ಕುವೆಂಪು ವಿವಿ: ಜ್ಞಾನ ಸಂವಾದ ಕುರಿತು ಮೂರು ದಿನಗಳ ಸಮಾವೇಶ ಪ್ರಾರಂಭ* *ಭಾರತೀಯ ಜ್ಞಾನಪರಂಪರೆ ಬಹುಸಂಸ್ಕೃತಿಗಳ ವಿರಾಟ್ ಸಮಾಗಮ: ಜಿ. ಎನ್. ದೇವಿ*
*ಕುವೆಂಪು ವಿವಿ: ಜ್ಞಾನ ಸಂವಾದ ಕುರಿತು ಮೂರು ದಿನಗಳ ಸಮಾವೇಶ ಪ್ರಾರಂಭ*
*ಭಾರತೀಯ ಜ್ಞಾನಪರಂಪರೆ ಬಹುಸಂಸ್ಕೃತಿಗಳ ವಿರಾಟ್ ಸಮಾಗಮ: ಜಿ. ಎನ್. ದೇವಿ*
ಶಂಕರಘಟ್ಟ, ಫೆ. 20: ಭಾರತೀಯ ಜ್ಞಾನ ಪರಂಪರೆ ಏಕಮುಖಿಯಲ್ಲ, ಇದು ಬಹುಸಂಸ್ಕೃತಿಗಳ ಸಮಗ್ರ ಸ್ವರೂಪ. ದೇಶದ ವಿವಿಧ ಸಂಸ್ಕೃತಿಗಳ ಅನುಸಂಧಾನ ಸಮಾಜದಲ್ಲಿ ಜ್ಞಾನದ ಸಂಕೀರ್ಣ ಪರಂಪರೆಯನ್ನು ಸೃಷ್ಟಿಸಿದ್ದು, ಇದನ್ನು ಸೀಮಿತ ಅರ್ಥದಲ್ಲಿ ಪ್ರತಿಪಾದಿಸುವುದು ಸರಿಯಲ್ಲ ಎಂದು ಖ್ಯಾತ ಸಂಸ್ಕೃತಿ ಚಿಂತಕ ಜಿ. ಎನ್. ದೇವಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ಗುರುವಾರ ಪ್ರಾರಂಭವಾದ ಮೂರು ದಿನಗಳ ಜ್ಞಾನ ಸಂವಾದ ಸಮಾವೇಶದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಮೌಖಿಕ ಪರಂಪರೆಯ ಬಹುದೊಡ್ಡ ಇತಿಹಾಸವಿದೆ. ದೇಶದಲ್ಲಿರುವ ಸುಮಾರು ಐದು ಸಾವಿರ ಸಮುದಾಯಗಳಿಗೂ ತಮ್ಮದೇ ಆದ ಸ್ಮೃತಿ ಸಂಪ್ರದಾಯಗಳಿವೆ. ಇದು ಭಾರತೀಯ ಪರಂಪರೆಗೆ ವೈವಿಧ್ಯತೆಯ ಸ್ವರೂಪ ನೀಡಿದೆ. ಇವುಗಳನ್ನು ಮುಖ್ಯವಾಹಿನಿಯ ಪ್ರಭಾವಿ ಸಂಸ್ಕೃತಿಯ ಹೆಸರಿನಲ್ಲಿ ನಿರ್ಲಕ್ಷಿಸುವುದು ಸರಿಯಲ್ಲ.
ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ಅವನತಿ ಹೊಂದುತ್ತಿದೆ. ಸಮುದಾಯಗಳು, ಜಾನಪದ ಪರಂಪರೆಗಳು ನಾಶವಾಗುತ್ತಿದೆ. ಅತಿಯಾದ ವೈಯುಕ್ತಿಕ ಹಿತಾಸಕ್ತಿ ಮತ್ತು ಕೊಳ್ಳುಬಾಕ ಸಂಸ್ಕೃತಿ, ಕೌಟುಂಬಿಕ ವ್ಯವಸ್ಥೆ ಮತ್ತು ಸಮುದಾಯಗಳಿಗೆ ಬಹುದೊಡ್ಡ ಹೊಡೆತ ನೀಡಿದೆ. ಬುಡಕಟ್ಟು ಸಮುದಾಯಗಳು, ಅಲೆಮಾರಿಗಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೂಲೆಗುಂಪಾಗಿವೆ.
ಈ ಹಿನ್ನೆಲೆಯಲ್ಲಿ ಜ್ಞಾನಶಾಖೆಯನ್ನು ಸಮಗ್ರವಾಗಿ ಪರಿಭಾವಿಸಬೇಕಿದೆ. ಜ್ಞಾನಕ್ಕೆ ಮಡಿವಂತಿಕೆಯಾಗಲೀ, ದೇಶಭಾಷೆಗಳ ಮಿತಿಗಳಾಗಲಿ ಇರಬಾರದು. ನಮ್ಮ ಜ್ಞಾನ ಮತ್ತು ಅವರ ಜ್ಞಾನ ಎಂಬುದಿರುವುದಿಲ್ಲ. ಪೂರ್ವ ಪಶ್ಚಿಮಗಳ ಮೇಲಾಟವಿರುವುದಿಲ್ಲ. ಭಾರತೀಯ ಜ್ಞಾನಪರಂಪರೆಗೆ ಐರೋಪ್ಯ ಸಂಸ್ಕೃತಿಯ ಕೊಡುಗೆಯಿದ್ದರೆ, ಐರೋಪ್ಯ ಪರಂಪರೆಯಲ್ಲಿ ಪೂರ್ವದ ಸಂಸ್ಕೃತಿಗಳು ಅಂತರ್ಗತಗೊಂಡಿರುತ್ತವೆ. ಹೀಗಾಗಿ, ಜ್ಞಾನವನ್ನು ವಿಶ್ವಸ್ವರೂಪಿಯಾಗಿ ನೋಡಬೇಕಿದೆ ಎಂದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಸಮಕಾಲೀನ ಜ್ಞಾನ ಶಾಖೆಗಳು ಸಿದ್ಧಾಂತದ ಚೌಕಟ್ಟಿಗೆ ಸೀಮಿತವಾಗಿ ನಿಜವಾದ ಅರ್ಥದಲ್ಲಿ ಜ್ಞಾನಸಂವಾದ ಸಾಧ್ಯವಾಗುತ್ತಿಲ್ಲ. ಜ್ಞಾನ, ಮತ್ತು ತತ್ವಜ್ಞಾನ ಎಡ, ಬಲ, ಪ್ರತಿ ಸಂಸ್ಕೃತಿ ಮತ್ತು ಉಪಸಂಸ್ಕೃತಿಗಳ ಮಹಾಸಂಗಮ. ಈ ಸಮಾವೇಶ ಇಂತಹ ಮುಕ್ತ ಸಂವಾದಕ್ಕೆ ವೇದಿಕೆ ಒದಗಿಸಿದೆ ಎಂದರು.
ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಪ್ರೊ. ಎಸ್. ಎಂ. ಗೋಪಿನಾಥ್, ಹಣಕಾಸು ಅಧಿಕಾರಿ ಎಚ್. ಎನ್. ರಮೇಶ್, ಡಿಕೆಎಸ್ ಜರ್ನಲ್ ನ ಸುನಿಲ್ ಸಹಸ್ರಬುದ್ಧೆ, ಪ್ರೊ. ಕೃಷ್ಣನ್, ದೇಶದ ವಿವಿಧ ಭಾಗಗಳಿಂದ ಬಂದ ಅಧ್ಯಾಕರು, ಸಂಶೋಧಕರು, ವಿವಿ ಅಧ್ಯಾಪಕರು ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ಕೆ. ವಿ. ಅಕ್ಷರ, ಎಂ. ಎಸ್. ಆಶಾದೇವಿ, ರಾಮ್ ಸುಬ್ರಮಣಿಯಂ, ಕೃಷ್ಣಮೂರ್ತಿ ಹನೂರು, ರಹಮತ್ ತರೀಕೆರೆ, ಕೃಷ್ಣಪ್ರಸಾದ್, ಅವಿನಾಶ್ ಝಾ, ಮತ್ತಿತರರು ವಿಚಾರ ಮಂಡಿಸಲಿದ್ದಾರೆ.