ಆರ್.ಟಿ.ವಿಠಲಮೂರ್ತಿ- ವಿಜಯ ಯಾತ್ರೆ ಇವರಿಗೆಲ್ಲ ಮಾತ್ರೆ- ವಿಜಯೇಂದ್ರ ಲೆಕ್ಕಾಚಾರ ಏನು?- ಅಮಿತ್ ಷಾ ಆಟಕ್ಕೇನು ಕಾರಣ?- ಬದಲಾದ ಐರನ್ ಮ್ಯಾನ್ ಪ್ಲಾನು- ಇವರಿಗೆ ಜೆಡಿಎಸ್ ಏಕೆ ಬೇಕು?

ವಿಜಯ ಯಾತ್ರೆ
ಇವರಿಗೆಲ್ಲ ಮಾತ್ರೆ

ಮೊನ್ನೆ ಕರ್ನಾಟಕ ಬಿಜೆಪಿಯ ಉಸ್ತುವಾರಿ ರಾಧಾ ಮೋಹನ ದಾಸ್ ಅಗರ್ವಾಲ್ ಅವರನ್ನು ಸಂಪರ್ಕಿಸಿದ ರಾಜ್ಯ ಬಿಜೆಪಿಯ ನಾಯಕರೊಬ್ಬರು ಕಂಪ್ಲೇಂಟುಗಳ ಸುರಿಮಳೆ ಸುರಿಸಿದ್ದಾರೆ.ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇಡುತ್ತಿರುವ ಹೆಜ್ಜೆ ನಮಗೆ ಮುಳುವಾಗಲಿದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ.
ಅಂದ ಹಾಗೆ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ವಿಜಯೇಂದ್ರ ನೇತೃತ್ವದಲ್ಲಿ ಆರಂಭವಾಗಿರುವ ಜನಾಕ್ರೋಶ ಯಾತ್ರೆ ಒಂದು ಮಟ್ಟದ ಹವಾ ಎಬ್ಬಿಸಿರುವುದು ನಿಜ.
ಏಕತಾನತೆಯ ಹೋರಾಟಗಳಿಂದ ಮಂಕಾಗಿದ್ದ ರಾಜ್ಯ ಬಿಜೆಪಿಗೆ ವಿಜಯೇಂದ್ರ ನೇತೃತ್ವದ ಜನಾಕ್ರೋಶ ಯಾತ್ರೆ ಟಾನಿಕ್ ನೀಡಿದೆಯಾದರೂ ರಾಜ್ಯ ಬಿಜೆಪಿಯ ಕೆಲ ಸಿಎಂ ಕ್ಯಾಂಡಿಡೇಟುಗಳಿಗೆ ಅದು ಇಷ್ಟವಾಗುತ್ತಿಲ್ಲ.
ಕಾರಣ?ಇಡೀ ಜನಾಕ್ರೋಶ ಯಾತ್ರೆಯ ಕೇಂದ್ರ ಬಿಂದುವಾಗಿ ವಿಜಯೇಂದ್ರ ಕಾಣಿಸುತ್ತಿದ್ದರೆ,ತಾವು ಸ್ಟ್ಯಾಂಪ್ ಸೈಜಿನ ಫೋಟೋಗೆ ಲಿಮಿಟ್ ಆಗಿದ್ದೇವೆ ಎಂಬುದು ಈ ಸಿಎಂ ಕ್ಯಾಂಡಿಡೇಟುಗಳ ಸಿಟ್ಟು.
ಹಾಗಂತಲೇ ಪಕ್ಷದ ಉಸ್ತುವಾರಿ ರಾಧಾಮೋಹನದಾಸ್ ಅಗರ್ವಾಲ್ ಅವರನ್ನು ಸಂಪರ್ಕಿಸಿದ ರಾಜ್ಯ ಬಿಜೆಪಿಯ ನಾಯಕರೊಬ್ಬರು ವಿಜಯೇಂದ್ರ ವಿರುದ್ದ ದೂರಿನ ಮಳೆ ಸುರಿಸಿದ್ದಾರೆ.
‘ಇವತ್ತು ರಾಜ್ಯ ಸರ್ಕಾರದ ವಿರುದ್ದ ಆರಂಭವಾಗಿರುವ ಜನಾಕ್ರೋಶ ಯಾತ್ರೆಯನ್ನು ತಮ್ಮ ಗುರಿ ಸಾಧನೆಗೆ ಏಣಿಯನ್ನಾಗಿ ಮಾಡಿಕೊಂಡಿರುವ ವಿಜಯೇಂದ್ರ ಅವರು,ನಮ್ಮನ್ನು ಆ ಏಣಿಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ.
ಇವತ್ತು ಇಷ್ಟು ದೊಡ್ಡ ಹೋರಾಟ ಆರಂಭಿಸುವಾಗ ನಾವು ಮಿತ್ರ ಪಕ್ಷ ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು.ಆದರೆ ನೆಪಮಾತ್ರಕ್ಕೂ ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ವಿಜಯೇಂದ್ರ ಇಡೀ ಹೋರಾಟ ತಮ್ಮದೇ ಅಂತ ಹೊರಟಿದ್ದಾರೆ.
ಇವರ ಈ ಕೆಲಸದಿಂದ ಜೆಡಿಎಸ್ ಸಿಟ್ಟಿಗೆದ್ದರೆ,ಮೈತ್ರಿಯಿಂದ ಹಿಂದೆ ಸರಿದರೆ ಕಾಂಗ್ರೆಸ್ ವಿರುದ್ದ ಒಕ್ಕಲಿಗ-ಲಿಂಗಾಯತ ಶಕ್ತಿಗಳು ಕನ್ ಸಾಲಿಡೇಟ್ ಆಗುವುದಿಲ್ಲ.ಮತ್ತು ಇದರ ಲಾಭ ಪಡೆಯುವ ಕಾಂಗ್ರೆಸ್ ಪಕ್ಷ ಅಹಿಂದ ವರ್ಗಗಳ ಸಾಲಿಡ್ಡು ಬೆಂಬಲದಿಂದ ಮರಳಿ ಅಧಿಕಾರ ಹಿಡಿಯುತ್ತದೆ.ಹಾಗಾಗಬಾರದು ಎಂದರೆ ವರಿಷ್ಟರು ತಕ್ಷಣವೇ ವಿಜಯೇಂದ್ರ ಅವರಿಗೆ ಎಚ್ಚರಿಕೆ ಕೊಡಬೇಕು.ಆಗಿರುವ ತಪ್ಪು ಸರಿಪಡಿಸಿಕೊಳ್ಳಲು ಹೇಳಬೇಕು’ ಅಂತ ಈ ನಾಯಕರು ವಿವರಿಸಿದ್ದಾರೆ.
ಹೀಗೆ ಆ ನಾಯಕರು ಹೇಳಿದ್ದನ್ನು ಕೇಳಿಸಿಕೊಂಡ ರಾಧಾಮೋಹನದಾಸ್ ಅಗರ್ವಾಲ್ ‘ಶ್ಯೂರ್ ಶ್ಯೂರ್’ ಅಂತ ಭರವಸೆಯ ಮಾತನಾಡಿದ್ದಾರೆ.
ಆದರೆ ತಾವು ಅವರಿಗೆ ಕೊಟ್ಟ ದೂರು ವರಿಷ್ಟರ ಕಿವಿ ತಲುಪಿಲ್ಲ,ವಿಜಯೇಂದ್ರ ಅವರಿಗೆ ವಾರ್ನಿಂಗೂ ಬಂದಿಲ್ಲ ಎಂಬುದು ಯಾವಾಗ ಖಚಿತವಾಯಿತೋ?ಆಗ ಈ ನಾಯಕರು ಹವಾ ಎಬ್ಬಿಸುತ್ತಾ ಹೊರಟಿದ್ದ ಜನಾಕ್ರೋಶ ಯಾತ್ರೆಯಿಂದ ದೂರ ಉಳಿದಿದ್ದಾರೆ.ಅಷ್ಟೇ ಅಲ್ಲ,ಯಾತ್ರೆಗೆ ಹೊರಟ ವಿಜಯೇಂದ್ರ ಅವರಿಗೆ ಕೇಂದ್ರ ಸಚಿವ ಅಮಿತ್ ಶಾ ಅವರ ಫುಲ್ಲು ಬೆಂಬಲವಿದೆ ಎಂಬುದು ನಿಕ್ಕಿಯಾಗಿ ಮಂಕಾಗಿದ್ದಾರೆ.

ವಿಜಯೇಂದ್ರ ಲೆಕ್ಕಾಚಾರ ಏನು?
————————-
ಅಂದ ಹಾಗೆ ಜನಾಕ್ರೋಶ ಯಾತ್ರೆಗೆ ಮುಂದಾದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವುದೇಕೆ ಎಂಬುದು ರಹಸ್ಯವಲ್ಲ.
ಅವರ ಪ್ರಕಾರ,ಇವತ್ತು ಹೆಜ್ಜೆ ಹೆಜ್ಜೆಗೂ ಜೆಡಿಎಸ್ ಪಕ್ಷವನ್ನು ನೆಚ್ಚಿಕೊಂಡು ಹೋದರೆ ನಾಳೆ ಸ್ವಯಂಬಲದ ಮೇಲೆ ಪಕ್ಷ ಅಧಿಕಾರ ಹಿಡಿಯುವುದು ಕಷ್ಟ.
ಈ ಮಧ್ಯೆ ಜೆಡಿಎಸ್ ಜತೆಗಿನ ಮೈತ್ರಿ ಬೇಕು ಅಂತ ವರಿಷ್ಟರು ನಿರ್ಧರಿಸಿದರೂ,ಇಂತಹ ಮೈತ್ರಿಯ ಫಲವಾಗಿ ಜೆಡಿಎಸ್ 50 ಕ್ಕಿಂತ ಹೆಚ್ಚು ಸೀಟು ಗೆಲ್ಕುವ ಮಟ್ಟಕ್ಕೆ ಹೋದರೆ ಏನಾಗುತ್ತದೆ?ನಿರ್ವಿವಾದವಾಗಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗುತ್ತಾರೆ.
ಹೀಗೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಏಕೆ ದುಡಿಯಬೇಕು?ಅದರ ಬದಲು ಉಳಿದಿರುವ ಮೂರು ವರ್ಷಗಳ ಅವಧಿಯಲ್ಲಿ ನಾವೇ ಹೆಚ್ಚು ಶ್ರಮ ಹಾಕಿ ಪಕ್ಷ ಕಟ್ಟಿದರೆ ಸ್ವಯಂಬಲದ ಮೇಲೆ ಸರ್ಕಾರ ರಚಿಸಬಹುದು.
ಹೀಗೆ ಸರ್ಕಾರ ರಚಿಸುವ ಸಂಖ್ಯಾಬಲ ನಮಗೇ ಇದೆಯೆಂದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿಯುವುದು ಕಷ್ಟ.
ಹೀಗಾಗಿ ನಾವೇ ಸ್ವಯಂಬಲದ ಮೂಲಕ ಸರ್ಕಾರ ರಚಿಸುವ ಶಕ್ತಿಯನ್ನು ಗಳಿಸಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದಿರುವ ವಿಜಯೇಂದ್ರ ತಮ್ಮ ಸಂಪೂರ್ಣ ಬಲದೊಂದಿಗೆ ಪಕ್ಷ ಕಟ್ಟಲು ತೀರ್ಮಾನಿಸಿದ್ದಾರೆ.
ಗಮನಿಸಬೇಕಿರುವ ಸಂಗತಿ ಎಂದರೆ ವಿಜಯೇಂದ್ರ ಅವರ ನಡೆಗೆ ಅಮಿತ್ ಶಾ ಅವರ ಸಂಪೂರ್ಣ ಸಹಮತಿ ಇದೆ.ಮತ್ತದು ವಿಜಯೇಂದ್ರ ಅವರಿಗೂ ಗೊತ್ತಿದೆ.

ಅಮಿತ್ ಶಾ ಆಟಕ್ಕೇನು
ಕಾರಣ?
——————
ಇನ್ನು ಕರ್ನಾಟಕದಲ್ಲಿ ಪಕ್ಷವನ್ನು ಸ್ವಯಂ ಶಕ್ತಿಯ ಮೇಲೆ ನಿಲ್ಲಿಸಲು ಹೊರಟಿರುವ ವಿಜಯೇಂದ್ರ ಅವರಿಗೆ ಅಮಿತ್ ಶಾ ಬೆಂಬಲ ಕೊಡುತ್ತಿರುವುದೇಕೆ?
ಬಿಜೆಪಿ ಮೂಲಗಳ ಪ್ರಕಾರ:ಅಮಿತ್ ಶಾ ಅವರ ನಡವಳಿಕೆಗೆ 2018 ರಲ್ಲಿ ನಡೆದ ಬೆಳವಣಿಗೆಯೇ ಕಾರಣ.
ಅವತ್ತು ಕರ್ನಾಟಕ ವಿಧಾನಸಭೆಗೆ ಚುನಾವಣೆಗಳು ಘೋಷಣೆಯಾದಾಗ ಅಮಿತ್ ಶಾ ಯೋಚನೆಗೆ ಬಿದ್ದಿದ್ದರು.
ಕಾರಣ?ಈ ಸಂಬಂಧ ಅವರು ಕರ್ನಾಟಕದಿಂದ ತರಿಸಿಕೊಂಡ ಸರ್ವೆ ರಿಪೋರ್ಟು ಒಂದು ಆತಂಕದ ಬಗ್ಗೆ ವಿವರಿಸಿತ್ತು.
ಅದರ ಪ್ರಕಾರ ಬಿಜೆಪಿ ಸುಮಾರು ನೂರು ಕ್ಷೇತ್ರಗಳಲ್ಲಿ ಗೆಲ್ಲಲಿದೆಯಾದರೂ,ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಲ್ಪ ಬಹುಮತದ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಬಹುದು ಎಂಬುದು ಈ ಆತಂಕ.
ಆದರೆ ಹಳೆ ಮೈಸೂರು ಭಾಗದ ಹಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್,ಜೆಡಿಎಸ್ ಮಧ್ಯೆ ತೀವ್ರ ಪೈಪೋಟಿ ಇದ್ದು,ಇಂತಹ ಕ್ಷೇತ್ರಗಳಲ್ಲಿ ನಾವು ದುರ್ಬಲ ಕ್ಯಾಂಡಿಡೇಟುಗಳನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್-ಜೆಡಿಎಸ್ ಮಧ್ಯೆ ನೇರ ಹಣಾಹಣಿ ನಡೆಯುತ್ತದೆ.ಆ ಮೂಲಕ ಜೆಡಿಎಸ್ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ.
ಹೀಗೆ ಜೆಡಿಎಸ್ ಮೂವತ್ತಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲು ಅನುಕೂಲ ಮಾಡಿಕೊಟ್ಟರೆ ತದ ನಂತರ ನಮಗೆ ಕೊರತೆಯಾಗುವ ಬಲವನ್ನು ಅದರ ಜತೆಗಿನ ಮೈತ್ರಿಯಿಂದ ನಿವಾರಿಸಿಕೊಳ್ಳಬಹುದು ಎಂಬುದು ಅಮಿತ್ ಶಾ ಕೈಲಿದ್ದ ರಿಪೋರ್ಟಿನ ಸಾರಾಂಶ.
ಅದರ ಪ್ರಕಾರ,ಮೈಸೂರು,ಮಂಡ್ಯ,ಹಾಸನ,ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು.ಮತ್ತದರ ಪ್ರಯೋಜನ ಜೆಡಿಎಸ್ ಗೆ ಸಾಲಿಡ್ಡಾಗಿಯೇ ದಕ್ಕಿತು.
ಆದರೆ ಯಾವಾಗ ಫಲಿತಾಂಶ ಬಂದು ಸರ್ಕಾರ ರಚಿಸಲು ಬಿಜೆಪಿ ವರಿಷ್ಟರು ಜೆಡಿಎಸ್ ಕಡೆ ಮುಖ ಮಾಡಿದರೋ?ಅಷ್ಟೊತ್ತಿಗಾಗಲೇ ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್ ನಾಯಕರು ಕಾಂಗ್ರೆಸ್ ಜತೆ ಸೆಟ್ಲಾಗಿಬಿಟ್ಟಿದ್ದರು.
ಕಾರಣ?ಬಿಜೆಪಿ ವರಿಷ್ಟರು ಜೆಡಿಎಸ್ ಪಕ್ಷಕ್ಕೆ ಉಪಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಲೆಕ್ಕಾಚಾರದಲ್ಲಿದ್ದರೆ,ಕಾಂಗ್ರೆಸ್ ವರಿಷ್ಟರು ಬೇಷರತ್ತಾಗಿ ಜೆಡಿಎಸ್ ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಡೀಲು ಕುದುರಿಸಿ ಬಿಟ್ಟಿದ್ದರು.
ಮೂಲಗಳ ಪ್ರಕಾರ,ಈ ರೀತಿ ಕಾಂಗ್ರೆಸ್ ಜತೆ ಸೆಟ್ಲಾದ ಜೆಡಿಎಸ್ ವಿಷಯದಲ್ಲಿ ಅಮಿತ್ ಶಾ ಅವರಿಗೆ ಕೋಪ ಬಂದಿದ್ದು ನಿಜ.
ಮತ್ತು ಇದೇ ಕಾರಣಕ್ಕಾಗಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಲು ಪಕ್ಷದ ನಾಯಕರಿಗೆ ಅವರು ಸುಪಾರಿ ನೀಡಿದ್ದೂ ನಿಜ.ಅವರ ಈ ಸೂಚನೆಯ ಅನುಸಾರವಾಗಿಯೇ 2023 ರಲ್ಲಿ ಹಳೆ ಮೈಸೂರಿನ ಕ್ಷೇತ್ರಗಳಲ್ಲಿ ಬಿಜೆಪಿ ಸರ್ವಬಲವನ್ನು ಬಳಸಿ ಹೋರಾಡಿತು.
ಅದರ ಈ ಹೋರಾಟದ ಫಲವಾಗಿ ಜೆಡಿಎಸ್ ಬಹುತೇಕ ಕಡೆ ಸೋತು ಸುಸ್ತಾಯಿತೇನೋ ನಿಜ.ಆದರೆ ಹೀಗೆ ಜೆಡಿಎಸ್ ಸೊಂಟ ಮುರಿಯುವಲ್ಲಿ ಯಶಸ್ವಿಯಾದರೂ ಬಿಜೆಪಿಗೆ ವೈಯಕ್ತಿಕವಾಗಿ ಲಾಭವಾಗಲಿಲ್ಲ.ಬದಲಿಗೆ ಜೆಡಿಎಸ್-ಬಿಜೆಪಿ ನಡುವೆ ಕಾಂಗ್ರೆಸ್ ವಿರೋಧಿ ಮತಗಳು ಹಂಚಿ ಹೋಗಿದ್ದರಿಂದ ಕಾಂಗ್ರೆಸ್ ಅದರ ಲಾಭ ಪಡೆಯಿತು.

ಐರನ್ ಮ್ಯಾನ್ ಪ್ಲಾನು
—————-
ಹೀಗೆ ಹಳೆ ಮೈಸೂರಿನಲ್ಲಿ ಜೆಡಿಎಸ್ ಪಕ್ಷವನ್ನು ಹಣಿಯುವ ಪ್ಲಾನು ಯಾವಾಗ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಒದಗಿಸಿಕೊಟ್ಟಿತೋ?ಆಗ ಬಿಜೆಪಿಯ ಐರನ್ ಮ್ಯಾನ್ ಅಮಿತ್ ಶಾ ಲೆಕ್ಕಾಚಾರ ಬದಲಾಯಿತು.
ಅರ್ಥಾತ್,ಯಾವ ಜೆಡಿಎಸ್ ಪಕ್ಷವನ್ನು ಮುಗಿಸಿ ಮೇಲೇಳಲು ತಾವು ಬಯಸಿದ್ದೆವೋ?ಅದೇ ಪಕ್ಷದ ಜತೆ ಮೈತ್ರಿ ಸಾಧಿಸಿ ಕಾಂಗ್ರೆಸ್ ವಿರುದ್ದ ಹೋರಾಡುವುದು ಈ ಪ್ಲಾನು.
ತಮ್ಮ ಈ ಪ್ಲಾನಿಗೆ ಪೂರಕವಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಬಳಸಿಕೊಂಡ ಅಮಿತ್ ಶಾ,ಅವರ ಮೂಲಕ ಜೆಡಿಎಸ್ ಜತೆ ಮೈತ್ರಿ ಸಾಧಿಸಿದರು.ಮತ್ತು ಈ ಮೈತ್ರಿಯ ಫಲವಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಂದಷ್ಟು ಲಾಭವೂ ಆಯಿತು.
ಆದರೆ ಲೋಕಸಭೆ ಚುನಾವಣೆಯಲ್ಲಿ ಲಾಭವಾಯಿತು ಅಂತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದುರ್ಬಲವಾಗುವಂತೆ ಮಾಡಲು ಸಾಧ್ಯವಿಲ್ಲವಲ್ಲ?
ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿ ಸ್ವಯಂಬಲದಿಂದ 114 ಎಂಬ ಮ್ಯಾಜಿಕ್ ನಂಬರನ್ನು ತಲುಪಬೇಕು ಅಂತ ಅವರು ಬಯಸಿದ್ದಾರೆ.
ಇವತ್ತು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಿಗುತ್ತಿರುವ ಫುಲ್ಲು ಫ್ರೀಡಮ್ಮಿಗೆ ಇದೇ ಮುಖ್ಯ ಕಾರಣ.
ಹೀಗಾಗಿ ಇವತ್ತು ಜೆಡಿಎಸ್ ಪಕ್ಷವನ್ನು ದೂರವಿಟ್ಟು ವಿಜಯೇಂದ್ರ ಆರಂಭಿಸಿರುವ ಜನಾಕ್ರೋಶ ಯಾತ್ರೆಯ ವಿರುದ್ಧ ಯಾರೆಷ್ಟೇ ದೂರು ಕೊಟ್ಟರೂ ಅಮಿತ್ ಶಾ ಅದನ್ನು ಪಕ್ಕಕ್ಕಿಡುವುದು ಗ್ಯಾರಂಟಿ

ಇವರಿಗೆ ಜೆಡಿಎಸ್
ಏಕೆ ಬೇಕು?
—————-
ಅಂದ ಹಾಗೆ ವಿಜಯೇಂದ್ರ ಅವರಿಗೆ ಅಮಿತ್ ಶಾ ಫುಲ್ಲು ಸಪೋರ್ಟು ಕೊಡಲು ಮತ್ತೊಂದು ಕಾರಣವಿದೆ.ಅದೆಂದರೆ ರಾಜ್ಯ ಬಿಜೆಪಿಯ ಕೆಲ ನಾಯಕರಲ್ಲಿರುವ ಜೆಡಿಎಸ್ ಬಗೆಗಿನ‌ ಪ್ರೀತಿ.
ಈ ನಾಯಕರ ಪೈಕಿ ಬಹುತೇಕರು ಸಿಎಂ ಹುದ್ದೆಯ ಆಕಾಂಕ್ಷಿಗಳು.ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅಧಿಕಾರ ಹಿಡಿದರೆ ಸಿಎಂ ಆಗುವ,ಇಲ್ಲವೇ ಕನಿಷ್ಟ ಪಕ್ಷ ಒಳ್ಳೆಯ ಖಾತೆಗಳನ್ನಾದರೂ ಪಡೆಯುವ ಲಕ್ಕು ತಮಗೆ ಸಿಗುತ್ತದೆ.
ಆದರೆ ವಿಜಯೇಂದ್ರ ಅವರೇನಾದರೂ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಸೆಟ್ಲಾಗಿ,ಪಕ್ಷ ಮ್ಯಾಜಿಕ್ ನಂಬರ್ ಗಿಟ್ಟಿಸಿದರೆ ತಾವು ಸೈಡ್ ಲೈನಿಗೆ ಸರಿಯುವುದು ಗ್ಯಾರಂಟಿ ಎಂಬುದು ಈ ನಾಯಕರ ಆತಂಕ.
ಹಾಗಂತಲೇ ವಿಜಯೇಂದ್ರ ಆರಂಭಿಸಿದ ಜನಾಕ್ರೋಶ ಯಾತ್ರೆ ಇವರಲ್ಲಿ ದಿಗಿಲು ಮೂಡಿಸಿದೆ.ಮತ್ತು ಇಂತಹ ದಿಗಿಲು ಕಂಪ್ಲೇಂಟುಗಳ ರೂಪದಲ್ಲಿ ವ್ಯಕ್ತವಾಗುತ್ತಿದೆ ಎಂಬುದು ಅಮಿತ್ ಶಾ ಅವರಿಗಿರುವ ರಿಪೋರ್ಟು.

ಲಾಸ್ಟ್ ಸಿಪ್
————-
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮೊನ್ನೆ ಕರ್ನಾಟಕಕ್ಕೆ ಬಂದಾಗ ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ ಗರುಡಾಚಾರ್ ಅವರಿಗೆ ಮುಖಾಮುಖಿಯಾಗಿದ್ದಾರೆ.
ಅಂದ ಹಾಗೆ ಪೋಲೀಸ್ ಮಹಾ ನಿರ್ದೇಶಕರಾಗಿದ್ದ ಉದಯ ಗರುಡಾಚಾರ್ ಅವರ ತಂದೆ ಖರ್ಗೆಯವರಿಗೆ ಆಪ್ತರು.
ಹೀಗಾಗಿ ಸಹಜವಾಗಿಯೇ ಖರ್ಗೆಯವರೊಂದಿಗೆ ಉದಯ ಗರುಡಾವಾರ್ ಅವರಿಗೆ ಉತ್ತಮ ಬಾಂಧವ್ಯವಿದೆ.
ಹೀಗೆ ಖರ್ಗೆ ಅವರ ಜತೆಗಿರುವ ಬಾಂಧವ್ಯವನ್ನು ಬಳಸಿಕೊಂಡ ಉದಯ ಗರುಡಾಚಾರ್,ಮೊನ್ನೆ ಖರ್ಗೆಯವರೆದುರು ತಮ್ಮ ಸಂಕಟ ತೋಡಿಕೊಂಡರಂತೆ.
‘ಸಾರ್,ಈ ಬಿಜೆಪಿಯ ಸಹವಾಸವೇ ಸಾಕಾಗಿದೆ.ಹೀಗಾಗಿ ಕಾಂಗ್ರೆಸ್ಸಿಗೆ ಬರಲು ನಾನು ತಯಾರಿದ್ದೇನೆ.ಹೀಗಾಗಿ ನನ್ನ ದಾರಿಯನ್ನು ಸಾಫ್ ಮಾಡಿ’ ಅಂತ ಅವರು ಹೇಳಿದಾಗ ಅಲ್ಲಿದ್ದವರೆಲ್ಲ ಬೆಚ್ಚಿ ಬಿದ್ದಿದ್ದಾರೆ.

ಆರ್.ಟಿ.ವಿಠ್ಠಲಮೂರ್ತಿ