ಬಂಡಾಯ ಶಮನಕ್ಕೆ ಸಚಿವ ಮಧು ಬಂಗಾರಪ್ಪ ಪ್ರಯತ್ನ ಎಂ. ರಮೇಶ್ ಶೆಟ್ಟಿ/ ರಂಗಸ್ವಾಮಿ ನಾಮಪತ್ರ ವಾಪಸ್ ಪಟ್ಟು ಬಿಡದೇ ಸ್ಪರ್ಧೆಯಲ್ಲಿ ಉಳಿದ ಎಸ್.ಪಿ.ದಿನೇಶ್ ಸ್ವತಃ ಡಿಸಿಎಂ ಡಿಕೆ ಮಾತಿಗೂ ಜಗ್ಗದ ದಿನೇಶ್…
ಬಂಡಾಯ ಶಮನಕ್ಕೆ ಸಚಿವ ಮಧು ಬಂಗಾರಪ್ಪ ಪ್ರಯತ್ನ
ಎಂ. ರಮೇಶ್ ಶೆಟ್ಟಿ/ ರಂಗಸ್ವಾಮಿ ನಾಮಪತ್ರ ವಾಪಸ್
ಪಟ್ಟು ಬಿಡದೇ ಸ್ಪರ್ಧೆಯಲ್ಲಿ ಉಳಿದ ಎಸ್.ಪಿ.ದಿನೇಶ್
ಸ್ವತಃ ಡಿಸಿಎಂ ಡಿಕೆ ಮಾತಿಗೂ ಜಗ್ಗದ ದಿನೇಶ್…
ಶಿವಮೊಗ್ಗ: ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿ ಅರ್ಜಿಯನ್ನು ಸಲ್ಲಿಸಿದ್ದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಎಂ. ರಮೇಶ್ ಶೆಟ್ಟಿ ಹಾಗೂ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದ ರಂಗಸ್ವಾಮಿ ಇಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪನವರ ಸಲಹೆ ಮೇರೆಗೆ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.
ಅವರು ಇಂದು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿ ತಾವು ಸಲ್ಲಿಸಿದ್ದ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡರು.
ಆದರೆ, ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ರವರ ವಿರುದ್ಧ ಸ್ಪರ್ಧೆಗೆ ನಿಂತು ಅರ್ಜಿ ಸಲ್ಲಿಸಿರುವ ಹಿರಿಯ ಕಾಂಗ್ರೆಸ್ಸಿಗ ಎಸ್ ಪಿ ದಿನೇಶ್ ರವರು ಡಿಸಿಎಂ ಡಿ ಕೆ ಶಿವಕುಮಾರ್, ಕರ್ನಾಟಕ ಉಸ್ತುವಾರಿ ಸುರ್ಜೀವಾಲಾ, ಜಿಲ್ಲಾ ಮಂತ್ರಿ ಮಧು ಬಂಗಾರಪ್ಪ ಸೇರಿದಂತೆ ಹಲವರೆಲ್ಲ ಮನವೊಲಿಸಲು ಪ್ರಯತ್ನಿಸಿದರೂ ನಾಮಪತ್ರ ಹಿಂಪಡೆಯದೇ ಕಣದಲ್ಲೇ ಉಳಿದಿದ್ದಾರೆ. ಇವತ್ತು, ಅಂದರೆ, ಮೇ.20 ನಾಮಪತ್ರ ಹಿಂಪಡೆಯಲು ಕೊನೆದಿನವಾಗಿತ್ತು.
ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರಮೇಶ್ ಶೆಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಎಸ್. ಮಧು ಬಂಗಾರಪ್ಪನವರ ಸೂಚನೆ ಮೇರೆಗೆ ನಾನು ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುತ್ತಿದ್ದೇನೆ ಎಂದರು.
ಕಳೆದ ಬಾರಿ ಚುನಾವಣೆಯಲ್ಲಿ ಅಲ್ಪ ಮತದಿಂದ ಪರಾಭವಗೊಂಡಿದ್ದೆ. ಸಾವಿರಾರು ಶಿಕ್ಷಕರುಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಕೆಲಸವನ್ನು ಮಾಡಿದ್ದೆ. ನಾನು ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತನಂತೆ ಕೆಲಸ ನಿರ್ವಹಿಸಿದ್ದರೂ ಸಹ ನನಗೆ ಟಿಕೆಟ್ ಕೈತಪ್ಪಿದ್ದರಿಂದ ಕೊನೆಯ ಹಂತದಲ್ಲಾದರೂ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಿಂದ ನಾಮಪತ್ರ ಸಲ್ಲಿಸಿದ್ದೆ. ವರಿಷ್ಠರ ಸೂಚನೆ ಮೇರೆಗೆ ಈಗ ನಾಮಪತ್ರ ಹಿಂದಕ್ಕೆ ಪಡೆದು ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳಾದ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದ ಡಾ.ಕೆ ಮಂಜುನಾಥ್ ಇವರನ್ನು ಗೆಲ್ಲಿಸಲು ಕ್ಷೇತ್ರಾದ್ಯಂತ ಸಂಚರಿಸುವುದಾಗಿ ರಮೇಶ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪದವೀಧರ ಕ್ಷೇತ್ರದ ಇನ್ನೊಬ್ಬ ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ರಂಗಸ್ವಾಮಿ ಕೂಡ ನಾಮಪತ್ರ ಹಿಂದಕ್ಕೆ ಪಡೆದರು. ನಾಮಪತ್ರ ಹಿಂಪಡೆಯುವ ಸಂದರ್ಭದಲ್ಲಿ ರಾಜ್ಯ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಮಾಜಿ ಅಧ್ಯಕ್ಷ ಶಾಂತವೀರ್ ನಾಯಕ್ ಜೊತೆಯಲ್ಲಿದ್ದರು.