ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಅವಾಚ್ಯ ಪದ ಬಳಕೆ ಆರೋಪ: ಸಿ.ಟಿ ರವಿಗೆ ಸುಪ್ರೀಂನಿಂದ ಬಿಗ್ ರಿಲೀಫ್* *ವಿಚಾರಣೆಗೆ ತಡೆ ನೀಡಿ ಆದೇಶ*

*ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಅವಾಚ್ಯ ಪದ ಬಳಕೆ ಆರೋಪ: ಸಿ.ಟಿ ರವಿಗೆ ಸುಪ್ರೀಂನಿಂದ ಬಿಗ್ ರಿಲೀಫ್*

*ವಿಚಾರಣೆಗೆ ತಡೆ ನೀಡಿ ಆದೇಶ*

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ಗೆ​ (Lakshmi Hebbalkar) ಅವಾಚ್ಯ ಪದದಿಂದ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ವಿರುದ್ಧ ಪ್ರಕರಣಕ್ಕೆ ಸುಪ್ರೀಂಕೋರ್ಟ್ (supreme court)​ ತಡೆಯಾಜ್ಞೆ ನೀಡಿದೆ. ಬೆಳಗಾವಿ ಅಧಿವೇಶನದ (Belagavi Session) ವೇಳೆ ಅವಾಚ್ಯ ಪದದಿಂದ ನಿಂದನೆ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್​ ಅವರು ದೂರು ನೀಡಿದ್ದರು. ಆದ್ರೆ, ಈ ದೂರು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಸಿಟಿ ರವಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಸಿ.ಟಿ. ರವಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್​​ ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಿಟಿ ರವಿ ಅವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಇಂದು(ಮೇ 19) ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎಂ. ಸುಂದ್ರೇಶ್ ಮತ್ತು ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ಸುಪ್ರೀಂಕೋರ್ಟ್​ ಪೀಠ, ಸಿ.ಟಿ. ರವಿ ವಿರುದ್ಧ ವಿಚಾರಣಾ ಪ್ರಕ್ರಿಯೆಗಳಿಗೆ ತಡೆ ನೀಡಿ ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ ಸಿಟಿ ರವಿ ಪರ ವಕೀಲರು, 2024ರ ಡಿ. 19ರಂದು ಬೆಳಗಾವಿಯ ಕರ್ನಾಟಕ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಕಲಾಪದಲ್ಲಿ ಚರ್ಚಿಸುತ್ತಿದ್ದಾಗ ಸಚಿವೆಯನ್ನು ನಿಂದಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಅದರ ಬೆನ್ನಲ್ಲೇ ಅವರ ವಿರುದ್ಧ ಪ್ರಕರಣ ದಾಖಲಾಗಿ ಅವರನ್ನು ಬಂಧಿಸಲಾಗಿತ್ತು. ಆದರೆ, ಸಂಸತ್ ಅಧಿವೇಶದಲ್ಲಿ ಭಾಗವಹಿಸಿರುವ ಜನಪ್ರತಿನಿಧಿಗಳಿಂದ ತಪ್ಪುಗಳಾದರೆ ಅವರನ್ನು 40 ದಿನಗಳವರೆಗೆ ಬಂಧಿಸುವಂತಿಲ್ಲ. ಸಂಸದೀಯ ಕಲಾಪಗಳು ಮುಗಿದರೂ ಅವರನ್ನು ಬಂಧಿಸುವಂತಿಲ್ಲ. ಹಾಗೆಯೇ, ಸಿಪಿಸಿ ಸೆಕ್ಷನ್ 135ಎ (ಎಸ್) ನಿಯಮದಡಿ ಯಾವುದೇ ಕಲಾಪದ ಸಂದರ್ಭದಲ್ಲಿ ನಡೆದ ತಪ್ಪುಗಳಿಗೆ ಅನುಗುಣವಾಗಿ ಯಾವುದೇ ಜನಪ್ರತಿನಿಧಿಯನ್ನು 40 ದಿನಗಳವರೆಗೆ ಬಂಧಿಸುವಂತಿಲ್ಲ. ಅಲ್ಲದೆ, ಸಂವಿಧಾನದ 105 (1) ಪರಿಚ್ಛೇದದಲ್ಲಿ ಸಂಸತ್ತಿನಲ್ಲಿ ವಾಕ್ ಸ್ವಾತಂತ್ರ್ಯದ ಅವಕಾಶವನ್ನು ನೀಡಿದೆ.

ಸಂವಿಧಾನದ 105 (2) ನೇ ಪರಿಚ್ಛೇದದಲ್ಲಿ ಕಾನೂನು ಕ್ರಮಗಳಿಗೆ ತಡೆಯಿದೆ. 122 (1)ನೇ ಪರಿಚ್ಛೇದದಡಿ, ಕಲಾಪದಲ್ಲಿ ನಡೆದ ಘಟನೆಗಳ ಬಗ್ಗೆ ನ್ಯಾಯಾಲಯಗಳು ವಿಚಾರಣೆ ನಡೆಸುವುದರಿಂದ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, 194ನೇ ಪರಿಚ್ಛೇದದ ಪ್ರಕಾರ, ರಾಜ್ಯ ಶಾಸಕರಿಗೆ ವಾಕ್ ಸ್ವಾತಂತ್ರ್ಯ ಮತ್ತು ಶಾಸಕಾಂಗದಲ್ಲಿನ ಕ್ರಿಯೆಗಳಿಗೆ ವಿನಾಯಿತಿ ನೀಡುತ್ತದೆ, ಕಾನೂನುಗಳ ಮೂಲಕ ಸವಲತ್ತುಗಳನ್ನು ವ್ಯಾಖ್ಯಾನಿಸುವ ಅಧಿಕಾರವನ್ನು ನೀಡುತ್ತದೆ ಎಂದು ವಾದ ಮಂಡಿಸಿದ್ದಾರೆ. ಇವರ ವಾದ ಆಲಿಸಿದ ಸುಪ್ರಿಂಕೋರ್ಟ್, ಲಕ್ಷ್ಮೀ ಹೆಬ್ಬಾಳ್ಕರ್ ಪರ ವಕೀಲರಿಗೆ ನೋಟಿಸ್ ಜಾರಿ ಮಾಡಿ ಸಿಟಿ ರವಿ ವಿರುದ್ಧದ ವಿಚಾರಣೆಗೆ ತಡೆ ನೀಡಿದೆ.

2024, ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಚರ್ಚೆ ವೇಳೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸಿಟಿ ರವಿ ಅವರು ಅವಾಚ್ಯ ಶಬ್ಧದಿಂದ ನಿಂದನೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್​​ ಸಿಟಿ ರವಿ ವಿರುದ್ಧ ಬೆಳಗಾವಿಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಸಿಟಿ ರವಿ ವಿರುದ್ಧ ಬಿಎನ್‌ಎಸ್ 2023 ರ ಸೆಕ್ಷನ್ 75, 79ಅಡಿಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಸಿಟಿ ರವಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಭಾರೀ ಸಂಚಲನ ಮೂಡಿಸಿತ್ತು. ಇನ್ನೇನು ಸಿಟಿ ರವಿ ಅವರನ್ನು ಕೋರ್ಟ್​ಗೆ ಹಾಜರುಪಡಿಸಿಲು ಬೆಳಗಾವಿಯಿಂದ ಬೆಂಗಳೂರಿಗೆ ಕರೆದೊಯ್ಯುವ ಸಮಯದಲ್ಲೇ ಜಾಮೀನು ಸಿಕ್ಕಿತ್ತು.

ಬಳಿಕ ಸಿಟಿ ರವಿ ತಮ್ಮ ವಿರುದ್ಧದ ಈ ಪ್ರರಕಣ ರದ್ದು ಕೋರಿ ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದ್ರೆ, ಹೈಕೋರ್ಟ್​ ಸಿಟಿ ರವಿ ಅರ್ಜಿ ವಜಾಗೊಳಿಸಿತ್ತು. ಈ ಮೂಲಕ ಪ್ರಕರಣ ರದ್ದುಗೊಳಿಸಲು ನಿರಾಕರಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಿಟಿ ರವಿ ಅವರು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದು, ಇದೀಗ ಸುಪ್ರೀಂಕೋರ್ಟ್​ ಪ್ರಕರಣದ ವಿಚಾರಣೆಗೆ ತಡೆ ನೀಡಿ ಆದೇಶಿಸಿದೆ.