ಪೊಲೀಸ್‌ ಕವಾಯತು ಮೈದಾನದಲ್ಲಿ ಪೊಲೀಸ್‌ ಧ್ವಜ ದಿನಾಚರಣೆ* *ಹಿರಿಯರ ಮಾರ್ಗದರ್ಶನದಲ್ಲಿ ಮಾಡಿದ ಪೊಲೀಸ್‌ ಸೇವೆ ತೃಪ್ತಿಕರ : ಪುಟ್ಟುಸಿಂಗ್*

*ಪೊಲೀಸ್‌ ಕವಾಯತು ಮೈದಾನದಲ್ಲಿ ಪೊಲೀಸ್‌ ಧ್ವಜ ದಿನಾಚರಣೆ*

*ಹಿರಿಯರ ಮಾರ್ಗದರ್ಶನದಲ್ಲಿ ಮಾಡಿದ ಪೊಲೀಸ್‌ ಸೇವೆ ತೃಪ್ತಿಕರ : ಪುಟ್ಟುಸಿಂಗ್*

ಶಿವಮೊಗ್ಗ : ಮೂರ್ನಾಲ್ಕು ದಶಕಗಳ ಸುದೀರ್ಘ ಅವಧಿಯಲ್ಲಿ ಹಿರಿಯ ಅಧಿಕಾರಿಗಳ ಸಕಾಲಿಕ ಮಾರ್ಗದರ್ಶನ ಮತ್ತು ಸೂಕ್ತ ಸಲಹೆಯಿಂದಾಗಿ ಸಲ್ಲಿಸಿದ ಪೊಲೀಸ್‌ ಸೇವೆ ತೃಪ್ತಿಕರವೆನಿಸಿದೆ ಎಂದು ನಿವೃತ್ತ ಎ.ಎಸ್ಐ ವಿ.ಎನ್.ಪುಟ್ಟುಸಿಂಗ್‌ ಅವರು ಹೇಳಿದರು.

ಅವರು ಇಂದು ಜಿಲ್ಲಾ ಪೊಲೀಸ್‌ ಘಟಕವು ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಪೊಲೀಸ್‌ ಧ್ವಜ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ತಮ್ಮ ಸೇವಾ ಅವಧಿಯಲ್ಲಿ ಕಾರ್ಯಕ್ಷೇತ್ರದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟನಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಹೆಮ್ಮೆ ನನಗಿದೆ ಎಂದ ಅವರು, ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿ ಅಧಿಕಾರಿ-ಸಿಬ್ಬಂಧಿಯೂ ಭಯ ಮತ್ತು ಒತ್ತಡದಿಂದ ಮುಕ್ತಗೊಂಡು ಕೆಲಸ ನಿರ್ವಹಿಸಬೇಕು ಎಂದವರು ನುಡಿದರು.

ಸದಾ ಕಾಲ ಆರೋಗ್ಯವನ್ನು ಕಾಪಾಡಿಕೊಂಡು ಲವಲವಿಕೆಯಿಂದ ಕಾರ್ಯನಿರ್ವಹಿಸಿದ ತೃಪ್ತಭಾವ ಹೊಂದುವಂತೆ ಸಲಹೆ ನೀಡಿದ ಅವರು ಪೊಲೀಸರು ತಮ್ಮ ದೈನಂದಿನ ಕರ್ತವ್ಯದ ಜೊತೆಗೆ ಕುಟುಂಬದ ಬಗ್ಗೆಯೂ ಕಾಳಜಿ ವಹಿಸಬೇಕು. ಇಲಾಖೆಯು ಪೊಲೀಸ್‌ ಅಧಿಕಾರಿ-ಸಿಬ್ಬಂಧಿಗಳಿಗಾಗಿ ನೀಡಿದ ಆರೋಗ್ಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದವರು ನುಡಿದರು.
ಸಮಾರಂಭದಲ್ಲಿ ಸರ್ವರನ್ನು ಸ್ವಾಗತಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಅವರು ವಾರ್ಷಿಕ ವರದಿ ವಾಚಿಸಿ, ಇಲಾಖೆಯು ನಿವೃತ್ತ ಪೊಲೀಸ್ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಗೊಳಿಸಿದೆ. ಪೊಲೀಸ್ ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮ ಹಾಗೂ ಪೊಲೀಸರ ಸೇವೆ, ತ್ಯಾಗ, ಬಲಿದಾನಗಳ ಸ್ಮರಣಾರ್ಥವಾಗಿ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದ್ದು, 1984ರಿಂದ ಪ್ರತಿ ವರ್ಷ ಏಪ್ರಿಲ್ 2ರಂದು ಆಚರಿಸಲಾಗುತ್ತಿದೆ ಎಂದರು.

ಪೊಲೀಸ್‌ ಧ್ವಜದಿಂದ ಸಂಗ್ರಹವಾಗುವ ಹಣದಲ್ಲಿ ಶೇ.50ರಷ್ಟನ್ನು ಪೊಲೀಸರ ಕ್ಷೇಮನಿಧಿಗೆ ಅರ್ಪಿಸಲಾಗುವುದು. ಆ ನಿಧಿಯನ್ನು ಕಾಯಿಲೆಯಿಂದ ಬಳಲುತ್ತಿರುವ ಪೊಲೀಸ್‌ ಸಿಬ್ಬಂಧಿಗಳಿಗೆ, ನಿವೃತ್ತರ ಗೌರವಾರ್ಥ ಮತ್ತು ಮೃತ್ತ ಸಿಬ್ಬಂಧಿಗಳಿಗೆ ಸಹಾಯಧನವಾಗಿ ಬಳಸಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪೊಲೀಸ್ ಧ್ವಜವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಸೇರಿದಂತೆ ಆಹ್ವಾನಿತ ಗಣ್ಯರು ಬಿಡುಗಡೆಗೊಳಿಸಿದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾಗಿದ್ದ ಅನಿಲ್‌ಕುಮಾರ್‌ ಭೂಮರೆಡ್ಡಿ, ಕಾರಿಯಪ್ಪ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಧ್ಚಜ ದಿನಾಚರಣೆಯ ಅಂಗವಾಗಿ 6 ಪೊಲೀಸ್ ತಂಡಗಳು ನಿಧಾನ ಹಾಗೂ ತೀವ್ರಗತಿಯ ಪಥಸಂಚಲನ ನಡೆಸಿದವು.

ಆರ್.ಪಿ.ಐ. ಪ್ರಶಾಂತ್ ಪಥ ಸಂಚಲನದ ನೇತೃತ್ವ ವಹಿಸಿದ್ದರು. ಸಶಸ್ತ್ರ ಮೀಸಲು ಪಡೆಯ ಸಬ್‌ಇನ್ಸ್‌ಫೆಕ್ಟರ್‌ ಲಕ್ಷ್ಮಣ್‌ ಅವರ ನೇತೃತ್ವದಲ್ಲಿ ಆಕರ್ಷಕ ಪೊಲೀಸ್‌ ಬ್ಯಾಂಡ್‌ ಕಾರ್ಯಕ್ರಮಕ್ಕೆ ಮೆರುಗು ತಂದಿತ್ತು.