ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಂದ ಕುವೆಂಪು ವಿವಿಯಲ್ಲಿ ಸಭೆಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸುವ ಭರವಸೆಪದವಿ ಕಾಲೇಜುಗಳ ಸಮಸ್ಯೆಗಳ ಪರಿಹಾರಕ್ಕೆ ಸಹಕಾರ: ಮಧು ಬಂಗಾರಪ್ಪ

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಂದ ಕುವೆಂಪು ವಿವಿಯಲ್ಲಿ ಸಭೆ

ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸುವ ಭರವಸೆ

ಪದವಿ ಕಾಲೇಜುಗಳ ಸಮಸ್ಯೆಗಳ ಪರಿಹಾರಕ್ಕೆ ಸಹಕಾರ: ಮಧು ಬಂಗಾರಪ್ಪ

 

ಶಂಕರಘಟ್ಟ, ಆಗಸ್ಟ್ 3: ಪದವಿ ಕಾಲೇಜುಗಳ ಸಂಯೋಜನ ಪ್ರಕ್ರಿಯೆಗೆ ಅನುಮತಿ ನೀಡುವುದು ತಡವಾಗುತ್ತಿರುವ ಕಾರಣ ವಿದ್ಯಾರ್ಥಿಗಳ ಪ್ರವೇಶಾತಿ ಪಡೆಯುವಿಕೆ ಸಮಸ್ಯೆಯಾಗುತ್ತಿರುವುದು ತಿಳಿದುಬಂದಿದೆ. ಇದನ್ನು ಕೂಡಲೇ ಬಗೆಹರಿಸುವುದಾಗಿ ರಾಜ್ಯ ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮಂಗಳವಾರದಂದು ಕುವೆಂಪು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಸಿಂಡಿಕೇಟ್ ಸಭಾಂಗಣದಲ್ಲಿ ವಿವಿಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ರಾಜ್ಯದ ವಿವಿಧ ವಿವಿಗಳ ವ್ಯಾಪ್ತಿಯ ಪದವಿ ಕಾಲೇಜುಗಳ ಸಂಯೋಜನಾ ಪ್ರಕ್ರಿಯೆಯು ತಡವಾಗುತ್ತಿರುವ ಕಾರಣ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯದೇ ಕಾಲೇಜುಗಳಿಂದ ಹೊರಗುಳಿಯುತ್ತಿದ್ದಾರೆ. ಕೂಡಲೇ ಈ ಕುರಿತು ಸರ್ಕಾರದ ಗಮನ ಸೆಳೆದು ತ್ವರಿತ ಕ್ರಮ ರೂಪಿಸಲಾಗುವುದು ಎಂದರು.

ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಅನುದಾನಕ್ಕಾಗಿ ಕೇವಲ ಸರ್ಕಾರದ ಮೇಲೆ ಅವಲಂಬಿತವಾಗಬಾರದು. ಸ್ಥಳೀಯ ಸಂಪನ್ಮೂಲಗಳಿಂದ ಹಾಗೂ ಸಂಶೋಧನಾ ಚಟುವಟಿಕೆಗಳಿಂದ ಆದಾಯ ಉತ್ಪಾದಿಸುವ ಕಡೆಗೆ ಹೆಜ್ಜೆ ಇಡಬೇಕು. ಸಿ ಎಸ್ ಆರ್ ನಿಧಿ, ಹಳೆಯ ವಿದ್ಯಾರ್ಥಿಗಳ ಸಂಘಗಳ ಕೊಡುಗೆಗೆ ಗಮನ ನೀಡಬೇಕು. ಪ್ರತಿ ಅರ್ಹ ವಿಶ್ವವಿದ್ಯಾಲಯವು ಮತ್ತೆ ದೂರ ಶಿಕ್ಷಣ ಕೋರ್ಸುಗಳನ್ನು ನಡೆಸುವ ಸಾಧ್ಯತೆಗಳನ್ನು, ಸಮಾನ ಅವಕಾಶ ನೀಡುವ ಆಯ್ಕೆಗಳನ್ನು ಪರಿಶೀಲಿಸಲಾಗುವುದು. ಇದಕ್ಕೆ ಯುಜಿಸಿ ಮತ್ತು ದೂರ ಶಿಕ್ಷಣ ಮಂಡಳಿಯ ತಕರಾರು ಇಲ್ಲ. ಕುವೆಂಪು ವಿವಿಯಲ್ಲಿ ಈ ಹಿಂದೆ ಇದ್ದಂತಹ ಬಾಳೆಹಣ್ಣಿನ ಸಸಿಗಳನ್ನು ವಿತರಿಸುವ ಕಾರ್ಯಕ್ರಮಗಳ ಮೂಲಕ ಆದಾಯ ಉತ್ಪಾದನೆ ಹಾಗೂ ಸಮುದಾಯಗಳನ್ನು ತಲುಪುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆಯಿತ್ತರು.

ರಾಜ್ಯದಲ್ಲಿ ಉನ್ನತ ಶಿಕ್ಷಣ ಪ್ರವೇಶಾತಿ, ಪರೀಕ್ಷಾ ವ್ಯವಸ್ಥೆ ಮತ್ತು ಫಲಿತಾಂಶ ಪ್ರಕಟಣೆಗಳಿಗೆ ಯುಯುಸಿಎಂಎಸ್ ಸಾಫ್ಟ್ವೇರ್ ಅನ್ನು ಅಳವಡಿಸಿಕೊಳ್ಳಲಾಗಿದೆ. ಇದು ಕೇಂದ್ರೀಕೃತ ಮಾದರಿಯಾಗಿದ್ದು, ಶೈಕ್ಷಣಿಕ ಚಟುವಟಿಕೆಗಳು ನಿಗದಿತ ಕಾಲಮಿತಿಯೊಳಗೆ ನಡೆಯದೇ ಹಿನ್ನಡೆಯಾಗಲು ಕಾರಣವಾಗುತ್ತಿದೆ. ಹೀಗಾಗಿ ಇದನ್ನು ಉನ್ನತ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ಕೂಡಲೇ ಕ್ರಮಕ್ಕೇ ಗಮನ ನೀಡಲಾಗುವುದು ಎಂದು ಸಚಿವರು ಭರವಸೆಯಿತ್ತರು.

ಈ ಸಂದರ್ಭದಲ್ಲಿ ಕುವೆಂಪು ವಿವಿಯ ಕುಲಪತಿ ಪ್ರೊಫೆಸರ್ ಶರತ್ ಅನಂತಮೂರ್ತಿ ಕುಲ ಸಚಿವ ಎ ಎಲ್ ಮಂಜುನಾಥ್ ಪರೀಕ್ಷಾಂಕಗಳು ಸಚಿವ ಎಂಎಸ್ ಗೋಪಿನಾಥ್ ಹಾಗೂ ಸಿಂಡಿಕೇಟ್ ಸದಸ್ಯರುಗಳು ವಿವಿಧ ನಿಕಾಯಗಳ ಡಿನರು ಮುಖ್ಯಸ್ಥರುಗಳು ಹಾಜರಿದ್ದರು.