ಅಮೃತ್ ನೋನಿಯ ಅಂಗ ಸಂಸ್ಥೆ ವ್ಯಾಲ್ಯೂ ಸೋಷಿಯಲ್ ವೆಲಫೆರ್ ಟ್ರಸ್ಟ್ ಸಂಸ್ಥೆ ವತಿಯಿಂದ ದತ್ತು ಪಡೆದ ಶಿವಮೊಗ್ಗ ತಾಲೂಕಿನ ರಾಮಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕಟ್ಟಡ ಉದ್ಘಾಟನೆ* *ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಿ- ಸಚಿವ ಮಧು ಬಂಗಾರಪ್ಪ*

*ಅಮೃತ್ ನೋನಿಯ ಅಂಗ ಸಂಸ್ಥೆ ವ್ಯಾಲ್ಯೂ ಸೋಷಿಯಲ್ ವೆಲಫೆರ್ ಟ್ರಸ್ಟ್ ಸಂಸ್ಥೆ ವತಿಯಿಂದ ದತ್ತು ಪಡೆದ ಶಿವಮೊಗ್ಗ ತಾಲೂಕಿನ ರಾಮಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕಟ್ಟಡ ಉದ್ಘಾಟನೆ*

*ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಿ- ಸಚಿವ ಮಧು ಬಂಗಾರಪ್ಪ*

ಶಿವಮೊಗ್ಗ: ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ ಬೇಡ. ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ಅಮೃತ್ ನೋನಿಯ ಅಂಗ ಸಂಸ್ಥೆ ವ್ಯಾಲ್ಯೂ ಸೋಷಿಯಲ್ ವೆಲಫೆರ್ ಟ್ರಸ್ಟ್ ಸಂಸ್ಥೆ ವತಿಯಿಂದ ದತ್ತು ಪಡೆದ ಶಿವಮೊಗ್ಗ ತಾಲೂಕಿನ ರಾಮಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಸರ್ಕಾರಿ ಶಾಲೆಗಳ ಬಗ್ಗೆ ಅತ್ಯಂತ ಕಾಳಜಿ ವಹಿಸಿದೆ. ಸರ್ಕಾರದ ಜೊತೆಗೆ ನಮ್ಮ ಶಾಲೆ, ನಮ್ಮ ಜವಾಬ್ದಾರಿಯ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಅನೇಕ ಉದ್ಯಮಗಳು, ಸಂಘ ಸಂಸ್ಥೆಗಳು, ಹಿರಿಯ ವಿದ್ಯಾರ್ಥಿಗಳು ಸಹಕರಿಸುತ್ತಿದ್ದಾರೆ. ಅಮೃತ್ ನೋನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀನಿವಾಸ್ ಮೂರ್ತಿಯವರು ಈ ಶಾಲೆಯನ್ನು ದತ್ತು ತೆಗೆದುಕೊಂಡು ಲಕ್ಷಾಂತರ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದ್ದಾರೆ. ಸರ್ಕಾರದ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಸರ್ಕಾರ ಕೂಡ ಶಾಲೆಗಳ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಸುಮಾರು ೪೬ ಸಾವಿರ ಶಾಲೆಗಳಿವೆ. ೫೭ ಲಕ್ಷ ಮಕ್ಕಳಿದ್ದಾರೆ. ಇದೀಗ ಎಲ್ಲಾ ಮಕ್ಕಳಿಗೂ ವಾರದಲ್ಲಿ ೬ ದಿನ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣುಗಳನ್ನು ನೀಡಲಾಗುತ್ತಿದೆ. ಅಜೀಮ್ ಪ್ರೇಮ್ ಜೀ ಫೌಂಡೇಶನ್ ಕೂಡ ೧,೫೯೧ ಕೋಟಿ ರೂ.ನೀಡಿದ್ದಾರೆ. ಸರ್ಕಾರವೇ ಎಲ್ಲ ಕೆಲಸಗಳನ್ನೂ ಮಾಡಲಾಗುವುದಿಲ್ಲ. ಇಂತಹ ಉದ್ದಿಮೆಗಳು ಈಗ ನೆರವಿಗೆ ಬರುತ್ತಿದ್ದಾರೆ. ಈಗಾಗಲೇ ಶಾಲೆಗಳಲ್ಲಿ ಓದಿದವರೂ ಕೂಡಾ ನಮ್ಮ ಶಾಲೆ-ನಮ್ಮ ಹೆಮ್ಮೆ ಎಂದುಕೊಂಡಿದ್ದಾರೆ. ಸುಮಾರು ೪೦ ಸಾವಿರ ವಾಟ್ಸಾಪ್ ಗ್ರೂಪ್ ಗಳಿವೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇದೆ ಎಂಬ ಅರಿವಿದೆ. ಅದಕ್ಕಾಗಿಯೇ ಶೀಘ್ರದಲ್ಲೇ ೧೮ ಸಾವಿರ ಶಿಕ್ಷಕರ ನೇಮಕ ಮಾಡಲಾಗುವುದು. ಈಗಾಗಲೇ ಸರ್ಕಾರ ಕೋಟ್ಯಂತ್ಯರ ರೂ.ಗಳನ್ನು ಶಿಕ್ಷಣಕ್ಕಾಗಿ ವೆಚ್ಚ ಮಾಡುತ್ತಿದೆ. ಸರ್ಕಾರಿ ಶಾಲೆಗಳ ಉಳಿವು ಮತ್ತು ಮಕ್ಕಳ ಭವಿಷ್ಯ ನಮ್ಮ ಮುಂದಿದೆ. ಬಿಸಿಯೂಟ ಯೋಜನೆ ಕೂಡ ಯಶಸ್ವಿಯಾಗಿ ನಡೆಯುತ್ತಿದೆ. ಮಕ್ಕಳು ಅನುತ್ತೀರ್ಣರಾಗಿ ಮನೆಯಲ್ಲಿ ಕೂರಬಾರದೆಂದು ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಎಂದರು.
ಶಾಲಾ ಕಟ್ಟಡಗಳು ಇದ್ದರಷ್ಟೇ ಸಾಲದು. ಸೌಕರ್ಯಗಳೂ ಬೇಕು. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದರಷ್ಟೇ ಸಾಲದು. ಪ್ರತಿದಿನ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ದೇಶದ ಭವಿಷ್ಯ ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ನಮ್ಮ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡಿ ಸರ್ಕಾರಿ ಶಾಲೆಗಳನ್ನು ವಿಜೃಂಭಿಸುವಂತೆ ಮಾಡಬೇಕು ಎಂದರು.
ಅಮೃತ್ ನೋನಿ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀನಿವಾಸ್ ಮೂರ್ತಿ ಮಾತನಾಡಿ, ಅಮೃತ್ ನೋನಿ ತನ್ನ ಉತ್ಪಾದನೆಯ ಮೂಲಕ ಲಕ್ಷಾಂತರ ಜನರ ಆರೋಗ್ಯ ಸುಧಾರಣೆಗೆ ಕಾರಣವಾಗಿದೆ. ಶಿಕ್ಷಣಕ್ಕೂ ಒತ್ತು ನೀಡುವ ಉದ್ಧೇಶದಿಂದ ಸಮಾಜದ ಋಣ ತೀರಿಸಬೇಕು ಎಂದು ನಮ್ಮ ಕಾರ್ಖಾನೆ ಇರುವ ರಾಮಿನಕೊಪ್ಪದಲ್ಲಿ ಸುಮಾರು ೨೪ ಲಕ್ಷ ರೂ.ವೆಚ್ಚದಲ್ಲಿ ಎರಡು ಕೊಠಡಿಗಳನ್ನು ಸುಸಜ್ಜಿತವಾಗಿ ಕಟ್ಟಿದ್ದೇವೆ. ನಮ್ಮ ಸಂಸ್ಥೆ ಬಡ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ನಾವು ಸದಾ ಸ್ಪಂದಿಸುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ವಹಿಸಿದ್ದರು. ಶಾಸಕಿ ಬಲ್ಕಿಶ್ ಬಾನು, ಪೌರಾಯುಕ್ತೆ ಡಾ.ಕವಿತಾ ಯೋಗಪ್ಪನವರ್, ಬಿಇಒ ರಮೇಶ್, ಎಸ್.ಡಿ.ಎಂಸಿ ಅಧ್ಯಕ್ಷ ರಾಘವೇಂದ್ರ, ಗಣ್ಯರಾದ ಎಸ್.ದತ್ತಾತ್ರಿ, ಆರ್.ಪ್ರಸನ್ನಕುಮಾರ್, ಡಾ.ಶ್ರೀನಿವಾಸ್ ಕರಿಯಣ್ಣ, ಕಲಿಂ ಪಾಷಾ, ಕಲಗೋಡು ರತ್ನಾಕರ, ಜಿ.ಡಿ.ಮಂಜುನಾಥ್, ಅಂಬುಜಾಕ್ಷಿ ಶ್ರೀನಿವಾಸ್ ಮೂರ್ತಿ, ಕಡಿದಾಳ್ ಗೋಪಾಲ್, ಗ್ರಾ.ಪಂ.ಸದಸ್ಯರಾದ ಕೃಷ್ಣಮೂರ್ತಿ, ಗಾಯತ್ರಿ, ಆರಿಫ್ ಉನ್ನಿಸ್ಸಾ, ಸೋಮಶೇಖರ್ ಮತ್ತಿತರರಿದ್ದರು.