Karnataka caste census: ಜಾತಿ ಗಣತಿ ಬಗ್ಗೆ ಚರ್ಚಿಸಲು ಏ. 17ಕ್ಕೆ ಕರ್ನಾಟಕ ಸಚಿವ ಸಂಪುಟ ವಿಶೇಷ ಸಭೆ*

*Karnataka caste census: ಜಾತಿ ಗಣತಿ ಬಗ್ಗೆ ಚರ್ಚಿಸಲು ಏ. 17ಕ್ಕೆ ಕರ್ನಾಟಕ ಸಚಿವ ಸಂಪುಟ ವಿಶೇಷ ಸಭೆ*

ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ ಜಾತಿ ಗಣತಿ (Caste Census) ವರದಿ ಅನುಷ್ಠಾನ ಸಂಬಂಧ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Karnataka Cabinet Meeting) ಮಹತ್ವದ ಚರ್ಚೆಯಾಗಿದೆ. ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಜಾರಿಯ ಸಾಧ್ಯಾಸಾಧ್ಯತೆ ಬಗ್ಗೆ ಚರ್ಚಿಸಲಾಗಿದ್ದು, ಅಂತಿಮವಾಗಿ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದೆಂದು ನಿರ್ಧರಿಸಲಾಯಿತು.

ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ಲಕೋಟೆ ಓಪನ್ ಮಾಡಲಾಯಿತು. ಸಚಿವರ ಕೈಗೆ ಜಾತಿ ಗಣತಿ ದತ್ತಾಂಶ ನೀಡಿದ ಬಳಿಕ ಆ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು. ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಆಲಿಸಿದ ಸಿದ್ದರಾಮಯ್ಯ, ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬಂದರು.

ಜನ ಗಣತಿ ಸಮೀಕ್ಷಾ ವರದಿಯನ್ನು 2024ರ ಫೆಬ್ರವರಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದಾದ ನಂತರ ಜಾತಿ ಗಣತಿ ವರದಿ ಸೋರಿಕೆಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು.

ಏಪ್ರಿಲ್ 17 ರಂದು ಜಾತಿ ಗಣತಿ ಸಂಬಂಧ ವಿಶೇಷ ಸಂಪುಟ ಸಭೆ
ಏಪ್ರಿಲ್ 17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಜಾತಿ ಗಣತಿ ವಿಚಾರವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.

*ಜನ ಗಣತಿ ಸಮೀಕ್ಷಾ ವರದಿ: ಏನೇನಿರಲಿವೆ?*
ಪೆಟ್ಟಿಗೆ 1

*2015 ರ ಸಮೀಕ್ಷೆಯ ಸಮಗ್ರ ವರದಿ*

ಜಾತಿವಾರು ಜನಸಂಖ್ಯಾ ವಿವರ – 1 ಸಂಪುಟ
ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಜಾತಿ)– 1 ಸಂಪುಟ
ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಪಂಗಡಗಳು)– 1 ಸಂಪುಟ
ಜಾತಿ, ವರ್ಗಗಳ ಪ್ರಮುಖ ಲಕ್ಷಣಗಳು (ಎಸ್‌ಸಿಎಸ್‌ಟಿ ಬಿಟ್ಟು )– 7 ಸಂಪುಟಗಳು
ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿಅಂಶಗಳು ( 2 ಸಿ.ಡಿಗಳು)
2015 ರ ಸಮೀಕ್ಷೆಯ ‘ದತ್ತಾಂಶಗಳ ಅಧ್ಯಯನ ವರದಿ–2024’
ಪೆಟ್ಟಿಗೆ 2

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಮಾಹಿತಿಯ ಜಾತಿ, ವರ್ಗವಾರು (ಎಸ್‌ಸಿಎಸ್‌ಟಿ ಬಿಟ್ಟು )– 4 ಸಂಪುಟಗಳು
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಮಾಹಿತಿಯ ಜಾತಿ, ವರ್ಗವಾರು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು) – 1 ಸಂಪುಟ
ತಾಲ್ಲೂಕುವಾರು, ಜಾತಿವಾರು ಕುಟುಂಬಗಳು ಹಾಗೂ ಜನಸಂಖ್ಯೆಯ ವರದಿ– 30 ಸಂಪುಟಗಳು
ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದ ಕುರಿತ ದ್ವಿತೀಯ ಮೂಲಗಳಿಂದ ಪಡೆದ ವಿವರಗಳು– 1 ಸಂಪುಟ

ಈ ಮಧ್ಯೆ, ಜಾತಿ ಗಣತಿ ವಿಚಾರವಾಗಿ ಶುಕ್ರವಾರ ಕೂಡ ವಿಪಕ್ಷಗಳ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಕುರ್ಚಿ ಕಳೆದುಕೊಳ್ಳುವ ಭೀತಿ ಎದುರಾದಾಗಲೆಲ್ಲ ಸಿದ್ದರಾಮಯ್ಯಗೆ ಜಾತಿ ಗಣತಿ ವರದಿ ನೆನಪಾಗುತ್ತದೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.