ಇವತ್ತು ಶಿಮುಲ್ ಚುನಾವಣೆ; ಏನೆಲ್ಲ ನಡೆಯಿತು? ಇರುವ ಮತದಾರರೆಷ್ಟು? ಕಣದಲ್ಲಿ ಯಾರು ಯಾರು?

ಇವತ್ತು ಶಿಮುಲ್ ಚುನಾವಣೆ;
ಏನೆಲ್ಲ ನಡೆಯಿತು? ಇರುವ ಮತದಾರರೆಷ್ಟು? ಕಣದಲ್ಲಿ ಯಾರು ಯಾರು?

ಶಿವಮೊಗ್ಗ : ಮಲೆನಾಡು, ಮಧ್ಯ ಕರ್ನಾಟಕದ ರೈತರ ಕೊಂಡಿಯಾಗಿರುವ ಶಿಮುಲ್ ನಿರ್ದೇಶಕರ ಸ್ಥಾನಕ್ಕೆ ಆ. 14 ಕ್ಕೆ ಅಂದ್ರೆ ಇಂದು ಚುನಾವಣೆ ನಡೆಯಲಿದ್ದು, ಹಳೆ, ಹೊಸ ದೋಸ್ತಿಗಳ ನಡುವೆ ಜಿದ್ದಾಜಿದ್ದಿ ಇದೆ.
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡ ಹಾಲು ಒಕ್ಕೂಟದ 14 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.‌ ಆರ್, ಎಂ ಮಂಜುನಾಥ್ ಗೌಡ ಮತ್ತು ವಿದ್ಯಾಧರ   ಅವಿರೋಧ ಆಯ್ಕೆಯಾಗಿದ್ದು  ಇನ್ನುಳಿದ 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.‌
ಅಖಾಡದಲ್ಲಿ  31 ಜನ ಸ್ಪರ್ಧಾಳುಗಳು ಇದ್ದಾರೆ.  ಶಿವಮೊಗ್ಗ ವಿಭಾಗದಿಂದ ಎರಡು ಸ್ಥಾನಗಳಿದ್ದು ಇಲ್ಲಿ 5 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಾಗರ ವಿಭಾಗದಿಂದಲೂ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಇಲ್ಲಿ ನಾಲ್ವರು ಅಂತಿಮ ಕಣದಲ್ಲಿದ್ದಾರೆ.  ದಾವಣಗೆರೆ ವಿಭಾಗದಲ್ಲಿ ನಾಲ್ಕು ಸ್ಥಾನಗಳಿಗೆ 10 ಜನ ಅರ್ಜಿ ಹಾಕಿದ್ದಾರೆ. ಚಿತ್ರದುರ್ಗದಲ್ಲೂ ನಾಲ್ಕು ಸ್ಥಾನಕ್ಕೆ 12 ಜನ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ಶಿವಮೊಗ್ಗ ವಿಭಾಗದಲ್ಲಿ 264,  ಸಾಗರ ವಿಭಾಗ 256, ದಾವಣಗೆರೆಯಲ್ಲಿ 362, ಚಿತ್ರದುರ್ಗ ವಿಭಾಗದಲ್ಲಿ 289 ಮತಗಳಿವೆ.ಒಟ್ಟು 1171 ಮತಗಳು ಚಲಾವಣೆಯಾಗಲಿದೆ.

ರಾಜಕೀಯ ಪ್ರಭಾವ
ಸಹಕಾರ ಕ್ಷೇತ್ರ ರಾಜಕೀಯದಿಂದ ದೂರ ಇರಬೇಕೆಂದರೂ ಇಲ್ಲಿ ರಾಜಕಾರಣದ ಪ್ರಭಾವ ಢಾಳಾಗಿ ಕಾಣಿಸುತ್ತಿದೆ. ಶಿವಮೊಗ್ಗ ಮತ್ತು ಸಾಗರ ವಿಭಾಗದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೇ ಕಣದಲ್ಲಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮುಖಂಡರು ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ದಾವಣಗೆರೆ ಮತ್ತು ಚಿತ್ರದುರ್ಗ ವಿಭಾಗದಲ್ಲಿ ಪಕ್ಷಾತೀತವಾಗಿ ಗುಂಪು ರಚಿಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.

ಅಭ್ಯರ್ಥಿಗಳು ಕಳೆದ 20 ದಿನಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದಾರೆ. ಎರಡು ಮೂರು ಬಾರಿ ಭೇಟಿ ಮಾಡಿ ಮತ ಯಾಚಿಸುತ್ತಿದ್ದಾರೆ. ಗದ್ದೆ, ತೋಟಗಳಿಗೆ ಹೋದವರನ್ನೂ ಬಿಡದೆ ಸ್ಥಳಕ್ಕೆ ಹೋಗಿ ವೋಟು ಕೇಳುತ್ತಿದ್ದಾರೆ. ಶಿಮುಲ್ ಚುನಾವಣೆಯು ಹಿಂದೆಂದೂ ಇಷ್ಟೊಂದು ತುರುಸಿನಿಂದ ಕೂಡಿರಲಿಲ್ಲ. ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿರುವ ಘಟನಾನುಘಟಿ ಅಭ್ಯರ್ಥಿಗಳು ದುಡ್ಡಿನ ಮಳೆಗೆರೆಯುತ್ತಿದ್ದಾರೆ. ‘ಅವರು ಅಷ್ಟು ಕೊಟ್ಟಿರಬಹುದು, ನಾನು ಇಷ್ಟು ಕೊಡುತ್ತೇನೆ. ನಮಗೆ ವೋಟು ಹಾಕು’ ಎಂದು ದುಂಬಾಲು ಬೀಳುತ್ತಿದ್ದಾರೆ.
ನೇರ ಸ್ಪರ್ಧೆಗೆ ಹಣಾಹಣಿ
ಶಿವಮೊಗ್ಗ ವಿಭಾಗದಲ್ಲಿ 2 ಸ್ಥಾನಗಳಿಗೆ ಐವರು ಸ್ಪರ್ಧಿಸಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ ಶಿಮುಲ್ ಮಾಜಿ ಅಧ್ಯಕ್ಷ ಕೆ.ಎಲ್.ಜಗದೀಶ್ವರ, ಹಾಲಿ ಸದಸ್ಯ ಎಚ್.ಬಿ.ದಿನೇಶ್ ಮತ್ತು ಎಪಿಎಂಸಿ ಮಾಜಿ ಸದಸ್ಯ ಟಿ.ಬಿ.ಜಗದೀಶ್ ಕಣದಲ್ಲಿದ್ದರೆ, ಭದ್ರಾವತಿ ತಾಲೂಕಿನಲ್ಲಿ ಹಾಲಿ ಸದಸ್ಯ ಡಿ.ಆನಂದ್, ಜಿ.ಪಂ. ಮಾಜಿ ಸದಸ್ಯ ಎಸ್.ಕುಮಾರ್ ಕಣದಲ್ಲಿದ್ದಾರೆ. ವಿಶೇಷವೆಂದರೆ ಎರಡೂ ತಾಲೂಕುಗಳಲ್ಲೂ ಹಿಂದಿನ ಚುನಾವಣೆ ಯಲ್ಲಿ ಇವರೇ ಅಭ್ಯರ್ಥಿಗಳಾಗಿದ್ದರು. ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕ ಸೋತವರಲ್ಲಿದ್ದರೆ ಮತ್ತೊಮ್ಮೆ ಗೆದ್ದು ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕೆಂಬ ಛಲ ಹಾಲಿ ಸದಸ್ಯರಲ್ಲಿದೆ.ಮತ್ತೊಂದು ಕಡೆ ಸಾಗರ ವಿಭಾಗದಲ್ಲಿ ಎರಡು ಸ್ಥಾನಗಳಿಗೆ ನಾಲ್ವರು ಸ್ಪರ್ಧೆಯಲ್ಲಿದ್ದು ನೇರ ಸ್ಪರ್ಧೆ ಏರ್ಪಟ್ಟಿದೆ. ಶಿಕಾರಿಪುರದಿಂದ ಹಾಲಿ ಸದಸ್ಯ ಟಿ. ಶಿವಶಂಕರಪ್ಪ ಮರು ಆಯ್ಕೆ ಬಯಸಿದ್ದರೆ, ಹಿರಿಯ ಸಹಕಾರಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಡಿ.ಭೂಕಾಂತ್ ಶಿಮುಲ್ ಪ್ರವೇಶಕ್ಕೆ ಹೊರಟಿದ್ದಾರೆ.
ದಾವಣಗೆರೆಯಲ್ಲಿ ಕೈ ಕಮಲ ದೋಸ್ತಿ ದಾವಣಗೆರೆಯಲ್ಲಿ ಪಕ್ಷಾತೀತವಾಗಿ ರಚಿಸಿಕೊಂಡ ಎರಡು ಗುಂಪುಗಳ ನಡುವೆ ಇಬ್ಬರು ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದಾರೆ. ಮಾಜಿ ಅಧ್ಯಕ್ಷರಾದ ಜಗದೀಶಪ್ಪ ಬಣಕಾರ್, ಎಚ್. ಕೆ.ಪಾಲಾಕ್ಷಪ್ಪ, ಹಾಲಿ ಉಪಾಧ್ಯಕ್ಷ ಎಚ್‌.ಕೆ. ಬಸಪ್ಪ, ವೈ.ಎಂ.ಅನಿಲ್‌ ಕುಮಾರ್ ಒಂದು ಗುಂಪಿನಲ್ಲಿದ್ದಾರೆ. ಶಿಮುಲ್ ಪ್ರತಿನಿಧಿಸಿದ ಅನುಭವ ಮತ್ತು ಸಂಪರ್ಕವನ್ನು ಬಳಸಿಕೊಂಡು ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದು ಗುಂಪಿನಲ್ಲಿರುವ ಬಿ.ಜಿ.ಬಸವರಾಜಪ್ಪ, ನಾಗರಾಜ್, ಡಿ.ಸಿ.ಶಾಂತವೀರಪ್ಪ ಮತ್ತು ಚೇತನ್ ಎಸ್.ನಾಡಿಗರ ಹಿರಿಯ ಸಹಕಾರಿಗಳ ವಿರುದ್ಧ ತೊಡೆ ತಟ್ಟಿದ್ದಾರೆ. ಇವರ ನಡುವೆ ತಾವೇನೂ ಕಡಿಮೆ ಇಲ್ಲ ಎಂಬಂತೆ ಬಿ.ಎಂ.ಬಸವರಾಜಪ್ಪ ಮತ್ತು ಕೆ.ಜಿ.ಸುರೇಶ್ ಸಹ ಸ್ಪರ್ಧೆಯೊಡ್ಡಿದ್ದಾರೆ
ಚಿತ್ರದುರ್ಗದಲ್ಲಿ ತ್ರಿಕೋನ ಸ್ಪರ್ಧೆ
ಚಿತ್ರದುರ್ಗ ಜಿಲ್ಲೆಯಲ್ಲಿ 4 ಸ್ಥಾನಗಳಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇಲ್ಲೂ ಪಕ್ಷಾತೀತವಾಗಿ ಗುಂಪು ರಚಿಸಿಕೊಂಡು ತಮ್ಮದೇ ಆದ ಸಂಪರ್ಕದೊಂದಿಗೆ ಪ್ರಚಾರ ನಡೆಸಿದ್ದಾರೆ. ಕೆಎಂಎಫ್ ಹಾಲಿನಿರ್ದೇಶಕ ಸಿ.ವೀರಭದ್ರಬಾಬು, ಪಿ.ಎಲ್.ಶಿವಣ್ಣ, ವಿ.ಕಾಂತರಾಜ ಮತ್ತು ಎ. ಎಂ.ಶಿವಾನಂದ ಒಂದು ಗುಂಪಿನಲ್ಲಿದ್ದರೆ, ಮಾಜಿ ಅಧ್ಯಕ್ಷ ಜಿ.ಪಿ.ರೇವಣಸಿದ್ದಪ್ಪ, ಜಿ.ಬಿ.ಶೇಖರಪ್ಪ, ಎಸ್.ಶಂಕರಲಿಂಗಪ್ಪ ಮತ್ತು 20.. ಸಂಜೀವಮೂರ್ತಿ ಮತ್ತೊಂದು ಗುಂಪಿನಲ್ಲಿದ್ದಾರೆ. ಹಾಲಿ ನಿರ್ದೇಶಕ ಪಿ.ತಿಪ್ಪೇಸ್ವಾಮಿ, ಮತ್ತೊಬ್ಬ ಹಾಲಿ ನಿರ್ದೇಶಕ ಯಶವಂತರಾಜು ಮತ್ತು ರಮೇಶಪ್ಪ ಇನ್ನೊಂದು ಗುಂಪಿನಲ್ಲಿದ್ದರೆ, ಬಿ.ಆ‌ರ್.ರವಿಕುಮಾರ್ ಯಾರೊಂದಿಗೂ ಗುರುತಿಸಿಕೊಳ್ಳದೆ ಪ್ರತ್ಯೇಕವಾಗಿ ಪ್ರಚಾರ ಕೈಗೊಂಡಿದ್ದಾರೆ. ಒಟ್ಟಾರೆ ಶಿಮುಲ್ ಚುನಾವಣೆ ರಂಗೇರಿದ್ದು, ಕತ್ತಲೆ ರಾತ್ರಿ ತುಸು ಜೋರಾಗಿಯೇ ನಡೆದಿದೆ. ಇನ್ನು  ಚುನಾವಣಾಧಿಕಾರಿಯಾಗಿ ಶಿವಮೊಗ್ಗ ತಹಸೀಲ್ದಾರ್ ಗಿರೀಶ್ ನೇಮಕವಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

(Cabana here in at a.comನಿಂದ)