ಕವಿಸಾಲು
01
ಸೆ.12 ಕ್ಕೆ ಶಿವಮೊಗ್ಗದಲ್ಲಿ ಮತ್ತೆ ಸೌಹಾರ್ದವೇ ಹಬ್ಬ
ಸೆ.12 ಕ್ಕೆ ಶಿವಮೊಗ್ಗದಲ್ಲಿ ಮತ್ತೆ ಸೌಹಾರ್ದವೇ ಹಬ್ಬ
ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ‘ನಮ್ಮ ನಡಿಗೆ ಶಾಂತಿಯ ಕಡೆಗೆ ಸಮಿತಿ’ ವತಿಯಿಂದ ಸೆ. 12 ರಂದು ಮಧ್ಯಾಹ್ನ 3 ಗಂಟೆಗೆ ‘ಸೌಹಾರ್ದವೇ ಹಬ್ಬ’ ಶೀರ್ಷಿಕೆ ಅಡಿಯಲ್ಲಿ ಮೆಗ್ಗಾನ್ ಆಸ್ಪತ್ರೆ ಆವರಣದಿಂದ ಸೈನ್ಸ್ ಮೈದಾನದವರೆಗೆ ಶಾಂತಿಯ ಮೆರವಣಿಗೆ ಆಯೋಜಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ. ಶ್ರೀಪಾಲ್, ಕಳೆದ ಎರಡು ವರ್ಷಗಳಿಂದ ಈ ಶಾಂತಿ ಜಾಥಾವನ್ನು ಹಮ್ಮಿಕೊಂಡಿದ್ದೆವು. ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳು ಜೊತೆಯಾಗಿಯೇ ಬಂದಿವೆ. ಇದು ಸೌಹಾರ್ದತೆಯೆ ಸಂಕೇತವೂ ಆಗಿದೆ. ನಾವೆಲ್ಲರೂ ಜೊತೆಯಾಗಿದ್ದೇವೆ ಎಂಬುದನ್ನು ಕ್ಯಾಲೆಂಡರ್ ಕೂಡ ರುಜುವಾತುಪಡಿಸಿದೆ. ಪ್ರಕೃತಿಯ ನಿರ್ದೇಶನವೇ ಸಾಮರಸ್ಯವಾಗಿರುವಾಗ ಮನುಷ್ಯರು ಮಾತ್ರ ಏಕೆ ಶಾಂತಿಯನ್ನು ಕದಡಬೇಕು ಎಂದರು.
‘ಸರ್ವ ಜನಾಂಗದ ಶಾಂತಿಯ ನಾಡು ನಮ್ಮ ಶಿವಮೊಗ್ಗ’ ಎಂಬ ಹಿನ್ನಲೆಯಲ್ಲಿ ಈ ಜಾಥಾ ಹಮ್ಮಿಕೊಂಡಿದ್ದು, ಈ ಜಾಥಾ ಧರ್ಮಾತೀತವಾಗಿದೆ. ಮತ್ತು ಈ ಜಾಥಾದಲ್ಲಿ ಬಸವಕೇಂದ್ರ, ಜಡೆ ಮಠದ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳ ಜೊತೆಗೆ ಜಾಮೀಯಾ ಮಸೀದಿಯ ಧರ್ಮಗುರುಗಳು, ಮೌಲ್ವಿಗಳು, ಫಾದರ್ ಗಳು ಭಾಗವಹಿಸುತ್ತಾರೆ, ಮತ್ತು ಪಕ್ಷಾತೀತವಾಗಿ ರಾಜಕೀಯ ಮುಖಂಡರು ಸಹ ಭಾಗವಹಿಸುತ್ತಾರೆ. ಸುಮಾರು 5 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.
ರೈತ ಮುಖಂಡ ಹೆಚ್.ಆರ್. ಬಸವರಾಜಪ್ಪ, ಡಿಎಸ್‌ಎಸ್ ಮುಖಂಡ ಎಂ. ಗುರುಮೂರ್ತಿ, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಫಾ. ಪಿಯುಸ್ ಡಿಸೋಜ ಮುಂತಾದ ಮುಖಂಡರು ಮಾತನಾಡಿ, ಎಲ್ಲಾ ಧರ್ಮಗಳ ಸಾರವೇ ಶಾಂತಿಯಾಗಿದೆ. ಒಂದು ಧರ್ಮ ಮತ್ತೊಂದು ಧರ್ಮವನ್ನು ಪ್ರೀತಿಸುವುದೇ ಮನುಷ್ಯ ಧರ್ಮ. ಇತ್ತೀಚಿನ ದಿನಗಳಲ್ಲಿ ಶಾಂತಿ ಕದಡುತ್ತಿರುವುದು. ದುರಾದೃಷ್ಟಕರವಾಗಿದೆ. ಈ ಹಿನ್ನಲೆಯಲ್ಲಿ ಈ ಸೌಹಾರ್ದ ಜಾಥಾ ಆಯೋಜಿಸಲಾಗಿದೆ ಎಂದರು.
ಎಲ್ಲರೂ ಒಟ್ಟಾಗಿ ನಡೆಯೋಣ. ಒಟ್ಟಾಗಿ ಬಾಳೋಣ. ಪತ್ರಿಕಾ ಧರ್ಮವು ಶಾಂತಿಗಾಗಿ ಶ್ರಮಿಸುತ್ತಿದೆ. ಹಲವು ಅಹಿತಕರ ಘಟನೆಗಳು ಆದಾಗ ಪತ್ರಕರ್ತರು ಏಟು ತಿಂದ ಉದಾಹರಣೆಗಳು ಇವೆ. ಶಿವಮೊಗ್ಗ ಶಾಂತಿಯ ಕೇಂದ್ರವಾದಾಗ ಉದ್ದಿಮೆಗಳು ಇಲ್ಲಿಗೆ ಬರುತ್ತವೆ ಎಂದರರು.
ಮೆರವಣಿಗೆ ನಂತರ ಸೈನ್ಸ್ ಮೈದಾನದಲ್ಲಿ ಶಾಂತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮಠಾಧೀಶರು, ಫಾದರ್ ಗಳು ಹಾಗೂ ಮೌಲ್ವಿಗಳು ಮಾತ್ರ ಇರುತ್ತಾರೆ. ಅವರೇ ಶಾಂತಿಯ ಸಂದೇಶಗಳನ್ನು ನೀಡುತ್ತಾರೆ. ಇದರ ಜೊತೆಗೆ ಶಿವಮೊಗ್ಗದ ಭೂಪಟವನ್ನು ರಚಿಸಲಾಗುವುದು. ಈ ಭೂಪಟದಲ್ಲಿ ಸಂಘ, ಸಂಸ್ಥೆಗಳು, ವ್ಯಾಪಾರಸ್ಥರು, ಶಾಂತಿ ಸಹಿಯ ಸ್ಟಿಕರ್ ಗಳನ್ನು ಅಂಟಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ್, ಕಿರಣ್ ಕುಮಾರ್, ಅರಸಾಳು ಸುರೇಶ್, ರಫಿ, ಮೊಹಮ್ಮದ್ ಇಸ್ಮಾಯಿಲ್, ಶ್ರೀಕಾಂತ್ ಮುಂತಾದವರಿದ್ದರು.