ. ಆದರೆ, ನಾನು ರಾಷ್ಟ್ರೀಯವಾದಿ ಎಂದು ಜನ ನನಗೆ ಬೆಂಬಲ ಕೊಡುತ್ತಿದ್ದಾರೆ. ಜಾತಿ ಹೆಸರು ಹೇಳಿಕೊಂಡು ಮೋಸ ಮಾಡಿದವರಿಗೆ ಈಶ್ವರಪ್ಪನ ಗೆಲ್ಲಿಸುವ ಮೂಲಕ ಉತ್ತರ ಕೊಡುತ್ತೇವೆ ಎಂದು ಭದ್ರಾವತಿಯ ಒಕ್ಕಲಿಗ ಸಮಾಜದವರು ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.
ಬೈಂದೂರಿನಲ್ಲಿಯೂ ಸಹ ಹಿಂದೂ ಸಂಘಟನೆಯ ಅನೇಕ ಪ್ರಮುಖರು ನಾವೆಲ್ಲರೂ ನಿಮಗೆ ಬೆಂಬಲವಾಗಿದ್ದೇವೆ. ಚುನಾವಣೆಯಲ್ಲಿ ನೀವು ನೂರಕ್ಕೆ ನೂರು ಗೆಲ್ಲುತ್ತೀರಾ ಎಂದು ಆಶೀರ್ವಾದ ಮಾಡಿದ್ದಾರೆ. ಚುನಾವಣೆ ಎಂದರೆ ಜಾತಿ ಹಣ ತೋಳ್ಬಲದಿಂದ ನಡೆಯುತ್ತೆ ಎಂದು ತಿಳಿದಿದ್ದೆ. ಆದರೆ, ಜಾತಿ ಹಣ ಎಲ್ಲಾ ಪಕ್ಕಕ್ಕೆ ಇಟ್ಟು ಬಡವರು ಧರ್ಮದ ಪರವಾಗಿ ನಿಂತು ಧರ್ಮ ಗೆಲ್ಲಿಸಲು ನೀವೆಲ್ಲ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವುದು ನೋಡಿದರೆ ನನ್ನ ಗೆಲ್ಲುವು ನಿಶ್ಚಯವಾಗಿದೆ ಎಂದರು.
ಸಾಗರ ಶಿವಮೊಗ್ಗ ಜಿಲ್ಲೆಗೆ ಒಳ್ಳೆಯದಾಗಲು ಮೋದಿಯವರನ್ನು ಪ್ರಧಾನಿ ಮಾಡಿದ ಸಂತೃಪ್ತಿಗಾಗಿ ನನ್ನನ್ನು ಗೆಲ್ಲಿಸಲು ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನನಗೆ ಆಶೀರ್ವಾದ ಮಾಡಲು ಬಂದಿರುವುದು ನನ್ನ ಭಾಗ್ಯ. ಬಿಜೆಪಿ ಪಕ್ಷವನ್ನು ಕಾರ್ಯಕರ್ತರು ರಕ್ತವನ್ನು ಬೆವರಿನ ಹಾಗೆ ಸುರಿಸಿ ಪಕ್ಷ ಕಟ್ಟಿದ್ದರ ಫಲವಾಗಿ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ. ಪ್ರಪಂಚವೇ ಮೆಚ್ಚಿದ ನರೇಂದ್ರ ಮೋದಿ ಬಿಜೆಪಿ ಎನ್ನುವುದೇ ನಮ್ಮ ಹೆಮ್ಮೆ ಎಂದರು.
ಇಂದು ಬಿಜೆಪಿಯಲ್ಲಿ ಕೆಲ ಕುಟುಂಬಗಳು ಮಾಡುತ್ತಿರುವ ಷಡ್ಯಂತ್ರದಿಂದಾಗಿ ರಾಜ್ಯದಲ್ಲಿ ಪಕ್ಷ ಕಟ್ಟಿದ ಅನೇಕ ಹಿರಿಯರು ಯುವಕರು ನೋವು ಪಡುತ್ತಿದ್ದಾರೆ. ಕೇಂದ್ರದ ನಾಯಕ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಒಬ್ಬ ಮಗನ ಸಂಸದ, ಮತ್ತೊಬ್ಬ ಮಗನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದೆಲ್ಲಾ ಕೇಂದ್ರದವರಿಗೆ ಯಾರು ಹೇಳಬೇಕು. ಕಾರ್ಯಕರ್ತರ ನೋವನ್ನು ಯಾರು ಕೇಳಬೇಕು. ಈಗಿನ ಪರಿಸ್ಥಿತಿಯಲ್ಲಿ ಇಂಥವರ ಹಿಂದೆ ಹೋಗಿ ಅಧಿಕಾರ ಹೊಡಿಯುತ್ತಿದ್ದಾರೆ ಶ್ರಮ ಹಾಕಿದ ಕಾರ್ಯಕರ್ತರು ಹಿಂದೆ ಸರಿದಿದ್ದಾರೆ ಎಂದು ತಿಳಿಸಿದರು.
ಸಿ.ಟಿ.ರವಿ, ಪ್ರತಾಪ್ ಸಿಂಹ, ಸದಾನಂದ ಗೌಡರಂತ ಒಕ್ಕಲಿಗ ನಾಯಕರಿಗೆ ಡಿಕೆಟ್ ಕೊಡದೆ ಮೂಲೆಗುಂಪು ಮಾಡಿದ್ದಾರೆ. ಹಿಂದುತ್ವ ಬಗ್ಗೆ ಮಾತನಾಡಿದ ಅನಂತ್ ಕುಮಾರ್ ಹೆಗ್ಗಡೆ, ಬಸವನಗೌಡ ಪಾಟೀಲ್ ಯತ್ನಾಳ್ ರನ್ನೂ ಸಹ ಮೂಲೆ ಗುಂಪು ಮಾಡಿದ್ದಾರೆ. ಹಿಂದುತ್ವ ಬಗ್ಗೆ ಮಾತನಾಡುವುದೇ ತಪ್ಪಾ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಸಾಗರ ಮಾಜಿ ನಗರ ಸಭಾ ಸದಸ್ಯರಾದ ಮಂಜುನಾಥ್, ಕಸ್ತೂರಿ ಸಾಗರ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಗೌಡ, ಕೆಳದಿ ಗ್ರಾಮ ಪಂಚಾಯತಿ ಸದಸ್ಯ ಗೋಪಾಲ್, ವೀಣಾ ಸತೀಶ್, ರಜನೀಶ್ ಹಕ್ರೆ,ಸುರೇಶ್ ವಾಟ್ಗೋಡು, ಹೇಮ ರವಿ, ಚೇತನ್ ಗೌಡ ಹರತಾಳು, ಆನಂದ ಪುರ ನಾರಾಯಣ ಸೇರಿದಂತೆ ಹಲವರು ಇದ್ದರು
——————————
ಚುನಾವಣೆಗೆ ನಿಂತ ಮೇಲೆ ಎಲ್ಲಾ ಜಾತಿಯ ಸಮಾಜದವರಿಂದ ನನಗೆ ಬೆಂಬಲ ಸಿಕ್ಕಿದೆ. ಸ್ತ್ರೀ ಶಕ್ತಿ ಸಂಘಗಳಿಂದ ಬೆಂಬಲ ಸಿಕ್ಕಿದೆ ಇವರ ಋಣವನ್ನು ನಾನು ಹೇಗೆ ತೀರಿಸಲಿ ಗೊತ್ತಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡುವ ತೀರ್ಮಾನ ಮಾಡಿ ಬಂದದ್ದೇ ಮೊದಲು ಶ್ರೀಧರ ಸ್ವಾಮಿಗಳ ಆಶ್ರಮಕ್ಕೆ ನಂತರ ಸಿಗಂಧೂರು ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡಿದೆ ತಾಯಿಯ ತಲೆಮೇಲಿಂದ ಹೂವಿನ ಪ್ರಸಾದ ಸಿಕ್ಕಿತು. ಒಂದು ಕಡೆ ದೇವರ ಆಶೀರ್ವಾದ, ಇನ್ನೊಂದು ಕಡೆ ಶ್ರೀಸಾಮಾನ್ಯನ ಆಶೀರ್ವಾದ ಇವೆರಡೂ ನನಗೆ ಸಿಕ್ಕಿರುವಾಗ ಯಾವುದೇ ಕಾರಣಕ್ಕೂ ಕೆಲವು ವ್ಯಕ್ತಿಗಳಿಂದ ರಾಜ್ಯದ ಭಾರತೀಯ ಜನತಾ ಪಾರ್ಟಿಯನ್ನು ಅಪಹರಿಸಲು ಬಿಡುವುದಿಲ್ಲ ಎಂದು ಕೆ.ಎಸ್‌.ಈಶ್ವರಪ್ಪ ಹರಿಹಾಯ್ದರು.
————————————-
ರಾಜ್ಯದಲ್ಲಿ ಒಂದು ಕೋಟಿ ಸಾಮಾನ್ಯ ಜನರ ಸದಸ್ಯತ್ವ ಇದೆ. ಈಗ ಸದಸ್ಯತ್ವ ಮಾಡಿದ ವ್ಯಕ್ತಿಗಳಿಗೆ ನಮ್ಮ ಮಾತು ಯಾರು ಕೇಳುತ್ತಿಲ್ಲ ಎಂಬ ನೋವಿದೆ. ಹೊಂದಾಣಿಕೆ ರಾಜಕಾರಣ ಬಿಜೆಪಿ ರಕ್ತದಲ್ಲಿ ಬಂದಿಲ್ಲ. ಬಿಜೆಪಿ ಜನರ ಮನಸ್ಸನ್ನು ಗೆದ್ದು ಅಧಿಕಾರಕ್ಕೆ ಬಂದಿದೆ. ನನ್ನ ಜೀವನದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಹೊಂದಾಣಿಕೆ ರಾಜಕಾರಣ ಮಾಡಲು ಯಡಿಯೂರಪ್ಪರೇ ಬೇಕಾ?. ವಿಧಿ ಇಲ್ಲದೆ ನಮ್ಮ ಪಕ್ಷದ ಪರಿಸ್ಥಿತಿಯನ್ನು ಬೀದಿಯಲ್ಲಿ ನಿಂತು ಹೇಳಬೇಕಿದೆ. ಪಕ್ಷದಲ್ಲಿ ಪರಿವರ್ತನೆ ತರಬೇಕಿದೆ. ಚುನಾವಣೆಯಲ್ಲಿ ಗೆದ್ದ ನಂತರ ಕೇಂದ್ರದ ನಾಯಕರು ಕರ್ನಾಟಕದ ಕಡೆ ನೋಡುತ್ತಾರೆ. ಪಕ್ಷದಲ್ಲಿ ಪರಿವರ್ತನೆ ತರಲೆಂದು ಜನ ತೀರ್ಮಾನ ಮಾಡಿದ್ದಾರೆ. ಅದಕ್ಕಾಗಿ ಈ ಚುನಾವಣೆ ಬಂದಿದೆ ಎಂದು ಕಿಡಿಕಾರಿದರು.
40 ವರ್ಷ ಬಿಜೆಪಿಯಲ್ಲಿದ್ದು ಪಕ್ಷ ಕಟ್ಟಿದ ಈಶ್ವರಪ್ಪ ಪಕ್ಷೇತರನಾಗಿ ನಿಂತಿರುವುದು ರಾಜ್ಯದಲ್ಲಷ್ಟೆ ಅಲ್ಲ ದೇಶದಲ್ಲಿಯೂ ಸಹ ಚರ್ಚೆಯಾಗುತ್ತಿದೆ. ನೀವೆಲ್ಲರೂ ನನ್ನ ಹೋರಾಟಕ್ಕೆ ಶಕ್ತಿ ತುಂಬಿ ಚುನಾವಣೆಯಲ್ಲಿ ಗೆಲ್ಲಿಸಿ. ನಾನು ದೆಹಲಿಗೆ ಹೋಗಿ ಮೋದಿ ಪ್ರಧಾನಿಯಾಗಲು ಕೈ ಎತ್ತುತ್ತೇನೆ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.
————————-