ಗುಲ್ಝಾರ್ ಬಗ್ಗೆ ಬರೆದಿದ್ದಾರೆ ರಹಮತ್ ತರಿಕೆರೆ

ರೆಹಮತ್ ತರಿಕೆರೆ ಸಾರ್ ರವರ ಪೇಸ್ ಬುಕ್ ವಾಲ್ ನಿಂದ

ಉರ್ದು ಕವಿ ಗುಲ್ಜಾರ್ ಅವರಿಗೆ ಜ್ಞಾನಪೀಠ‌ ಬಂದಿದೆ. ಗುಲ್ಜಾರ್ ಮುಸ್ಲಿರಿರಬಹುದು ಎಂದು ಊಹಿಸಿದವರುಂಟು. ಅದು ಅವರ ಕಾವ್ಯನಾಮ. ಅವರ ಹೆಸರು ಸಂಪೂರ್ಣ ಸಿಂಗ್. ಉರ್ದುವಿನಲ್ಲಿ ಮೊದಲನೇ ಜ್ಞಾನಪೀಠ ಲಭಿಸಿದ್ದು ಗೋರಖಪುರದ ರಘುಪತಿ ಫಿರಾಖ್ ಅವರಿಗೆ. ಬಳಿಕ ಖುರ್ರತುಲೈನ್ ಹೈದರ್ ಅವರಿಗೆ. ಈಗ ಗುಲ್ಜಾರ್.

ನನ್ನ ಜತೆ ಕೇಂದ್ರ ಸಾಹಿತ್ಯ ಅಕಾದೆ‌ಮಿ ಬಹುಮಾನ ಸ್ವೀಕರಿಸಿದ ಉರ್ದು ಕವಿ ಶೀನ್ ಕಾಫ್ ನಿಝಾಂ ಜೈಪುರದವರು.‌ ಅವರ ಮೂಲ ಹೆಸರು ಶಿವಕೃಷ್ಣ ಬಿಸ್ಸಾ.‌ ಬುಸ್ಸಾ ಅವರು ನನ್ನಲ್ಲಿ ಕೇಳಿದರು ‘ಉರ್ದು ಮನೆಮಾತಿನ ನೀನು ಕನ್ನಡದಲ್ಲಿ ಬರೀತೀಯಾ. ನಾನು ಉರ್ದುವಿನಲ್ಲಿ ಬರೀತೇನೆ. ಆದರೆ ಮುಸ್ಲಿಮರು ನನ್ನನ್ನು ನಮ್ಮವನೆಂದೇ ಪರಿಭಾವಿಸಿಲ್ಲ. ಮುಶಾಯರಗಳಿಗೆ ಕರೆಯುವುದಿಲ್ಲ’ ಎಂದು ನನ‌್ನೊಡನೆ ವ್ಯಥೆ ತೋಡಿಕೊಂಡರು. ಇದೆಂತಹ ತರತಮ? ಅಜ್ಞಾನ?

ಉರ್ದು ಭಾರತದಲ್ಲಿ ಹುಟ್ಟಿದ, ಕೇವಲ ಭಾರತೀಯ ಉಪಖಂಡದಲ್ಲಿರುವ ಭಾಷೆ. ಇದರಲ್ಲಿ ಕೃಷ್ಞಚಂದ್ರ ಮೊದಲಾಗಿ ಎಲ್ಲ ಧರ್ಮದ ಲೇಖಕರೂ ಇದ್ದರು.‌ಇದನ್ನು ನಶ್ತಲಿಕ್ ಗುರುಮುಖಿ (ಪಂಜಾಬಿ), ದೇವನಾಗರಿ ಲಿಪಿಗಳಲ್ಲಿ ಬರೆಯಲಾಗುತ್ತಿತ್ತು. ಸ್ವಾತಂತ್ರ್ಯ ಚಳುವಳಿಯ ಏಕತೆ ಒಡೆಯಲು ಬ್ರಿಟಿಶರು ಹಿಂದು-ಮುಸ್ಲಿಂ ಒಡಕಿನ ಬೀಜ ಬಿತ್ತಿದರು.‌ ಈ ಒಡಕಿಗೆ ಎರಡೂ ಧರ್ಮಗಳಲ್ಲಿದ್ದ ಮೂಲಭೂತವಾದಿಗಳು ನೀರೆರೆದರು.‌ ತತ್ಫಲವಾಗಿ ಹಿಂದೂಸ್ತಾನಿಯಾಗಿದ್ದ ಒಂದು ಭಾಷೆ, ನಶ್ತಲಿಕ್ ನಾಗರಿ ಲಿಪಿಗಳಲ್ಲಿ ಬಟವಾಡೆಯಾಗಿ ಉರ್ದು- ಹಿಂದಿಗಳಾಗಿ ವಿಭಜಿತವಾಯಿತು. ಭಾಷಾವಿಜ್ಞಾನದ ಪ್ರಕಾರ ಹಿಂದಿ -ಉರ್ದು ಪ್ರತ್ಯೇಕ ಭಾಷೆಗಳೇ ಅಲ್ಲ‌. ಹಿಂದಿಯಲ್ಲಿ ಸಂಸ್ಕೃತ ಶಬ್ದಗಳು ಹೆಚ್ಚಿವೆ. ಉರ್ದುವಿನಲ್ಲಿ ಫಾರಸಿ ಅರಬ್ಬಿ ಮುಂದಿವೆ. ಆದರೆ ಅವುಗಳ ಬುನಾದಿಯಲ್ಲಿರುವ ವ್ಯಾಕರಣ ಒಂದೇ. ಎರಡೂ ಇಂಡೋ ಆರ್ಯನ್ ಒಂದೇ ನುಡಿಕುಟುಂಬಕ್ಕೆ ಸೇರಿದವು.

ಕರ್ನಾಟಕದ ಉರ್ದು ಕವಿಗಳಲ್ಲಿ ರಾಘವೇಂದ್ರರಾವ ಜಜ್ಬ್, ತನಹಾ ತಿಮ್ಮಾಪುರಿ, ಮಾಹೆರ್ ಮನ್ಸೂರ್, ಶಾಂತರಸ, ಮುದ್ದಣ್ಣ ಮನ್ಜರ್, ಸಂವರ್ತ ಸಾಹಿಲ್, ಪುರಾಣಿಕ, ಹಿರೇಮಠ, ಚಂದ್ರಕಾಂತ ಕುಸನೂರ ಮುಖ್ಯರು. ಸಂವರ್ತ ತಮ್ಮ ಉರ್ದು ಕವಿತೆಗಳಿಗೆ ರೋಮನ್ (ಆಂಗ್ಲ) ಲಿಪಿ ಬಳಸುತ್ತಾರೆ. ರಾಘವೇಂದ್ರರಾಯರ ಶ್ರೇಷ್ಠ ಪುಸ್ತಕ ‘ಉರ್ದು ಫಾರಸಿ ಸಾಹಿತ್ಯ’ ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿತು.

ನಾವು ಬಾಲಿವುಡ್ ಸಿನಿಮಾಗಳನ್ನು ಹಿಂದಿ ಸಿನಿಮಾ ಎನ್ನುತ್ತವೆ. ಆದರೆ ಅದರೊಳಗಿನ ಬಹುತೇಕ ಹಾಡು ಉರ್ದುವಿನಲ್ಲಿವೆ. ಅವನ್ನು ಗುಲ್ಜಾರ್, ಸಾಹಿರ್,ಶಕೀಲ್, ಕೈಫಿ ಆಜ್ಮಿ, ಜಾವೇದ ಅಖ್ತರ್ ಮೊದಲಾಗಿ ಉರ್ದು ಕವಿಗಳು ಬರೆದರು. ಲತಾ ಆಶಾ ನೂರಜಹಾನ ರಫಿ ಕಿಶೋರ್ ಮುಖೇಶ್ ಹಾಡಿದರು.

ಧರ್ಮ ಜನಾಂಗ ಭಾಷಾ ಪೂರ್ವಗ್ರಹಗಳು ಅಜ್ಞಾನದಿಂದ ಮಾತ್ರ ಹುಟ್ಟುವುದಿಲ್ಲ. ಜ್ಞಾನವಿದ್ದಾಗಲೂ ಹುಟ್ಟಬಲ್ಲವು. ಈ ಕಾಯಿಲೆಗೆ ಮದ್ದು ಎಲ್ಲಿದೆ?

ಗುಲ್ಜಾರ್ ಅವರಿಗೆ ಹಾರೈಕೆಗಳು.