ಪ್ರತಿಷ್ಢಿತ ಔಟ್ ಲುಕ್- ಐಕೇರ್ (ICARE): ಕುವೆಂಪು ವಿವಿಗೆ 30ನೇ ರ್ಯಾಂಕ್* *ನ್ಯಾಕ್ ‘ಎ’ ಶ್ರೇಣಿಯ ಜೊತೆಗೆ ಮತ್ತೊಂದು ಹೆಮ್ಮೆಯ ಗರಿ* *ಆ. 29 ಮತ್ತು 30ಕ್ಕೆ ಸ್ನಾತಕೋತ್ತರ ಪ್ರವೇಶಾತಿ ಕೌನ್ಸಿಲಿಂಗ್*
*ಪ್ರತಿಷ್ಢಿತ ಔಟ್ ಲುಕ್- ಐಕೇರ್ (ICARE): ಕುವೆಂಪು ವಿವಿಗೆ 30ನೇ ರ್ಯಾಂಕ್*
*ನ್ಯಾಕ್ ‘ಎ’ ಶ್ರೇಣಿಯ ಜೊತೆಗೆ ಮತ್ತೊಂದು ಹೆಮ್ಮೆಯ ಗರಿ*
*ಆ. 29 ಮತ್ತು 30ಕ್ಕೆ ಸ್ನಾತಕೋತ್ತರ ಪ್ರವೇಶಾತಿ ಕೌನ್ಸಿಲಿಂಗ್*
ಶಂಕರಘಟ್ಟ, ಆ. 20: ಇತ್ತೀಚೆಗೆ ಪ್ರತಿಷ್ಠಿತ ಮ್ಯಾಗಜಿನ್ ಔಟ್ ಲುಕ್- ಐಕೇರ್ ಸಂಸ್ಥೆ ಬಿಡುಗಡೆ ಮಾಡಿರುವ ದೇಶದ ಸಾರ್ವಜನಿಕ ವಿಶ್ವವಿದ್ಯಾಲಯದ ರ್ಯಾಂಕಿಂಗ್ ನಲ್ಲಿ ಕುವೆಂಪು ವಿವಿ 30ನೇ ಶ್ರೇಣಿ ಪಡೆದು ಮಹತ್ವದ ಸಾಧನೆ ಮಾಡಿದೆ.
ಕಳೆದ ತಿಂಗಳು ನ್ಯಾಕ್ ನಿಂದ ‘ಎ’ ಶ್ರೇಣಿ ಪಡೆದು ಹೆಮ್ಮೆ ಮೂಡಿಸಿದ್ದ ವಿವಿ, ಮತ್ತೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದೆ.
ಐದು ಮಾನದಂಡಗಳಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು 1000 ಅಂಕಗಳಿಗೆ ಮೌಲ್ಯಮಾಪನ ಮಾಡಿರುವ ರ್ಯಾಂಕಿಂಗ್ ಶೈಕ್ಷಣಿಕ ಮತ್ತು ಸಂಶೋಧನಾ ಚಡುವಟಿಕೆಗಳಿಗೆ 400 ಅಂಕಗಳು, ಕೈಗಾರಿಕಾ ವಿನಿಮಯಕ್ಕೆ 200 ಅಂಕಗಳು, ಮೂಲಭೂತ ಸೌಕರ್ಯಗಳಿಗೆ 150 ಅಂಕಗಳು, ಆಡಳಿತ ಮತ್ತು ವಿಸ್ತರಣೆಗೆ 150 ಅಂಕಗಳು ಹಾಗೂ ವೈವಿಧ್ಯತೆ ಚಟುವಟಿಕೆಗಳಿಗೆ 100 ಅಂಕಗಳನ್ನು ನಿಗದಿಗೊಳಿಸಲಾಗಿದೆ.
ಕುವೆಂಪು ವಿವಿ ಒಟ್ಟು 862.25 ಅಂಕಗಳೊಂದಿಗೆ 30ನೇ ಸ್ಥಾನ ಪಡೆದಿದೆ. ಉಳಿದಂತೆ ಕರ್ನಾಟಕದ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ 6ನೇ ಸ್ಥಾನ ಪಡೆದಿದ್ದರೆ, ಮೈಸೂರು ವಿವಿ 08ನೇ ಸ್ಥಾನ ಮತ್ತು ಬೆಂಗಳೂರು ವಿವಿ 24ನೇ ಸ್ಥಾನ ಮತ್ತು ಮಂಗಳೂರು ವಿವಿ 44ನೇ ಸ್ಥಾನ ಪಡೆದು, ದೇಶದ ಟಾಪ್ 50ರೊಳಗೆ ಸ್ಥಾನ ಪಡೆದಿವೆ.
“ಮಲೆನಾಡು ಭಾಗದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿರುವ ಕುವೆಂಪು ವಿವಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಕೊಡಮಾಡುತ್ತಿರುವುದನ್ನು ಈ ರ್ಯಾಂಕಿಂಗ್ ಮತ್ತೊಮ್ಮೆ ಸಾಬೀತು ಪಡಿಸಿದೆ” ಎಂದು ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಪ್ರತಿಕ್ರಿಯಿಸಿದ್ದಾರೆ.
*ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಾತಿ:* ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಾತಿ ಕೌನ್ಸಿಲಿಂಗ್ ಆ. 29 ಮತ್ತು 30ಕ್ಕೆ ನಿಗದಿಯಾಗಿದ್ದು, ವಿದ್ಯಾರ್ಥಿಗಳು ಆ. 22ರವರೆಗೆ ಪ್ರವೇಶಾತಿಗೆ ಅರ್ಜಿ ಸಲ್ಲಿಸಬಹುದು.