ಸಂಗೀತ ರವಿರಾಜ್ ಅಂಕಣ; ಸಾಂಸ್ಕೃತಿಕ ಕೊಡು – ಕೊಳ್ಳುವಿಕೆಯಲ್ಲಿ ಎಲ್ಲವೂ… ಜೊತೆಗೆ ಒತ್ತೆಕೋಲವು ……
ಸಾಂಸ್ಕೃತಿಕ ಕೊಡು – ಕೊಳ್ಳುವಿಕೆಯಲ್ಲಿ ಎಲ್ಲವೂ… ಜೊತೆಗೆ ಒತ್ತೆಕೋಲವು ……
ಪ್ರಕೃತಿಯ ಕೈಗೂಸಿನಂತಿರುವ ಚೆಂಬು ಗ್ರಾಮ ಒಂದು ಸುಂದರವಾದ ಪ್ರದೇಶ. ನದಿ ಮತ್ತು ಕಾಡು ಇವೆರಡರೊಂದಿಗೆ ಸಮಾಗಮಗೊಂಡ ಊರು. ಭೌಗೋಳಿಕವಾಗಿ ಪಶ್ಚಿಮ ಘಟ್ಟ ಸಾಲಿನ ಬ್ರಹ್ಮಗಿರಿಯ ಪಶ್ಚಿಮಾಭಿಮುಖವಾಗಿ ಚಾಚಿರುವ ಇಳಿಜಾರು ತಪ್ಪಲಲ್ಲಿ ಚೆಂಬೈದೂರು ಇದೆ. ವಿಶೇಷವೆಂದರೆ ಇದು ಗಡಿಭಾಗ. ನಾವು ಅಲ್ಲಿಯು ಸಲ್ಲುವವರು, ಇಲ್ಲಿಯು ಸಲ್ಲುವವರು ಎಂದರು ನಮ್ಮೂರಿನವರಿಗೆ ಸಂಪೂರ್ಣ ಸರಿ. ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗ ಸಂಪಾಜೆಯನ್ನು ಬಹುತೇಕ ಎಲ್ಲರು ಬಲ್ಲರು. ಅಲ್ಲಿರುವ ಗೇಟ್ ಹತ್ತಿರ ಬಂದಾಗ ಗಾಡಿ ನಿಲ್ಲಿಸಿ ಮತ್ತೆ ತೆರೆಯಿಸಿ ಹೊರಡುವುದರಿಂದ ಪರವೂರಿನವರಿಗೆಲ್ಲ ಸಂಪಾಜೆ ಪರಿಚಿತ ಊರು . ಗಡಿಭಾಗದ ಗೇಟ್ ದಾಟಿದ ಮೇಲೆ ಜಿಲ್ಲೆ ಬದಲಾಗುವುದು ಸಾಮಾನ್ಯ ತಾನೇ? ಹಾಗೆ ಸಂಪಾಜೆ ದಾಟಿ ಬಂದರೆ ಸಿಗುವ ಪೇಟೆ ಕಲ್ಲುಗುಂಡಿ. ಇದು ಶುದ್ಧ ದಕ್ಷಿಣ ಕನ್ನಡ. ಆದರೆ ಅಚ್ಚರಿಯೆಂದರೆ ಕಲ್ಲುಗುಂಡಿ ಪೇಟೆಯಿಂದ ಒಳಗಿನ ರಸ್ತೆಯಲ್ಲಿ ಮೂರು ಕಿಲೋ ಮೀಟರ್ ಬಂದರೆ ಸಿಗುವ ಬಾಲಂಬಿ, ಮತ್ತೂ ದಾಟಿದರೆ ಸಂಪೂರ್ಣ ಚೆಂಬೈದೂರು. ಬಾಲಂಬಿಯಿಂದಾಚೆಗೆ ಇದು ಕೊಡಗು ಜಿಲ್ಲೆ . ಅದಕ್ಕಿದು ಅಚ್ಚರಿಯ ಊರು . ಇದರೊಂದಿಗೆ ಸ್ವಲ್ಪ ಮುಂದೆ ಹೋದರೆ ಪೆರಾಜೆ ಎಂಬ ಗ್ರಾಮವು ಕೊಡಗಿಗೆ ಸೇರಿದ್ದೆಂದು ಗುರುತಿಸಲಾಗಿದೆ. ಹಾಗಾಗಿ ನಾವು ದಕ್ಷಿಣಕನ್ನಡದ ಜಾಗದಲ್ಲಿ ಕೊಡಗು ಜಿಲ್ಲೆಯವರೆಂದು ಗುರುತಿಸಿಕೊಂಡಿದ್ದೇವೆ. ಇದು ಹೇಗೆ ಕೊಡಗು ಆಗುತ್ತದೆ ಎಂದು ಕೇಳಿದರೆ ಒಳಗಿನ ರಸ್ತೆಯಲ್ಲಿ ಬಂದ ಮೇಲೆ ಮತ್ತೆ ಮಡಿಕೇರಿ ಕಡೆಗೆ ಸೇರುತ್ತದೆ ಎನ್ನುವವರಿದ್ದಾರೆ. ಆದರೆ ಇದು ವಾಸ್ತವವಲ್ಲ. ನಮ್ಮ ಊರು ಏಕೆ ಕೊಡಗಿಗೆ ಸೇರಿದೆ ಎಂಬುದಕ್ಕೆ ಬ್ರಿಟಿಷರ ಕಾಲದಲ್ಲಿದ್ದ ಕೆಲವು ಒಪ್ಪಂದಗಳು ಎಂಬುದನ್ನು ಇತಿಹಾಸ ಹೇಳುತ್ತದೆ. ಹಾಗಾಗಿ ನಮ್ಮ ಭಾಷೆ, ಆಹಾರ, ಬೆಳೆಗಳು, ಉಡುಪು ಇತ್ಯಾದಿ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿರುವುದರಿಂದ ಭೌಗೋಳಿಕವಾಗಿ ನಾವು ಕನ್ನಡ ಜಿಲ್ಲೆಯವರಾದರೆ, ಆಡಳಿತಾತ್ಮಕವಾಗಿ ಕೊಡಗು ಜಿಲ್ಲೆಗೆ ಸೇರುತ್ತೇವೆ. ಹೀಗಾಗಿ ಎರಡು ಜಿಲ್ಲೆಗಳ ಭಾಷೆ, ಸಂಸ್ಕೃತಿ, ಸಂಪ್ರದಾಯಗಳನ್ನು ಬಲ್ಲ , ಇಲ್ಲಿ ವಾಸ ಮಾಡುವ ನಾವೆಲ್ಲ ಅದೃಷ್ಟವಂತರು. ನಾವು ಪ್ರತಿದಿನ ದಿನಸಿ ತರಲು, ಕೊಕ್ಕೋ , ಗೇರು ಬೀಜ ಕೊಡಲು ಹೀಗೆ ಏನಕ್ಕಾದರು ಕೊಡಗು ಜಿಲ್ಲೆಯಿಂದ , ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿ ಬರುತ್ತೇವೆ ಎಂಬುದಾಗಿ ಹೇಳಿದಾಗ ತಮಾಷೆಯೆನಿಸಿದರು ಅದು ಸತ್ಯ .ಕೊಡು- ಕೊಳ್ಳುವಿಕೆಯ ನಾನಾ ಅರ್ಥಗಳು ಇಲ್ಲಿ ಸಮಂಜಸವಾಗಿದೆ.
ನಮ್ಮೂರಿನ ದಬ್ಬಡ್ಕದಿಂದಾಗಿ ಕಾಡಿನ ಹಾದಿಯಲ್ಲಿ ಕೊಡಗಿನ ತಲಕಾವೇರಿ ಸನ್ನಿಧಿಗೆ ಹೋಗಲು ಕೇವಲ ಇಪ್ಪತ್ತೆರಡು ಕಿಲೋ ಮೀಟರ್ ಕ್ರಮಿಸಿದರೆ ಸಾಕು. ಅದೇ ಮುಖ್ಯ ರಸ್ತೆಯಲ್ಲಿ ಎಪ್ಪತ್ತು ಕಿಲೋ ಮೀಟರ್ನಷ್ಟು ಕ್ರಮಿಸಬೇಕು ಎನ್ನುವುದು ಆಶ್ಚರ್ಯ. ಹಾಗೆಯೇ ಚೆಂಬುವಿನಿಂದ ಪೆರಾಜೆಗೆ ಒಳ ರಸ್ತೆಯಲ್ಲಿ ಸಾಗಿ , ಅಲ್ಲಿಂದ ಕೇರಳಕ್ಕೂ ಹೀಗೆ ಕಾಡಿನ ಹಾದಿಯಲ್ಲಿ ಹತ್ತಿರದಿಂದಲೆ
ಸೇರಿ ಬಿಡಬಹುದು. ಹೀಗೆ ಎಲ್ಲ ರೀತಿಯಲ್ಲೂ ವಿಶಿಷ್ಟವಾದ ಊರು ಎಂಬ ಹೆಮ್ಮೆ ನಮ್ಮದು . ಕೊಡಗಿಗೆ ಸೇರಿರುವ ನಾವು ದಕ್ಷಿಣಕನ್ನಡದ ಕಲ್ಲುಗುಂಡಿ ಶಾಲೆಗೆ ಮಕ್ಕಳನ್ನು ಕಳುಹಿಸುವುದರಿಂದ , ಮಕ್ಕಳು ಚಿಕ್ಕವರಿದ್ದಾಗ ಪಾಠದಲ್ಲಿ ಬರುವ ವಿಳಾಸ ಬರೆಯಲು ಹೇಳಿ ಕೊಡುವ ಸಂಧರ್ಭದಲ್ಲಿ ಸಂಪೂರ್ಣ ಗೊಂದಲಕ್ಕೆ ಬಿದ್ದಿದರು. ನಮಗು ಕೂಡ ಆಡಳಿತಾತ್ಮಕವಾಗಿ ಚಿಕ್ಕ ಪುಟ್ಟ ಸಮಸ್ಯೆಗಳು ಇವೆ ಎಂದರು ತಪ್ಪಲ್ಲ. ಎಲ್ಲ ಇಲಾಖೆಗಳು ಸುಳ್ಯದಲ್ಲಿ ಹತ್ತಿರವೇ ಇದ್ದರೂ ದೂರದ ಮಡಿಕೇರಿಗೆ ಓಡಲೆಬೇಕು .ಇದು ಬಿಟ್ಟರೆ ಗಡಿಭಾಗದ ವಾಸದಿಂದ ಅನುಕೂಲಗಳು, ಸಾಧ್ಯತೆಗಳು , ಅವಕಾಶಗಳು ಜಾಸ್ತಿ ಎಂಬುದು ನಿಜ. ಇದರಲ್ಲಿ ಮುಖ್ಯವಾಗಿ ಸಾಂಸ್ಕೃತಿಕ ವಿನಿಮಯ ಅಂತ ಹೇಳಬಹುದು. ಕೇರಳ, ಕೊಡಗು, ದಕ್ಷಿಣಕನ್ನಡ ಎಲ್ಲದರ ಒಂದಲ್ಲೊಂದು ವಿನಿಮಯ ಇಲ್ಲಿ ಇದೆ. ಇದು ಗ್ರಾಮ ಮಟ್ಟದಿಂದಲೇ ಪ್ರಾರಂಭವಾಗಿ ಜಿಲ್ಲೆ, ರಾಜ್ಯ , ದೇಶ , ವಿದೇಶದಲ್ಲಿಯು ಕೊಡು ಕೊಳ್ಳುವಿಕೆ ಸಾಮಾನ್ಯ ಪ್ರಕ್ರಿಯೆ ಆಗಿದೆ. ಈ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಯಲ್ಲಿ ಕೇರಳ ರಾಜ್ಯದ ವಿಷ್ಣುಮೂರ್ತಿ ಚೆಂಬು , ಕಲ್ಲುಗುಂಡಿಯಲ್ಲಿ ಆರಾಧನೆಗೆ ಒಳಪಟ್ಟಿದೆ. ವಿಷ್ಣುಮೂರ್ತಿ ದೈವಕ್ಕೆ ಸಲ್ಲುವ ಬಯಲು ಕೋಲ ಚೆಂಬುವಿನ , ಕುದುರೆಪಾಯದ ಕಲೇರಿಯಲ್ಲಿ ಮತ್ತು ಆನ್ಯಾಳದಲ್ಲಿ ನಡೆಯುತ್ತದೆ. ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಒತ್ತೆಕೋಲ ನಾಡಿನೆಲ್ಲೆಡೆ ಚಿರಪರಿಚಿತ. ಇಲ್ಲಿ ಊರ ಪರವೂರಿನ ಅದೆಷ್ಟೋ ಸಾವಿರ ಜನರ ಸಮ್ಮುಖದಲ್ಲಿ ದೈವದ ಅಗ್ನಿಪ್ರವೇಶ ಆಗುತ್ತದೆ. ಬೃಹತ್ತಾಗಿ ಒಟ್ಟು ಮಾಡಿದ ಸೌದೆ ಮೇಲೇರಿಗೆ ರಾತ್ರಿಯೇ ಅಗ್ನಿಸ್ಪರ್ಶ ಮಾಡಿದರೆ ಬೆಳಗ್ಗೆಯ ಹೊತ್ತಿಗೆ ಹೊತ್ತಿ ಮುಗಿದಿರುತ್ತದೆ. ಹೊತ್ತಿ ಮುಗಿದ ಮೇಲೆ ದೈವದ ಕುಲ್ಚಾಟ ಇರುತ್ತದೆ. ವಿಷ್ಣುಮೂರ್ತಿ ಅಂದರೆ ತ್ರಿಮೂರ್ತಿ ಗಳಲ್ಲಿ ಒಬ್ಬನಾದ ವಿಷ್ಣು ಅಲ್ಲ. ಮಹಾವಿಷ್ಣುವಿನ ನಾಲ್ಕನೆ ಅವತಾರ ನರಸಿಂಹವತಾರ ಆಗಿದೆ. ನರಸಿಂಹವತಾರಿ ವಿಷ್ಣು ಇಲ್ಲಿ ಸಿಂಹರೂಪ ಪ್ರಾಣಿಯಲ್ಲಿ ಆರಾಧನೆ ಹೊಂದುತ್ತದೆ.
ವಿಷ್ಣುಮೂರ್ತಿಗೆ ನೇಮ ಕಟ್ಟಲು ಕೇರಳದ ಮಲಯ ಜನಾಂಗದವರೆ ಆಗಿರಬೇಕು . ಇವರನ್ನು ಫಣಿಕ್ಕರ್ ಎಂದು ಕರೆಯುತ್ತಾರೆ. ನಮ್ಮೂರೆಲ್ಲೆಡೆ ಇವರನ್ನು ಕೇರಳದಿಂದಲೇ ಕರೆಯಿಸಿಕೊಳ್ಳುತ್ತಾರೆ. ದೈವದ ಪಾತ್ರಿಗಳಾಗಿ ತೀಯ ಸಮುದಾಯದವರು ಇದ್ದು ಕಳಶ ನೀರು ಹುಯ್ಯಬೇಕು . ದೀಪ ಹಿಡಿಯಲು ಗಾಣಿಗರು ಬರಬೇಕು ಜೊತೆಗೆ ಮಡಿವಾಳರು ಮುಖ್ಯವಾಗಿ ಬೇಕು. ಮೊದಲು, ಹಾಲು ಅಂದರೆ ಸೊನೆ ಬರುವಂತಹ ಮರಗಳಾದ ಹಲಸು ಅಥವಾ ಹಾಲೆ ಮರಕ್ಕೆ ಪೂಜೆ ಮಾಡಿ ಅದನ್ನು ಕಡಿದು ಸೌದೆ ಸಂಗ್ರಹ ಮಾಡುವಲ್ಲಿಂದ ಒತ್ತೆಕೋಲದ ಪ್ರಕ್ರಿಯೆ ಪ್ರಾರಂಭ ಆಗುತ್ತದೆ. ಇದನ್ನು ಕೊಳ್ಳಿ ಮುಹೂರ್ತ ಅಂತ ಕರೆಯುತ್ತಾರೆ. ಕೊಳ್ಳಿ ಮುಹೂರ್ತಕ್ಕು ಆಹ್ವಾನ ಇರುತ್ತದೆ. ಒತ್ತೆಕೋಲಕ್ಕೆ ಹಸಿ ಸೌದೆಯನ್ನು ಅಟ್ಟಿ ಇಡುತ್ತಾರೆ. ಯಾಕೆಂದರೆ ಅದು ಬೆಳಗ್ಗೆಯವರೆಗೆ ಹೊತ್ತಿ ಉರಿದುಕೊಂಡು ಇದ್ದು ಕುಲ್ಚಾಟಕ್ಕೆ ಆಗುವಾಗ ನಿಗಿ ನಿಗಿ ಕೆಂಡ ಇರಬೇಕು. ಒತ್ತೆಕೋಲಕ್ಕೆ ರಥವನ್ನು ಹೋಲುವ ರೀತಿಯಲ್ಲಿ ಕಟ್ಟಿಗೆಗಳನ್ನು ಜೋಡಿಸಿ ತೆಂಗಿನ ಒಣಗರಿಗಳನ್ನು ಹೆಚ್ಚಾಗಿ ಬಳಸುತ್ತಾರೆ. ಬಯಲು ಕೋಲಕ್ಕೆ ಆದರೆ ಸಣ್ಣ ಪ್ರಮಾಣದಲ್ಲಿ ಸೌದೆ ಜೋಡಣೆ ಇರುತ್ತದೆ. ದೈವದ ಪಾತ್ರಿಗಳಾದ ತೀಯ ಸಮುದಾಯದವರು ಹೆಚ್ಚಾಗಿ ಬಂದು ಸೌದೆ ಜೋಡಣೆಗೆ ನೆರವಾಗುತ್ತಾರೆ.
ವಿಷ್ಣುಮೂರ್ತಿ ಆರಾಧನೆಯ ಮೂಲ ಕಥೆಯ ಪ್ರಕಾರ ,ಕಾಸರಗೋಡು ಸನಿಹದ ನೀಲೇಶ್ವರದ ಕೊಟ್ಟಪುರ ಎಂಬಲ್ಲಿ ಒಂದು ತರವಾಡು ಮನೆ ಇತ್ತು. ತರವಾಡು ಮನೆಯ ಮುಖ್ಯಸ್ಥ ಕುರುವಟ್ಟ್ ಕುರುಪ್ ಅವರ ಮನೆಯಲ್ಲಿ ತೀಯ ಸಮುದಾಯದ ಕಣ್ಣನ್ ಎಂಬ ಹುಡುಗ ಕೆಲಸಕ್ಕಿರುತ್ತಾನೆ. ಒಮ್ಮೆ ಕಣ್ಣನ್ ಮಾಲಿಕರ ತೋಟದಿಂದ ಮಾವಿನಹಣ್ಣು ತಿಂದು ಸಿಕ್ಕಿ ಬೀಳುತ್ತಾನೆ. ಕೋಪಿಷ್ಟನಾದ ಕುರುಪ್ ತನ್ನ ಸಹಚರರಿಗೆ ಆತನನ್ನು ಹಿಡಿದು ತರಲು ಆದೇಶ ಕೊಡುತ್ತಾನೆ. ಇದರ ಸುಳಿವು ಸಿಕ್ಕ ಕಣ್ಣನ್ ನೀಲೇಶ್ವರ ಬಿಟ್ಟು ಮಂಗಳೂರಿನ ಜೆಪ್ಪು ಎಂಬ ಸ್ಥಳಕ್ಕೆ ಬರುತ್ತಾನೆ. ಅಲ್ಲಿ ಅತೀವ ದೇವಿ ಭಕ್ತೆಯಾದ ಅಜ್ಜಿಯೊಬ್ಬಳ ಮನೆಗೆ ವಾಸಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿ ಅಜ್ಜಿಯೊಂದಿಗೆ ಸೇರಿ ಭಕ್ತನಾಗಿ ಬೆಳೆಯುತ್ತಾ ಹೋಗುತ್ತಾನೆ. ತುಂಬಾ ಸಮಯದ ನಂತರ ತನ್ನ ಊರಾದ ನೀಲೇಶ್ವರಕ್ಕೆ ಹೋಗಲು ಮನಸ್ಸಾಗುತ್ತದೆ. ಹಾಗೆ ಹೊರಡಲು ಅನುವಾದಾಗ ಅಜ್ಜಿ ಅವನ ರಕ್ಷಣೆಗೆಗಾಗಿ ಒಂದು ಕತ್ತಿ ಮತ್ತು ತತ್ರ ಅಂದರೆ ಒಲಿಯ ಕೊಡೆ ಇವೆರಡನ್ನು ನೀಡಿ ಹರಸುತ್ತಾಳೆ . ಅದನ್ನು ಸ್ವೀಕರಿಸುವಾಗಲೆ ದೇವರು ಮೈಮೇಲೆ ಬಂದಂತಹ ಅನಭವವಾಗುತ್ತದೆ. ಅವನು ನೀಲೇಶ್ವರಕ್ಕೆ ಬಂದು ಅಲ್ಲಿ ಕೊಳವೊಂದರಲ್ಲಿ ಸ್ನಾನ ಮಾಡುತ್ತಿದ್ದಾಗ ಕುರುಪನ್ ಅವನನ್ನು ಕೊಲ್ಲಿಸುತ್ತಾನೆ. ಕೊಲ್ಲಿಸಿದ ಮೇಲೆ ಕುರುಪನ್ ಅಕ್ಷರಶಃ ನರಕವಾಗಿ ಹೋಗುತ್ತಾನೆ . ಆಸ್ತಿಯೆಲ್ಲ ಕರಗಿ ಹೋಗಿ ನಷ್ಟ ಅನುಭವಿಸುತ್ತಾನೆ. ಮನೆಮಂದಿಯೆಲ್ಲ ಮಾರಕ ಸಿಡುಬು ರೋಗಕ್ಕೆ ಬಲಿಯಾಗುತ್ತಾರೆ. ಕುರುಪನ್ ಮಾತ್ರ ಸಿಡುಬು ರೋಗದಿಂದ ಸಾಯದೆ ನರಕ ಅನುಭವಿಸುತ್ತಾನೆ. ಇಂತಹ ಸಮಯದಲ್ಲಿ ಜ್ಯೋತಿಷ್ಯ ಕೇಳುವಾಗ ವಿಷ್ಣುಮೂರ್ತಿ ದೈವಕ್ಕೆ ಕೆಂಡಸೇವೆ ಮಾಡಿದರೆ ರೋಗ ಪರಿಹಾರವಾಗುತ್ತದೆ ಎನ್ನುವ ಮಾತಿನಿಂದ ವಿಷ್ಣು ನರಸಿಂಹವತಾರಕ್ಕೆ ದೈವಾರಾಧನೆ ಪ್ರಾರಂಭವಾಯಿತು ಎನ್ನುತ್ತದೆ ಕಥೆ.
ಹೀಗೆ ಸಾಂಸ್ಕೃತಿಕ ವಿನಿಮಯದ ಕೊಡು ಕೊಳ್ಳುವಿಕೆ ಎಲ್ಲಿಂದೆಲ್ಲಿಗು ಆಗುವುದು ಸಾಮಾನ್ಯ. ಈ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಯಲ್ಲಿ ಕೇರಳ ರಾಜ್ಯದ ವಿಷ್ಣುಮೂರ್ತಿ ನಮ್ಮೂರಲ್ಲಿ ಆರಾಧನೆಗೆ ಒಳಪಡುತ್ತದೆ . ಇಷ್ಟು ದೊಡ್ಡ ಆರಾಧನೆಯೇ ವಿನಿಮಯ ಆಗುವಾಗ ಉಡುಪು, ಭಾಷೆ , ಆಹಾರ , ಆಚಾರ ಇತ್ಯಾದಿ ಹೀಗೆ ಎಲ್ಲದರಲ್ಲೂ ಕೊಡು ಕೊಳ್ಳುವಿಕೆ ಆಗದಿರಲು ಸಾಧ್ಯವಿಲ್ಲ . ಹೀಗೆ ಎಲ್ಲವನ್ನೂ ಸಮತೋಲನದಲ್ಲಿರಿಸಿ ಬದುಕು ಮತ್ತು ಪ್ರಕೃತಿಯನ್ನು ಅನುಸಂಧನಿಸುತ್ತಾಲೆ ಹೊಸ ಹೊಸ ಸಂವೇದನೆಯೊಂದಿಗೆ ನಮ್ಮೂರಿನವರು ಬಾಳುತ್ತಿದ್ದಾರೆ.