ಸಾರಂಗರಾಜ್ ರವರ ಮೂರು ಮುಖ್ಯ ಕವಿತೆಗಳು

ಹುಚ್ಚು ಪ್ರೀತಿ
***********
ಮೊದಲು
ಅರಿಯದೆ
ಮೆಚ್ಚಿಕೊಂಡೆ
ಹಚ್ಚಿಕೊಳ್ಳಲಿಲ್ಲ,?

ಈಗ ಅರಿತು
ಮೆಚ್ಚಿಕೊಂಡೆ
ಬಿಟ್ಟೂಬಿಡದೆ
ಹಚ್ಚಿಕೊಂಡೆ..!

ಸಿಗುವುದು
ತಡವಾಯಿತು
ಎಂದು ತಲೆ
ಚಚ್ಚಿಕೊಂಡೆ..,

ಸ್ನೇಹ ಪ್ರೀತಿಯ
ಉದ್ದಗಲಕೂ
ಈಜಾಡಿ ಹುಚ್ಚು
ಹೆಚ್ಚಿಸಿಕೊಂಡೆ..!


ಸಿಹಿಕಹಿ ಪಯಣ
****************
ಮೋಡದ
ಗೂಡಲ್ಲಿ
ಹದವಾಗುತ,
ಮೆಲ್ಲನೆ ಗೂಡ
ಕದವ ತೆರೆದು,
ರಪ್ಪನೆ ನೆಲಕ್ಕೆ
ಅಪ್ಪಳಿಸಿ ತಾನೇ
ಖುಷಿ ಫಡುವ
ಹನಿಗಳ ಬಾಲೆ
ನನ್ನ ಗೆಳತಿ..,

ಕಾಡು ಮೇಡು
ಹಳ್ಳಕೊಳ್ಳ ಅಲೆದು,
ಝರಿತೊರೆ ನದಿಯ
ಹೆಸರು ತೊಟ್ಟು,
ಹಸಿದ ಹೊಟ್ಟೆಗೆ
ಅನ್ನವನಿಟ್ಟು,
ಓಡಿ ಸಾಗರನ
ಬಾಚಿ ತಬ್ಬುವ
ಬಿಂಕದ ಚೆಲುವೆ
ಒಯ್ಯಾರದ ಒಡವೆ..

ಸಖಿಯ ಪಯಣ
ಸಿಹಿ ಮೇಘದಿಂದ
ವಿಶಾಲ ಆಳದ
ಸಿಹಿಯುಪ್ಪಿನೆಡೆಗೆ,
ಮತ್ತೆ ಸಿಹಿ ಮೋಡಕೆ,
ಸಾಗರ ನಡಿಗೆ..?
ಉಗಮ ಉಪ್ಪು,
ಸವಿ ಬೆರೆತರೂ
ಸಿಹಿಯೂ ಉಪ್ಪುಪ್ಪು
ಕೊನೆಯೂ ಉಪ್ಪು..!

೩.
ಸಾಗರನ ತೀರದ ಬವಣೆ
*********************
ಸಖೀ, ಆಗಸದಿಂದ ಇಳೆಗಿಳಿದು
ತರುಲತೆ, ಗೊನೆ-ತೆನೆಗಳಿಗೆಲ್ಲ
ತಂಪೆರೆದು, ಜೀವರಾಶಿಗಳಿಗೆ
ಬದುಕನೀವ ಸಿಹಿ ಜಲಧಾರೆ ನೀ.,

ಬಂಡೆಗಳ ನಡುವಲ್ಲೂ ನರ್ತಿಸಿ
ಕಾಡು, ಮೇಡುಗಳೂ ಅಲೆದು
ಹಾದಿ ಕಾದವರಿಗೆ ಪ್ರೀತಿ ಹರಿಸಿ
ಸಾಗರನ ತೆಕ್ಕೆ ಸೇರುವ ಜೀವನದಿ…

ನಾನೋ, ಇರುವಲ್ಲೇ ಅಬ್ಬರಿಸಿ
ಸೋಲುಣುವ ಸಾಗರರಾಜನು,
ಪ್ರೀತಿಯ ಅರಸಿ ದಡಕ್ಕೆ ಅಪ್ಪಳಿಸಿ,
ಸುಂಕವಿಲ್ಲದೆ ಮರಳುವ ನತಭಾಗ್ಯ,

ದಿಕ್ಕು ದಿಕ್ಕಿನಿಂದ ಹರಿದು ಬರುವ
ಜೇನಿನ ಹೊಳೆಗಳನ್ನು ಹೀರಲು
ಹವಣಿಸಿ, ಆಳದಿಂದ ತೇಲಿಬರುವ
ಲೆಕ್ಕಕ್ಕೇ ಇಲ್ಲದ ಉಪ್ಪು ನೀರ ವೀರ ?

ನದಿಗಳಿಗೆ ತನ್ನತನ ಕಳಕೊಂಡೂ
ಸಾಗರನ ಸೇರಿಕೊಂಡ ಸಾರ್ಥಕತೆ,
ಆದರೆ, ಪ್ರೀತಿ ಹಂಬಲಿ ಸಾಗರನಿಗೆ ?
ಸಿಹಿಯಾಗುವ ಭಾಗ್ಯವೇ ಇಲ್ಲವಲ್ಲ !

– *ಸಾರಂಗರಾಜ್*