ಅಶ್ವತ್ಥ ಅಂಕಣ; ಜಂಗ್ಲಿಯ ಟಂಗ್ ಟ್ವಿಸ್ಟ್

 ಬಿಸಿಲ ಕಾವಿಗಿಂತಲು ಚುನಾವಣೆಯ ಕಾವು ಜೋರಾಗಿತ್ತು. ಜಂಗ್ಲಿ ಮತ್ತು ಅಮಾಸೆ ತಮ್ಮ ತಮ್ಮ ಕ್ಯಾಂಡಿಡೇಟ್ಗಳ ಗೆಲುವಿಗಾಗಿ, ಸಭೆ ಸಮಾರಂಭ ಮೀಟಿಂಗು ರೋಡ್ ಶೋಗಳನ್ನು ಮಾಡುತ್ತಿದ್ದರು.

ಅವರನ್ನು ಇವರು ತಗಳುವುದು ಇವರನ್ನು ಅವರು ತೆಗಳುವುದು ನಡೆದೇ ಇತ್ತು. ತಮ್ಮ ಸಾಧನೆ ಆಶ್ವಾಸನೆ ಭರವಸೆ ಮ್ಯಾನಿಫೆಸ್ಟೋ ಭಟ್ಟಿ ಬಿಟ್ಟಿ ಬಾಡೂಟ ಊರೂಟ ಎಲ್ಲಾ ತರದ ಆಟ ಪಾಠಗಳು, ಜೊತೆಗೆ ಉಚಿತ ಖಚಿತಗಳನ್ನು ರಾಜಾರೋಷವಾಗಿ ಜನರಿಗೆ ತಲುಪಿಸುವ ಕೆಲಸ ನಡೆದಿತ್ತು. ಜನರು ಅಷ್ಟೇ ಇಂಥ ಚುನಾವಣೆಗಳು ತಿಂಗಳಿಗೊಂದು ಮೂರು ತಿಂಗಳಿಗೆ ಒಂದು ಬಂದರೆ ಅನುಕೂಲ ಎಲ್ಲವೂ ಮನೆ ಬಾಗಿಲಿಗೆ ಬಂದು ತಲುಪುತ್ತವೆಂಬ ಖುಷಿಯಲ್ಲಿದ್ದರು. ಕುಕ್ಕರು, ನಿಕ್ಕರ್ರು ವಾಚು ಎಣ್ಣೆ ಗೋಲ್ಡ್ ಸೀರೆ ಕಂಬ್ಳಿ ಪರಿಕೆ ಚಪ್ಲಿ ಇನ್ನಿತರೆ ಐಟಂಗಳು ಕಾರ್ಯಕರ್ತರ ಮೂಲಕ ಜನರಿಗೆ ತಲುಪಿಸುವದು ನಡೆದಿತ್ತು.
ಒಂದರ್ಥದಲ್ಲಿ ಇಬ್ಬರೂ ಗಟ್ಟಿ ಆಳುಗಳೆ, ತಮ್ಮ ಜೀವಿತಾವಧಿಯ ಅರ್ಧ ಆಯಸ್ಸನ್ನೇ ರಾಜಕೀಯದಲ್ಲಿ ಕಳೆದವರು ಹಾಗಾಗಿ ರಾಜಕಾರಣದ ಆಳ ಅಗಲಗಳನ್ನು ಅರ್ಥ ಮಾಡಿಕೊಂಡಿದ್ದರು.
ಜಂಗ್ಲಿ ಮತ್ತು ಅಮಾಸೆಗೆ ಈ ಚುನಾವಣೆ ಅಸ್ತಿತ್ವದ ಹೆಗ್ಗುರುತು. ಜೀವಮಾನದ ಪ್ರಶ್ನೆ..! ಅಳಿವು ಉಳಿವಿನ ಸವಾಲು! ಇಂತಿಪ್ಪ ದಿನಗಳಲ್ಲಿ ಜಂಗ್ಲಿ ವಿರೋಧ ಪಕ್ಷವನ್ನು ಮತ್ತದರ ಸಾಧನೆಗಳನ್ನು ತೆಗಳುವ ಭರದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಒಂಚೂರು ಅವಮಾನಿಸಿ ಮಾತನಾಡಿದ್ದು ದೊಡ್ಡ ಇಶ್ಯೂ ಹಾಗೆ ಹೋಯಿತು. ಅಮಾವಾಸ್ಯೆಗೆ ತಿಳಿಯಿತು. ಇದು ಪತ್ರಿಕೆಗಳಲ್ಲಿ ಟಿವಿಗಳಲ್ಲಿ ದೊಡ್ಡ ಬ್ರೇಕಿಂಗ್ ನ್ಯೂಸ್ ಆಯ್ತು. ಅಮಾಸೆಕೆ ಇದು ಮೃಷ್ಟಾನ್ನವೇ ಆಯ್ತು ತಕ್ಷಣವೇ ಬೀದಿಗಿಳಿದ.
ವಿರೋಧ ಪಕ್ಷದ ನಾಯಕನೊಬ್ಬನ ಈ ಟಂಗ್ ಟ್ವಿಸ್ಟ್ ಎಡವಟ್ಟು ಅಮಾಸೆ ಮತ್ತು ಅವನ ಕಾರ್ಯಕರ್ತರಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿತು. ಜಂಗ್ಲಿಯೂ ಒಂದು ಕಾಲದಲ್ಲಿ ಅಮಾಸೆಯ ಪರಮಾಪ್ತ ಆದರೆ ರಾಜಕಾರಣದಲ್ಲಿ ಮಿತ್ರ ಶತ್ರು ಎರಡು ಆಗಾಗ ಮನೆ ಬದಲಿಸುವ ಹಾಗೆ ಈಗ ಹಾವು ಮುಂಗುಸಿಯಂತೆ  ಬಸುಕೊಡುತ್ತಿದ್ದರು. ರಾಜಕಾರಣದ ಅಖಾಡದಲ್ಲಿ ಪರಮ ಶತ್ರುಗಳಂತೆ ಹಲ್ಲುಮಸೆಯುತಿದ್ದರು. ಇದು ಮತದಾರರಿಗೆ ಹಬ್ಬವೆನಿಸಿದರೆ  ಕ್ಷೇತ್ರದ ಕಾರ್ಯಕರ್ತರಲ್ಲಿ ಮುಜುಗರ ತಂದಿತ್ತು.
ಆದರೆ ಈಗ ಹತ್ತು ಹಲವು ಪಟ್ಟುಗಳನ್ನು ಷಡ್ಯಂತ್ರಗಳನ್ನು ಹೆಣೆದು ಅಖಾಡಕ್ಕೆ ಧುಮುಕಿದ್ದ ಅಮಾಸೆಗೆ ಜಂಗ್ಲಿಯ ಈ ಅವಹೇಳನಕಾರಿ ಭಾಷಣ ದೊಡ್ಡ ಅಸ್ತ್ರವಾಗಿ ಖಂಡಿತು. ಈ ಸಮಯ ಬಿಟ್ಟರೆ ಮತ್ತೆ ನನಗೆ ಅವಕಾಶ ಸಿಗಲಾರದು ಅಂದುಕೊಂಡು ಜಂಗ್ಲಿಯ ವಿರುದ್ಧ  ತೊಡೆತಟ್ಟಿನಿಂತ. ಚುನಾವಣೆಯಲ್ಲಿ ಸೋಲಿಸುವುದಾಗಿ ಪ್ರತಿಜ್ಞೆ ಮಾಡಿದ. ಇದರ ಹಿಂದೆ ಯವಾರಪ್ಪ ಚವಳ್ಳಿ ಸಾತ್ ನೀಡಿದರು. ಮಹಿಳೆಯರ ಪರವಾಗಿ ಹಿಂದಿನಿಂದಲೂ ಧನಿಯೆತ್ತಿದ್ದ ಮಂಜಿ ಈಗಂತೂ ಸಾಕ್ಷಾತ್ ದುರ್ಗಿಯ ಅವತಾರದಂತೆ ಕಂಡಳು. ಏನಯ್ಯ ನೀನು ಹೆಣ್ಣು ಮಕ್ಕಳಿಗೆ ಹಿಂಗೆಲ್ಲಾ ಅವಮಾನ ಮಾಡಿ ಮಾತಾಡ್ತೀಯಾ ನಿನಗೂ ಅಕ್ಕ-ತಂಗಿ ಅಂತ ಯಾರಿಲ್ಲವೇ ನಿನ್ ಹೆಂಡ್ರು ಮಕ್ಕಳಿಗೆ ಹಿಂಗೇನರ ಅಂದ್ರೆ ನೀನು ಸುಮ್ಕೆ ಬಿಟ್ಟಿಯಾ… ಹಂಗೆ ತಾನೇ ನಾವು ಕೂಡ ನಿನ್ನ ಸುಮ್ಕೆ ಬಿಡ ಕಾಯ್ತದ. ಹೆಣ್ಣೈಟ್ಲಿಗೆ ಕ್ಷಮೆ ಕೇಳಬೇಕು ಅಂತ ಪಟ್ಟು ಹಾಕಿ ಕೂತಳು. ಇದಂತೂ ಜಂಗ್ಲಿಗೆ ಜಂಗ್ಲಿಯ ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.
 ಅಮಾಸೆಯಂತೂ ಜಂಗ್ಲಿಯ ಹೇಳಿಕೆಗಳನ್ನು ಉಲ್ಲೇಖಿಸಿ ಚುನಾವಣಾ ಆಯೋಗಕ್ಕೆ ಅವರ ಪಕ್ಷದ ಹೈಕಮಾಂಡಿಗೆ ಪುಟಗಟ್ಟಲೆ ಬರೆದು ಮುಟ್ಟಿಸಿಯೇ ಬಿಟ್ಟ. ಈ ಹಿಂದೆ ಮಾಡಿದ್ದ ಕುತಂತ್ರಕ್ಕೆ ಇದು ತಕ್ಕ ತಂತ್ರ ಎಂಬಂತೆ ಒಳಗೊಳಗೆ ಖುಷಿಪಟ್ಟ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ತನ್ನ ಮತದಾರರಲ್ಲಿ ಕೈ ಮುಗಿದು ಬೇಡಿಕೊಂಡ. ಅದರಂತೆ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಅನ್ನುವಂತೆಯೂ ಕೇಸ್ ಹಾಕಿದ.
ಸುಮ್ಮನಿಲ್ಲಾರ್ದೆ ಇರುವೆ ಬಿಟ್ಟುಕೊಂಡ ಜಂಗ್ಲಿ ಇದರಿಂದ ಕಂಗಾಲಾದ. ಏನಾದ್ರೂ ಮಾಡಿ ಇದನ್ನು ಇಲ್ಲಿಯೇ ಸರಿದೂಗಿಸಬೇಕು ಎಂದು ತನ್ನ ತೋಟದ ಮನೆಯಲ್ಲಿ ಕೂತು ತಲೆಕೆರೆದುಕೊಂಡ. ಕೊನೆಗೆ ಒಂದು ಉಪಾಯ ಹೊಳೆಯಿತು. ಮಾರನೇ ದಿನ ಭಾಷಣದಲ್ಲಿ ಈ ರೀತಿಯಾಗಿ ಹೇಳಿಕೆ ಕೊಟ್ಟ.
ಇವರ ಕೆಟ್ಟ ಕಾಲ್ಗುಣದಿಂದ ರಾಜ್ಯಕ್ಕೆ ಮಳೆ ಬರಲಿಲ್ಲ ಬ್ರೋ. ನಾಮಿನೇಷನ್ ಫೈಲ್ ಮಾಡಿದಾಗಿಂದ ಒಂದು ತೊಟ್ಟು ನೀರು ಸಹ ಕುಡಿದಿಲ್ಲ ಇದರಿಂದ ಗಂಟಲು ನಾಲಿಗೆ ಎರಡು ಒಣಗಿ ತುಂಬಾ ಡ್ರೈ ಆಗಿತ್ತು. ಹಂಗಾಗಿ ಮಾತಾಡುವಾಗ ಸ್ವಲ್ಪ ಟಂಗ್ ಟ್ವಿಸ್ಟ್ ಆಯ್ತು ಅಷ್ಟೇ.  ಈ ರಾಜ್ಯದ ಹೆಣ್ಣು ಮಕ್ಕಳು ನನಗೆ ಅಕ್ಕತಂಗಿಯರಂತೆ ಪ್ರಮಾಣವಾಗು ನಾನು ನನ್ನ ಅಕ್ಕತಂಗಿಯರನ್ನ ಅವಮಾನಿಸಿಲ್ಲ ಅಂದು ಕೈಮುಗಿದ. ಯಾರೋ ಆಗದವರು ನನ್ನ ಹೇಳಿಕೆಯನ್ನು ತಪ್ಪಾಗಿ ಟ್ವಿಸ್ಟ್ ಮಾಡಿದ್ದಾರೆ ಅನ್ನುತ್ತಾ ಬಿಕ್ಕಿ ಬಿಕ್ಕಿ ಅತ್ತು ತನ್ನ ಭುಜದ ಮೇಲಿದ್ದ ಕರವಸ್ತ್ರದಿಂದ ಮುಖಮೂತಿ ಒರೆಸಿಕೊಂಡ. ಮುಂದಿನ ದಿನಗಳಲ್ಲಿ ಇದಕ್ಕೆ ನಾನು ಸಾಕ್ಷಿ ಒದಗಿಸಬಲ್ಲೆ ನನ್ನ ನಂಬಿ ಎಂದು ಕೈಮುಗಿದ.
 ವಿರೋಧ ಪಕ್ಷದವರು ಈ ರೀತಿಯಾಗಿ ಅಪಪ್ರಚಾರ ಮಾಡಿ ನನ್ನನ್ನು ರಾಜಕೀಯದಿಂದ ದೂರವಿಡಲು ಪ್ರಯತ್ನಪಟ್ಟಿದ್ದಾರೆ ಇದು ನನಗೆ ಗೊತ್ತು. ಇವರ ಷಡ್ಯಂತ್ರವನ್ನು ಭೇದಿಸುತ್ತೇನೆ. ನಾನೊಂಥರಾ ಫೀನಿಕ್ಸ್ ಇದ್ದಹಾಗೆ ಯಾರೆಷ್ಟೇ ಬೆಂಕಿ ಹಚ್ಚಿದರು ನಾನು ಸಾಯುವುದಿಲ್ಲ. ನೋಡ್ತಾ ಇರಿ ನಾನು ನಾಳೆ ಈ ರಾಜ್ಯದ ಚುಕ್ಕಾಣಿ ಹಿಡಿದು ನಿಮ್ಮೆದಿರು ಬಂದೇ ಬರುತ್ತೇನೆಂಬ ಸವಾಲೆಸೆದು ಜಂಗ್ಲಿ ತನ್ನ ಚುನಾವಣಾ ಪ್ರಚಾರ ಮುಂದುವರಿಸಿದ….
* ಅಶ್ವತ್ಥ ಕಲ್ಲೇದೇವರಹಳ್ಳಿ