ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು; ನ್ಯಾ. ಎಂ.ಎಸ್ ಸಂತೋಷ್*
*ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು; ನ್ಯಾ. ಎಂ.ಎಸ್ ಸಂತೋಷ್*
ಜನ ಸಾಮಾನ್ಯರು ಮಾನಸಿಕ ರೋಗ ಎಂದರೆ ದೊಡ್ಡ ವಿಚಾರವೆಂದು ತಿಳಿಯುತ್ತಾರೆ, ಮಾನಸಿಕ ವೈದ್ಯರನ್ನು ಬೇಟಿ ಮಾಡಿದರೆ ಹುಚ್ಚರು ಎಂಬ ಪಟ್ಟ ಬರುತ್ತದೆ ಎಂಬ ಕೆಟ್ಟ ಕಲ್ಪನೆಯನ್ನು ತೆಗೆದು ಹಾಕಬೇಕಿದೆ. ಈ ವಿಚಾರ ಸಮಾಜದ ಕಡೆಯ ವ್ಯಕ್ತಿಗೂ ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಬೇಕಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಎಂ.ಎಸ್ ಸಂತೋಷ್ ಹೇಳಿದರು.
ಅವರು ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಜ್ಞಾನಸುಧೆ- ಸಮಾಜಕಾರ್ಯ ವಿಭಾಗ ಹಾಗೂ ಮನಃಶಾಸ್ತ್ರ ವಿಭಾಗ, ಐಕ್ಯೂಎಸಿ, ಕಟೀಲ್ ಅಶೋಕ್ ಪೈ ಮೆಮೋರಿಯಲ್ ಇನ್‌ಸ್ಟಿಟ್ಯೂ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಇವರುಗಳ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಬಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಗಾರವು ಆಶಾ ಕಾರ್ಯಕರ್ತೆಯರಿಗೆ ಮಾನಸಿಕ ಆರೋಗ್ಯದ ಕುರಿತು ಸಮಾಜಕ್ಕೆ ಅರಿವು ಮೂಡಿಸಲು ಸಹಾಯಕವಾಗಿದೆ. ಮಾನಸಿಕ ಆರೋಗ್ಯದಲ್ಲಿ ಯಾವ ವೈದ್ಯಕೀಯ ಸೌಲಭ್ಯಗಳು ಸಿಗಲಿದೇ ಎಂದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಿಳಿಯಬೇಕು. ತಾಯಿ ಮಗುವಿನ ಮಾನಸಿಕ ಆರೋಗ್ಯದ ಬಗ್ಗೆ ಆಶಾ ಕಾರ್ಯಕರ್ತೆಯರು ಮಾಹಿತಿಯನ್ನು ಒದಗಿಸಬೇಕು. ಮಾನಸಿಕ ವೈದ್ಯರ ಸಂಪರ್ಕಿಸುವ ವಿಚಾರವನ್ನು ಕಡೆಗಣಿಸಬಾರದು. ಸಮಾಜಕ್ಕೆ ಹತ್ತಿರದವರಾದ ಆಶಾ ಕಾರ್ಯಕರ್ತೆಯರು ಈ ಕಾರ್ಯಗಾರದಲ್ಲಿ ಹೆಚ್ಚಿನ ಮಾಹಿತಿ ಪಡೆದು, ಸಮಾಜಕ್ಕೆ ನೀಡಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಕೆ. ನಟರಾಜ್ ಮಾತನಾಡಿ ಇತ್ತಿಚೀನ ದಿನಗಳಲ್ಲಿ ಮಾನಸಿಕ ಆರೋಗ್ಯ ಹೆಚ್ಚುತ್ತಿದೆ. ತುಂಬಾ ಸಿರಿವಂತರು ಮಾನಸಿಕ ಆರೋಗ್ಯ ಕಾಯಿಲೆಗೆ ಒಳಗಾಗುತ್ತಿದಾರೆ. ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರ ಮಾನಸಿಕ ಸ್ಥಿತಿ ಒಂದೆ ರೀತಿಯಲ್ಲಿ ಇರುವುದಿಲ್ಲ. ಕೆಲವರು ಬಹುಬೇಗ ಒತ್ತಡಕ್ಕೆ ಒಳಗಾಗುತ್ತಾರೆ. ಅದಕ್ಕಾಗಿ ಕೇವಲ ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿ ವ್ಯಾಯಾಮ, ನಡಿಗೆ, ಯೋಗಭ್ಯಾಸ ಮಾಡುವುದು ಉತ್ತಮ ಎಂದರು. ಸಮಸ್ಯೆಗಳನ್ನು ಮುಕ್ತವಾಗಿ ಸ್ನೇಹಿತರ ಬಳಿ ಹೇಳಿಕೊಳ್ಳುವುದು ಸಹ ಪರಿಹಾರ ನೀಡುತ್ತದೆ ಎಂದು ಹೇಳಿದರು.
ಮಾನಸ ಟ್ರಸ್ಟ್ ನಿರ್ದೇಶಕರಾದ ಡಾ.ರಜನಿ ಎಸ್ ಪೈ ಮಾತನಾಡಿ ಬೆಳಗ್ಗೆ ಕೆಲಸಕ್ಕೆ ಹೊರಟಾಗಿನಿಂದ ಸಂಜೆ ಮನೆಗೆ ತಲುಪುವವರೆಗೂ ಒಂದು ರೀತಿಯ ಆತಂಕ ಮತ್ತು ಒತ್ತಡದಲ್ಲಿ ಇರುತ್ತವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮಾಹಿತಿ ಮತ್ತು ಸೇವೆಯನ್ನು ಒದಗಿಸುವ ಆಶಾ ಕಾರ್ಯಕರ್ತೆಯರು ಆತಂಕ ಮತ್ತು ಒತ್ತಡವನ್ನು ಎದುರಿಸಿ ಹೇಗೆ ಬಾಳಬೇಕೆಂದು ತಿಳಿಯಬೇಕಿದೆ. ಮಾನಸಿಕ ಅನಾರೋಗ್ಯವು ಯಾವುದೋ ದೊಡ್ಡ ರೋಗವಲ್ಲ ಎಂದು ಸಮಾಜಕ್ಕೆ ಅರಿವು ಮೂಡಿಸಬೇಕು ಎಂದರು.
ಸಿಮ್ಸ್ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ರಾಮಪ್ರಸಾದ್ ಮಾತನಾಡಿ ಮಾನಸಿಕ ಆರೋಗ್ಯವು ಎಷ್ಟರ ಮಟ್ಟದಲ್ಲಿ ಇರಬೇಕು ಎಂಬುದು ತಿಳಿಯಬೇಕು. ದೇಹವನ್ನು ನಿಯಂತ್ರಿಸುವ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ಕೇಂದ್ರ ಸ್ಥಾಪನೆಯಾಗಿದೆ. ಅಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂಬುದನ್ನು ಜನರಿಗೆ ಮಾಹಿತಿ ತಿಳಿಸಿ ಎಂದು ಹೇಳಿದರು.
ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಕಿರಣ್ ಎಸ್. ಕೆ. ಮಾತನಾಡಿ ಮಾನಸಿಕ ರೋಗ ಇದೆ ಎಂದರೆ ಸಮಾಜದಲ್ಲಿ ನೋಡುವ ರೀತಿಯೆ ಬೇರೆಯಾಗುತ್ತದೆ ಎಂಬ ಕಲ್ಪನೆ ಬಿಡಬೇಕು. ವೈದ್ಯರ ಬಳಿಯಲ್ಲಿ ಮುಕ್ತವಾಗಿ ಹೇಳಿಕೊಂಡರೆ ಸಮಸ್ಯೆ ಪರಿಹರಿಸಬಹುದು. ಕೆಲಸ ಮಾಡುವ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಪೂರಕವಾದ ವಾತಾವರಣ ಇರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ಮನೋವೈದ್ಯರಾದ ಡಾ. ಪ್ರಮೋದ್, ಕಟೀಲ್ ಆಶೋಕ್ ಪೈ ಪ್ರಾಚಾರ್ಯರು ಡಾ. ಸಂದ್ಯಾಕಾವೇರಿ, ಶಿಕಾರಿಪುರದ ಮನೋವೈದ್ಯರಾದ ಡಾ.ಸಂಜಯ್, ಸಂಪನ್ಮೂಲ ವ್ಯಕ್ತಿಗಳಾಗಿ ಕೆಎಪಿಎಮ್‌ಸಿ ಮನಃಶಾಸ್ತ್ರ ಮುಖ್ಯಸ್ಥರಾದ ಡಾ.ಅರ್ಚನಾ ಕೆ, ಭಟ್ ಮತ್ತು ಕೆಎಪಿಎಮ್‌ಐಎಹೆಚ್‌ಎಸ್ ಪ್ರಾಶುಂಪಾಲೆ ಡಾ. ಪುಷ್ಪಲತಾ ಹಾಗೂ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಜರಿದ್ದರು.