ಸಂಗೀತಾ ರವಿರಾಜ್ ಅಂಕಣ; ಕೊಡೆ ಅರಳುವ ಸಮಯ

ಕೊಡೆ ಅರಳುವ ಸಮಯ

ಕೊಡೆಗೆ ಮಳೆಯನ್ನು ನಿಲ್ಲಿಸಲಾಗದು, ಆದರೆ ಎಂತಹ ಜಡಿಮಳೆಯ‌ ನಡುವೆಯು ನಾವು ಮಳೆಗೆ  ನಿಲ್ಲುವಂತಹ ಅದಮ್ಯ  ಧೈರ್ಯ , ಉತ್ಸಾಹ, ಸಾಮರ್ಥ್ಯವನ್ನು ಈ ಕೊಡೆಯೆಂಬ ಪುಟ್ಟದಾದ ಚೇತನ ನಮಗೆ ನೀಡುತ್ತದೆ. ಆತ್ಮವಿಶ್ವಾಸದಿಂದ ನಮಗೆ ಜಯ ದೊರಕದಿದ್ದರು ಯಾವುದೇ ಸವಾಲನ್ನು ಎದುರಿಸುವ ಶಕ್ತಿ ಬರುತ್ತದೆ ಅಲ್ಲವೇ? ಅಂತೆಯೇ ಮಳೆಗಾಲದಲ್ಲಿ  ಕೊಡೆ ಒಂದು ಆತ್ಮವಿಶ್ವಾಸವಾಗಿ ನಮ್ಮ ನಡುವಿರುತ್ತದೆ. ಮಳೆಗಾಲದಲ್ಲಿ ಕೊಡೆಯೆಂಬ ಆತ್ಮವಿಶ್ವಾಸದ  ಈ ವಸ್ತು ಇಲ್ಲದಿದ್ದರೆ ಏನಾಗುತ್ತಿತ್ತು?  ಎಂಬುದನ್ನು  ನಮಗೆ  ಊಹಿಸಲು ಕಷ್ಟವಾಗುತ್ತದೆ. ಕೊಡೆಗೆ ಜೀವವಿಲ್ಲವೆಂದು ನಮ್ಮ ಅವಶ್ಯಕತೆ ಮುಗಿದೊಡನೆ ಮೂಲೆಗುಂಪು ಮಾಡಿಬಿಡುತ್ತೇವೆ. ಆದರೆ ಕೊಡೆಯೊಂದಿಗಿನ ನಮ್ಮ ನೆನಪುಗಳನ್ನು, ಅದರ ಸಹಾಯವನ್ನು ಅಷ್ಟು ಸುಲಭವಾಗಿ ಮೂಲೆಗೆಸೆಯಲು ಸಾಧ್ಯವಿಲ್ಲ . ಕೊಡೆಯೊಂದಿಗಿನ ನಮ್ಮ ಕನವರಿಕೆಗಳು, ಕೊಡೆಯನ್ನು ಅಂದಿನಿಂದ ಇಂದಿನವರೆಗೂ ಜೀವಂತವಾಗಿರಿಸಿದೆ ಎಂಬುದಂತು   ಸತ್ಯ. ನಮ್ಮೆಲ್ಲರ ಪಾಲಿಗೆ ಕೊಡೆ ಎಂಬುದು ತುಂಬಾ ಅಪ್ಯಾಯಮಾನವಾದ ವಸ್ತು.  ಮಳೆಗಾಲದಲ್ಲಿ ಅದನ್ನು ತಿರುಗಿಸುತ್ತಾ , ಗೆಳತಿಯರಿಗೆ ನೀರನ್ನು ಚಿಮುಕಿಸುತ್ತಾ ಸಾಗುವುದೆಂದರೆ ಎಲ್ಲಿಲ್ಲದ ಖುಷಿ. ರಭಸದ ಮಳೆಗೆ ನಡೆಯುತ್ತಾ ಕೊಡೆಯಿಂದ ಬೀಳುವ ಹನಿಗಳಿಗೆ ಕೈಯೊಡ್ಡಿ ಕವಿತೆಯನ್ನು ಗುನುಗುತ್ತಾ ಸಾಗುವುದೆಂದರೆ ಇನ್ನೂ ಖುಷಿ. ಬೇಸಗೆಯಲ್ಲು ಕೊಡೆಯನ್ನು ಉಪಯೋಗಿಸುವ ಹೆಂಗಳೆಯರಿಗೆಲ್ಲ ಅದರೊಂದಿಗೆ ತೀರ ಆಪ್ತನಂಟು. ಎಲ್ಲ ವಸ್ತುಗಳಿಂದಲು ಕೊಡೆ ಖರೀದಿಸುವಾಗ ಹೆಚ್ಚಿನ ಆಸ್ಥೆ ವಹಿಸುತ್ತೇವೆ. ಅತ್ಯಂತ ಅಂದದ ಬಣ್ಣ ಮತ್ತು ಆದರೆ ಚಿತ್ತಾರ ಆರಿಸಲೋಸುಗ ತುಂಬಾ ಹೊತ್ತು ಅಂಗಡಿಯಲ್ಲಿ ಕಳೆಯುತ್ತೇವೆ. ಮಗಳೊಂದಿಗೆ  ಕೊಡೆ ಖರೀದಿಸಲೆಂದು ಅಂಗಡಿಗೆ ತೆರಳಿದರೆ ಅಲ್ಲಿರುವ ನಾನಾ ವಿನ್ಯಾಸದ, ನಾನಾ ಬಣ್ಣದ, ಬೆಡಗಿನ, ರಂಗಿನ ಕೊಡೆಯನ್ನು ಕಂಡಾಗ ಬಾಲ್ಯದ ಬಾಗಿಲಿಗೆ ಮತ್ತೆ ತೆರಳಬಾರದೆ ಎಂದೆನಿಸುತ್ತದೆ. ಅಷ್ಟೊಂದು ಮನಸೆಳೆಯುವ ಚಿತ್ರಗಳ ವಿಧ ವಿಧ ಆಕೃತಿಗಳ ಕೊಡೆಗಳು ನಮ್ಮನ್ನು ಆಕರ್ಷಿಸುತ್ತವೆ. ಭಾವನೆಗಳನ್ನು ಕೊಡೆಯಲ್ಲಿ ಭಿತ್ತಿ ಚಿತ್ರಿಸಿದಂತಹ ಅಪೂರ್ವ ಚಿತ್ರಗಳು. ಈ ಚಂದದ ಕೊಡೆಗಳ ನಡುವೆ ನಾವು  ಒಂದು ಕೊಡೆಯಾಗಬಾರದೆ ಎಂದೆನಿಸುವಷ್ಟು ಖುಷಿ ಮನಸಿಗೆ!  ಅಜ್ಜನ ಕೊಡೆ ಎಂದೇ ಪರಿಗಣಿಸುತ್ತಿದ್ದ ದೊಡ್ಡ ಕೊಕ್ಕೆ ಹಿಡಿಯ ಉದ್ದ ಕೊಡೆ ಈಗ ಚೆಂದುಳ್ಳಿ ಚೆಲುವೆಯಾಗಿ ಮಾರುಕಟ್ಟೆಗೆ ಆಗಮಿಸಿದೆ. ಕೊಡೆಯ ಹಿಡಿಯನ್ನು ಕೊಡೆಯ ಕಾಲು ಅಂತಾನು ಕರೆಯುತ್ತಾರೆ. ಹೀಗೆ ಮಿರ ಮಿರ ಮಿಂಚುವ ಕಾಲಿನ ಅಜ್ಜನ ಕೊಡೆಯ ತೆರನಾದ ವೈಭವದ ಕೊಡೆಗಳು ಎಲ್ಲ ಲಲನಾಮಣಿಯರಿಗು ಈಗ ಇಷ್ಟ  . ನಡೆಯಲು ಕಷ್ಟವಾಗುವ ಅಜ್ಜ ಊರುಗೋಲು ಮಾಡಿಕೊಂಡು ಕೊಡೆಯನ್ನು ಬಳಸುತ್ತಿದ್ದರಿಂದ ದೊಡ್ಡ ಕೊಡೆಗಳಿಗೆ ಅಜ್ಜನ ಕೊಡೆ ಎಂಬ ಹೆಸರು ಬಂದಿರಲೂಬಹುದು.
ಹೆಂಗಳೆಯರ ಅಚ್ಚು ಮೆಚ್ಚಿನ ವಸ್ತುವಾಗಿರುವ ಈ ಕೊಡೆ ಬಿಸಿಲಿನಲ್ಲಿ ತ್ವಚೆಯ ರಕ್ಷಣೆಗು   ಬೇಕು. ಇದರ ಉಪಯೋಗವನ್ನು ಇನ್ನು ಹೇಳುವುದಾದರೆ  ಬಸ್ ನಲ್ಲಿ ಆಸನ  ಹಿಡಿಯುವ ಸಲುವಾಗಿ ರಭಸದಲ್ಲಿ ಕೈಯಲ್ಲಿರುವ ಕೊಡೆಯನ್ನು ಕೊಟ್ಟು ಬಿಡಬಹುದು , ವೃತ್ತಿಪರ ಛಾಯಾ ಗ್ರಾಹಕರಿಗೆ ಕೊಡೆ ನೆರಳು ತರಿಸಲು ಬೇಕು , ಶೂಟಿಂಗ್ ಮಾಡುವ ಉರಿಬಿಸಿಲಿಗೆ ಅಲ್ಲಿರುವ ಎಲ್ಲರು ಕೊಡೆ ಬಳಸುತ್ತಾರೆ,  ಅರಳಿದ ಕೊಡೆಯನ್ನು ಸುಲಭವಾಗಿ ಚಿತ್ರಿಸಬಹುದಾದರಿಂದ  ಎಲ್ಲ ಚಿಕ್ಕ ಮಕ್ಕಳು ಕಲಿತಿರುವ ಚಿತ್ರ ಕೊಡೆ, ಯಾವುದೇ ವಸ್ತುವಿನ ರೂಪದರ್ಶಿಗೆ ಕೈಯಲ್ಲೊಂದು ಕೊಡೆ, ಸಾಲ ಕೊಟ್ಟವರೋ ಅಥವಾ ನಮಗೆ ಇಷ್ಟವಿಲ್ಲದ ವ್ಯಕ್ತಿ ಏನಾದರೂ ಕಂಡರೆ ಕೈಯಲ್ಲಿ ಕೊಡೆಯಿದ್ದರೆ ಒಂದು ಕ್ಷಣ ಮುಖವನ್ನು ಮರೆಮಾಚಿಯು ಸಾಗಬಹುದು ಅಲ್ಲವೇ? ಮಳೆಗೆಂದು ಕಂಡು ಹಿಡಿದ ಕೊಡೆಯಿಂದ ಎಷ್ಟೆಲ್ಲ ಉಪಯೋಗಗಳ ಕರಾಮತ್ತು ನೋಡಿ!
ನಾವು ಚಿಕ್ಕವರಿದ್ದಾಗ ಇದ್ದ ಕಪ್ಪಗಿನ ಒಂದೇ ಆಕೃತಿಯ ಸ್ವಿಚ್ ಕೊಡೆ ಎಂಬುದು ಈಗ ಅಲ್ಲೊಂದು ಇಲ್ಲೊಂದು ಕಾಣಬಹುದು ಅಷ್ಟೆ.  ನಾವು ಶಾಲೆಗೆ ಹೋಗುವ ಸಂದರ್ಭದಲ್ಲಿ ಎಲ್ಲರಿಗೂ ಒಂದೇ ರೀತಿಯ ಇಂತಹ ಕೊಡೆ ಸಾಮಾನ್ಯವಾಗಿತ್ತು. ಶಾಲೆಯಲ್ಲಿ ಕೊಡೆ ಅದಲು ಬದಲಾಗುವ ಸಾಧ್ಯತೆ ಹೆಚ್ಚೆಂದು ತಂದೆ ನಮ್ಮ ಮಕ್ಕಳ ಕೊಡೆಗಳಿಗೆಲ್ಲ ಸೂಜಿ ದಾರದಲ್ಲಿ ಹೆಸರು ಹೊಲಿದು ಕಳುಹಿಸುತ್ತಿದ್ದರು. ಚಿಕ್ಕಂದಿನಲ್ಲಿ ಇನ್ನೂ ಒಂದು ಅಭ್ಯಾಸವಿತ್ತು. ಮಳೆ ಬರುತ್ತಿದ್ದರು ಕೊಡೆ ಬಿಡಿಸದೆ ಓಡುತ್ತಿದ್ದೆವು. ಎಲ್ಲಿ ಕೊಡೆ ಒದ್ದೆಯಾಗಿಬಿಡುತ್ತದೆ  ಎಂಬ ಅಂಜಿಕೆಯ   ಮುಗ್ದ ಮನಸಿನ ಬಾಲ್ಯವದು. ಮನೆ ಸನಿಹಕ್ಕೆ ಬರುತ್ತಿದ್ದಂತೆ ಮಳೆ ಬಂದರೆ ಕೊಡೆಯನ್ನು ಬಿಡಿಸದೆ ತಲೆಯ ಮೇಲಿಟ್ಟು ಹಾಗೆಯೇ ಓಡಿ ಬರುತ್ತಿದ್ದೆವು. ಯಾಕೆಂದರೆ ಕೊಡೆಯ ನೆರಿಗೆಯನ್ನು ತುಂಬಾ ಅಚ್ಚುಕಟ್ಟಾಗಿ , ನೇವರಿಸಿ ಮಡಚಿ ಇಟ್ಟಿರುತ್ತಿದ್ದೆವು. ಅದನ್ನು ಬಿಡಿಸಿ ಒದ್ದೆ ಮಾಡಲು ಮುದ್ದು ಮನಸಿನ ಮಕ್ಕಳಿಗೆ ಖಂಡಿತ ಮನಸ್ಸು ಬರುವುದಿಲ್ಲ.  ಬೇಕಂತಲೇ ಬಿಡಿಸದೆ ನೆನೆಯುವ ಮಕ್ಕಳು ನಮ್ಮ ನಡುವೆ ಇದ್ದಾರೆ.
ಕೊಡೆ ಎಂದಾಕ್ಷಣ ನೆನಪಾಗುವುದು ಮಳೆಗಾಲದಲ್ಲಿ ಕೊಡೆಯನ್ನು ಕೊಡೆಯನ್ನು ಎಗರಿಸಿ ಬಿಡುವ ಸಂಗತಿ. ಈ ಕೊಡೆಯನ್ನು ಎಗರಿಸಿಬಿಡಲು ಮಹಾನ್ ಕಳ್ಳರೇ ಆಗಬೇಕೆಂದಿಲ್ಲ. ಅಥವಾ ಎಗರಿಸುವವರು ಕಳ್ಳರು ಅಲ್ಲ . ಯಾರೋ ಬಸ್ ನಿಲ್ದಾಣದಲ್ಲಿ , ವಾಹನದಲ್ಲಿ, ಅಂಗಡಿಯಲ್ಲೋ ಮರೆತು ಬಿಟ್ಟಿರುವ ಅನಾಥ ಕೊಡೆಯನ್ನು ತೆಗೆದುಕೊಂಡು ಹೋಗುತ್ತಾರೆ ಅಷ್ಟೆ. ಯಾರೋ ಬಿಟ್ಟು ಹೋದ ಕೊಡೆ ಇನ್ಯಾರದೋ ಪಾಲಾಗುವ ಬದಲು ನನಗಿರಲಿ ಎಂಬುದು ಅವರ ಮನಸ್ಸಿನಲ್ಲಿರಬೇಕು ಅಷ್ಟೆ ! ಹೋದಲೆಲ್ಲಾ ಅಲ್ಲಲ್ಲಿ ಕೊಡೆಯನ್ನು ಬಿಟ್ಟು ಬರುವ ದೃಶ್ಯ ಮಳೆಗಾಲದಲ್ಲಿ ಸರ್ವೇ ಸಾಮಾನ್ಯ. ಅದು ಕೈಯಲ್ಲಿಯೇ ಇರುವ ಕಾರಣ ಬೇರೆ ಕೆಲಸ ಮಾಡುವಾಗ ಅದನ್ನು ತೆಗೆದು ಪಕ್ಕಕ್ಕಿಡಲೇಬೇಕು . ಕೆಲಸ ಮುಗಿಸಿ ಬರುವಾಗ ಅದು ಅಲ್ಲಿಯೇ ಉಳಿದು ಬಿಡುತ್ತದೆ. ಬೇಗನೆ ನೆನಪಾದರೆ ಮತ್ತೆ ತರಲೆಂದು ತೆರಳುತ್ತಾರೆ.ಕೆಲವೊಮ್ಮೆ ಸಿಗುತ್ತದೆ, ಕೆಲವೊಮ್ಮೆ ಸಿಗುವುದಿಲ್ಲ. ನಾನೊಮ್ಮೆ ನಾಲ್ಕನೇ ತರಗತಿಯಲ್ಲಿ ಇದ್ದಾಗ ತಂದೆ ತಾಯಿಯೊಡನೆ ಬಂಟ್ವಾಳದಿಂದ ಬಸ್ ಹತ್ತುವವಳಿದ್ದೆ. ಕೈಯಲ್ಲಿದ್ದ ಕೊಡೆಯನ್ನು ಆಸನಕ್ಕೆ ಇಡಲಿ ಎಂದು ಅಲ್ಲಿದ್ದವರಲ್ಲಿ ಎದ್ದು ಬಿದ್ದು  ಓಡಿ ಕೊಟ್ಟೆವು. ನಿರಾಳವಾಗಿ ಬಸ್ ಹತ್ತಿ ಒಳಗೆ ಬಂದರೆ ಅಲ್ಲಿ ಕೊಡೆಯು ಮಾಯ, ಸೀಟ್ ಕೂಡ ಇಲ್ಲದಂತಾಗಿತ್ತು. ನಾವು ಕೊಡೆ ಕೊಟ್ಟವರಂತು ಮಂಗ ಮಾಯ. ಉದ್ದೇಶಪೂರ್ವಕವಾಗಿಯು ಕೊಡೆಯನ್ನು ಎಗರಿಸುವವರು ಇದ್ದಾರೆ ಎನ್ನಬಹುದು.  ನಮ್ಮೂರಿನ ಹಳ್ಳಿಗಳಲ್ಲಿ ಗಂಡಸರೆಲ್ಲ ಕೊಡೆಯನ್ನು  ಅಂಗಿಯ  ಹಿಂಬದಿಯ
ಕಾಲರ್ ಗೆ, ಅದರ ಬಗ್ಗಿರುವ   ಹಿಡಿಯನ್ನು ಸಿಕ್ಕಿಸಿಕೊಂಡು  ಸಾಗುವುದು  ಮಳೆಗಾಲದಲ್ಲಿ ಸಾಮಾನ್ಯ ದೃಶ್ಯ . ಮರೆತು ಹೋಗುವ ಕಾರಣಕ್ಕೂ ಇದು ಒಳ್ಳೆಯ ಅಭ್ಯಾಸ ಎನ್ನಬಹುದು.  ಹಿಡಿ ಸ್ವಲ್ಪವೇ ಬಗ್ಗಿರುವ ಕೊಡೆಗಳೆಲ್ಲ ಗಂಡಸರಿಗೆ ಮೀಸಲೆಂಬ ಭಾವನೆ ನಮಗೆ ಬಂದಿದೆ. ಉಳಿದೆಲ್ಲ ನಾನಾ ನಮೂನೆಯ ಕೊಡೆಗಳು ಹೆಣ್ಮಕ್ಕಳಿಗೆ ಬೇಕಾದಂತೆ ಹೆಚ್ಚು ಲಭ್ಯ. ತ್ರೀ ಫೋಲ್ಡ್ ಕೊಡೆಗಳು ಮಡಚಿದಾಗ ತೀರಾ ಚಿಕ್ಕದಾಗಿ ಮಹಿಳೆಯರು ಯಾವಾಗಲೂ ತಮ್ಮ ಕೈ ಚೀಲದಲ್ಲಿ ಇಟ್ಟುಕೊಳ್ಳಬಹುದು. ಕೆಲವು ಸಿಮೆಂಟ್ ಕಂಪನಿಯವರು , ಎಲ್ ಐ ಸಿ ಯವರು ಉಡುಗೊರೆಯಾಗಿ ಕೊಡೆಯನ್ನು ನೀಡುತ್ತಾರೆ. ಕೊಡೆ ತುಂಬಾ ಬಹುಪಯೋಗಿ ವಸ್ತು ಎಂಬುದು ಇದರರ್ಥ. ವ್ಯಾಪಾರಕ್ಕಾಗಿ ರಾಶಿರಾಶಿ  ಕೊಡೆಗಳು ತಂದರು ಮಳೆಗಾಲದಲ್ಲಿ ಈ ಕೊಡೆಗಳು ಸಂಪೂರ್ಣ ಖಾಲಿಯಾಗುತ್ತದೆ . ಕೊಡೆ ಸರಿ ಮಾಡುವವರು ಮಳೆಗಾಲದಲ್ಲಿ ಭರ್ಜರಿ ವ್ಯಾಪಾರವನ್ನು ಮಾಡುತ್ತಾರೆ. ತೀರಾ ಅವಶ್ಯಕವಾದ ಈ ವಸ್ತು ಇಲ್ಲದಿದ್ದರೆ ಮಳೆಗಾಲ ಸಾಗುವುದೇ ಇಲ್ಲ.
ಕೊಡೆಗೆ ‘ ಛತ್ರಿ’  ಎನ್ನುವ ಇನ್ನೊಂದು ಪದವನ್ನು ಬಳಸುತ್ತಾರೆ. ನಮ್ಮ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕೊಡೆ ಪದ ಬಳಸಿದರೆ ಉತ್ತರ ಕರ್ನಾಟಕದೆಲ್ಲೆಡೆ ಛತ್ರಿ ಪದ ಬಳಸುತ್ತಾರೆ. ಛತ್ರ ಪದದಿಂದ ಛತ್ರಿ ಎಂಬ ಪದ ಹುಟ್ಟಿಕೊಂಡಿದೆ . ಛತ್ರ ಎಂಬುದು ರಕ್ಷಣೆಗೆ ಉಳಿದುಕೊಳ್ಳುವ ಸ್ಥಳ. ಹಾಗೆಯೇ ಮಳೆ , ಬಿಸಿಲಿನಿಂದ ರಕ್ಷಿಸಿಕೊಳ್ಳಲು ಇರುವ ವಸ್ತು ಛತ್ರಿ ಎಂಬುದಾಗಿದೆ. ಛತ್ರಿ ಎಂಬ ಪದವನ್ನು ಮೋಸ ಮಾಡುವವರಿಗೂ ಬಳಸುತ್ತಾರೆ.  ‘ಭಾರಿ ಛತ್ರಿ ಅವರು ‘ ಎಂಬ ಪದ ಪ್ರಯೋಗವನ್ನು ಚಲನಚಿತ್ರಗಳಲ್ಲಿ , ಬರಹಗಳಲ್ಲಿ ನಾವು ನೋಡಿದ್ದೇವೆ. ನಮ್ಮ ಕಡೆ ಮೋಸ ಮಾಡಿದವರಿಗೆ ಟೋಪಿ ಹಾಕಿದರು ಎಂಬುದಾಗಿ ಪದ ಪ್ರಯೋಗಿಸಿದರೆ , ಉತ್ತರ ಕರ್ನಾಟಕದೆಲ್ಲೆಡೆ ಛತ್ರಿ ಮನುಷ್ಯ ಎಂಬುದಾಗಿ ಪದ ಪ್ರಯೋಗಿಸುತ್ತಾರೆ. ಕೊಡೆ ಎಂಬ ಶಬ್ದವು ನಾಯಿಕೊಡೆ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ ಎಂದು ಭಾವಿಸಲಾಗಿದೆ. ಯಾಕೆಂದರೆ ನಾಯಿಕೊಡೆಗಳೆಂದು ಕರೆಯಲ್ಪಡುವ ಅಣಬೆಯ ಆಕಾರ ಯಥಾವತ್ತಾಗಿ ಕೊಡೆಯ ಆಕಾರವೇ ಆಗಿದೆ.
ಕೊಡೆ ಅರಳಿಸಿ ಕೊಂಡು ಜೋಪಾನವಾಗಿ ನಡೆದಾಡುವವರನ್ನು ಕಂಡಾಗ ” ಮತ್ತೆ ಮಳೆ ಹೊಯ್ಯುತ್ತಿದೆ, ಎಲ್ಲವೂ ನೆನಪಾಗುತ್ತಿದೆ” ಎಂಬ ಅನಂತಮೂರ್ತಿಯವರ ಕವಿತೆಯ ಸಾಲನ್ನು ” ಮತ್ತೆ ಮಳೆ ಹೊಯ್ಯುತಿದೆ ಕೊಡೆಗಳೆಲ್ಲ ಅರಳುತ್ತಿದೆ ” ಎಂಬುದಾಗಿ ಬದಲಿಸಬೇಕು ಎಂದೆನಿಸುತ್ತದೆ.  ಗೆಳತಿಯ ಕೊಡೆಯಡಿಯಲ್ಲಿ ತಗಲಿಕೊಂಡೆ ಸಾಗುತ್ತ ಆಸ್ವಾದಿಸುವ ಬಿಸಿಯುಸಿರು , ಬರುವ  ಮಳೆಗಾಲದಲ್ಲಿ  ನೆನಪಾಗುವ ಮೊದಲೇ  ನೀನೆಲ್ಲಿರುವೇ ಎಂದು ಕೇಳಿಯೂ ಕೇಳದಂತೆ ಪಿಸುಗುಡುತ್ತಿದೆ ಈ ಕೊಡೆ.  ಕಾಗದದ ದೋಣಿ ತೇಲಿಬಿಟ್ಟು ದೋಣಿಗೆ ಕೊಡೆ ಹಿಡಿಯುತ್ತಾ ನಾವು ಒದ್ದೆಯಾದ ಬಾಲ್ಯ ಮತ್ತೆ ಕಣ್ಣ ಮುಂದೆ ಬರುತ್ತಿದೆ.  ಗಾಳಿಗೆ ಕೊಡೆ ಹಾರಿ ನಕ್ಕ ನಗು  ಕಿವಿಯಲ್ಲಿ ಗುನುಗುತ್ತಿದೆ. ಈ ಕೊಡೆಯ ನಾದ , ನಿನಾದ, ನೆನಪು , ದುಗುಡ , ಮರುಕ , ಕವಿತೆ, ಸಂಗೀತ ಎಲ್ಲವೂ ಪದಗಳಿಗೆ ನಿಲುಕದ ಭಾವನೆಗಳು . ಬೇಕೆನಿಸಿದಾಗ ಅರಳಿಸಿ ಸಂತೋಷಪಡುವ ಹೂವಿನಂತಹ ಕೊಡೆಯೆ ನೀನೆಂದಿಗು  ಹೀಗೆ ಇರು.  ಮಳೆಗಾಲದಲ್ಲಿ ಚಿಕ್ಕ ಪೂರ್ವ ತಯಾರಿ ಮಾಡಿ ಮಳೆಗೆ ನೆನೆಯುವುದೆಂದರೆ ಅತೀವ ಮುದ ನೀಡುವ ಸಂಗತಿ. ಅಂತೆಯೇ ಮನಸ್ಸು ಪ್ರಫುಲ್ಲವಾಗಿರುವ ಮಳೆಗಾಲದಲ್ಲಿ ಒಲ್ಲದ ಮನಸ್ಸಿನಿಂದ ಒದ್ದೆಯಾದರೆ ಕಿರಿಕಿರಿಯಾಗುತ್ತದೆ. ಈ
ಹಿತ _ ಅಹಿತಗಳ ನಡುವೆ ಸಮತೋಲನ ಕಾಯ್ದಿರಿಸಿಕೊಳ್ಳುವ ಕೊಡೆಯ ಕನವರಿಕೆಗಳು ನಮ್ಮಿದೆಂದಿಗು ಮಾಸಿ ಹೋಗಲಾರದು .

‌                        – ಸಂಗೀತ ರವಿರಾಜ್
    ಚೆಂಬು.
ವಿಳಾಸ:
ಸಂಗೀತ ರವಿರಾಜ್
ಬಾಲಂಬಿ ಅಂಚೆ
ಚೆಂಬು ಗ್ರಾಮ
ಮಡಿಕೇರಿ  ತಾಲ್ಲೂಕು
ಕೊಡಗು.574234.
ಚಲನವಾಣಿ 9731641886