ಕೃಷಿ ಮಾಹಿತಿ ಕೇಂದ್ರ ಮತ್ತು ಬೆಳೆ ಸಂಗ್ರಹಾಲಯ ಉದ್ಘಾಟನೆ

ಕೃಷಿ ಮಾಹಿತಿ ಕೇಂದ್ರ ಮತ್ತು ಬೆಳೆ ಸಂಗ್ರಹಾಲಯ ಉದ್ಘಾಟನೆ

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಂಗವಾಗಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೃಷಿ ಮಾಹಿತಿ ಕೇಂದ್ರ, ಸಸ್ಯ ಚಿಕಿತ್ಸಾಲಯ ಮತ್ತು ಬೆಳೆ ಸಂಗ್ರಹಾಲಯ ಉದ್ಘಾಟನಾ ಸಮಾರಂಭವನ್ನು ನಡೆಸಲಾಯಿತು.

ಈ ಸಮಾರಂಭಕ್ಕೆ ಮುಖ್ಯ ಉದ್ಘಾಟಕರಾಗಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್. ಸಿ. ಜಗದೀಶ್ ಅವರು ಆಗಮಿಸಿದ್ದರು. ಹಾಗು ಮುಖ್ಯ ಅತಿಥಿಗಳಾಗಿ ನೆಲವಾಗಿಲಿನ ಡಾ. ವಿಶ್ವನಾಥ್ ರವರು ಬಂದಿದ್ದರು. ವಿವಿಯ ಕುಲಸಚಿವರು, ಶಿಕ್ಷಣ ನಿದೇ೯ಶಕರು, ನೆಲವಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಶಾಲಾ ಶಿಕ್ಷಕರು, ಊರಿನ ಮುಖಂಡರು, ಪ್ರಗತಿಪರ ರೈತರು ಸಮಾರಂಭದ ಅತಿಥಿಗಳಾಗಿದ್ದರು.

ಸಮಾರಂಭದಲ್ಲಿ ಅತಿಥಿಗಳು ಎತ್ತಿನ ಗಾಡಿಯಲ್ಲಿ, ಡೊಳ್ಳು, ಹಲವಾರು ಹಬ್ಬದ ಹೋರಿಗಳು, ಕುಂಭ ಹೊತ್ತ ಮಹಿಳೆಯರು, ಶಾಲಾ ಮಕ್ಕಳು, ಊರಿನ ಜನರೊಂದಿಗೆ ಊರಿನಲ್ಲಿ ಮೆರವಣಿಗೆ ಮಾಡಿದರು. ನಂತರ ಕೃಷಿ ವಿದ್ಯಾರ್ಥಿಗಳ ಬೆಳೆ ಸಂಗ್ರಹಾಲಯವನ್ನು ಜಗದೀಶ್ ರವರು ಉದ್ಘಾಟಿಸಿದರು. ಬೆಳೆ ಸಂಗ್ರಹಾಲಯದಲ್ಲಿ ಸಮಗ್ರ ಕೃಷಿ ಪದ್ಧತಿ ಪರಿಕಲ್ಪನೆಯಲ್ಲಿ ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ಔಷಧೀಯ ಗಿಡಗಳು, ಸಿರಿಧಾನ್ಯಗಳು, ಮೇವಿನ ಬೆಳೆಗಳು, ತರಕಾರಿಗಳನ್ನು ಬೆಳೆಯಲಾಗಿತ್ತು. ಕೃಷಿ ಹೊಂಡ, ಎರೆಹುಳು ಗೊಬ್ಬರ, ಅಡಿಕೆ ಸಿಪ್ಪೆ ಗೊಬ್ಬರ, ಅಜೋಲ್ಲ, ಹೈನುಗಾರಿಕೆ, ಕುರಿ ಮತ್ತು ಕೋಳಿ ಸಾಕಾಣಿಕೆ, ಅಡಿಕೆಯಲ್ಲಿ ಅಂತರ ಬೆಳೆ ಮಾದರಿಗಳನ್ನು ಮತ್ತು ವಿವಿಧ ಯಂತ್ರೋಪಕರಣಗಳನ್ನು ಪ್ರದರ್ಶಿಸಲಾಗಿತ್ತು.

ಊರಿನ ಸ. ಹಿ. ಪ್ರಾ. ಶಾಲೆಯಲ್ಲಿ ಕೃಷಿ ಮಾಹಿತಿ ಕೇಂದ್ರವನ್ನು ಜಗದೀಶ್ ರವರು ಉದ್ಘಾಟಿಸಿದರು. ಮಾಹಿತಿ ಕೇಂದ್ರದಲ್ಲಿ ಊರಿನ ಬಗ್ಗೆ ಮಾಹಿತಿ, ಕೃಷಿ ವಿಜ್ಞಾನ, ತೋಟಗಾರಿಕೆ, ಮಣ್ಣು ವಿಜ್ಞಾನ, ಕೃಷಿ ಅರ್ಥಶಾಸ್ತ್ರ, ಕೃಷಿ ಇಂಜಿನಿಯರಿಂಗ್, ಬೀಜ ವಿಜ್ಞಾನ, ಪಶು ವಿಜ್ಞಾನ, ಆಹಾರ ವಿಜ್ಞಾನ, ಸಸ್ಯ ರೋಗಶಾಸ್ತ್ರ, ಕೀಟ ಶಾಸ್ತ್ರ, ಕೃಷಿ ವಿಸ್ತರಣೆ ಮುಂತಾದ ವಿಷಯಗಳ ಕುರಿತು ಚಾಟ್೯ ಮತ್ತು ಮಾದರಿಗಳನ್ನು ಪ್ರದಶಿ೯ಸಲಾಗಿತ್ತು. ಸಸ್ಯ ಆರೋಗ್ಯ ಚಿಕಿತ್ಸಾಲಯದಲ್ಲಿ ಊರಿನ ಪ್ರಮುಖ ಬೆಳೆಗಳ ರೋಗಗಳು, ಕೀಟಗಳು ಮತ್ತು ಅವುಗಳ ನಿವ೯ಹಣಾ ಕ್ರಮಗಳ ಕುರಿತು ಚಾಟ್೯, ಚಿತ್ರಗಳು ಮತ್ತು ಮಾದರಿಗಳನ್ನು ಪ್ರದಶಿ೯ಸಲಾಗಿತ್ತು.

ನಂತರ ಶಾಲಾ ಆವರಣದಲ್ಲಿ ಕಾಯ೯ಕ್ರಮವನ್ನು ನಡೆಸಲಾಯಿತು. ಕಾಯ೯ಕ್ರಮದಲ್ಲಿ ಮಾತನಾಡಿದ ಅತಿಥಿಗಳು ಕೃಷಿ ವಿದ್ಯಾರ್ಥಿಗಳು ಊರಿನಲ್ಲಿ ಮಾಡಿರುವ ಕೆಲಸಗಳನ್ನು ಪ್ರಶಂಶಿಸಿದರು. ಸುಮಾರು 800-900 ಜನರು ಪಾಲ್ಗೊಂಡು ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಯಿತು.