ಸಂಸದ ರಾಘವೇಂದ್ರರವರೇ, ಆಯನೂರರನ್ನು ಮತ್ತೆ ಮತ್ತೆ ಕೆಣಕಬೇಡಿ- ಅವರ ಬಳಿ ಹೊಸ ಅಸ್ತ್ರಗಳಿವೆ- ಹುಷಾರ್; ವೈ.ಹೆಚ್.ನಾಗರಾಜ್
ಸಂಸದ ರಾಘವೇಂದ್ರರವರೇ, ಆಯನೂರರನ್ನು ಮತ್ತೆ ಮತ್ತೆ ಕೆಣಕಬೇಡಿ- ಅವರ ಬಳಿ ಹೊಸ ಅಸ್ತ್ರಗಳಿವೆ- ಹುಷಾರ್; ವೈ.ಹೆಚ್.ನಾಗರಾಜ್
ಸಂಸದ ಬಿ.ವೈ. ರಾಘವೇಂದ್ರ ಮಾಜಿ ಸಂಸದ ಆಯನೂರು ಮಂಜುನಾಥ್ ಅವರನ್ನು ಸುಮ್ಮನೆ ಕೆಣಕುತ್ತಾ ಹೋಗುವುದು ಬೇಡ. ಆಯನೂರು ಬಳಿ ಹೊಸ ಅಸ್ತ್ರಗಳಿವೆ. ಎಚ್ಚರಿಕೆಯಿಂದ ಇರಲಿ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಸಂಸದರಿಗೆ ಕಿವಿಮಾತು ಹೇಳಿದ್ದಾರೆ.
ಬಿ.ವೈ. ರಾಘವೇಂದ್ರ ಅವರಿಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅವರು ಅಭಿವೃದ್ಧಿಯನ್ನೇ ಮರೆತಿದ್ದಾರೆ. ಆಸ್ತಿ ಪ್ರಿಯರಾಗಿರುವ ಅವರಿಗೆ ಆಯನೂರು ಮಂಜುನಾಥ್ ಮಾಡಿರುವ ಕೆಲವು ಸ್ಯಾಂಪಲ್ ಆರೋಪಗಳನ್ನು ಸುಳ್ಳು ಎಂದು ಮತ್ತೆ ಮತ್ತೆ ಪ್ರತಿಕ್ರಿಯೆ ಕೊಡುವ ಮೂಲಕ ಅವರೇ ಸತ್ಯ ಮರೆ ಮಾಚಿಸುತ್ತಿದ್ದಾರೆ. ಅದೂ ಅಲ್ಲದೇ, ರುದ್ರೇಗೌಡರಂತಹ ಸಜ್ಜನ ರಾಜಕಾರಣಿಗಳನ್ನೂ ತಮ್ಮ ಪರ ಮಾತನಾಡುವಂತೆ ಎಳೆಯುತ್ತಿದ್ದಾರೆ ಎಂದು ವೈ.ಹೆಚ್.ಎನ್. ದೂರಿದ್ದಾರೆ.
ಒಂದು ಆಸ್ತಿ ಪಡೆಯಲು ಹೆಂಡತಿಯ ಸಹೋದರನಿಗೆ ಕೊಡಿಸಿ ಅವರಿಂದ ತಮ್ಮ ಹೆಸರಿಗೆ ಮಾಡಿಸಿಕೊಂಡು ಅದನ್ನು ಮತ್ತೆ ಕೆಐಎಡಿಬಿಗೆ ಕೊಟ್ಟು ಅವರಿಗೆ ಹೆಚ್ಚು ಹಣ ಕೊಟ್ಟು ಮತ್ತೆ ಖರೀದಿಸುವ ಕ್ರಿಯೆಯ ಹಿಂದೆ ಆಸ್ತಿ ಬಾಕ ಜಾಣತನ ಇದೆ ಎಂದು ಸಾಮಾನ್ಯ ಜನರಿಗೂ ಗೊತ್ತಾಗುತ್ತದೆ. ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದರ ಹಿಂದೆ ಆಸ್ತಿ ರಹಸ್ಯ ಇದ್ದೇ ಇರುತ್ತದೆ.
ರೈತನಿಂದ ಸಂಸದರೇ ನೇರವಾಗಿ ಕೊಂಡು ಅವರೇ ಆಸ್ಪತ್ರೆಯನ್ನು ಕಟ್ಟಬಹುದಿತ್ತು. ಅಥವಾ ಅವರ ಹೆಸರಿನಲ್ಲಿಯೇ ಅಲ್ಲೇ ಇದ್ದ 30 ಎಕರೆ ಜಾಗದಲ್ಲಿ ಆಸ್ಪತ್ರೆ ಕಟ್ಟುಬಹುದಿತ್ತು. ಆದರೆ, ಅದನ್ನು ಬಿಟ್ಟು ಹೀಗೆ ಸುತ್ತಿ ಬಳಸಿ ಆಸ್ತಿ ಕೊಂಡು ಏಕ ಗವಾಕ್ಷಿ ಹೆಸರಿನಲ್ಲಿ ಆಸ್ತಿ ಕೊಳ್ಳುವ ಸಂಸ್ಕೃತಿಯೇ ಬೇಡವಾಗಿತ್ತು. ಈಗ ಹೋದೆಯಾ ಪಿಶಾಚಿ ಎಂದರೆ ಮತ್ತೆ ಬಂದೆ ಗವಾಕ್ಷಿಯಲ್ಲಿ ಎಂಬಂತಾಗಿದೆ ಅವರ ಸ್ಥಿತಿ.
ಸಂಸದರಿಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ. ವಿಮಾನ ನಿಲ್ದಾಣ ಸಮಸ್ಯೆಯನ್ನು ಈಗ ರಾಜ್ಯ ಸರ್ಕಾರದ ಮೇಲೆ ವರ್ಗಾಯಿಸುತ್ತಿದ್ದಾರೆ. ಹೆದ್ದಾರಿ ನಿರ್ಮಾಣ ಕುಂಟುತ್ತಾ ಸಾಗಿದೆ. ಕೇಂದ್ರಕ್ಕೆ ಸಂಬಂಧಿಸಿದಂತೆ ಮುಳುಗಡೆ ಸಂತ್ರಸ್ತರ ಸಮಸ್ಯೆಯೂ ಇದೆ. ವಿಐಎಸ್ಎಲ್ ಸಮಸ್ಯೆಯನ್ನು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ವರ್ಗಾಯಿಸಿದ್ದಾರೆ. ವಿಚಿತ್ರ ಆದರೂ ಸತ್ಯ ಎಂದರೆ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾದ ಮೇಲೆ ಕೇಂದ್ರದ ನಾಯಕರು ಇವರನ್ನು ಮರೆತೇಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ರುದ್ರೇಗೌಡರು ಸಜ್ಜನ ರಾಜಕಾರಣಿ. ಒಮ್ಮೆ ಬಿ.ಎಸ್.ವೈ. ಕುಟುಂಬದಿಂದ ಮೋಸ ಹೋಗಿದ್ದಾರೆ. ಮಗನನ್ನು ರಾಜಕಾರಣಕ್ಕೆ ತರುವುದಿಲ್ಲ. ರುದ್ರೇಗೌಡರಿಗೆ ಸೀಟು ಖಚಿತ ಎಂದು ಆಣೆ ಮಾಡಿದ್ದ ಯಡಿಯೂರಪ್ಪನವರು ದೃತರಾಷ್ಟ್ರ ಪ್ರೀತಿ ತೋರಿಸಿದ್ದರಿಂದ ಇವತ್ತು ರುದ್ರೇಗೌಡರು ಸಂಸದರಾಗುವ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಸತ್ಯವನ್ನು ಆಯನೂರು ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ.
ಸಂಸದ ಬಿ.ವೈ. ರಾಘವೇಂದ್ರ ಟೀಕೆಗಳಿಗೆ ಗೌರವ ಕೊಡಲಿ, ಜಿಲ್ಲೆಯಲ್ಲಿ ಮಾಡಲು ಬೇಕಾದಷ್ಟು ಕೆಲಸಗಳಿವೆ. ಹುಣ್ಣನ್ನು ಕೆರೆದುಕೊಂಡು ಗಾಯ ಮಾಡಿಕೊಳ್ಳುವುದು ಬೇಡ. ಆಯನೂರು ಮಂಜುನಾಥ್ ಅವರ ಬಳಿ ಇನ್ನೂ ಬೇಕಾದಷ್ಟು ಹೊಸ ದಾಖಲೆಗಳಿವೆ ಎಂದು ಸಂಸದರಿಗೆ ವೈ.ಹೆಚ್. ನಾಗರಾಜ್ ಕಿವಿಮಾತು ಹೇಳಿದ್ದಾರೆ.