ಮೂಕ ಕಣಿವೆಯೊಂದರಲ್ಲಿ ಹೂತು ಹೋದಂತಿದ್ದ ಗುಲ್ಜಾರ್
*ಮೂಕ ಕಣಿವೆಯೊಂದರಲ್ಲಿ ಹೂತು ಹೋದಂತಿದ್ದ ಗುಲ್ಜಾರ್*
_______________
ನಾವು ಅವರನ್ನು ನೋಡುತ್ತಿದ್ದರೆ ಯಾವುದೋ ರಾಗದ ಅಲೆಯಲ್ಲಿ ತೇಲಿದಂತೆ ಭಾಸವಾಗುತ್ತಿತ್ತು. ಅಥವಾ ಹೇಳಲಾಗದೇ ಇರುವ ಒಂದು ಭಾವವೊಂದು ಅವರನ್ನು ನೋಡಿದೊಡನೆ ಬಿಡುಗಡೆಯಾದಂತೆ ಅನಿಸುತ್ತಿತ್ತು. ಹಾಗಾಗಿ ಹರಡಿಕೊಂಡಿರುವ ಮರದ ನೆರಳಿನ ಕೆಳಗೆ ದಣಿವಾರಿಸಿಕೊಳ್ಳುವಂತೆ ಅವರ ಸುತ್ತ ಕುಳಿತು ನಮ್ಮೆಲ್ಲರ ಕತೆ-ಕಷ್ಟ-ಅನುಭವಗಳನ್ನು ಹೇಳುತ್ತಿದ್ದೆವು.
ಗುಲ್ಜಾರರನ್ನು ಹತ್ತಿರದಿಂದ ನೋಡಿದರೆ ಪಕ್ಕದಲ್ಲೇ ತೇಲುವ ಮೋಡದ ತುಂಡಿನ ಹಾಗೆ ಸ್ಫಟಿಕಶುದ್ಧವಾಗಿಯೂ-ಹಗುರವಾಗಿಯೂ ಕಾಣುತ್ತಿದ್ದರು. ಎಂಬತ್ನಾಲ್ಕು ವರ್ಷಗಳ ಪರಿಪಕ್ವ ಹರೆಯದಲ್ಲಿಯೂ ಬದುಕಿನ ಸಂತೋಷವನ್ನು ಸವಿಯುವ ಜೀವನದ ಉತ್ಸಾಹ ಕಿಂಚಿತ್ತೂ ಕೊಂಕಿದಂತೆ ಕಾಣುತ್ತಿರಲಿಲ್ಲ. ಗೋವಾದ ಮಡಗಾವ್‌ನಲ್ಲಿ ಖ್ಯಾತ ಕೊಂಕಣಿ ಲೇಖಕ ದಾಮೋದರ್ ಮಾವಜೋರವರ (ಕಳೆದ ವರ್ಷ ಅವರಿಗೂ ಜ್ಞಾನಪೀಠ ಪ್ರಶಸ್ತಿ ಬಂದಿದೆ) ಎಪ್ಪತ್ತೊಂದನೇ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ಹಿಂದಿಯ ಪ್ರಸಿದ್ಧ ಕವಿ ಅಶೋಕ್ ವಾಜಪೇಯಿ, ಇಂಗ್ಲಿಶ್‌ನಲ್ಲಿ ಬರೆಯುವ ವಿಮರ್ಶಕ-ವಿದ್ವಾಂಸರಾದ ಹರೀಶ್ ತ್ರಿವೇದಿ ಹಾಗೂ ಗುಲ್ಜಾರ್ ಮೊದಲಾದವರನ್ನು ಸೇರಿದಂತೆ ದೇಶದ ಹಲವು ಭಾಗಗಳಿಂದ ಮಾವಜೋರವರ ಸಾಹಿತ್ಯವನ್ನು ಚರ್ಚಿಸಲು ಅಲ್ಲಿ ಸೇರಿದ್ದೆವು. 2019 ರ ಆಗಸ್ಟ್ ಮೊದಲವಾರದಲ್ಲಿ ಹೊರಗೆ ಸುರಿಯುತ್ತಿದ್ದ ಮಳೆ ಪಕ್ಕದಲ್ಲಿಯೇ ಇದ್ದ ಸಮುದ್ರದ ಭರಾಟೆಯೊಂದಿಗೆ ಪೈಪೋಟಿಗೆ ಇಳಿದಂತಿತ್ತು. ಹಗಲಿರುಳೆನ್ನದೆ ಮೂರುದಿನಗಳಿಂದ ಇಡೀ ದಿನ ಸುರಿಯುತ್ತಿದ್ದ ಮಳೆಯ ನಡುವೆ ನಮಗೆ ಗುಲ್ಜಾರರ ಸುತ್ತಮುತ್ತ ಕುಳಿತು ತಿಳಿದಿದ್ದನ್ನು ಹೇಳಿ ನಿರಾಳವಾಗುವ ಹೊರತು ಬೇರೇನೂ ಕಾಣುತ್ತಿರಲಿಲ್ಲ.
ಲೇಖಕ ದಾಮೋದರ್ ಮಾವಜೋರವರ ಕುಟುಂಬದ ಸುಮಾರು ಇಪ್ಪತ್ತೊಂದು ಜನರ ಗುಂಪಿನಲ್ಲಿ ಎಲ್ಲರೂ ತಮಗೆ ತೋಚಿದ್ದನ್ನು ಅರುಹುತ್ತಿದ್ದರು. ಮಾತು ಸಾಕೆನಿಸಿದಾಗ ವಾದ್ಯಗಳೊಂದಿಗೆ ಕೊಂಕಣಿ ಹಾಡುಗಳು- ಕ್ರಾಂತಿಗೀತೆಗಳನ್ನು ಹಾಡುತ್ತ ಹೊಸ ಉಮೇದನ್ನು ತುಂಬುತ್ತಿದ್ದರು. ಮಾತುಗಳು ಚುನಾವಣೆಗಳಿಂದ ಶುರುವಾಗಿ ದೇಶದಲ್ಲಿಂದು ಜನ ಒಬ್ಬರನ್ನೊಬ್ಬರು ಅನುಮಾನಿಸುವ, ಅಸಹ್ಯ ಪಡುವ, ಹತ್ಯೆ ಮಾಡುವ ಸಂಗತಿಗಳು ಯಾಕೆ-ಹೇಗೆ ಜರುಗುತ್ತಿವೆ ಎಂಬುದನ್ನು ಹೇಳಲಾರಂಭಿಸಿದರು. ಅಲ್ಲಿಯವರೆಗೆ ಸಹಜವಾಗಿ ಮಾತಾಡಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದ ಗುಲ್ಜಾರರು ಈ ಮಾತುಗಳು ಶುರುವಾಗುತ್ತಿದ್ದಂತೆ ನಿಟ್ಟುಸಿರು ಬಿಡುತ್ತ ಮೌನಕ್ಕೆ ಜಾರಿಬಿಟ್ಟರು.
ಒಬ್ಬರು ತಮ್ಮೂರಿನಲ್ಲಿ ಜೊತೆಗೇ ಇರುವ ಮಂದಿ ಮನೆಗೆ ಕಲ್ಲು ತೂರಿದ್ದನ್ನು ಹೇಳಿದರು. ಇನ್ನೊಬ್ಬರು ತಾವು ಕಲಿಸುವ ಶಾಲೆಯಲ್ಲಿ ಎಲ್ಲ ಮೇಷ್ಟರುಗಳೂ ಸೇರಿದ್ದ ಸಭೆಯೊಂದು ಸೇರಿದ್ದಾಗ ಉರ್ದುವಿನಲ್ಲಿದ್ದ ಯಾವುದೋ ಪೋಸ್ಟರನ್ನು ಹರಿದು ಇಂಥವುಗಳನ್ನು ನೋಡಿದರೆ ನನಗೆ ಎಲ್ಲಿಲ್ಲದ ರೋಷವುಕ್ಕುತ್ತದೆ ಎಂದು ಪೋಸ್ಟರನ್ನು ಹರಿದು ಚಿಂದಿಚಿಂದಿ ಮಾಡಿ ಕಾಲಲ್ಲಿ ಹೊಸಕಿದ್ದನ್ನು ವಿವರಿಸುತ್ತಿದ್ದರು. ಅಕ್ಕಪಕ್ಕದವರೆಲ್ಲ ತಮ್ಮ ಅನುಕೂಲಕ್ಕೆ ತಕ್ಕಂತೆ ಒಳ್ಳೆಯ ಮನೆ ಸಿಕ್ಕೊಡನೆ ವರ್ಷಕ್ಕೊಮ್ಮೆ ಮನೆ ಬದಲಾಯಿಸಿಕೊಂಡು ಆರಾಮವಾಗಿ ಇರುವಾಗ, ಬಾಡಿಗೆ ನೀಡಲು ರೆಡಿ ಇದ್ದರೂ ಇಪ್ಪತ್ತು ವರ್ಷದಲ್ಲಿ ಒಂದೇ ಒಂದು ಮನೆಯನ್ನು ಬದಲಾಯಿಸಲು ಸಾಧ್ಯ ಆಗದಿರುವ ಸಂಕಟವನ್ನು ಇನ್ನೊಬ್ಬರು ಹೇಳುತ್ತಿದ್ದರು. ಇನ್ನೊಬ್ಬರು ಮದುವೆಗೆಂದು ಒಟ್ಟಾಗಿ ಬಂಧುಬಳಗದವರೆಲ್ಲ ಹೋಗುತ್ತಿದ್ದಾಗ ಅವರ ಗಡ್ಡಪೈಜಾಮಗಳನ್ನು ನೋಡಿದೊಡನೆ ‘ನೋಡ್ರಪ್ಪಾ ಯಾರೋ ಈ ಊರಿಗೆ ಉಗ್ರಗಾಮಿಗಳು ಬಂದುಬಿಟ್ಟರಲ್ಲೋ’ ಎಂದು ಎಲ್ಲರಿಗೂ ಕೇಳುವಂತೆ ಹೇಳಿದ್ದನ್ನು ಕೇಳಿ ವಿಚಲಿತರಾಗಿದ್ದನ್ನು ಹೇಳುತ್ತಿದ್ದರು. ಇನ್ನೊಬ್ಬರು ಮನೆಗೆ ಕಂಪ್ಯೂಟರೊಂದನ್ನು ಖರೀದಿಸಿದಾಗ ಅದರಲ್ಲಿ ತಮಗೆ ಬೇಕಾಗಿರುವ ಹಲವು ಪ್ರೋಗ್ರಾಮ್‌ಗಳನ್ನು ಅದಕ್ಕೆ ಅಳವಡಿಸಿಕೊಂಡಿದ್ದರು. ಪ್ರೋಗ್ರಾಮುಗಳನ್ನು ಅಳವಡಿಸಲು ಬಂದಿದ್ದ ಹುಡುಗ ನೋಡಲು ಬಹಳ ಸಂಭಾವಿತನೂ-ಬಡವನೂ ಆಗಿರುವಂತೆ ಕಾಣುತ್ತಿದ್ದು ಅವನು ಜೀವನೋಪಾಯಕ್ಕೆ ಕಂಪ್ಯೂಟರ್ ಕೆಲಸವನ್ನೂ, ಅಕ್ಕತಂಗಿಯರನ್ನು ಸಲಹುವುದಕ್ಕಾಗಿ ಚಟ್ನಿಪುಡಿ ಮಾಡಿ ಜೀವನ ಸರಿದೂಗಿಸುತ್ತಿದ್ದೇನೆಂದು ಹೇಳಿದ್ದನು. ಹಲವು ವರ್ಷಗಳ ನಂತರ ಕಂಪ್ಯೂಟರ್ ರಿಪೇರಿಗೆ ಬಂದು ಇನ್ನಾವುದೋ ಕಡೆ ರಿಪೇರಿಗೆ ಕೊಂಡೊಯ್ದಾಗ ಹಳೆಯ ಪ್ರೋಗ್ರಾಮುಗಳನ್ನು ಅಳಿಸಿ ಹೊಸದನ್ನು ಅಳವಡಿಸಬೇಕಾಯಿತು. ಹಳೆಯದರಲ್ಲಿ ನಿಮಗೆ ಯಾವುದು ಬೇಕು ಯಾವುದು ಬೇಡ ಎಂಬುದನ್ನು ಹೇಳಿ ಎಂದು ರಿಪೇರಿಯವನು ಸದ್ಯ ಇರುವ ಪ್ರೋಗ್ರಾಮುಗಳ ಪಟ್ಟಿ ನೀಡಿದಾಗ ಅದರಲ್ಲಿದ್ದ ಒಂದು ಹೆಸರನ್ನು ನೋಡಿ ಏನು ಹೇಳಬೇಕೆಂದು ತೋಚಲಿಲ್ಲ. ಅಲ್ಲಿದ್ದ ಒಂದು ಪ್ರೋಗ್ರಾಮಿನಲ್ಲಿ ಬಾಂಬುಗಳನ್ನು ಹೇಗೆ ತಯಾರಿಸಬಹುದು, ಅವಕ್ಕೆ ಬೇಕಾದ ಸಲಕರಣೆಗಳನ್ನು ಹೇಗೆ ಜೊಡಿಸಿ, ಸ್ಫೋಟಿಸಬೇಕು ಎಂಬ ಸಚಿತ್ರ ವಿವರಣೆಗಳು ಇದ್ದವು. ಅಷ್ಟೇ ಅಲ್ಲದೆ ಯಾವ ಬಾಂಬನ್ನು ಯಾವ ಹೊತ್ತಲ್ಲಿ ಸ್ಫೋಟಿಸಿದರೆ ಅಂದಾಜು ಎಷ್ಟು ಜನ ಸಾಯಬಹುದು ಎಂಬ ಅಂಕಿಅಂಶಗಳೂ ಅಲ್ಲಿದ್ದವು. ಇನ್ನೊಂದು ಊರಿನಲ್ಲಿ ಸಣ್ಣದೊಂದು ಗ್ಯಾಸ್ಟ್ರಿಕ್ ಸಮಸ್ಯೆಗೆ ಆಯುರ್ವೇದ ತಜ್ಞರೊಬ್ಬರ ಬಳಿ ಹೋದಾಗ ಅಗತ್ಯಕ್ಕಿಂತ ಹೆಚ್ಚು ಓವರ್‌ಡೋಸಿನ ಮಾತ್ರೆ ಕೊಟ್ಟಿದ್ದ ಡಾಕ್ಟರ್ ಸ್ಥಳೀಯ ಕೋಮುವಾದಿ ಸಂಘಟನೆಯ ಕಾರ್ಯಕರ್ತನೆಂದೂ ಹೀಗೆ ಯಾವುದೇ ಹತ್ಯಾರುಗಳಿಲ್ಲದೆ ಅನ್ಯಕೋಮಿನವರನ್ನು ವ್ಯವಸ್ಥಿತವಾಗಿ ಮುಗಿಸುವುದು ಆತ ನಂಬಿರುವ ಸಂಘಟನೆಯ ಧ್ಯೇಯವೆಂದು ಗೊತ್ತಾದ ಮೇಲೆ ಅಂದಿನಿಂದ ತನ್ನ ನಿಜವಾದ ಹೆಸರನ್ನು ಡಾಕ್ಟರ ಬಳಿ ಹೇಳುವುದೋ ಬೇಡವೋ ಎಂಬುದು ಕಾಯಿಲೆಗಿಂತ ಗಂಭೀರ ಸಮಸ್ಯೆಯಾಗಿದೆ ಎಂದು ಇನ್ನೊಬ್ಬರು ಅತಂಕಗೊಂಡಿದ್ದರು.
ಇದೆಲ್ಲವನ್ನೂ ಮುಗಿಸುವಷ್ಟರಲ್ಲಿ ರಾತ್ರಿ ಬಹಳ ಕರಾಳವಾಗಿತ್ತು. ನಾವಾಡುವ ಮಾತುಗಳು ನಮಗೇ ರಾಚುವಷ್ಟು ಮೌನ ಅಲ್ಲಿ ಆವರಿಸಿಕೊಂಡಿತ್ತು. ಇದನ್ನೆಲ್ಲ ಹೇಳಿ ಎಲ್ಲರೂ ಹೀರೋಗಳಾಗಲು ಹೊರಟಿದ್ದಾರಾ ಎಂದು ಹರೀಶ್ ತ್ರಿವೇದಿಯವರು ನನ್ನ ಮಡದಿಯನ್ನು ಛೇಡಿಸುತ್ತಿದ್ದರು. ಗುಲ್ಜಾರರು ಏನಾದರೂ ಹೇಳಬಹುದೆಂದು ಕಾಯುತ್ತಿದ್ದೆವು. ದೇಶವಿಭಜನೆಯ ರಕ್ತಸಿಕ್ತ ಇತಿಹಾಸವನ್ನು ಕಣ್ಣಾರೆ ಕಂಡು ಕವಿತೆಬರೆದು ಸಿನಿಮಾ ಮಾಡಿದ ಅವರು ಮಾತಾಡಿ ಎಂದು ಮನವಿ ಮಾಡಿದರೂ ಏನೂ ಹೇಳದೆ ಮೂಕ ಕಣಿವೆಯೊಂದರಲ್ಲಿ ಹೂತು ಹೋದಂತೆ ಅನಿಸುತಿತ್ತು. ಮಾವಜೋರವರು ಗುಲ್ಜಾರರು ರಾಜಕೀಯವನ್ನು ಕುರಿತು ಮಾತನಾಡುವುದಿಲ್ಲ ಎಂದರು. ಕೊನೆಗೆ ಗುಲ್ಜಾರರು ಸ್ವಗತದಂತೆ “ರಾಸ್ತೆ ಪೆ ಚಲ್‌ನೇ ವಾಲಾ ಆದಮೀ ಅಭೀ ಇತನಾ ಬುರಾ ನಹೀಹೈ’’ (ರಸ್ತೆಯಲ್ಲಿ ಓಡಾಡುವ ಮನುಷ್ಯನಿನ್ನೂ ಅಷ್ಟು ದುರುಳನಾಗಿಲ್ಲ) ಎನ್ನುವಾಗ ಅವರ ಮುಖದಲ್ಲಿ ಮೋಡದ ಮೇಲೆ ಹೊಳೆವ ಎಳೆಬಿಸಿಲಿನಂಥ ಮಂದಸ್ಮಿತವಿತ್ತು. ಅವರು ಗುನುಗಿದ ಕವಿತೆಯೊಂದು ಅಲ್ಲಿನ ಮೌನವನ್ನು ನೀರ್ಗಲ್ಲಿನಂತೆ ಇನ್ನಷ್ಟು ಗಾಢವಾಗಿಸಿಬಿಟ್ಟಿತು.
ಏಕ್ ಶೇರ್ ಹೈ ಮುಝಮೆ
ಜೋ ಖಾಮೋಶ್ ಬಹುತ್ ಹೈ
(ನನ್ನೊಳಗೆ ಕವಿತೆಯೊಂದಿದೆ
ಅದು ಯಾಕೋ ಬಹಳ ಮೌನವಾಗಿದೆ)
-ಎಸ್.ಸಿರಾಜ್ ಅಹಮದ್
ರೇಖಾಚಿತ್ರ: ಸೋನಮ್ ರೋಜಾ