ಲಾಯರ್ ಕಪ್ಪು ಕೋಟಿಗೆ ತಾತ್ಕಾಲಿಕ ಮುಕ್ತಿ!ಮುಂದಿನ ಐದು ದಿನ ಹೆಚ್ಚಲಿದೆ ಉಷ್ಣಾಂಶ
ಕರ್ನಾಟಕದ ವಕೀಲರಿಗೆ ಕಪ್ಪು ಕೋಟಿನಿಂದ ತಾತ್ಕಾಲಿಕ ಮುಕ್ತಿ! ಕಾರಣ ಇಲ್ಲಿದೆ
ರಾಜ್ಯದಲ್ಲಿ ಬಿಸಿಲಿನ ಝಳಕ್ಕೆ ಜನ ಬಸವಳಿದಿದ್ದಾರೆ. ಮಳೆಯೂ ಬರುತ್ತಿಲ್ಲ. ಹೀಗಾಗಿ ರಾಜ್ಯದ ಎಲ್ಲಾ ಕೋರ್ಟ್ಗಳಲ್ಲಿ ಕಾರ್ಯನಿರ್ವಹಿಸುವ ವಕೀಲರಿಗೆ ಕರ್ನಾಟಕ ಹೈಕೋರ್ಟ್ ತುಸು ನಿರಾಳವಾಗುವಂತಹ ಸುದ್ದಿ ನೀಡಿದೆ. ಕಪ್ಪು ಕೋಟ್ ಧರಿಸುವುದರಿಂದ ತಾತ್ಕಾಲಿಕ ವಿನಾಯಿತಿ ನೀಡಿದೆ. ಬೇಸಗೆ ವೇಳೆ ಇನ್ನು ವಕೀಲರು ಕಪ್ಪು ಕೋಟು ಧರಿಸಿದ್ದರೂ ನಡೆಯುತ್ತದೆ. ಆದರೆ, ಯಾವ ರೀತಿಯ ದಿರಿಸು ಧರಿಸಬೇಕು ಎಂಬ ಮಾರಗಸೂಚಿಯನ್ನೂ ಕೋರ್ಟ್ ಬಿಡುಗಡೆ ಮಾಡಿದೆ. ವಿವರ ಇಲ್ಲಿದೆ.
ಏಪ್ರಿಲ್ 18 ರಿಂದ ಮೇ 31 ರವರೆಗೆ ರಾಜ್ಯಾದ್ಯಂತ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಹಾಜರಾಗುವ ವಕೀಲರಿಗೆ ಕಪ್ಪು ಕೋಟು (Black coat) ಧರಿಸುವುದರಿಂದ ಕರ್ನಾಟಕ ಹೈಕೋರ್ಟ್ (Karnataka High Court) ವಿನಾಯಿತಿ ನೀಡಿದೆ. ವಕೀಲರು ಕಪ್ಪು ಕೋಟಿನ ಬದಲಿಗೆ ಸಾದಾ ಬಿಳಿ ಶರ್ಟ್ / ಸಲ್ವಾರ್-ಕಮೀಜ್ ಅಥವಾ ಯಾವುದೇ ಶಾಂತ ಬಣ್ಣದ ದಿರಿಸುಗಳನ್ನು ಧರಿಸಬಹುದು ಎಂದು ನ್ಯಾಯಾಲಯದ ರಿಜಿಸ್ಟ್ರಾರ್ ಕೆಎಸ್ ಭರತ್ ಕುಮಾರ್ ಮಂಗಳವಾರ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 5 ರಂದು ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷರಿಂದ ಪಡೆದ ಮನವಿಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದ್ದು, ತಾಪಮಾನವೂ ಹಲವು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಹೀಗಾಗಿ ಇಂಥ ಸಂದರ್ಭದಲ್ಲಿ ಕಪ್ಪು ಕೋಟು ಧರಿಸಿ ಬರುವುದರಿಂದ ಮತ್ತಷ್ಟು ಸಮಸ್ಯೆಯಾಗುತ್ತದೆ. ಹೀಗಾಗಿ ತಾತ್ಕಾಲಿಕವಾಗಿ ಕಪ್ಪು ಕೋಟು ಧರಿಸುವುದರಿಂದ ವಿನಾಯಿತಿ ನೀಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.
ಮುಂದಿನ ಐದು ದಿನ ಹೆಚ್ಚಲಿದೆ ಉಷ್ಣಾಂಶ
ಈ ಮಧ್ಯೆ, ಮುಂದಿನ ಐದು ದಿನಗಳಲ್ಲಿ ಕರ್ನಾಟಕ, ಒಡಿಶಾ, ಪಶ್ಚಿಮ ಬಂಗಾಳ, ಕೊಂಕಣ, ಸೌರಾಷ್ಟ್ರ ಮತ್ತು ಕಚ್, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಉಷ್ಣ ಮಾರುತ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.