ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಕ್ಕಳ ನರಳಾಟ! ಮೂರು ದಿನಗಳಿಂದ ನೀರಿಲ್ಲದೇ ಪರದಾಟ!! ಶಾಸಕರೇ, ಮಂತ್ರಿಗಳೇ ಗಮನಿಸಿ ನೀರು ಕೊಡಿ- ನೀರು ಕೊಡಿ…

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಜ್ವರ, ಜಾಂಡೀಸ್, ಡೆಂಗ್ಯೂ, ಟೈಫಾಯಿಡ್ ಸೇರಿದಂತೆ ಹತ್ತು ಹಲವು ರೋಗಗಳಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಬಹಳಷ್ಟು ಮಕ್ಕಳಿದ್ದಾರೆ. ಆದರೆ, ಅವರಿಗೆ ಮೂರು ದಿನಗಳಿಂದ ನೀರೇ ಇಲ್ಲ!

ಮೆಗ್ಗಾನ್ ಆಸ್ಪತ್ರೆಯ ನೀರಿನ ಮೋಟಾರ್ ಹಾಳಾಗಿದೆ ಎಂದು ಕೆಲವರು ಹೇಳುತ್ತಿದ್ದಾರಾದರೂ ಮೋಟಾರ್ ಸರಿಪಡಿಸಲಿಕ್ಕೆ ಮೂರು ದಿನ ಬೇಕಾ? ಎಂದು ರೋಗಕ್ಕೆ ತುತ್ತಾದ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೂರು ದಿನಗಳಿಂದ ರೋಗಕ್ಕೆ ತುತ್ತಾದ ಮಕ್ಕಳು, ಮಕ್ಕಳ ಪೋಷಕರು ಕುಡಿಯಲು, ಶೌಚಾಲಯಕ್ಕೂ ನೀರಿಲ್ಲದೇ ಪರದಾಡುತ್ತಿದ್ದಾರೆ. ಶೌಚಾಲಯಗಳು ಗಬ್ಬು ನಾರುವಂತಾಗಿದೆ. ನೀರಿನ ಅಭಾವ ಮಿತಿ ಮೀರಿದರೂ ಆಸ್ಪತ್ರೆಯ ಆಡಳಿತ ಮಂಡಳಿ ಮೌನವಹಿಸಿದೆ.

ರೋಗ ಸರಿಪಡಿಸಿಕೊಂಡು ಆರೋಗ್ಯವಂತರಾಗಿ ಮನೆಗೆ ಮರಳುವ ಕನಸು ಹೊತ್ತಿರುವ ಮಕ್ಕಳಿಗೆ, ಅವರ ಪೋಷಕರಿಗೆ ನೀರಿನ ಸಮಸ್ಯೆಯೇ ಬೃಹತ್ ರೋಗವಾಗಿ ಕಾಡುತ್ತಿದೆ.

ಆಸ್ಪತ್ರೆಯ ಆಡಳಿತ ಮಂಡಳಿಯ ದಿವ್ಯ ನಿರ್ಲಕ್ಷ್ಯದ ಕಾರಣದಿಂದಾಗಿ ಪುಟ್ಟ ಪುಟ್ಟ ಮಕ್ಕಳ ಪ್ರಾಣಕ್ಕೂ ಅಪಾಯವಾಗುವ ಸಾಧ್ಯತೆ ಇದೆ.

ಕೂಡಲೇ, ಸಚಿವರಾದ ಮಧು ಬಂಗಾರಪ್ಪ, ಶಿವಮೊಗ್ಗ ಕ್ಷೇತ್ರದ ಶಾಸಕರಾದ ಎಸ್.ಎನ್.ಚನ್ನಬಸಪ್ಪರವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನೀರಿನ ಸಮಸ್ಯೆ ಸರಿ ಪಡಿಸಬೇಕಿದೆ.