ನಿವೃತ್ತಿ ಘೋಷಿಸಿ ಬೇರೊಂದು ಆಟವಾಡುತ್ತಿದ್ದಾನಾ ಓಸಿ ಮಾಫಿಯಾ ಡಾನ್ ಸಂದೀಪ?**ಸಂದೀಪನ ನಂತರ ಅಕಾರಿ ಪ್ರಕಾಶ್, ಗೋಪಿ ಫ್ಯಾಮಿಲಿಯ ಕುಡಿ, ಶನ್ನು, ಸುಧಾಕರ್ ಕ್ಯೂನಲ್ಲಿ!**ಎಸ್ ಪಿ ವರ್ಗಾವಣೆ ಆಗ್ತಾರಂತ ಕಾಯುತ್ತಿದ್ದಾರೆ ಭವಿಷ್ಯದ ಓಸಿ ಡಾನ್ ಗಳು!**ಓಸಿ ಏಜೆಂಟರನ್ನೆಲ್ಲ ಸದೆ ಬಡಿಯುತ್ತಿದೆ ಪೊಲೀಸ್ ಇಲಾಖೆ…*

*ನಿವೃತ್ತಿ ಘೋಷಿಸಿ ಬೇರೊಂದು ಆಟವಾಡುತ್ತಿದ್ದಾನಾ ಓಸಿ ಮಾಫಿಯಾ ಡಾನ್ ಸಂದೀಪ?*

*ಸಂದೀಪನ ನಂತರ ಅಕಾರಿ ಪ್ರಕಾಶ್, ಗೋಪಿ ಫ್ಯಾಮಿಲಿಯ ಕುಡಿ, ಶನ್ನು, ಸುಧಾಕರ್ ಕ್ಯೂನಲ್ಲಿ!*

*ಎಸ್ ಪಿ ವರ್ಗಾವಣೆ ಆಗ್ತಾರಂತ ಕಾಯುತ್ತಿದ್ದಾರೆ ಭವಿಷ್ಯದ ಓಸಿ ಡಾನ್ ಗಳು!*

*ಓಸಿ ಏಜೆಂಟರನ್ನೆಲ್ಲ ಸದೆ ಬಡಿಯುತ್ತಿದೆ ಪೊಲೀಸ್ ಇಲಾಖೆ…*

ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ಓ ಸಿ ಆಟದ ಮೂರ್ನಾಲ್ಕು ಜಿಲ್ಲೆಗಳ ಓಸಿ ಬಿಡ್ಡರ್, ಓಸಿ ಮಾಫಿಯಾದ ಡಾನ್ ಸಂದೀಪ ದೀಪಾವಳಿಯ ನಂತರ ಓಸಿ ಜಗತ್ತಿಗೆ ಗುಡ್ ಬೈ ಹೇಳಿದ್ದಾನೆ. ಇವನ ಜಾಗಕ್ಕೆ ಮುಂದ್ಯಾರು? ಒಳಗೊಳಗೇ ಮಸಲತ್ತುಗಳು, ಯೋಜನೆಗಳು, ಉಪಾಯಗಳು ನಡೆಯುತ್ತಿವೆ.

ಓಸಿ ಮಟ್ಕಾ ಜೂಜಾಟ ಪ್ರತಿನಿತ್ಯ ಲಕ್ಷ ಲಕ್ಷಗಳಲ್ಲಿ ನಡೆಯುತ್ತದೆ. 1 ರೂಪಾಯಿಗೆ 80₹- 95₹ ಗಳವರೆಗೂ ಗೆಲ್ಲುವ ಆಸೆ ತೋರಿಸುವ ಈ ಆಟ ಬಹಳಷ್ಟು ಹೆಸರುಗಳಲ್ಲಿ ನಡೆಯುತ್ತದೆ.

ಶ್ರೀದೇವಿ, ಸುಪ್ರೀಂ, ಟೈಂ ಬಜಾರ್, ಕಲ್ಯಾಣ್, ಮೈನ್ ಬಜಾರ್… ಅಂತೆಲ್ಲ ಬೇರೆ ಬೇರೆ ಹೆಸರುಗಳಲ್ಲಿ, ಬೇರೆ ಬೇರೆ ಸಮಯಗಳಲ್ಲಿ ಈ ಓಸಿ ಜೂಜಾಟ ನಡೆಸುತ್ತಿದ್ದ ಸಂದೀಪ ವ್ಯಾಪಿಸಿದ ರೀತಿಗೆ ಅವನಿಗೆ ಓಸಿ ಮಾಫಿಯಾದ ಡಾನ್ ಎಂದೇ ಗುರುತಿಸಿತ್ತು ಪೊಲೀಸ್ ಇಲಾಖೆ ಕೂಡ.
ಈತನ ಮೇಲೆ ವಿವಿಧ ಕೋರ್ಟ್ ಗಳಲ್ಲಿ ನೂರೆಂಟು ಪ್ರಕರಣಗಳಿವೆ. ದಿನನಿತ್ಯ ಕೋರ್ಟಿಗೆ ಓಡಾಡುತ್ತಲೇ ಇರುತ್ತಾನೆ ಸಂದೀಪ.
ಈತನ ಕೈಕೆಳಗೆ ಓಸಿ ಆಟ ಕಟ್ಟಿಸಿಕೊಳ್ಳುವ, ಗೆದ್ದವರಿಗೆ ಹಣ ಕೊಡುವ ದೊಡ್ಡ ಜಾಲವೇ ಇತ್ತು. ಈಗಲೂ ಅದು ಸಕ್ರಿಯವಾಗಿದೆ; ಅಂದರೆ, ಸಂದೀಪ ಈ ಮಾಫಿಯಾಕ್ಕೆ ಗುಡ್ ಬೈ ಹೇಳಿದ ನಂತರವೂ ಈತನ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದರೆ, ಓಸಿ ಆಟ ನಿಂತಿಲ್ಲ ಎಂಬುದಕ್ಕೆ ಸಾಕ್ಷಿ.

ಓಸಿಯಲ್ಲೇ ಆಸ್ತಿ, ಅಂತಸ್ತು ಮಾಡಿಕೊಂಡ ಸಂದೀಪನಿಗೆ ನಿಜವಾಗಲೂ ಈ ಮಾಫಿಯಾ ಸಾಕಾಗಿ ಹೋಯ್ತಾ? ಅಥವಾ ಆತನ ಮತ್ತೊಂದು ಒಳ ಆಟ ಇದಾ? ಮಾನವ ರಕ್ತ ಹೀರಿ ಕುಡಿದ ಚಿರತೆ ಮತ್ತದೇ ರಕ್ತ ಹುಡುಕಿ ಕುಡಿಯುವಂತೆ ಈ ಆಟವನ್ನು ಹಚ್ಚಿಕೊಂಡಿದ್ದ ಸಂದೀಪ ಬಿಟ್ಟಿದ್ದು ನಿಜವೇ?

ಸಂದೀಪ ಇನ್ನು ಓಸಿ ಮಾಫಿಯದೊಳಗೆ ಕಾಲಿಡುವುದಿಲ್ಲ ಎಂಬುದನ್ನು ಸ್ವತಃ ಸಂದೀಪನೇ ಹೇಳಿಕೊಂಡಿರುವ ಆಡಿಯೋಗಳು ಸುತ್ತಾಡುತ್ತಿವೆ. ಹಾಗಾದರೆ, ಶಿವಮೊಗ್ಗದ ಓಸಿ ಮಾಫಿಯಾ ಇಲ್ಲಿಗೆ ನಿಂತು ಹೋಯ್ತಾ?!

ಸಂದೀಪನೇನೋ ನಿವೃತ್ತಿ ಘೋಷಿಸಿದ್ದಾನೆ. ಸಂದೀಪನ ಮುಖ ಮುಂದಿಟ್ಟುಕೊಂಡು ಓಸಿ ಮಾಫಿಯಾ ನಿಜವಾಗಲೂ ನಡೆಸುತ್ತಿದ್ದವನು ಅಕಾರಿ ಪ್ರಕಾಶ! ಈ ತೆರೆಮರೆಯಲ್ಲೇ ಉಳಿದು ಸಂದೀಪನ ಮೂಲಕ ಓಸಿ ಜಗತ್ತನ್ನು ನಡೆಸುತ್ತಿದ್ದ ಎನ್ನಲಾಗುತ್ತಿದೆ. ಓಸಿಯಿಂದ ಬಂದ ಹಣದಲ್ಲಿ ಮೂರು ಪಾಲುಗಳು ಆಗುತ್ತಿದ್ದವು- ಒಂದು ಪಾಲು ಸಂದೀಪನಿಗೆ, ಇನ್ನೊಂದು ಪಾಲು ಅಕಾರಿ ಪ್ರಕಾಶನಿಗೆ, ಮತ್ತೊಂದು ಪಾಲು ಹಳೆ ಓಸಿ ಮಾಫಿಯಾದ ದಿವಂಗತ ಡಾನ್, ಸಂದೀಪನ ಸಂಬಂಧಿ ಗೋಪಿ ಕುಟುಂಬಕ್ಕೆ ಪಾಲು ನೀಡಲಾಗುತ್ತಿತ್ತೆಂಬುದು ಓಸಿ ಜಗತ್ತಿನೊಳಗೆ ಚಾಲ್ತಿಯಲ್ಲಿರೋ ಮಾಹಿತಿ!

ಸಂದೀಪ ಮುಂದೆ ಬಂದು ನಿವೃತ್ತಿ ಘೋಷಿಸಿಕೊಂಡಂತೆ ಅಕಾರಿ ಪ್ರಕಾಶನಾಗಲೀ, ಗೋಪಿ ಕುಟುಂಬವಾಗಲೀ ನಿವೃತ್ತಿ ಘೋಷಿಸಿಕೊಂಡಿಲ್ಲ…ಸಂದೀಪನನ್ನು ಕೈ ಬಿಟ್ಟು ಈ ಇಬ್ಬರು ಪಾಲುದಾರರು ಓಸಿ ಮಾಫಿಯಾ ನಡೆಸಲು ಮುಂದಾಗಿದ್ದಾರಾ?

ಇದರ ನಡುವೆ ಹಳೇ ಓಸಿ ಡಾನ್ ಸುಧಾಕರ ಕೂಡ ಜೈಲಿನಿಂದ ಹೊರಬಂದ ನಂತರ ಓಸಿ ಜಗತ್ತಿಗೆ ಮರಳುವ ಪ್ರಯತ್ನದಲ್ಲಿದ್ದಾನೆ. ಸಂದೀಪನ ನಿವೃತ್ತಿ ಸುಧಾಕರನ ಎಂಟ್ರಿಗೆ ಕಾರಣವಾಗುತ್ತಾ?

ಜೊತೆಗೆ, ಸಂದೀಪನನ್ನು ಎದುರು ಹಾಕಿಕೊಂಡೇ ಬಂದ ಶನ್ನು ಸಂದೀಪನ ಜಾಗದಲ್ಲಿ ಪವಡಿಸಲಿದ್ದಾನಾ?

ಓಸಿ ಜಗತ್ತಲ್ಲಿ ಹೀಗೆಲ್ಲ ಚಟುವಟಿಕೆ ನಡೆಯುತ್ತಿದ್ದರೆ, ಪೊಲೀಸ್ ಇಲಾಖೆಯಲ್ಲಿ ಬೇರೆಯದೇ ಕ್ರಿಯೆಗಳು ಆರಂಭವಾಗಿವೆ. ಯಾವುದೇ ಕಾರಣಕ್ಕೂ ಓಸಿ ತಲೆ ಎತ್ತಲು ಬಿಡುವುದಿಲ್ಲವೆಂದೇ ಎಸ್ ಪಿ ಮಿಥುನ್ ಕುಮಾರ್, ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿ ಓಸಿ ಏಜೆಂಟರನ್ನೆಲ್ಲ ಸದೆಬಡಿಯುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಓಸಿ ಬರೆಯುವ ಬಹಳಷ್ಟು ಜನ ಊರು ಬಿಟ್ಟಿದ್ದಾರೆ, ಊರಲ್ಲೇ ಇದ್ರೂ ಕಣ್ಮರೆಯಾಗಿದ್ದಾರೆ, ಮೊಬೈಲ್ ಗಳೆಲ್ಲ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಳ್ಳುತ್ತಿದ್ದಾರೆ.

ಓಸಿ ಜಗತ್ತಲ್ಲಿ ಹೀಗೆಲ್ಲ ನಡೆಯುತ್ತಿರುವಾಗ, ಇನ್ನೊಂದು ತಿಂಗಳಲ್ಲಿ ಎಸ್ ಪಿ ಮಿಥುನ್ ಕುಮಾರ್ ಶಿವಮೊಗ್ಗದಿಂದ ವರ್ಗ ವಾಗುತ್ತಿದ್ದಾರೆ. ಒಂದೆರಡು ತಿಂಗಳು ಸುಮ್ಮನಿದ್ದು ಬಿಡೋಣ. ಅವರ ವರ್ಗಾವಣೆ ನಂತರ ಓಸಿ ಮಾಫಿಯಾ ಡಾನ್ ಆಗಿಬಿಡೋಣ ಅಂತ ಕೆಲವರು ತುಟಿ ಪಿಟಿಕ್ ಅನ್ನದೇ ಮೌನ ವಹಿಸಿದ್ದಾರೆ ಅಂತ ಸುದ್ದಿ ಇದೆ.