ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ. ಸರ್ಕಾರಕ್ಕೆ ಮನವಿ; ಹೋಬಳಿ ಮಟ್ಟದಲ್ಲಿ ಪ್ರತ್ಯೇಕ ಅಲೆಮಾರಿ ವಿಶೇಷ ಸಮೀಕ್ಷಾ ಕಾರ್ಯ ನಡೆಸಿ  

ಶಿವಮೊಗ್ಗ : ರಾಜ್ಯದಲ್ಲಿ ಟೆಂಟು ಮತ್ತು ಗುಡಿಸಲುಗಳಲ್ಲಿ ಅತ್ಯಂತ ಕನಿಷ್ಟ ಜೀವನ ಸಾಗಿಸುತ್ತಿರುವ ಪರಿಶಿಷ್ಟ ಜಾತಿಯ ಅಲೆಮಾರಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಒಟ್ಟಾರೆ ಸಮುದಾಯ ಪ್ರಗತಿಯಲ್ಲಿ ಹಿಂದುಳಿದಿರುವ, ಅಲೆಮಾರಿಗಳ ವಾಸ್ತವ ಸ್ಥಿತಿಗತಿಗಳ ಬಗ್ಗೆ 3-ದಿನ ಹೋಬಳಿ ಮಟ್ಟದಲ್ಲಿ ಪ್ರತ್ಯೇಕ ಪ್ರಶ್ನಾವಳಿ ರೂಪಿಸಿ ಅಲೆಮಾರಿ ವಿಶೇಷ ಸಮೀಕ್ಷಾ ಕಾರ್ಯ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ. ಅವರು ಹೇಳಿದರು.

ಈ ಕುರಿತು ಇಂದು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡಿದ ಅವರು,  ಪ್ರಸ್ತುತ ರಾಜ್ಯ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳು ಈ ಸಮೀಕ್ಷಾ ಕಾರ್ಯಕ್ಕೆ ಪೂರಕ ಮಾಹಿತಿ ನೀಡಿ ಸಹಕರಿಸುವಂತೆ ಹಾಗೂ ಸಮೀಕ್ಷೆಯಲ್ಲಿ ತಮ್ಮ ಮೂಲಜಾತಿಯ ಹೆಸರನ್ನು ಕಡ್ಡಾಯವಾಗಿ ದಾಖಲಿಸುವಂತೆ ಅವರು ಮನವಿ ಮಾಡಿದರು.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ, ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಗಳಿಗೆ ಸಮರ್ವಕವಾಗಿ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲು ಈಗಾಗಲೇ ಕರ್ನಾಟಕ ಸರ್ಕಾರವು ನ್ಯಾ. ಹೆಚ್. ಎನ್. ನಾಗಮೋಹನದಾಸ್‌ರವರ, ಏಕ ಸದಸ್ಯ ಆಯೋಗವನ್ನು ನೇಮಿಸಿ ಒಳಮೀಸಲಾತಿ ಹಂಚಿಕೆ ವಿಚಾರವಾಗಿ ಸರಿಯಾದ ಅಂಕಿ-ಅಂಶಗಳನ್ನು ಸಂಗ್ರಹಿಸಲು ಜಾತಿಗಣತಿ ಆರಂಭಗೊಳಿಸಲಾಗಿದೆ. ಯಾವುದೇ ಜಾತಿಗಳ ನಡುವಿನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಮತ್ತು ರಾಜಕೀಯ-ಸ್ನಾನಮಾನಗಳ ಕುರಿತ ಮಾಹಿತಿಗಳನ್ನು ಯಾವುದೇ ಲೋಪದೋಷಗಳಿಲ್ಲದೆ ವಾಸ್ತವಿಕವಾಗಿ ನಮೂದಿಸಬೇಕು. ಮೇ-05 ರಿಂದ ಮೇ 17 ರಂದು ಮುಕ್ತಾಯಗೊಳ್ಳಲಿರುವ ಈ ಗಣತಿಯು ಅಲೆಮಾರಿ ಸಮುದಾಯದ ಜನರಿಗೆ ಒಳಮೀಸಲಾತಿಯಲ್ಲಿ ಸಮರ್ಪಕ ಪಾಲು ದೊರೆಕಿಸುವಲ್ಲಿ ಸಹಕಾರಿಯಾಗಲಿದೆ ಎಂದರು.

ರಾಜ್ಯದಲ್ಲಿ ಈಗಾಗಲೇ ಗುರುತಿಸಲ್ಪಟ್ಟ 51 ಜಾತಿಯ 25 ಲಕ್ಷಕ್ಕೂ ಹೆಚ್ಚಿನ ಜನರಿಗೆ, ನಿರ್ದಿಷ್ಟ ವಿಳಾಸವೂ ಸಹ ಇಲ್ಲದೆ, ಸರ್ಕಾರ ನಿಗಧಿಪಡಿಸಿರುವ ಕನಿಷ್ಟ ದಾಖಲೆಗಳನ್ನು ಹೊಂದಿರದ ಪರಿಶಿಷ್ಟ ಜಾತಿ ಅಲೆಮಾರಿ ಬುಡಕಟ್ಟು ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಶತಶತ ಮಾನಗಳಿಂದ ಅವಕಾಶ ವಂಚಿತರಾಗಿದ್ದಾರೆ. ಈ ದೇಶದ ಮೂಲ ನಿವಾಸಿಗಳಾದ ಇವರು ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ. ಕರ್ನಾಟಕ ಸರ್ಕಾರವು 2016ರಲ್ಲಿ ದೊಂಬರ, ಸುಡುಗಾಡುಸಿದ್ದ. ಕೊರಚ, ಕೊರಮ, ಹಂದಿಜೋಗಿ, ಶಿಳ್ಳೆಕ್ಯಾತ, ಬುಡ್ಗಜಂಗಮ, ಘಂಟಿಚೋರ, ಮುಕ್ರಿ, ಚನ್ನದಾಸರ್, ಮಾಲದಾಸರ್. ಮಾಂಗ್ ಗಾರುವಾಡಿ, ಗೋಸಂಗಿ, ಸಿಂಧೂಳು, ಪಾಲೆ, ಅಜಿಲ ಆದಿಯಾ ಇತ್ಯಾದಿ 51 ಸಮುದಾಯಗಳನ್ನು ಅಲೆಮಾರಿಗಳು, ಮುಕ್ತ ಬುಡಕಟ್ಟು ಅತೀ ಸೂಕ್ಷ್ಮ ಎಂದು ಗುರುತಿಸಿದೆ. ಇವರಲ್ಲಿ ಕೆಲವರಿಗೆ ತಮ್ಮ ಸ್ವಂತ ಭಾಷೆಯೂ ಇರುತ್ತದೆ. ಇವರು ತಮ್ಮ ಹೊಟ್ಟೆಪಾಡಿಗಾಗಿ ಯಾರನ್ನು ಅವಲಂಬಿಸದೆ ಅತ್ಯಂತ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಒಬ್ಬೊಬ್ಬರದು ವಿಭಿನ್ನ ಆಚಾರ ವಿಚಾರ ಸಂಸ್ಕೃತಿ, ಕಲೆ, ಭಾಷೆ, ಜೀವನ ಶೈಲಿಯ ಜೊತೆಗೆ ಬದುಕು ಕಟ್ಟಿಕೊಂಡು ನಮ್ಮ ಸುತ್ತಮುತ್ತಲೇ ಇದ್ದರೂ, ಇಂದಿಗೂ ಅಭಿವೃದ್ಧಿಯಿಂದ ದೂರ ಉಳಿದು ಸಮಾಜದಲ್ಲಿ ಅಘೋಚರರಾಗಿಯೇ ಬದುಕಿದ್ದಾರೆ. ಶತಶತಮಾನಗಳಿಂದ ಸಾಮಾಜಿಕ ಕಳಂಕಕ್ಕೆ ಒಳಗಾಗಿದ್ದಾರೆ. ಇಂತಹ ಹಿನ್ನಲೆಯುಳ್ಳ ಅಲೆಮಾರಿ ಸಮುದಾಯಗಳ ಜನರು ಸಹಜವಾಗಿಯೇ ಜಾತಿ ಹೆಸರನ್ನು ಸಾರ್ವಜನಿಕವಾಗಿ ಹೇಳಲು ಹಿಂಜರಿಯುತ್ತಾರೆ. ಇಂತಹ ಕಳಂಕಿತ ಹಿನ್ನೆಲೆಯುಳ್ಳ ಈ ಸಮುದಾಯಗಳು ಅಲೆಮಾರಿತನವನ್ನು ಮೈಗೂಡಿಸಿಕೊಂಡು ನಿರ್ದಿಷ್ಟವಾಗಿ ಒಂದೆಡೆ ನೆಲೆ ನಿಂತಿರುವುದಿಲ್ಲ. ಆದ್ದರಿಂದ ಇಂತಹ ಸೂಕ್ಷ್ಮ ವಿಷಯಗಳನ್ನು ಸಮೀಕ್ಷೆಯಲ್ಲಿ ಗಂಭೀರವಾಗಿ ಪರಿಗಣಿಸಬೇಕೆಂದು ಆಯೋಗಕ್ಕೆ ಈಗಾಗಲೇ ಮನವಿ ಮಾಡಲಾಗಿದೆ ಎಂದರು.

ಸಂವಿಧಾನ ಜಾರಿಯಾಗಿ 76 ವರ್ಷ ಸಂದರೂ ಇವರು ಇಂದಿಗೂ ಆಧಾರ್ ಕಾರ್ಡ್ ಪಡೆಯಲು ಪರದಾಡುತ್ತಿದ್ದಾರೆ. ಕರ್ನಾಟಕದಲ್ಲಿ ಅಲೆಮಾರಿ ಸಮುದಾಯಗಳಿಗೆ ನಿರ್ಧಿಷ್ಟವಾದ ಶಾಶ್ವತ ನೆಲೆಯಿಲ್ಲದ ಕಾರಣ ಊರೂರು ತಿರುಗಿ ಬೊಂಬೆಯಾಟ, ಮೋಡಿಯಾಟ, ದಾರ್ಮಿಕ ಭಿಕ್ಷಾಟನೆ, ಬಿದಿರಿನಿಂದ ಬುಟ್ಟಿ, ಮೊರ, ಮಂಕರಿ, ಚಾಪೆ, ರೇಷ್ಮೆತಟ್ಟೆ, ಹಂದಿ ಸಾಕಾಣಿಕೆ, ಪಶುಪಾಲನೆ, ಕೂಲಿ, ಕೂದಲು ಸಂಗ್ರಹಣೆ, ತತ್ವಪದ ಗಾಯನ, ಬೀದಿನಾಟಕ, ಸೀಸನಲ್ ವ್ಯಾಪಾರ, ಬಾಜಭಜಂತ್ರಿ ಬಾರಿಸುವುದು, ಕಣಿ ಹೇಳುವುದು, ಮೀನುಗಾರಿಕೆ, ಸ್ಟೇಷನರಿ ವ್ಯಾಪಾರ, ಬೀದಿ ಬದಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಸೇರಿದಂತೆ ಹಲವು ಬಗೆಯ ಕೆಲಸ ಮಾಡಿಕೊಂಡು ಸರ್ಕಾರಿ ಉದ್ಯೋಗ, ಶಾಶ್ವತ ಸೂರಿನ ಪರಿಕಲ್ಪನೆಯಿಲ್ಲದೆ ಅವಕಾಶ ವಂಚಿತರಾಗಿ ಹಳ್ಳಿಯಿಂದ ಹಳ್ಳಿಗೆ, ಸಂತೆಯಿಂದ ಸಂತೆಗೆ ಪಯಣಿಸುತ್ತಲೇ ಅವರದೇ ವೃತ್ತಿಯಲ್ಲಿ ಪರಿಣಿತಿ ಹೊಂದಿರುತ್ತಾರೆ. ಮೀಸಲಾತಿಯ ರುಚಿ ಕಂಡಂತಹ ಕೇವಲ ಬೆರಳಣಿಕೆಯಷ್ಟು ಜನರು ಶಿಕ್ಷಣ ಪಡೆದಿದ್ದರೂ ಅವರಲ್ಲಿ ಕೆಲವರು ಮಾತ್ರ ಸರ್ಕಾರಿ ಕೆಲಸದಲ್ಲಿದ್ದಾರೆ ಎಂದವರು ತಿಳಿಸಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಜಾತಿಯ ಹೆಸರು ಈ ಸಮೀಕ್ಷೆಯಲ್ಲಿ ಒಳಗೊಳ್ಳದಿದ್ದರೆ ತಮ್ಮ ಮೂಲ ಜಾತಿಯ ಮಾಹಿತಿಯನ್ನು ಸರಿಯಾಗಿ ನಮೂದಿಸದೇ ಇದ್ದರೆ ಜನಸಂಖ್ಯೆಯಲ್ಲಿ ಗಣನೀಯ ಏರುಪೇರಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ದೊರಕುವ ಸೌಲಭ್ಯಗಳಲ್ಲಿನ ಪಾಲು ಕಡಿಮೆಯಾಗಿ ಅಲೆಮಾರಿ, ವಿಮುಕ್ತ ಬುಡಕಟ್ಟು ಗುಂಪಿಗೆ ವಾಸ್ತವಿಕವಾಗಿ ದೊರಕಬೇಕಿರುವ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗಿ ಅಲೆಮಾರಿ ಸಮುದಾಯಗಳಲ್ಲಿ ಆಂತರಿಕ ಪ್ರತಿಸ್ಪರ್ಧೆ ಹೆಚ್ಚಾಗುತ್ತದೆ. ಸರ್ಕಾರದಿಂದ ದೊರೆಯುತ್ತಿರುವ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ, ಆರೋಗ್ಯ, ಕೃಷಿ, ತೋಟಗಾರಿಕ, ಕೈಗಾರಿಕೆ, ವಾಣಿಜ್ಯ ಪಶುಸಂಗೋಪನೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಿಗುವ ಸೌಲಭ್ಯಗಳಿಂದ ಶಾಶ್ವತವಾಗಿ ವಂಚಿತರಾಗಬೇಕಾಗುತ್ತದೆ. ಇದರ ಪರಿಣಾಮದಿಂದ ಅಲೆಮಾರಿ ಜನಾಂಗದ ಮುಂದಿನ ಪೀಳಿಗೆ ಶತಶತಮಾನಗಳವರೆಗೆ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆದುದರಿಂದ ಮನೆ-ಮನೆ ಜಾತಿ ಸಮೀಕ್ಷೆಯಲ್ಲಿ ನಿಮ್ಮ ಮೂಲ ಜಾತಿಯನ್ನು ಕಡ್ಡಾಯವಾಗಿ ನಮೂದಿಸುವಂತೆ ಮನವಿ ಮಾಡಿದರು.

ಡಿಎಸ್ ಎಸ್ ಹಾಲೇಶಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.