*ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಂದ ರಸ್ತೆ ಹಂಪ್ ವಿರುದ್ಧ ಸಮರ!* *ಶಿವಮೊಗ್ಗದ ಅಪಾಯಕಾರಿ ಹಂಪ್ ಗಳ ತೆರವು ಕಾರ್ಯಾಚರಣೆಗೆ ಸಿದ್ಧತೆ*

*ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಂದ ರಸ್ತೆ ಹಂಪ್ ವಿರುದ್ಧ ಸಮರ!*

*ಶಿವಮೊಗ್ಗದ ಅಪಾಯಕಾರಿ ಹಂಪ್ ಗಳ ತೆರವು ಕಾರ್ಯಾಚರಣೆಗೆ ಸಿದ್ಧತೆ*

ಶಿವಮೊಗ್ಗದಲ್ಲಿನ ರಸ್ತೆ ಹಂಪ್ ಗಳು ಅಪಘಾತ ಕಡಿಮೆ ಮಾಡುವ ಬದಲು, ಹೆಚ್ಚಿನ ಸಾವು ನೋವಿಗೆ ನೇರವಾಗಿ ಕಾರಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡರು ಅಧಿಕಾರಿ, ಸಿಬ್ಬಂದಿಗಳ ತುರ್ತು ಸಭೆ ನಡೆಸಿದ್ದು, ಅಪಾಯಕಾರಿ ಹಂಪ್ ಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಪೊಲೀಸರ ಒತ್ತಡಕ್ಕೆ ಮಣಿದು ನಗರಪಾಲಿಕೆ ವಿವಿಧ ರಸ್ತೆಗಳಲ್ಲಿ ಅಲ್ಲಲ್ಲಿ ಹಂಪ್ ಗಳನ್ನು ನಿರ್ಮಿಸಿತ್ತು. ಈ ಹಂಪ್ ಗಳ ನಿರ್ಮಾಣದ ನಂತರ ಪಾಲಿಕೆಯನ್ನೇ ನಿರ್ಲಕ್ಷ್ಯಿಸಿದ ಪೊಲೀಸ್ ಇಲಾಖೆ, ತಾವೇ ಇದರ ಸೃಷ್ಟಿಕರ್ತರು ಎಂಬಂತೆ ಫೋಸುಗಳನ್ನು ಕೊಟ್ಟು ಫೋಟೋ ತೆಗೆಸಿಕೊಂಡು ಪ್ರಚಾರದಲ್ಲಿ ತೊಡಗಿತ್ತು.

ಆದರೆ, ಈ ಹಂಪ್ ಗಳು ಸಾವಿಗೆ ಆಹ್ವಾನಿಸುತ್ತಿರುವ ಬಗ್ಗೆ, ಬಹಳಷ್ಟು ಅಪಘಾತಗಳು ಆಗುತ್ತಿರುವ ಬಗ್ಗೆ, ಸಾವುಗಳು ನಿರಂತರವಾಗಿ ಸಂಭವಿಸುತ್ತಿರುವ ಬಗ್ಗೆ ಜನಾಕ್ರೋಶ ಆರಂಭವಾಗಿದ್ದೇ ತಡ, ಈ ಹಂಪ್ ಗಳಿಗೂ ತಮಗೂ ಸಂಬಂಧವಿಲ್ಲ. ಇದೆಲ್ಲ ಪಾಲಿಕೆಯ ಕೆಲಸ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪೊಲೀಸರು ದಾರಿ ಹುಡುಕತೊಡಗಿದ್ದಾರೆ!

ಇದೆಲ್ಲದರ ಬಗ್ಗೆ ತುರ್ತಾಗಿ ಸ್ಪಂದಿಸಿರುವ ಆಯುಕ್ತ ಮಾಯಣ್ಣ ಗೌಡರು, ತಕ್ಷಣವೇ ಸೋಮವಾರದಂದು ಸಂಜೆ ಸಭೆ ಕರೆದರು. ಸಮಗ್ರವಾಗಿ ಚರ್ಚಿಸಿದರು. ಮೂರುಗಂಟೆಗಳ ಈ ತುರ್ತು ಸಭೆಯಲ್ಲಿ ಹಂಪ್ಸ್ ಗಳ ವೈಜ್ಞಾನಿಕತೆಯ ಬಗ್ಗೆ ಪರಿಶೀಲಿಸಿದರು. ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆಯೂ ಚರ್ಚಿಸಿದರು.

ಈಗ ಮೊದಲ ಹಂತದ ತೆರವು ಕಾರ್ಯಾಚರಣೆಗೆ ಸಿದ್ಧವಾಗಿದ್ದಾರೆ. ಶಿವಮೊಗ್ಗದಲ್ಲಿರುವ ಸುಮಾರು 15 ಕ್ಕೂ ಹೆಚ್ಚಿನ ಹಂಪ್ ಗಳ ತೆರವು ಕೆಲಸ ಆರಂಭವಾಗಿದೆ. ಈ ಕೆಲಸ ಶರವೇಗದಿಂದ ನಡೆಯುತ್ತಿರುವುದು ಸಮಾಧಾನದ ವಿಷಯ.

ಈ ರಸ್ತೆ ಹಂಪ್ ಗಳ ಬಗ್ಗೆ ವಿವರವಾಗಿ ಅಧ್ಯಯನ ಮಾಡಿ, ರಸ್ತೆ, ಟ್ರಾಫಿಕ್ ಮತ್ತು ಸನ್ನಿವೇಶಕ್ಕೆ ತಕ್ಕ ವೈಜ್ಞಾನಿಕ ಡಿಸೈನ್ ರೂಪಿಸಿ ಮುಂದಿನ ದಿನಗಳಲ್ಲಿ ಹಂಪ್ಸ್ ಅಳವಡಿಸಲು ಯೋಜಿಸಲಾಗುವುದು ಎನ್ನುತ್ತಾರೆ ಆಯುಕ್ತರಾದ ಮಾಯಣ್ಣ ಗೌಡರು.