ಕನ್ನಡ ಪ್ರತಿಯೊಬ್ಬರ ಮನೆ-ಮನಗಳ ಉಸಿರಾಗಬೇಕು: ಹೇಮಂತ್ ಎನ್*

*ಕನ್ನಡ ಪ್ರತಿಯೊಬ್ಬರ ಮನೆ-ಮನಗಳ ಉಸಿರಾಗಬೇಕು: ಹೇಮಂತ್ ಎನ್*

ನ.೦೧ ರಂದು ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿದಂತಾಗುವುದಿಲ್ಲ. ಕನ್ನಡ ಪ್ರತಿಯೊಬ್ಬರ ಮನ-ಮನೆಗಳ ಉಸಿರಾಗಬೇಕು ಎಂದು
ಜಿಲ್ಲಾಧಿಕಾರಿಗಳಾದ ಹೇಮಂತ್ ಎನ್ ಆಶಿಸಿದರು.
ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಿಎಆರ್ ಮೈದಾನದಲ್ಲಿ ನ.೦೧ ರಂದು ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಶಿವಮೊಗ್ಗ ಜಿಲ್ಲೆಯ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿ ಮಾತನಾಡಿದರು.
ಇಂದು ನವೆಂಬರ್ 01, ಜಾತಿ-ಧರ್ಮದ ಬೇಧ-ಭಾವವಿಲ್ಲದೇ ಕನ್ನಡಿಗರೆಲ್ಲಾ ಒಂದೆಡೆ ಸೇರಿ ಕನ್ನಡ ಭಾಷೆಯ ಮಹತ್ವವನ್ನು ಜಗತ್ತಿಗೆ ಸಾರುವ ಸಂಭ್ರಮದಿಂದ ಹಬ್ಬ ಆಚರಿಸುವ ಕನ್ನಡ ರಾಜ್ಯೋತ್ಸವದ ದಿನವಿದು. ಕನ್ನಡಕ್ಕಾಗಿ ದುಡಿದವರನ್ನು ನೆನೆಯುವ, ಕನ್ನಡಕ್ಕಾಗಿ ಮಿಡಿಯುವ ಹೃದಯಗಳ ವಿಶೇಷ ದಿನ ಇದಾಗಿದೆ.
ಈಗಿನ ಕರ್ನಾಟಕವು ಮೊದಲು ಮೈಸೂರು ರಾಜ್ಯವಾಗಿತ್ತು. ಇದು 1956ರ ನವೆಂಬರ್ 1 ರಂದು ನಿರ್ಮಾಣವಾಯಿತು. ಮೈಸೂರು ಸಂಸ್ಥಾನ ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಹಾಗೂ ಮದ್ರಾಸ್ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದು, ಕನ್ನಡನಾಡು ಈ ದಿನ ರಾಜಕೀಯವಾಗಿ ಒಂದಾಯಿತು. ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಎಲ್ಲಾ ಪ್ರದೇಶಗಳನ್ನು ವಿಲೀನಗೊಳಿಸಿ, ಒಂದು ರಾಜ್ಯವಾಗಿ ಘೋಷಣೆ ಮಾಡಿದ ಈ ದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತಿದೆ.
ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ ಮೈಸೂರು ರಾಜ್ಯವು ಉದಯವಾಯಿತು. ಮೈಸೂರು ರಾಜ್ಯವು ಬಳಿಕ ಕರ್ನಾಟಕ ಎಂಬ ಹೆಸರು ಪಡೆಯಿತು. ಕುವೆಂಪು, ಶಿವರಾಮಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬಿ.ಎಂ.ಶ್ರೀಕಂಠಯ್ಯ ಸೇರಿದಂತೆ ಹಲವು ಮಹನೀಯರು ಕರ್ನಾಟಕ ಏಕೀಕರಣಕ್ಕೆ ಕಾರಣರಾದರು. ಅವರೆಲ್ಲರನ್ನು ಸ್ಮರಿಸುವ ಸುದಿನ ಇದಾಗಿದೆ.
ಅನ್ಯಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ, ಬೇರೆ ಭಾಷೆ ಕಲಿತು ಕನ್ನಡ ಮರೆಯಬಾರದು. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಎಂಬ ಕುವೆಂಪು ಅವರ ಸಾಲುಗಳನ್ನು ಯಾವಾಗಲೂ ನೆನಪಿಸಿಕೊಳ್ಳಲೇಬೇಕು. ಈ ಸಂದರ್ಭದಲ್ಲಿ ಇಲ್ಲಿನ ನಾಡು-ನುಡಿ, ನೆಲ-ಜಲ ಭಾಷೆ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಪತ್ತನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ನಾಡಿನ ಸಮಸ್ತ ಪ್ರಜೆಗಳ ಪಾತ್ರವೂ ಪ್ರಮುಖವಾದುದ್ದಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದಲ್ಲೇ ಪ್ರಮುಖಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದೆ. ಕನ್ನಡ ಭಾಷೆಗೆ 2000ವರ್ಷಗಳಿಗೂ ಮಿಗಿಲಾದ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿವರೆಗೆ ಈ ನಾಡಿನ ಖ್ಯಾತಿ ವ್ಯಾಪಿಸಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಅಲ್ಲದೇ ಕನ್ನಡ ಭಾಷೆಯಲ್ಲಿ ದೊರಕುವ ಸಾಹಿತ್ಯ ಕೃತಿಗಳು, ಐತಿಹಾಸಿಕ ದಾಖಲೆಗಳು ನಾಡಿನ ಶ್ರೀಮಂತ ಸಂಸ್ಕೃತಿಗೆ ಸಾಕ್ಷಿಯಾಗಿವೆ. ಪಂಪ. ರನ್ನ ಜನ್ನರ ಕಾವ್ಯದ ಸೊಗಸು ಕಾಲವನ್ನು ಮೆಟ್ಟಿ ತಮ್ಮ ಚಿರಂತನತೆಯನ್ನು ಮರೆಯುತ್ತಿದೆ. ಬೇಲೂರು, ಹಳೇಬೀಡು, ಬಾದಾಮಿ ಐಹೊಳೆ ಪಟ್ಟದಕಲ್ಲು ಮುಂತಾದ ಕಡೆಗಳಲ್ಲಿ ಶಿಲ್ಪಕಲೆಯು ಕಾವ್ಯವಾಗಿ ಮೈದಳೆದಿರುವುದನ್ನು ಗಮನಿಸಬಹುದಾಗಿದೆ.
ಭಾಷೆಯ ಅಭಿರುಚಿಯನ್ನು ಜನರಲ್ಲಿ ಹೆಚ್ಚಿಸಿ, ಅದನ್ನು ಉಳಿಸಿಕೊಳ್ಳಬೇಕು. ಪ್ರಮುಖವಾಗಿ ಭಾಷೆಯ ಪ್ರಭಾವಶಾಲಿ ಚಲನೆ ಇರುವುದು ವಿವಿಧ ಮಾಧ್ಯಮ ಮತ್ತು ಶಾಲೆಗಳಲ್ಲಿ ಮಾಧ್ಯಮ ಮತ್ತು ಶಾಲೆಗಳಲ್ಲಿ ಕನ್ನಡದ ಬಗ್ಗೆ ಅಭಿರುಚಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲೀಷ್ ಭಾಷಾ ಜ್ಞಾನ ಅವಶ್ಯಕವಾಗಿದ್ದರೂ ಎಂದಿಗೂ ಎಂದಿಗೂ ಮಾತೃಭಾಷೆ ಕನ್ನಡಕ್ಕೆ ಮೊದಲ ಆದ್ಯತೆ. ನಮ್ಮ ಶಿಕ್ಷಣ ನೀತಿಯೂ ಮಾತೃಭಾಷೆಗೆ ಹೆಚ್ಚಿನ ಒತ್ತನ್ನು ನೀಡಿದ್ದರೂ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವಲ್ಲಿ ನಮ್ಮೆಲ್ಲರ ಜಬಾಬ್ದಾರಿ ಇದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸರ್ಕಾರ ಮುಂದುವರೆಸಿದ್ದು, ಕನ್ನಡ ಭಾಷೆಯ ಸೊಗಡನ್ನು ಉಳಿಸಿಕೊಂಡು ಅದನ್ನು ಇನ್ನೂ ಹೆಚ್ಚಿಸುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಕನ್ನಡ ಭಾಷೆಯ ಪರಂಪರೆ, ಹಿರಿಮೆ, ಹಾಗೂ ಈ ನೆಲದ ಆದರ್ಶ ವ್ಯಕ್ತಿಗಳ, ಪುರಾಣ ಪುರುಷರ ಇತಿಹಾಸವನ್ನು ಪರಿಚಯಿಸುವ ಅಗತ್ಯವಿರುವುದನ್ನು ನಾನು ಮನಗಂಡಿದ್ದೇನೆ. ಜೊತೆಗೆ ಕನ್ನಡಪರ ಸಂಘಟನೆಗಳೂ ಕೂಡ ಈ ಕಾರಣಕ್ಕೆ ಕೈಜೋಡಿಸಬೇಕಾದ ಅಗತ್ಯವಿದೆ.
ಕನ್ನಡನಾಡು ವಿವಿಧ ಧರ್ಮ ಸಂಸ್ಕೃತಿಗಳ ಸಮಾಗಮವಾಗಿದೆ. ಮೌರ್ಯರು, ಗಂಗರು, ಕದಂಬರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರಿನ ಒಡೆಯರು, ಕೊಡವರು ಮುಂತಾದ ಅನೇಕ ರಾಜಮನೆತನಗಳು ಈ ನಾಡಿಗೆ ನೀಡಿದ ಕೊಡುಗೆ ಅಪಾರ, ದಾಸಶ್ರೇಷ್ಠ ಕನಕದಾಸರು, ಪುರಂದರದಾಸರು, ಸರ್ವಜ್ಞ, ಶಿಶುನಾಳ ಷರೀಫರಂತಹ ಸಂತಕವಿಗಳು, ಸಾಮಾಜಿಕ ಕ್ರಾಂತಿಯ ಹರಿಕಾರರಾದ ಅಕ್ಕ, ಅಲ್ಮಮ, ಜಗಜ್ಯೋತಿ ಬಸವೇಶ್ವರರನ್ನೊಳಗೊಂಡ ಅಸಂಖ್ಯಾತ ವಚನಕಾರರು ಮತ್ತು ದಾರ್ಶನಿಕರು ಬಾಳಿ ಬದುಕಿದ ನೆಲ ಈ ಹೆಮ್ಮೆಯ ಕನ್ನಡನಾಡು, ಧರ್ಮ ಸಹಿಷ್ಣುತೆ, ಸಮನ್ವಯತೆ, ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಕನ್ನಡ ಭಾಷೆ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿದ್ದು, ಕನ್ನಡದ 08 ಜನ ಪರಿಚಾರಕರು, ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರಕ್ಕೆ ಬಾಜನರಾಗಿರುವುದು ಹರ್ಷದ ಸಂಗತಿಯಾಗಿದೆ. ಇಡೀ ದೇಶದಲ್ಲೇ 2ನೇ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ಕನ್ನಡ.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದೆ. ಸಕಾಲದಲ್ಲಿ ಮಳೆಯಾಗಿರುವುದರಿಂದ ಜಿಲ್ಲೆಯ ಎಲ್ಲಾ ಕೆರೆ-ಕಟ್ಟೆ ಕಾಲುವೆ, ಜಿಲಾಶಯಗಳಲ್ಲಿ ನೀರು ತುಂಬಿದೆ. ಕೃಷಿ ಚಟುವಟಿಕೆಗಳುನಿರಂತರವಾಗಿದ್ದು, ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ. ಇದರಿಂದಾಗಿ ರೈತರ ಮುಖದಲ್ಲಿ ಮಂದಹಾಸ ಕಾಣಬಹುದಾಗಿದೆ.
ವಿಶೇಷವಾಗಿ ಸಂಪರ್ಕ, ಶಿಕ್ಷಣ, ಮಾರುಕಟ್ಟೆ, ಪ್ರವಾಸೋದ್ಯಮ, ಕೈಗಾರಿಕೆ ಮತ್ತಿತರ ಕ್ಷೇತ್ರಗಳನ್ನು ಒಳಗೊಂಡು ಜಿಲ್ಲೆಯನ್ನು ಎಲ್ಲಾ ಆಯಾಮಗಳಲ್ಲೂ, ಕ್ಷೇತ್ರಗಳಲ್ಲೂ ಪ್ರಾತಿನಿಧ್ಯ ದೊರೆಯುವಂತೆ ಸರ್ವಾಂಗೀಣ ವಿಕಾಸಗೊಳಿಸುವಲ್ಲಿ ಸರ್ಕಾರ ಕಾರ್ಯನಿರತವಾಗಿದೆ.
ಪ್ರಸ್ತುತ ಸಂದರ್ಭದಲ್ಲಿ ನಮ್ಮ ರಾಜ್ಯ ಅಭಿವೃದ್ಧಿಯ ಹೊಸ ಮನ್ವಂತರಕ್ಕೆ ತೆರೆದುಕೊಳ್ಳುತ್ತಿದೆ. ಸುಶಿಕ್ಷಿತ, ಸುಸಂಸ್ಕೃತ ಸಮಾಜವನ್ನು ಕಟ್ಟಿಬೆಳೆಸುವ ಜಬಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾಡಿನ ಹಿರಿಯ ಚೇತನಗಳಾಗಿದ್ದ ನಮ್ಮ ಜಿಲ್ಲೆಯ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಮತ್ತು ಹೆಮ್ಮೆಯ ಕವಿ ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕ ರತ್ನ ಪುರಸ್ಕಾರ ಸಂದಿರುವುದು ನಮ್ಮೆಲ್ಲರಿಗೂ ಸಂತಸದ ಸಂಗತಿಯಾಗಿದೆ. ಅಂತೆಯೇ ಪ್ರಸಕ್ತ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ವಿಶೇಷವಾಗಿ ಕರಕುಶಲ ಕ್ಷೇತ್ರದಲ್ಲಿ ಹಸೆಚಿತ್ತಾರ ಖ್ಯಾತಿಯ ಸಾಗರ ತಾಲೂಕು ಸಿರಿವಂತೆಯ ಚಂದ್ರಶೇಖರ ಸಿರಿವಂತೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ವೈದ್ಯಕೀಯ ಕ್ಷೇತ್ರದಲ್ಲಿ ತೀರ್ಥಹಳ್ಳಿ ತಾಲೂಕು ಹೊಸಕೊಪ್ಪದ ಡಾ.ಎಚ್.ಎಸ್.ಕೃಷ್ಣಪ್ಪ ಹಾಗೂ ಸಾಹಸ ಕ್ರೀಡೆ ವಿಭಾಗದಲ್ಲಿ ಸಾಗರ ತಾಲೂಕಿನ ಹೊನ್ನೆಮರಡು ನೊಮಿಟೋ ಕಾಮದಾರ್ ಅವರಿಗೆ ಸುವರ್ಣ ಮಹೋತ್ಸವ(ಕರ್ನಾಟಕ ಸಂಭ್ರಮ-50)ಪ್ರಶಸ್ತಿ ಸಂದಿರುವುದು ಹರ್ಷದ ಸಂಗತಿಯಾಗಿದೆ.
ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕುವೆಂಪುರವರ ಈ ಸಾಲುಗಳು ಅರ್ಧಪೂರ್ಣವೆನಿಸುತ್ತವೆ. ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ, ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ.. ಈ ಉದಾತ್ತ ಭಾವವನ್ನು ಎಂದಿಗೂ ಜೀವಂತವಾಗಿರುವ ಪ್ರತಿಜ್ಞೆ ಕೈಗೊಳ್ಳಬೇಕಾಗಿದೆ. ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ನಮ್ಮನಾಡು ಇಂದು ಮುಂದು ಎಂದೆಂದೂ ಎಲ್ಲಾ ಜಾತಿ-ಧರ್ಮಗಳ ಜನರು ಸಾಮರಸ್ಯದಿಂದ ಬದುಕುವ ಒಂದು ಸುಂದರ ತೋಟವಾಗಿಯೇ ಉಳಿಯಬೇಕು ಎಂದರು.
ಜಿಲ್ಲಾಧಿಕಾರಿ ಹೇಮಂತ್ ಎನ್, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಪಥಸಂಚನ, ಭುವನೇಶ್ವರಿ , ಪ್ರವಾಸೋದ್ಯಮ ಇಲಾಖೆಯಿಂದ ಚಂದ್ರಗುತ್ತಿ ರೇಣುಕಾದೇವಿಯ ಸ್ತಬ್ದಚಿತ್ರ, ಕೆಎಸ್ ಆರ್ಟಿಸಿಯಿಙದ ಪ್ರವಾಸಿ ತಾಣಗಳ ಸ್ತಬ್ದಚಿತ್ರ, ಆರೋಗ್ಯ ಇಲಾಖೆಯಿಂದ ವಿವಿಧ ಯೋಜನೆಗಳ ಮಾಹಿತಿಯುಳ್ಳ, ಅಲ್ಪಸಂಖ್ಯಾತ ಇಲಾಖೆ ಯೋಜನೆಗಳ ಅರಿವು ಮೂಡಿಸುವ, ಕೃಷಿ ಇಲಾಖೆಯಿಂದ ವೈಜ್ಞಾನಿಕ ಮಾಹಿತಿ ನೀಡುವ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಸಖಿ ಒನ್ ಸ್ಟಾಪ್ ಸೆಂಟರ್, ಸಮಾಜ ಕಲ್ಯಾಣ ಇಲಾಖೆ, ಪಾಲಿಕೆ, ಪೊಲೀಸ್ ಇಲಾಖೆ, ತೋಟಗಾರಿಕೆ ಇಲಾಖೆಯಿಂದ ವಿಶೇಷ ಮಾಹಿತಿಯುಳ್ಳ ಸ್ತಬ್ದಚಿತ್ರಗಳನ್ನು ಪ್ರದರ್ಶಿಸಲಾಯಿತು. ಡೊಳ್ಳು ಕುಣಿತ, ವೀರಗಾಸೆ ಹಾಗೂ ೩ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಕುರಿತು ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು
ಶಾಸಕರಾದ ಎಸ್. ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಎಸಿ ಸತ್ಯನಾರಾಯಣ, ತಹಶೀಲ್ದಾರ್ ಗಿರೀಶ್, ಅಧಿಕಾರಿಗಳು, ಕನ್ನಡ ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.