ಅಕ್ರಮ ಮರಳಿನ ದಂಧೆಕೋರರೂ ಗಣಿ ಇಲಾಖೆಯ ಭೂವಿಜ್ಞಾನಿ ಅಧಿಕಾರಿ ಪ್ರಿಯಾ ದೊಡ್ಡ ಗೌಡರೂ…**ಏನಿದು ವಿಶೇಷ ಕಥೆ?*

*ಅಕ್ರಮ ಮರಳಿನ ದಂಧೆಕೋರರೂ ಗಣಿ ಇಲಾಖೆಯ ಭೂವಿಜ್ಞಾನಿ ಅಧಿಕಾರಿ ಪ್ರಿಯಾ ದೊಡ್ಡ ಗೌಡರೂ…*

*ಏನಿದು ವಿಶೇಷ ಕಥೆ?*

ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಿವಿಯನ್ನು ಶಾಶ್ವತವಾಗಿ ಮುಚ್ಚಿಕೊಂಡಂತಿದ್ದರೂ ಆಗಾಗ, ಕಿವಿ ಬಾಯಿ ಕಣ್ಣು ತೆರೆದು ಜೀವಂತ ಇರುವ ಕುರುಹು ಕೊಡುತ್ತಿರುತ್ತದೆ. ಇಂಥದ್ದೇ ಒಂದು ಪ್ರಯತ್ನ ಫೆ.4 ರ ಮಧ್ಯರಾತ್ರಿ ಹಾಡೋನಹಳ್ಳಿ ಬಳಿ ನಡೆದಿದ್ದು!

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮುಂದೆಯೇ, ಅದರ ಮೂಗಿನ ಕೆಳಗೇ ನೂರಾರು ಅಕ್ರಮ ಮಣ್ಣು, ಮರಳು ಹೊತ್ತ ಲಾರಿಗಳು ಅವ್ಯಾಹತವಾಗಿ ಸಾಗುತ್ತಿದ್ದರೂ ಇಲಾಖೆಯ ವಿಜ್ಞಾನಿ ಅಧಿಕಾರಿ ಪ್ರಿಯಾ ದೊಡ್ಡಗೌಡರ್ ಕಣ್ಣು ಮುಚ್ಚಿ ಕುಳಿತು ಬಿಡುತ್ತಾರೆ. ಆ ಅಕ್ರಮ ಲಾರಿ ಲೋಡುಗಳ ಸದ್ದು ಕೇಳದಿರಲೆಂದು ಕಿವಿ ಮುಚ್ಚಿಕೊಳ್ಳುತ್ತಾರೆ. ಈ ಅಕ್ರಮ ಕುರಿತು ಫೋನ್ ಮಾಡಿದರೆ ಪ್ರಿಯಾರವರಿಗಂತೂ ಅಂಥ ಫೋನ್ ಗಳಿಂದಲೇ ಅಲರ್ಜಿ!

ಪರಿಸ್ಥಿತಿ ಹೀಗಿರುವಾಗ, ವಿಜ್ಞಾನಿ ಅಧಿಕಾರಿ ಪ್ರಿಯಾರವರಿಗೆ ಹಾಡೋನಹಳ್ಳಿಯ ಅಕ್ರಮ ಮರಳು ದರೋಡೆಕೋರರ ಮೇಲೆ ವಿಶೇಷ ಕಾಳಜಿ. ಹಗಲು ರಾತ್ರಿ ಎನ್ನದೇ ತುಂಗೆಯನ್ನು ನಿರಂತರವಾಗಿ ಬಗೆಯುತ್ತಿದ್ದರೂ ತಲೆಕೆಡಿಸಿಕೊಳ್ಳದಿದ್ದ ಪ್ರಿಯಾರವರೀಗ ಅಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ಹದ್ದಿನ ಕಣ್ಣಿದ್ದರೂ ಈ ಹಾಡೋನಹಳ್ಳಿ ಮತ್ತು ಸುತ್ತಮುತ್ತ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿರುವುದೇಕೆ? ಇದಕ್ಕೆ ಯಾರದ್ದು ಸಾಥ್?

ಪ್ರಿಯಾರವರೇನೋ ನೆಪದ ದಾಳಿ ಮಾಡುತ್ತಿದ್ದಾರೆಂಬ ಆರೋಪಗಳು, ಅನುಮಾನಗಳು ಇವೆ. ಮಾಹಿತಿ ನೀಡಿದರೂ ಸ್ಥಳಕ್ಕೆ ಬಂದು ದಾಳಿ ಮಾಡದ, ಕನಿಷ್ಠ ಪಕ್ಷ ಫೋನನ್ನೇ ರಿಸೀವ್ ಮಾಡದ ಪ್ರಿಯಾರವರು ಹಾಡೋನಹಳ್ಳಿ ಮೇಲೆ ಮಾತ್ರ ದಾಳಿ ಮಾಡಿ ಸುದ್ದಿಯಾಗಲು ಪ್ರಯತ್ನಿಸುತ್ತಿರುವುದರ ಹಿಂದೆ ಅದೇನು ರಹಸ್ಯ ಅಡಗಿದೆ? ಅದನ್ನು ಅವರೇ ಬಹಿರಂಗ ಪಡಿಸಬೇಕು!

ಮಧ್ಯರಾತ್ರಿ ಹಾಡೋನಹಳ್ಳಿ ಅಕ್ರಮ ಮರಳು ಕೋರೆ ಮೇಲೆ ದಾಳಿ ಮಾಡಿದ ಪ್ರಿಯಾ ಮತ್ತು ತಂಡವನ್ನು ಅಭಿನಂದಿಸೋಣ. ಆದರೆ, ಒಂದು ಜೆಸಿಬಿಯನ್ನಷ್ಟೇ ವಶಕ್ಕೆ ಪಡೆದು ಉಳಿದ ಐದು ಜೆಸಿಬಿ ಬಿಟ್ಟು ಕಳಿಸಿದ್ದೇಕೆ? ಅಥವಾ ಪ್ರಿಯಾರವರ ದಾಳಿಯ ಹೆಜ್ಜೆ ಗುರುತು ಮೊದಲೇ ಸಿಕ್ಕಿತ್ತಾ ಮರಳು ದರೋಡೆಕೋರರಿಗೆ? ಸಿಕ್ಕಿರೋ ಜೆಸಿಬಿ ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿದೆ. ಮುಂದೇನಾಗುತ್ತೆ? ಎಲ್ಲರಿಗೂ ಗೊತ್ತಿರೋ ವಿಚಾರ…

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಅಧಿಕಾರಿ ಪ್ರಿಯಾ ದೊಡ್ಡಗೌಡರ್ ಒಳ್ಳೆಯ ಅಧಿಕಾರಿ ಎಂಬ ಹೆಸರು ಪಡೆದುಕೊಳ್ಳೋ ಕಾಲ ಬಹುಬೇಗ ಬರಲಿ…