ಅಶ್ವತ್ಥರ ಅಂಕಣ- ತಿರುವುಗಳಿಲ್ಲದೇ ಕೊನೆಯಾದ ದಾರಿ…
ಅದೆಂದು ಶುರುವಾಗಿದ್ದ ದಾರಿಯೊಂದು ಯಾವ ತಿರುವು ಇಲ್ಲದೆ ಕೊನೆಯಾಗಿದೆ ಕಿರು ಬೆರಳಿಡಿದ ಕೈಯೊಂದು ತಂತಾನೆ ಬಿಗಿ ಸಡಿಲಿಸಿದೆ ಹೆಜ್ಜೆಯೊಳಗೆ ಹೆಜ್ಜೆಯಾಗುತ್ತಿದ್ದ ಹೆಜ್ಜೆಗಳು ತಟಸ್ಥವಾಗಿವೆ ಸುತ್ತುವರಿದಿದ್ದ ನೆರಳೊಂದು ಕರಗಿ ಹೋಗಿದೆ ಹೌದು ಈ ಬದುಕಿನ ಹಾದಿಯಲ್ಲಿ ಅಷ್ಟೊಂದು ದೂರದಿಂದ ಜೊತೆಯಾಗಿ ಬಂದ ಭರವಸೆಯೆಂದು ಮರೆಯಾಗಿದೆ.
ಹಾಗೆ ನೋಡಿದರೆ ನಮ್ಮಿಬ್ಬರ ನಡುವಿನ ತಾರ್ಕಿಕವಾದವೊನ್ದು ಇತ್ಯರ್ಥವಾಗಬೇಕಿತ್ತು, ಅದಾಗಲೇ ಇಲ್ಲ. ಅದೆಂದೋ ಧಗಧಗಿಸಿ ಕೆಂಡವಾಗಿದ್ದ ಹತಾಶೆಯೊಂದು ಶಮನವಾಗಲೇ ಇಲ್ಲ. ಜೀವಮಾನವಿಡಿ ಸವೆದರು ಆತ್ಮತೃಪ್ತಿ ಎಂಬ ಕಡೆಗೋಲು ಸಂತೃಪ್ತವಾಗಲೇ ಇಲ್ಲ. ಎಲ್ಲಿ ಹೇಗೆಂದರೆ ಹಾಗೆ ಸದಾ ಕಾಲದ ನಿಟ್ಟುಸಿರಿನ ಕಡುಗಪ್ಪಾದ ಆಕೃತಿಯೆಂದು ಗಪ್ಪನೆ ಅಂಟಿಕೊಂಡಿದೆ. ಇಬ್ಬರ ನಿರಂತರತೆಯ ಕ್ಯಾನ್ವಾಸಿನ ಮೇಲೆ ಬಣ್ಣ ಬಣ್ಣದ ಚಿತ್ತಾರಗಳು ಮೂಡಲೇ ಇಲ್ಲ.
ಕಟ್ಟ ಕಡೆಗೆ ಘಟಿಸುವ ಕ್ಷಣವೊಂದನ್ನು ವಿಸ್ಮಯವೆನ್ನುವುದೋ ಆಘಾತವೆನ್ನುವುದೋ ಆಕಸ್ಮಿಕ, ಅನಿವಾರ್ಯವೆನ್ನುವುದೋ ಅಥವಾ ವಿಪರ್ಯಾಸವೆನ್ನುವುದೋ ಗೊತ್ತಿಲ್ಲ ಆದರೆ ಇವೆಲ್ಲವುಗಳ ಆಚೆಗೂ ಒಂದು ಕಡು ದಟ್ಟ ಮೌನ ನನ್ನನ್ನು ಮುಳುಗಿಸಿದೆ. ನನ್ನ ಭಯದೊಳಗೆ ಮೌನವೋ ಮೌನದ ಭಯದೊಳಗೆ ನಾನೋ ಅದೂ ಕೂಡ ತಿಳಿಯದು.
ಕಳೆದದ್ದು ಮತ್ತೊಮ್ಮೆ ಸಿಗುವ ವಸ್ತು ಯಾವುದಾದರೂ ಸರಿಯೇ ಒಂದಲ್ಲ ಒಂದು ದಿನ ಹುಡುಕುವ ಪ್ರಯತ್ನ ಮಾಡುತ್ತೇವೆ. ಸ್ವಾಭಾವಿಕವೂ ಹೌದು ಆದರೆ ಕಳೆದದ್ದು ಮತ್ತೆಂದು ಸಿಗುವುದೇ ಇಲ್ಲವೆನ್ನುವುದು ಖಾತರಿಯಾದರೆ? ಇದಕ್ಕೆ ಏನಂತ ಹೆಸರಿಸಲು ಸಾಧ್ಯ!! ನಮ್ಮಿಬ್ಬರ ನಡುವಿನ ಸಂಬಂಧಕ್ಕೆ ಗೆಳೆತನಕ್ಕೆ ಒಡನಾಟಕ್ಕೆ ಹೋರಾಟಕ್ಕೆ ಪ್ರೀತಿಗೆ ದ್ವೇಷಕ್ಕೆ ಇಂತಹ ನೂರಾರು ಅಸಂಗತ ಬದುಕಿನ ಅಸಂಖ್ಯಾ ಸಂಗತಿಗಳಿಗೆ ಇಂತದ್ದೊಂದು ಹೆಸರಿಡಬಹುದಾ?!
ಗತಕಾಲಕ್ಕೆ ಪುಸ್ತಕವಾದೆ ನಾಳೆಗೆ ಕನ್ನಡಿಯಾದೆ ಈ ವರ್ತಮಾನದ ಎಲ್ಲಾ ಕ್ಷಣಗಳಿಗೂ ಬರಿಯ ಪ್ರಶ್ನೆಯಾಗಿಯೇ ಉಳಿದದ್ದು ಮಾತ್ರ ನನ್ನ ಈಗಲೂ ಸುತ್ತುವರೆದಿರುವ ವಿಲಕ್ಷಣಗಳಿಗೆ ನಾನು ಯಾವಾಗಲೂ ಅಸಂಭದ್ದ!! ಆಗ ಮಾತ್ರವಲ್ಲ ಈಗಲೂ ಹಾಗೆಯೇ! ನಿನ್ನ ಕಟು ವಾಸ್ತವದ ಕುಲುಮೆಯಲ್ಲಿ ಮುಳುಗಿ ಕುದಿಯುವಾಗೆಲ್ಲ ನಾನು ಮತ್ತಷ್ಟು ಹೊಳೆದಿದ್ದೇನೆಂಬ ಭ್ರಮೆ ಇತ್ತು ಆದರೆ ಈಗ ಅದು ಬರಿಯ ಭ್ರಮೆಯಾಗಿ ಉಳಿದಿಲ್ಲ ಅನ್ನುವುದೇ ಈ ಕ್ಷಣಕ್ಕೆ ನಾನು ಕೊಡುವ ಮಾತಾ ದೀತು.
ನೀನು ಕೇವಲ ಅಪ್ಪನಾದದ್ದಲ್ಲ. ಅದಕ್ಕೂ ಮೀರಿ ಮತ್ತೇನೋ ..ಅದೆಲ್ಲಕ್ಕೂ ಇಲ್ಲಿ ಹೆಸರಿಲ್ಲ. ಭೂಮಿ ದುನ್ಡಾಗಿದ್ದಿದ್ದೆ ಆದರೆ ನಾವಿಬ್ಬರೂ ಮುಂದೊಂದು ದಿನ ಮುಖತಾ ಭೇಟಿಯಾಗಿಲ್ಲವಾದರೂ ಕಣ್ಣಮುಂದೆ ಹಾದು ಹೋಗುವ ಸಣ್ಣ ಸಣ್ಣ ಕುರುಹುಗಳಲ್ಲಂತೂ ಸಿಕ್ಕೇ ಸಿಗುತ್ತೇವೆ. ಯಾವ ರೂಪದಲ್ಲೋ ಮತ್ಯಾವಗಳಿಗೆಯಲ್ಲೋ.. ನಿನ್ನೊಟ್ಟಿಗೆ ಮತ್ತದೇ ಊರ ಹಾದಿಯ ಕಟ್ಟ ಕಡೆಯ ಕಲ್ಲು ಬೆಂಚಿನ ತುದಿಗೆ ಕೂತು ನಿನ್ನ ಮಾತಿಗೆ ಧನಿಯಾಗುತ್ತೇನೆ. ನಿನ್ನ ಹೆಪ್ಪುಗಟ್ಟಿದ್ದ ನೋವಿನ ಕಣ್ಣುಗಳಿಗೆ ಕೊಂಚ ಚೇತರಿಕೆಯ ಮುಲಾಮು ಹಚ್ಚುತ್ತೇನೆ. ಶಮನವಾಗದೆ ಉಳಿದ ನಿನ್ನೆದೆಯಾಳದ ಶತಮಾನದ ಗಾಯಗಳಿಗೆ ನನ್ನ ಕಾಲಘಟ್ಟದ ನವನವೀನ ತಂತ್ರಜ್ಞಾನದಲ್ಲಿ ದುಪ್ಪಟ್ಟು ಉಪಶಮನ ಮಾಡಿಸುತ್ತೇನೆ. ಸಿಟ್ಟು ಸೆಡವು ಕೋಪ ಹಠ ಅಭಿಮಾನ ಸ್ವಾಭಿಮಾನ ಅಹಂಕಾರ ಈರ್ಷೆ ಕಾಳಜಿ ಇವೆಲ್ಲವುಗಳ ಆಚೆಗೂ ನಿನ್ನ ಒಂದೇ ಒಂದು ಭರವಸೆಯ ಕಿಚ್ಚು ಇತ್ತಲ್ಲ !!? ಅದು ಲೋಕಕ್ಕೆ ಅಪಹಸ್ಯದಂತೆ ಅಹಂಕಾರದಂತೆ ಕ್ರೌರ್ಯದಂತೆ ಕಂಡರೂ ನನಗದು ಕಗ್ಗಲಿನಂಥಹ ಬದುಕನ್ನು ಪುಡಿಗಟ್ಟುವ ಚಾನದಂತೆ ಕಂಡಿತ್ತು. ನೀನು ಬಿಟ್ಟು ಹೋದ ಅದೇ ಚಾಣದಿಂದ ಈ ಬದುಕನ್ನು ಸರಿಗಟ್ಟುತ್ತೇನೆ.
ನಿನ್ನೆದೆಯ ಉಸಿರ ಚೀಲವನ್ನು ಯಾರೋ ಕಿಡಿಗೇಡಿಗಳು ಕದ್ದರು ಅಷ್ಟೇ..! ನಿನ್ನನ್ನಲ್ಲ !! ನೀನು ಈಗಷ್ಟೇ ಇಲ್ಲೆಲ್ಲೋ ನಡೆದಾಡಿದ ಗುರುತುಗಳಿವೆ. ಮಾತಾಡಿದ ಮಂಪರಿದೆ. ಎದುರಿಗಿದ್ದವರಿಗೆ ಎದೆಯುಬ್ಬಿಸಿ ಸವಾಲು ಹಾಕಿದ ಅಬ್ಬರವಿದೆ. ನಿನ್ನ ಒಂಟಿತನದ ಕಡು ಪಾಪೀ ದಿನಗಳ ನಿಷ್ಕರುಣ ಬದುಕಿಗೆ ತೊಡೆ ತಟ್ಟಿ ನಿಂತ ನಿನ್ನ ಗಟ್ಟಿತನ ನನ್ನನೀಗಲೂ ದಂಗು ಬಡಿಸಿದೆ. ಜವರಾಯ ಹತ್ತಿರ ಬಂದಂತೆಲ್ಲ ಅವನನ್ನೇ ಮರಳು ಮಾಡುತ್ತಿದ್ದ ಮೋಡಿಗೆ ನಾನೂ ಈಗಲೂ ಮೂಕ ವಿಸ್ಮಿತ.
ಏನಲ್ಲ ನೀನು? ಎಲ್ಲವೂ ಹೌದು !!
ಅಪ್ಪ ಗುರು ಗೆಳೆಯ ಮಾರ್ಗದರ್ಶಿ ಜೊತೆ ಜೊತೆಗೆ ಪರಮ ಶತ್ರು..
ಏನೇ ಇರಲಿ ಮತ್ತೊಂದಿಷ್ಟು ಹೊಸ ಹೊಸ ತಿರುವುಗಳು ಬರಬಹುದೆಂಬ ನಿರೀಕ್ಷೆ ಇತ್ತು, ಇದೇ ದಾರಿಗುಂಟ ಇನ್ನಷ್ಟು ಕಾಲ ಇನ್ನಷ್ಟು ಘಳಿಗೆ ನಡೆಯಬೇಕಿತ್ತು. ನೀನು ತಿಳಿದ ಸಾವಿರ ಸಾವಿರ ವಿಸ್ಮಯಗಳನ್ನು ಕೌತುಕಗಳನ್ನು ಬದುಕಿನ ಪಟ್ಟುಗಳನ್ನು ನನಗೂ ಹೇಳಬೇಕಿತ್ತು, ಆದರೆ ಯಾವ ತಿರುವುಗಳು ಇಲ್ಲದೆ ದಾರಿ ಮುಗಿದಿದೆ. ನಮ್ಮಿಬ್ಬರ ನಡುವಿನ ಪಯಣ ನಿಂತಿದೆ.
* ಅಶ್ವತ್ಥ ಕಲ್ಲೇದೇವರಹಳ್ಳಿ