ದರ್ಶನ್ ಕೊಲೆ ಕೇಸೂ ತಮಿಳು ನಾಡಿನ ಆ ಸೂಪರ್ ಸ್ಟಾರ್ ಜೈಲು ಸೇರಿದ ಕಥೆಯೂ… ಆಗೊಮ್ಮೆಯೂ ಚಿತ್ರರಂಗ ತಲೆ ತಗ್ಗಿಸಿ ನಿಂತಿತ್ತು!

ದರ್ಶನ್ ಕೊಲೆ ಕೇಸೂ ತಮಿಳು ನಾಡಿನ ಆ ಸೂಪರ್ ಸ್ಟಾರ್ ಜೈಲು ಸೇರಿದ ಕಥೆಯೂ…

ಆಗೊಮ್ಮೆಯೂ ಚಿತ್ರರಂಗ ತಲೆ ತಗ್ಗಿಸಿ ನಿಂತಿತ್ತು!

ನಟ ದರ್ಶನ್​ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದು ಸ್ಯಾಂಡಲ್​ವುಡ್ ಅಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗವನ್ನೇ ತಲ್ಲಣಗೊಳಿಸಿದೆ. ಅಪಾರ ಅಭಿಮಾನಿಗಳ ಬಳಗ ಹೊಂದಿರೋ ಸ್ಟಾರ್ ನಟನೊಬ್ಬ, ಕೊಲೆ ಕೇಸ್​ನಲ್ಲಿ ಸಿಕ್ಕಿಬಿದ್ದಿದ್ದು ಈಗಿನ ಚಿತ್ರೋದ್ಯಮಕ್ಕೆ, ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ. ಆದ್ರೆ, ಇಂತಹದ್ದೇ ಕೊಲೆ ಕೇಸ್​ವೊಂದರಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್ ನಟನೊಬ್ಬ ಜೈಲು ಸೇರಿದ್ದ ಕಥೆ ಮತ್ತೆ ಮುನ್ನಲೆಗೆ ಬಂದಿದೆ. ಈ ತಮಿಳುನಟ ಜೈಲು ಸೇರಿದ್ದು ಥೇಟ್​​ ಸಿನಿಮಾ ಕಥೆಯಂತೆಯೇ ಇದೆ. ಎಂಟು ದಶಕಗಳ ಹಿಂದಿನ ಈ ಘಟನೆ ಸೂಪರ್ ಸ್ಟಾರ್​ ನಟನ ಚಿತ್ರಬದುಕನ್ನೇ ನುಂಗಿ ಹಾಕಿ ಬೀದಿಗೆ ಎಸೆದಿತ್ತು.
ಮಾಯಾವರಂ ಕೃಷ್ಣಸಾಮಿ ತ್ಯಾಗರಾಜ ಭಾಗವತರು ಅಲಿಯಾಸ್​ ಎಂ.ಕೆ. ತ್ಯಾಗರಾಜ ಭಾಗವತರ್​. ತಮಿಳು ಚಿತ್ರರಂಗದ ಮೊಟ್ಟಮೊದಲ ಸೂಪರ್​ ಸ್ಟಾರ್. 1944ರಲ್ಲಿ ಟಾಲಿವುಡ್​​ನಲ್ಲಿ ತನ್ನ ವಿಶಿಷ್ಟ ಅಭಿನಯದಿಂದ ಮನೆಮಾತಾಗಿದ್ದವರು ಭಾಗವತರ್​. ದುಬಾರಿ ಸಂಭಾವನೆ ಪಡೆಯುತ್ತಿದ್ದ ಏಕೈಕ ನಟ. ಕರ್ನಾಟಕ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಗಾಯಕರಾಗಿದ್ದ ಭಾಗವತರ್​, ಸ್ವತಃ ತಾವೇ ಬರೆದು ಹಾಡುತ್ತಿದ್ದರು. ಅವರ ಸಂಗೀತ ಕಛೇರಿಗಳಿಗೆ ಇನ್ನಿಲ್ಲದ ಡಿಮ್ಯಾಂಡ್​.
1934 ರಿಂದ 1959ರೊಳಗೆ ಭಾಗವತರ್ ನಟಿಸಿದ್ದು ಕೇವಲ 14 ಸಿನಿಮಾ. ಅದರಲ್ಲಿ 10 ಚಿತ್ರಗಳು ಸೂಪರ್​ ಹಿಟ್​. 1944ರಲ್ಲಿ ಭಾಗವತರ್ ಅಭಿನಯಿಸಿದ್ದ ‘ಹರಿದಾಸ್​’ ಚಿತ್ರ ಮದ್ರಾಸಿನ ಬ್ರಾಡ್​ ವೇ ಥಿಯೇಟರ್​​ನಲ್ಲಿ ಸತತ ಮೂರು ವರ್ಷ ಯಶಸ್ವಿ ಪ್ರದರ್ಶನ ಕಂಡ ದಾಖಲೆಯ ಪುಟ ಸೇರಿತ್ತು.
ಇವರ ಪ್ರತಿ ಚಿತ್ರದಲ್ಲೂ ಹಾಸ್ಯನಟನಾಗಿ ಕಾಣಿಸಿಕೊಳ್ಳುತ್ತಿದ್ದವರು ಎನ್.ಎಸ್. ಕೃಷ್ಣನ್. ಇವರಿಬ್ಬರ ಜೋಡಿ ತಮಿಳು ಚಿತ್ರರಸಿಕರ ಮನಸೂರೆಗೊಂಡಿತ್ತು. ಕೃಷ್ಣನ್​ ಹಾಸ್ಯನಟನೆಗೆ ಫಿದಾ ಆಗಿದ್ದ ತಮಿಳರು, ಪ್ರೀತಿಯಿಂದ ‘ಚಾರ್ಲಿ ಚಾಪ್ಲಿನ್​’ ಎನ್ನುತ್ತಿದ್ದರು. ಇವರಿಬ್ಬರಿದ್ದ ಎಲ್ಲ ಚಿತ್ರಗಳೂ ಹಿಟ್​. ಜನಪ್ರಿಯತೆ, ದುಡ್ಡು, ಅಭಿಮಾನಿಗಳ ದೊಡ್ಡ ಬಳಗವನ್ನೇ ಹೊಂದಿದ್ದ ಭಾಗವತರ್​ ಬಗ್ಗೆ ತಮಿಳು ಚಿತ್ರರಂಗದಲ್ಲಿ ದಂತಕಥೆಗಳೇ ಇವೆ. ಪ್ರತಿದಿನ ಭಾಗವತರ್​ ಗುಲಾಬಿ ಹೂವಿನಿಂದ ತುಂಬಿದ ನೀರಿನಲ್ಲೇ ಸ್ನಾನ ಮಾಡುತ್ತಿದ್ದರಂತೆ. ಪ್ರತಿ ದಿನವೂ ಮೀನೂಟವೇ ಬೇಕಿತ್ತು. ಅದಕ್ಕೇ ಪ್ರತಿದಿನವೂ ಫ್ಲೈಟ್ ನಲ್ಲಿ ಮದ್ರಾಸ್​ನಿಂದ ತಿರುಚಿಗೆ ಹೋಗಿ ಮೀನೂಟ ಮಾಡಿಕೊಂಡು ಬರುತ್ತಿದ್ದರಂತೆ.
ಇಂಥ ಭಾಗವತರ್​ಗೆ ಥೇಟ್ ನಮ್ಮ ದರ್ಶನ್​ರಂತೆಯೇ ತಲೆತಿರುಗಿ ಬಿಟ್ಟಿತು. ಸಣ್ಣ ಟೀಕೆಯನ್ನೂ ಸಹಿಸದ ಮನಸ್ಥಿತಿಗೆ ಬಂದುಬಿಟ್ಟಿದ್ದರು ಭಾಗವತರ್​. ಅವರು ಮಾಡಿದ್ದೇ ಸಿನಿಮಾ, ಹೇಳಿದ್ದೇ ಡೈಲಾಗ್​. ಪ್ರಶ್ನಿಸುವವರೇ ಇಲ್ಲದಂತಾಗಿತ್ತು. ಇಂಥ ಭಾಗವತರ್​ ಅಹಂ ಅಡಗಿಸಿದ್ದು ಒಬ್ಬ ಪತ್ರಕರ್ತ. ಆತನ ಹೆಸರು ಲಕ್ಷ್ಮೀಕಾಂತನ್​. ಟ್ಯಾಬ್ಲಾಯ್ಡ್​ ಪತ್ರಿಕೆ ನಡೆಸುತ್ತಿದ್ದ ಲಕ್ಷ್ಮೀಕಾಂತನ್​, ಭಾಗವತರ್​ ಚಿತ್ರಗಳ ಕಟು ವಿಮರ್ಶಕರಾಗಿದ್ದರು. ಅವರ ಲೇಖನಗಳು ಸೂಪರ್ ಸ್ಟಾರ್ ಭಾಗವತರ್​​ರನ್ನು ಕೆರಳಿಸಿತ್ತು. ಲಕ್ಷ್ಮೀಕಾಂತನ್​ಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದ ಭಾಗವತರ್​,
ಆರುಮುಗಂ ಮತ್ತು ನಾಗಲಿಂಗಂ ಎಂಬುವರಿಗೆ ಸುಪಾರಿ ಕೊಟ್ಟಿದ್ದರಂತೆ.
ನವೆಂಬರ್ 8, 1944 ರಂದು ಆರ್ಮುಗಂ ಮತ್ತು ನಾಗಲಿಂಗಂ ಪಟಾಲಂ, ಲಕ್ಷ್ಮೀಕಾಂತನ್​ ಮೇಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಲಕ್ಷ್ಮೀಕಾಂತನ್​, ಮರುದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಲಕ್ಷ್ಮೀಕಾಂತನ್​ ಕೊಲೆ ಕೇಸ್​ನಲ್ಲಿ ಭಾಗವತರನ್ನು ಆರೋಪಿ ಎಂದು ಘೋಷಿಸಿ 30 ತಿಂಗಳು (ಎರಡೂವರೆ ವರ್ಷ) ಜೈಲುಶಿಕ್ಷೆ ವಿಧಿಸಿತು. ತಮಿಳರ ಆರಾಧ್ಯದೈವವಾಗಿದ್ದ ಭಾಗವತರ್​, ಅಂಡಮಾನ್​ ಜೈಲಿನಲ್ಲಿ ಎರಡೂವರೆ ವರ್ಷ ಕಳೆಯಬೇಕಾಯ್ತು. ಸೂಪರ್​ಸ್ಟಾರ್​ ವೊಬ್ಬ ಜೈಲು ಸೇರಿದ್ದು ಭಾರತೀಯ ಚಿತ್ರರಂಗವನ್ನೂ ಅಂದೂ ಆಘಾತಕ್ಕೀಡು ಮಾಡಿತ್ತು. ಭಾಗವತರ್​ ಜೈಲು ಸೇರುತ್ತಿದ್ದಂತೆ, ಸಹಿ ಹಾಕಿದ್ದ ಸುಮಾರು 12 ಚಿತ್ರಗಳ ಚಿತ್ರೀಕರಣ ಸ್ಥಗಿತಗೊಂಡಿತು. ಬಿಡುಗಡೆಯಾಗಿದ್ದ ಚಿತ್ರಗಳೂ ನೆಲಕಚ್ಚಿದವು. ನಿರ್ದೋಷಿಯಾಗಿ ಜೈಲಿನಿಂದ ಬಿಡುಗಡೆಯಾಗಿ ಹೊರಬಂದರೂ, ತಮಿಳು ಚಿತ್ರರಂಗದಲ್ಲಿ ಭಾಗವತರ್​ ತಮ್ಮ ಪ್ರಾಬಲ್ಯ ಕಳೆದುಕೊಂಡಿದ್ದರು. ಮೊದಲಿನಂತೆ ಅವಕಾಶಗಳು ಸಿಗಲಿಲ್ಲ. ಜನಪ್ರಿಯತೆಯೂ ಕುಂದಿತ್ತು. ಆನಂತರ ನಟಿಸಿದ ಚಿತ್ರಗಳೂ ಹಿಟ್ ಆಗಲಿಲ್ಲ. ಭಾಗವತರ್​ ಹಾಕಿಕೊಂಡು ಚಿತ್ರ ನಿರ್ಮಿಸಲು ನಿರ್ಮಾಪಕರು ಮುಂದೆ ಬರಲಿಲ್ಲ. ಭಾಗವತರ್​ ಜೈಲಿನ ಹೊರಬರುವಷ್ಟರಲ್ಲಿ ತಮಿಳು ಚಿತ್ರರಂಗದಲ್ಲಿ ಹೊಸ ನಟರು ಆವರಿಸಿಕೊಂಡಿದ್ರು.  ಭಾಗವತರ್​ ಜೈಲು ಸೇರಿದ ಪರಿಣಾಮ, ನಮ್ಮ ಕನ್ನಡದ ಹೊನ್ನಪ್ಪ ಭಾಗವತರ್​ ಅವರಿಗೆ ತಮಿಳಿನಲ್ಲಿ ಅವಕಾಶಗಳು ಹುಡುಕಿಕೊಂಡು ಬರತೊಡಗಿದವು. ಆದ್ರೆ, ತ್ಯಾಗರಾಜನ್ ಭಾಗವತರರ ಅಭಿಮಾನಿಯಾಗಿದ್ದ ಹೊನ್ನಪ್ಪ ಭಾಗವತರ್​, ಚಿತ್ರದಲ್ಲಿ ನಟಿಸುವುದಕ್ಕಿಂತ ಮುಂದೆ ಭಾಗವತ್​​​ರ ಒಪ್ಪಿಗೆ ಪಡೆಯುತ್ತಿದ್ದರಂತೆ. ಅವಕಾಶವಿಲ್ಲದೇ ಕಷ್ಟದ ಜೀವನ ಸಾಗಿಸುತ್ತಿದ್ದ ಭಾಗವತರ್​, ವಿಧಿ ಇಲ್ಲದೇ  ಹಾಡುಗಾರನಾಗಿ ಮುಂದುವರಿಯಲು ನಿರ್ಧರಿಸಿದ್ರು. ದೇಶದುದ್ದಕ್ಕೂ ದೇವಾಲಯಗಳಿಗೆ ತೆರಳಿ ಕಛೇರಿ ನೀಡುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಭಾಗವತರ್​ ತಮ್ಮ 49ನೇ ವಯಸ್ಸಿಗೆ ಕೊನೆಯುಸಿರೆಳೆದರು.
ನಟನಾಗಿ ಖ್ಯಾತಿಯ ಉತ್ತುಂಗದಲ್ಲಿದ್ದಾಗಲೂ, ಎರಡನೇ ಮಹಾಯುದ್ಧದ ಸಮಯದಲ್ಲಿ ಸೈನಿಕರಾಗಿ ದೇಣಿಗೆ ಸಂಗ್ರಹಿಸಲು ಉಚಿತ ಸಂಗೀತ ಕಛೇರಿ ನಡೆಸಿಕೊಟ್ಟಿದ್ದು ಗಮನಾರ್ಹ. ಜನಪ್ರಿಯತೆ, ಸ್ಟಾರ್ ಡಮ್​, ದುಡ್ಡಿನ ಅಮಲಿನಿಂದ ಕೊಲೆ ಕೇಸ್​ನಲ್ಲಿ ಜೈಲು ಸೇರಿ ಬಂದರೂ ತ್ಯಾಗರಾಜನ್​ ಭಾಗವತರ್, ತಮಿಳು ಚಿತ್ರರಂಗದಲ್ಲಿ ಚರಿತ್ರಾರ್ಹರಾಗಿಯೇ ಉಳಿದಿದ್ದಾರೆ. ಅವರ ಹಾಡುಗಳೂ ಈಗಲೂ ಸಂಗೀತ ರಚಿಸಿಕರ ಮನ, ಮನೆಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.
– ಎಂ.ಸಿ.ಶೋಭಾ