ರೇಣುಕಾ ಸ್ವಾಮಿ ಮರ್ಡರ್ ಕೇಸ್;ಜೂನ್ 20ರವರೆಗೆ ದರ್ಶನ್  ಗ್ಯಾಂಗ್​ ಮತ್ತೆ ಪೊಲೀಸ್ ಕಸ್ಟಡಿಗೆ

ರೇಣುಕಾ ಸ್ವಾಮಿ ಮರ್ಡರ್ ಕೇಸ್;

ಜೂನ್ 20ರವರೆಗೆ ದರ್ಶನ್  ಗ್ಯಾಂಗ್​ ಮತ್ತೆ ಪೊಲೀಸ್ ಕಸ್ಟಡಿಗೆ

ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳ ಆರು ದಿನದ ಪೊಲೀಸ್ ಕಸ್ಟಡಿ ಅಂತ್ಯವಾಗುವ ಒಂದು ದಿನ ಮುಂಚಿತವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಇದೀಗ ಪೊಲೀಸ್ ಕಸ್ಟಡಿಯ ಅವಧಿಯನ್ನು ಐದು ದಿನಗಳ ಮುಂದುವರೆಸಲಾಗಿದೆ.

ರೇಣುಕಾ ಸ್ವಾಮಿ (Renuka Swamy) ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ (Darshan Thoogudeepa), ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳನ್ನು ಇಂದು (ಜೂನ್ 15) ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಯ ವಿಸ್ತರಣೆಗೆ ಮನವಿ ಮಾಡಲಾಯ್ತು. ಅಂತೆಯೇ ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಲಯ ಪೊಲೀಸ್ ಕಸ್ಟಡಿಯನ್ನು ಐದು ದಿನಗಳ ಕಾಲ ಮುಂದುವರೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾ ಹಾಗೂ ಇತರೆ ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು. ಅದೇ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳನ್ನು ಆರು ದಿನಗಳ ಕಾಲ ಪೊಲೀಸರ ಕಸ್ಟಡಿಗೆ ನೀಡಲಾಗಿತ್ತು. ಇದೀಗ ದರ್ಶನ್ ಹಾಗೂ ಆರೋಪಿಗಳು ಐದು ದಿನವನ್ನು ಕಸ್ಟಡಿಯಲ್ಲಿ ಕಳೆದಿದ್ದು, ನಾಳೆ ಭಾನುವಾರ ಆಗಿರುವ ಕಾರಣ ಒಂದು ದಿನ ಮುಂಚಿತವಾಗಿ ಅಂದರೆ ಜೂನ್ 15 ರಂದೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯನ್ನು ಮುಂದುವರೆಸಲಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ, ನಟಿ ಪವಿತ್ರಾ ಗೌಡ ಸೇರಿದಂತೆ 11 ಆರೋಪಿಗಳನ್ನು ಮಂಗಳವಾರ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಒಟ್ಟು 19 ಆರೋಪಿಗಳಿದ್ದು, ಇತರೆ ಕೆಲವು ಆರೋಪಿಗಳನ್ನು ನಂತರದ ದಿನಗಳಲ್ಲಿ ಬಂಧಿಸಲಾಗಿದ್ದು, ಕೆಲವು ಆರೋಪಿಗಳು ತಾವೇ ಪೊಲೀಸರ ಮುಂದೆ ಶರಣಾಗಿದ್ದರು. ಇಂದು (ಜೂನ್ 15) ಎಲ್ಲ ಆರೋಪಿಗಳನ್ನು ಒಟ್ಟಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯ್ತು. ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ವೈದ್ಯರನ್ನು ಕರೆಸಿ ಎಲ್ಲ ಆರೋಪಿಗಳಿಗೂ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿತ್ತು.
ಪೊಲೀಸರ ಪರವಾಗಿ ವಿಶೇಷ ಅಭಿಯೋಜಕ (ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್) ಪ್ರಸನ್ನ ಕುಮಾರ್ ನ್ಯಾಯಾಲಯದಲ್ಲಿ ವಾದ ಮಂಡಸಿದರು. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ಹಾಗೂ ವಿಚಾರಣೆಯ ಅವಶ್ಯಕತೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಅಸಲಿಗೆ ಒಂಬತ್ತು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡುವಂತೆ ಕೋರಲಾಗಿತ್ತು. ಆದರೆ ಇದಕ್ಕೆ ದರ್ಶನ್ ಪರ ಹಾಗೂ ಪವಿತ್ರಾ ಗೌಡ ಅವರ ವಕೀಲರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಎರಡೂ ಕಡೆಯವರ ವಾದ ಆಲಿಸಿದ ನ್ಯಾಯಾಧೀಶರು ಪೊಲೀಸ್ ಕಸ್ಟಡಿ ಅವಧಿಯನ್ನು ಐದು ದಿನಗಳ ಕಾಲ ವಿಸ್ತರಿಸಿದ್ದಾರೆ.

ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿಯನ್ನು ಮುಂದುವರೆಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 19 ಆರೋಪಿಗಳಿದ್ದಾರೆ. ಪ್ರಮುಖ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿಯನ್ನಷ್ಟೆ ಮುಂದುವರೆಸಲಾಗಿದೆ. ದರ್ಶನ್, ದರ್ಶನ್, ಪವಿತ್ರಾ, ದೀಪಕ್, ಪವನ್, ರಘು, ಅನು ಕುಮಾರ್, ನಂದೀಶ್, ಜಗದೀಶ್, ವಿನಯ್, ನಾಗರಾಜ್, ಲಕ್ಷ್ಮಣ, ಪ್ರದೋಶ್, ಕೇಶವ್ ಪೊಲೀಸ್ ಕಸ್ಟಡಿಗೊಳಪಟ್ಟಿದ್ದಾರೆ.