ಹವ್ಯಾಸಿ ಕಲಾವಿದರ ಮುದುಕನ ಮದುವೆ ಹೇಗಿತ್ತು? ಭೇಷ್ ಎಂದ ಪ್ರೇಕ್ಷಕರ ಸಂಭ್ರಮದ ನಡುವೆಯೇ ನಡೆಯಿತು ಮದುವೆ!

ಹವ್ಯಾಸಿ ಕಲಾವಿದರ ಮುದುಕನ ಮದುವೆ ಹೇಗಿತ್ತು? 

ಭೇಷ್ ಎಂದ ಪ್ರೇಕ್ಷಕರ ಸಂಭ್ರಮದ ನಡುವೆಯೇ ನಡೆಯಿತು ಮದುವೆ!

ಅ. 10ರ ಸಂಜೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಂಡ ಗಣೇಶ್ ಕೆಂಚನಾಳ್ ನಿರ್ದೇಶನ ದ ಮುದುಕನ ಮದುವೆ ಅರ್ಥಾತ್ ಮಲಮಗಳು ನಾಟಕ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಅತ್ಯಂತ ಯಶಸ್ವಿಯಾಯಿತು.
ರಂಗ ದಸರಾ ಅಂಗವಾಗಿ ಮಹಾನಗರ ಪಾಲಿಕೆ ಏರ್ಪಡಿಸಿದ್ದ ಈ ನಾಟಕ ನೋಡಲು ಕುವೆಂಪು ರಂಗಮಂದಿರ ಭರ್ತಿಯಾಗಿತ್ತು. ದಸರಾ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕೊರತೆ ಇದೆ ಎಂಬ ಅಪವಾದವನ್ನು ಈ ನಾಟಕ ಪ್ರದರ್ಶನ ತಳ್ಳಿ ಹಾಕಿತು.
ಮಲಮಗಳು ನಾಟಕವನ್ನು ರಾಜ್ಯದ ಬಹುತೇಕ ಎಲ್ಲಾ ಕಡೆ ವಿವಿಧ ವೃತ್ತಿ ನಾಟಕ ಕಂಪನಿಗಳು ಹಲವು ವರ್ಷಗಳಿಂದ ಪ್ರದರ್ಶನ ಮಾಡುತ್ತಲೇ ಬಂದಿವೆ. ಸಾವಿರಾರು ಬಾರಿ ಈ ನಾಟಕ ಪ್ರದರ್ಶನಗೊಂಡಿದೆ. ಅದರಲ್ಲೂ ಸಾವಿರಾರು ಹಳ್ಳಿಗಳಲ್ಲಿ ಹಳ್ಳಿಗರು ಈ ನಾಟಕ ಅಭಿನಯಿಸಿದ್ದಾರೆ. ಒಂದು ರೀತಿಯಲ್ಲಿ ಇದು ಬಾಯಿಪಾಠವಾಗಿದೆ.
ಆದರೆ, ಶಿವಮೊಗ್ಗದಲ್ಲಿ ಪ್ರದರ್ಶನಗೊಂಡ ಈ ನಾಟಕ ತುಂಬಾ ವಿಶೇಷವಾಗಿತ್ತು. ಕಾರಣ ಇದುವರೆಗೂ ಈ ನಾಟಕವನ್ನು ವೃತ್ತಿ ರಂಗದವರು ಅಥವಾ ಹಳ್ಳಿಗರು ಪ್ರದರ್ಶನ ಮಾಡುತ್ತಿದ್ದರು. ಆದರೆ, ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಹವ್ಯಾಸಿ ಕಲಾವಿದರು ಈ ನಾಟಕವನ್ನು ಅಭಿನಯಿಸಿ ತಾವೇನೂ ಕಡಿಮೆ ಇಲ್ಲ ಎಂದು ಸೈ ಎನಿಸಿಕೊಂಡರು.
ವೃತ್ತಿ ರಂಗಭೂಮಿ ಕಲಾವಿದರಿಗೆ ಹವ್ಯಾಸಿ ಕಲಾವಿದರು ನಟಿಸುವ ಅಕಾಡೆಮಿಕ್ ನಾಟಕಗನ್ನು ಪ್ರದರ್ಶಿಸುವುದು ಕಟ್ಟವಾಗುತ್ತದೆ. ಹಾಗೆಯೇ ಹವ್ಯಾಸಿ ಕಲಾವಿದರಿಗೂ ವೃತ್ತಿ ನಾಟಕಗಳನ್ನು ಅಭಿನಯಿಸುವುದು ಕಷ್ಟವಾಗುತ್ತದೆ. ಶಿವಮೊಗ್ಗದ ಒಕ್ಕೂಟದ ಕಲಾವಿದರು ಮಾತ್ರ ಥೇಟ್ ವೃತ್ತಿ ರಂಗಭೂಮಿ ಕಲಾವಿದರಂತೆ ನಟಿಸಿದ್ದು ವಿಶೇಷವಾಗಿತ್ತು. ನಿರ್ದೇಶಕ ಕೆಂಚನಾಳ್ ಅವರ ಶ್ರಮ ಎದ್ದು ಕಂಡಿತ್ತು. ಜೊತೆಗೆ ಶಿವಮೊಗ್ಗದ ಎಲ್ಲಾ ಹವ್ಯಾಸಿ ತಂಡದ ನಿರ್ದೇಶಕ ರ ಪ್ರಯತ್ನ ಕೂಡ ಇತ್ತು.

ಪಿ.ಬಿ. ಧುತ್ತರಗಿ ರಚನೆಯ ಈ ನಾಟಕದಲ್ಲಿ ಗೌಡನ ಪಾತ್ರ ವಿಶೇಷವಾದುದು. ಈ ಇಡೀ ನಾಟಕ ಮುದುಕ ಗೌಡನ ಪಾತ್ರದ ಸುತ್ತ ಕೇಂದ್ರೀಕೃತವಾಗಿದೆ. ಈ ಪಾತ್ರವನ್ನು ದಿ. ನಟ ಧೀರೇಂದ್ರ ಗೋಪಾಲ್ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕುವೆಂಪು ರಂಗಮಂದಿರದಲ್ಲಿ ಕೂಡ ಪ್ರದರ್ಶನಗೊಂಡ ಮಲಮಗಳು ನಾಟಕದ ಈ ಗೌಡನ ಪಾತ್ರ ಅತಿ ಅದ್ಭುತವಾಗಿತ್ತು. ಈ ಮಾತ್ರ ಅಭಿನಯಿಸಿದ ನಟ ಹವ್ಯಾಸಿ ಕಲಾವಿದ ಆದರೆ ವೃತ್ತಿ ರಂಗಭೂಮಿಯ ಎಲ್ಲಾ ಪಟ್ಟುಗಳನ್ನು ಕಲಿತವರಂತೆ ಅದ್ಭುತವಾಗಿ ಅಭಿನಯ ನೀಡುವುದರ ಜೊತೆಗೆ ಪ್ರೇಕ್ಷಕರನ್ನು ಕ್ಷಣಕ್ಷಣಕ್ಕೂ ನಗೆಗಡಲಲ್ಲಿ ಮಿಂದಿಸಿದರು.
ಮಲಮಗಳು ಒಂದು ರೀತಿಯಲ್ಲಿ ನೆಗೆ ನಾಟಕವೂ ಆಗಿದೆ. ಗೌಡನ ಪಾತ್ರ ಹೊರತುಪಡಿಸಿದರೆ ಶೇಷಪ್ಪ, ಅಚ್ಚಮ್ಮ, ಕಲ್ಯಾಣಿ, ಮಂದಾಕಿನಿ ಮುಂತಾದ ಪಾತ್ರಗಳೂ ಗಮನಸೆಳೆದವು. ಅಚ್ಚು ಪಾತ್ರ ಮೆಚ್ಚುಗೆಗೊಳಿಸಿತು.
ವೃತ್ತಿ ರಂಗಭೂಮಿ ಕತೆ ಇನ್ನೇನು ಮುಗಿಯಿತು ಎಂದುಕೊಳ್ಳುತ್ತಿರುವಾಗಲೇ ಶಿವಮೊಗ್ಗದ ಹವ್ಯಾಸಿ ಕಲಾವಿದರ ತಂಡಗಳೆಲ್ಲವೂ ಸೇರಿಕೊಂಡು ಒಕ್ಕೂಟ ಕಲಾವಿದರ ಮೂಲಕ ಈ ನಾಟಕವನ್ನು ಅಭಿನಯಿಸಿ 70ರ ದಶಕವನ್ನು ಮತ್ತೆ ವರ್ತಮಾನಕ್ಕೆ ತಂದರು.
ಕುವೆಂಪು ರಂಗಮಂದಿರ ಸಾಮಾನ್ಯವಾಗಿ ಹವ್ಯಾಸಿ ಕಲಾವಿದರಿಗೆ ತಕ್ಕಂತೆ ರೂಪುಗೊಂಡಿದೆ. ಇಲ್ಲಿ ವೃತ್ತಿ ರಂಗಭೂಮಿಗೆ ತಕ್ಕಂತೆ ರಂಗ ಪರಿಕರಗಳನ್ನು ಒದಗಿಸಲು ಕಷ್ಟಪಡಬೇಕಾಗುತ್ತದೆ. ಆದರೆ, ಒಕ್ಕೂಟದ ಕಲಾವಿದರು ಅದಕ್ಕೆ ತೊಂದರೆಯಾಗದಂತೆ ಹರಿಹರದ ಸಮೀಪವಿರುವ ಭಾನುವಳ್ಳಿಯ ಸೀನ್ಸ್ ತಂದಿದ್ದರು. ಮಧ್ಯ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಭಾನುವಳ್ಳಿ ಡ್ರಾಮಾ ಸೀನ್ಸ್ ಎಂದರೆ ಅತ್ಯಂತ ಫೇಮಸ್ ಕೂಡ. ರಸ್ತಾ ಸೀನ್, ಮನೆ ಸೀನ್, ಪಾರ್ಕ್ ಸೀನ್ ಹೀಗೆ ಮುಂತಾದ ಹಲವು ಸೀನ್ ಗಳನ್ನು ಪರದೆಯ ಮೂಲಕ ಕಟ್ಟಬೇಕಾಗುತ್ತದೆ. ಇದನ್ನು ಅತ್ಯಂತ ಯಶಸ್ವಿಯಾಗಿ ರಂಗಮಂದಿರದಲ್ಲಿ ನಿರ್ಮಿಸಲಾಗಿತ್ತು. ಹಾಗೆಯೇ ಸಂಗೀತಕ್ಕೂ ವೃತ್ತಿ ರಂಗಭೂಮಿಯಲ್ಲಿರುವಂತೆ ಲೆಗ್ ಹಾರ್ಮೋನಿಯಂ, ತಬಲಾ ಇತರ ಪರಿಕರಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಒಂದೇ ಒಂದು ಕೊರತೆ ಎಂದರೆ ನೇರವಾಗಿ ಹಾಡುವ ವೃತ್ತಿ ಗಾಯಕರು ಇರಲಿಲ್ಲ. ಅದನ್ನು ಧ್ವನಿ ಸುರಳಿ ಮೂಲಕ ಬಳಸಿಕೊಳ್ಳಲಾಗಿತ್ತು.
ಇಡೀ ನಾಟಕ ಪ್ರೇಕ್ಷಕರನ್ನು ಎರಡೂವರೆ ಗಂಟೆಗಳ ಕಾಲ ಹಿಡಿದಿಟ್ಟಿತ್ತು. ನಾಟಕದಲ್ಲಿ ಬರುವ ಕಲ್ಯಾಣಿ, ಮಂದಾಕಿನಿ ಪಾತ್ರಗಳು ಮತ್ತಷ್ಟು ಗಟ್ಟಿಯಾಗಬೇಕಿತ್ತು ಎನ್ನುವುದನ್ನು ಬಿಟ್ಟರೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು ಎಂದು ಹೇಳಬಹುದು. ಸಾಮಾನ್ಯವಾಗಿ ವೃತ್ತಿ ರಂಗಭೂಮಿಯಲ್ಲಿ ಇತ್ತೀಚೆಗೆ ಡಬ್ಬಲ್ ಮೀನಿಂಗ್ ಸಂಭಾಷಣೆಗಳಿರುತ್ತವೆ. ಆದರೆ, ಈ ನಾಟಕದಲ್ಲಿ ಅದು ತುಂಬಾ ಮಿತಿಯಲ್ಲಿತ್ತು.
ಪ್ರೇಕ್ಷಕರು ಮಾತ್ರ ಈ ನಾಟಕವನ್ನು ತುಂಬಾ ಎಂಜಾಯ್ ಮಾಡಿದರು. ಸ್ಟೇಜಿಗೆ ಹೋಗಿ ನೋಟನ್ನು ಪಾತ್ರಧಾರಿಯ ಜೇಬಿಗೆ ಪಿನ್ ನಿಂದ ಸಿಕ್ಕಿಸಿ ಖುಷಿಪಟ್ಟರು. ಹಳ್ಳಿಗಳಲ್ಲಿ ಪಾತ್ರಧಾರಿಗಳಿಗೆ ಮುಯ್ಯಿ ಮಾಡುವಂತೆ ಇಲ್ಲಿಯೂ ಮಾಡಿದರು. ನಾಟಕದ ನಡುನಡುವೆ ಶಿಳ್ಳೆ ಹೊಡೆಯುವುದು, ಕೂಗುವುದು, ಒನ್ಸ್ ಮೋರ್ ಎಂದು ಹೇಳುವುದು ಕೂಡ ನಡೆದು ವೃತ್ತಿ ರಂಗಭೂಮಿಯೇ ರಂಗಮಂದಿರದಲ್ಲಿತ್ತು.
ನಾಟಕವನ್ನು ಸವಿಯಲೇ ಬೇಕು ಎಂದು ಮಾತಾಡಿ ಕೊಂಡು ಬಂದ ವೃತಿ ನಾಟಕ ಪ್ರಿಯರಾದ ಶಿ. ಜು. ಹೊತ್ತಾರೆ,ಟೆಲೆಕ್ಸ್,ಆರುಂಡಿ,ಹಾಲ್ಸ್,ಮುಂತಾದ ನೂರಾರು ಪ್ರೇಕ್ಷಕರು ನಲಿದರು.
ಇದೇ ಸಂದರ್ಭದಲ್ಲಿ ವಿವಿಧ ನಾಟಕ ತಂಡಗಳ ಕಲಾವಿದರಾದ ಸಾಸ್ವೆಹಳ್ಳಿ ಸತೀಶ್, ಶಿವಕುಮಾರ್ ಮಾವಲಿ, ಕಾಂತೇಶ್ ಕದರಮಂಡಲಗಿ, ಲವ, ಹಾಲಸ್ವಾಮಿ, ಕೊಟ್ರಪ್ಪ ಹಿರೇಮಾಗಡಿ, ಚಂದ್ರಶೇಖರ್ ಹೀರೇಗೋಣಿಗೆರೆ, ಮಂಜು, ಸೇರಿದಂತೆ ಅನೇಕರನ್ನು ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಆಯುಕ್ತೆ ಕವಿತಾ ಯೋಗಪ್ಪನವರ್ ಸನ್ಮಾನಿಸಿದರು.
ಅಷ್ಟೇ ಅಲ್ಲ, ನಾಟಕ ಮುಗಿದ ಮೇಲೆ ಕಲಾವಿದರೆಲ್ಲರೂ ಸೇರಿ ನೃತ್ಯ ಮಾಡಿದ್ದು ಅವರ ಜೊತೆಗೆ ಇವರೂ ಕೂಡ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ರಂಜಿಸಿದರು.
ಒಟ್ಟಿನಲ್ಲಿ ಬಹಳ ವರ್ಷಗಳ ನಂತರ ಕುವೆಂಪು ರಂಗಮಂದಿರದಲ್ಲಿ ನಾಟಕವೊಂದು ಪ್ರೇಕ್ಷಕರನ್ನು ರಂಜಿಸಿತು. ಶಿವಮೊಗ್ಗದ ಹವ್ಯಾಸಿ ಕಲಾವಿದರೆಲ್ಲರೂ ಇನ್ನು ಧೈರ್ಯವಾಗಿ ಬಸ್ ಕಂಡಕ್ಟರ್, ಕೊಂಡುಕೊಂಡ ಗಂಡ, ಸಂಪತ್ತಿಗೆ ಸವಾಲ್, ಕುಂಟ ಕೋಣ ಮೂಕ ಜಾಣ, ಸತ್ಯ ಹರಿಶ್ಚಂದ್ರ ಸೇರಿದಂತೆ ಅನೇಕ ನಾಟಕಗಳನ್ನು ಅಭಿನಯಿಸಬಹುದು.
ವೃತ್ತಿ ರಂಗಭೂಮಿ ಬೇರು ಹವ್ಯಾಸಿ ಮತ್ತಿರ ಪ್ರಯೋಗಾತ್ಮ ನಾಟಕಗಳು ಹೂವು ಅಷ್ಟೇ. ಬೇರು ಗಟ್ಟಿಯಾಗಿದ್ದರೆ ಮಾತ್ರ ಹವ್ಯಾಸಿ ಹೂವುಗಳು ಅರಳಲು ಸಾಧ್ಯ. ಹಾಗಾಗಿ ಹವ್ಯಾಸಿ ಕಲಾವಿದರು ಮತ್ತೆ ವೃತ್ತಿ ರಂಗಭೂಮಿಯನ್ನು ಎತ್ತರಕ್ಕೆ ಕೊಂಡೊಯ್ಯಲಿ ಎಂಬುದು ನಮ್ಮ ಆಶಯ.-