ನಾನ್ ಬಯಾಲಜಿಕಲ್ ಮೋದಿ, ಶಿವತತ್ವ ಮತ್ತು ರಾಹುಲ್ ಪಂಚ್!

ಸದನದಲ್ಲಿ ರಾಹುಲ್ “ಶೈವಾ”ಸ್ತ್ರ!

ಹತ್ತು ವರ್ಷಗಳ ನಂತರ ಸದನದಲ್ಲಿ ಪ್ರಜಾತಂತ್ರಕ್ಕೆ ನಿಜವಾದ ದನಿ ದಕ್ಕಿತು. ನಿರಂಕುಶ ಪ್ರಭುತ್ವದ ಮದದಲ್ಲಿ ತೇಲುತ್ತಿರುವಂತೆ ಭಾಸವಾಗುತ್ತಿದ್ದ ಆಡಳಿತ ಪಕ್ಷ, ವಂದನಾ ಪ್ರಸ್ತಾವ ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷದ ನಾಯಕ ರಾಹುಲ್ ದಾಳಿಗೆ ತತ್ತರಿಸಿತು.
“ನಾನ್ ಬಯಾಲಜಿಕಲ್” ಪ್ರಧಾನಿ ಅಕ್ಷರಶಃ ಕಕ್ಕಾಬಿಕ್ಕಿಯಾಗಿ ಕೂತಿದ್ದರು. ನಡುವೆ ಎದ್ದು ಮತ್ತೆ ರಾಹುಲ್ “ಹಿಂದು ವಿರೋಧಿ” ಎಂದು ಸದನದ ದಿಕ್ಕನ್ನು ಬದಲಿಸುವ ಅವರ ಯತ್ನ ವಿಫಲವಾಯಿತು. ಪಕ್ಷದ ಸದಸ್ಯರು , ಸಹೊದ್ಯೋಗಿಗಳು ಎಲ್ಲ ಗರಬಡಿದವರಂತೆ ಕೂತಿದ್ದರು. ಪರಮಾಪ್ತ ಷಾ ಏರು ದನಿಯಲ್ಲಿ ಜೀವವೇ ಇರಲಿಲ್ಲ. ಇವರ ಮಾತಿಗೆ ಯಾರೂ ಕ್ಯಾರೇ ಅನ್ನದಂತಿದ್ದರು.
ರಕ್ಷಣಾ ಸಚಿವರ ರಕ್ಷಣೆಗೆ ಯಾರೂ ಬರುವ ಸ್ಥಿತಿಯಲ್ಲಿ ಇರಲಿಲ್ಲ. ರಾಹುಲ್ ಅವರ ‘ಅಗ್ನಿವೀರ’ ಶಿವಾಸ್ತ್ರ ಬರಸಿಡಿಲಿನಂತೆ ಎರಗುತ್ತಿತ್ತು. ಆ ಏಟಿಗೆ ಅರೇ! ನಾವಂದುಕೊಂಡ “ಪಪ್ಪು” ನಮ್ಮ ಕೈಗೆ ಚಿಪ್ಪು ಬರುವ ಹಾಗೆ ಮಾಡುವ ದಿನಗಳು ದೂರವಿಲ್ಲ ಎನ್ನುವ ಆತಂಕ ಆಡಳಿತ ಪಕ್ಷದ ಸದಸ್ಯರಲ್ಲಿ ಮನೆ ಮಾಡಿದಂತೆ ಅನಿಸುತ್ತಿತ್ತು.
ಶಿವನ ಭಾವಚಿತ್ರ ತೋರಿಸುತ್ತಿದ್ದಂತೆ ಈ ಹಿಂದಿನ ಲೋಕಸಭೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಇದ್ದ ಪ್ರತಿಪಕ್ಷವನ್ನು ಹಿಗ್ಗಾಮುಗ್ಗಾ ಹಣಿಯಲು ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂಬಂತೆ ಆಕ್ರಮಣಕಾರಿಯಾಗಿ ಎರಗುತ್ತಿದ್ದ ಆಡಳಿತ ಪಕ್ಷ ಇಂದು ಸದನದಲ್ಲಿ ದಿಕ್ಕೇ ತೋಚದಂತೆ ಕುಳಿತಿತ್ತು.
“ನನ್ನ ಮೇಲೆ ಇಪ್ಪತ್ತಕ್ಕೂ ಹೆಚ್ಚು ಕೇಸ್ ಹಾಕಿದಿರಿ, ಎರಡು ವರ್ಷಗಳ ಕಾಲ ಜೈಲಿಗಟ್ಟುವ ಪ್ರಯತ್ನ ಮಾಡಿದಿರಿ, ಮನೆ ಕಸಿದುಕೊಂಡಿರಿ ಆದರೆ ನಾನು ಹೆದರಲಿಲ್ಲ. ಶಿವ ನನಗೆ ಧೈರ್ಯ ತುಂಬಿದ, ಸ್ಪೂರ್ತಿ ನೀಡಿದ. ‘ಹೆದರಬೇಡ, ಹೆದರಿಸಬೇಡ ಮತ್ತು ಸತ್ಯದ ಹಾದಿಯಲ್ಲಿ ಸಾಗು..’ ಎಂಬ ಶಿವತತ್ವ ನನಗೆ ನೆನಪಾಯಿತು” ಎಂದ ರಾಹುಲ್ ಮಾತಿಗೆ ಆಡಳಿತ ಪಕ್ಷದವರ ಅಂತರಂಗ ಒಂದು ಕ್ಷಣ ವಿಲ ವಿಲ ಎಂದಿರಬೇಕು. ಎಲ್ಲ ಮೌನದಲ್ಲೇ ಸಹಮತ ವ್ಯಕ್ತಪಡಿಸಿದಂತಿದ್ದರು.
ಶಿವನ ಕೊರಳಲ್ಲಿನ ನಾಗರಹಾವು ಹೆದರಬೇಡ, ಹೆದರಿಸಬೇಡ ಎನ್ನುವುದರ ಸಂಕೇತ. ಕೊರಳ ರುದ್ರಾಕ್ಷಿ ತಪಭಾವದ ಸಂಕೇತ ಮತ್ತು ತ್ರಿಶೂಲ ಅಸ್ತ್ರ ನೆಲಕ್ಕೆ ಊರಿ ಒಂದು ಕೈಯಲ್ಲಿ ಢಮರುಗ ಹಿಡಿದಿರುವುದು ಅಹಿಂಸೆಯ ಸಂಕೇತ ಹಾಗು ಮುಖ್ಯವಾಗಿ ಮತ್ತೊಂದು ಕೈ ಅಭಯ ಹಸ್ತದ ಸಂಕೇತ. ಧೈರ್ಯವಾಗಿರಿ ಸತ್ಯದ ಹಾದಿಯಲ್ಲಿ ನಾನು ನಿಮ್ಮ ಜೊತೆಗಿರುವೆ ಎನ್ನುವಂಥ ಅಭಯ ಅದು.
ಇದು ನಿಜವಾದ ಅಹಿಂಸೆಯ ಸಂದೇಶ. ಹಿಂದು ಆದವನು ಹಿಂಸೆ ಅನುಸರಿಸಲಾರ. ಯಾರಿಗೂ ಹೆದರಲಾರ ಯಾರನ್ನೂ ಹೆದರಿಸಲಾರ. “ಆದರೆ ನೀವು (ಆಡಳಿತ ಪಕ್ಷದ ಬಿಜೆಪಿ ಅವರತ್ತ ನೋಡಿ) ಹಿಂದು ಎಂದು ಹೇಳಿಕೊಳ್ಳುವವರು ಭಯ ಹುಟ್ಟಿಸುವ ಕೆಲಸ ಮಾಡುತ್ತೀರಿ. ದ್ವೇಷ ಹರಡುತ್ತೀರಿ. ಅಲ್ಪಸಂಖ್ಯಾತರ ಬಗ್ಗೆ ದ್ವೇಷ ಹರಡುತ್ತೀರಿ, ಹೆದರಿಸುತ್ತೀರಿ..” ಎಂರ ರಾಹುಲ್ ಪ್ರಬುದ್ಧತೆಗೆ ತತ್ತರಿಸಿದ”ನಾನ್ ಬಯಾಲಾಜಿಕಲ್ ‘ ಪ್ರಧಾನಿ ಎದ್ದು ನಿಂತು “ಎಲ್ಲ ಹಿಂದುಗಳು ಹಿಂಸಾವಾದಿಗಳು ಎನ್ನುವ ಈ ಮಾತು ಗಂಭೀರವಾದ ವಿಷಯ” ಎನ್ನಬೇಕಾಗಿ ಬಂದಿತು.
ಆದರೆ ಒಂದಂತೂ ಸ್ಪಷ್ಟ. ಇದೇ ಮೊದಲ ಬಾರಿಗೆ ಪ್ರಧಾನಿ, ಅಧಿಕೃತ ಪ್ರತಿಪಕ್ಷದ ನಾಯಕನ ಗುಡುಗಿಗೆ ಎದ್ದು ನಿಲ್ಲಬೇಕಾಯಿತು, ಪ್ರತಿಕ್ರಿಯೆ ನೀಡಬೇಕಾಯಿತು. ಪಾಪ ಪ್ರಧಾನಿ ಮುಖದಲ್ಲಿ ಭಯಂಕರ ಒತ್ತಡ ಎದ್ದು ಕಾಣಿಸುತ್ತಿತ್ತು.
ಕಾಡಿನ ರಾಜ ಸಿಂಹದ ಎದೆಗೆ ಚೂಪು ಕೊಂಬು ಏರಿಸಿ ಪಕ್ಕೆಲುಬುಗಳ ಛಿದ್ರ ಛಿದ್ರಗೊಳಿಸಿದ ಕಾಡೆಮ್ಮೆಯ ಕೆಚ್ಚೆದೆಯಂತೆ ರಾಹುಲ್ ಗುಡುಗಿದ್ದರ ಫಲವಾಗಿ ಇಡೀ ಸದನ ಇಂದು ಪ್ರಜಾತಂತ್ರದ ಬ್ಯುಟಿ ಮತ್ತು ಮಹತ್ವವನ್ನು ಮನದಟ್ಟು ಮಾಡಿಕೊಳ್ಳುವ ಹಾಗಾಯಿತು. ಬಹುಶಃ ಈ ಸಲದ ಜನಾದೇಶ ಇದುವೇ ಆಗಿತ್ತು.
ರಾಹುಲ್ ಸದನದಲ್ಲಿ ಕೈಯಲ್ಲಿ ಹಿಡಿದು ತೋರಿಸಿರ ಶಿವನ ಪೋಸ್ಟರ್ ಏನೆಲ್ಲಾ ಸಾಂಕೇತಿಸಿತು. ಪ್ರತಿ ಸಲ ಕೇಳಿಸುತ್ತಿದ್ದ ಜೈ ಶ್ರೀರಾಮ್ ಘೋಷದಂತೆ ಈ ಸಲ ಹರ ಹರ ಮಹಾದೇವ ಎನ್ನುವ ಘೋಷವನ್ನು ಸಾಂಕೇತಿಸಿತು. ರಾಮ, ಹನುಮ ಮತ್ತು ಶಂಖನಾದದಂತೆ ಶಿವಾ, ಮಹಾದೇವ, ಢಮರುಗದ ನಾದ ಮಾರ್ದನಿಸಿದಂತೆನಿಸಿತು. ರಾಮಬಾಣದಂತೆ ತ್ರಿಶೂಲ ಅಸ್ತ್ರವೆನಿಸಿತು . ಅದರ ಅಹಿಂಸಾ ಮಂತ್ರದ ಮಹತ್ವ ಅರಿವಾದಂತೆನಿಸಿತು.
ಹಿಂಸೆಯನ್ನು ವಿರೋಧಿಸಿದ ಬುದ್ಧನದು ಶಾಂತಿಯ ಅಭಯ ಹಸ್ತ, ಮಹಾವೀರನದು ಕೂಡ ಅಭಯ ಹಸ್ತ, ಗುರುನಾನಕ, ಜೀಸಸ್ ಕ್ರೈಸ್ಟ್ ಅವರದ್ದೂ ಅಭಯ ಹಸ್ತ.. ಪ್ರವಾದಿ ಮುಹಮ್ಮದ್ ಅವರು ಅನುಸರಿಸಿದ ಇಸ್ಲಾಂನ ಪವಿತ್ರ ಕುರ್ ಆನ್ ನ ಶಾಂತಿ, ಅಹಿಂಸೆ ಮತ್ತು ಸತ್ಯಪರದ ಸಂದೇಶ… ಹೀಗೆ ಈ ನೆಲದ ಅಹಿಂಸಾ ಪರಂಪರೆಯ ಒಂದು ಉತ್ತಮ ಪಾಠವನ್ನು ರಾಹುಲ್ ಸದನದ ಮುಂದಿಟ್ಟ ಬಗೆಯಲ್ಲಿ ಬಹುತ್ವದ ಶಕ್ತಿ ಅದಮ್ಯವಾಗಿತ್ತು. ಗಾಂಧಿ ಅವರ “ವೈಷ್ಣವ ಜನ ತೋ..” ಭಜನೆ ಯಾಕೋ ನೆನಪಾಯಿತು.
ರಾಹುಲ್ ಗಾಂಧಿ ಅವರ ಶಿವನ ಪೋಸ್ಟರ್ ಪರೋಕ್ಷವಾಗಿ ರಾಜಕಾರಣವನ್ನು ಕೂಡ ನೆನಪಿಸಿತು. ಕೆಲವೇ ತಿಂಗಳಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಈ “ಶಿವಮಹಿಮೆ” ಯಾವ ಪರಿಣಾಮ ಬೀರುವುದೊ? ಅಲ್ಲಿನ ಶಿವಸೈನಿಕರ ಸ್ಪೂರ್ತಿ ಹೇಗೆ ಹೆಚ್ಚಿಸುವುದೊ ಎನ್ನುವ ಕುತೂಹಲವಿದೆ. ಕಾದು ನೋಡಬೇಕು.
-ದಿಲ್