ಡಿ.ದೇವರಾಜ ಅರಸು-ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದ ಹೆಸರು : ಚಂದ್ರಭೂಪಾಲ*

*ಡಿ.ದೇವರಾಜ ಅರಸು-ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದ ಹೆಸರು : ಚಂದ್ರಭೂಪಾಲ*

ಮಹಾ ಮಾನವತಾವಾದಿ ಹಾಗೂ ಹಿಂದುಳಿದವರ, ನೊಂದವರ ಏಳ್ಗೆಗಾಗಿ ಶ್ರಮಿಸಿದ ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸುರವರ ಹೆಸರು ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಹರಿಕಾರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸುರವರ 110 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

12 ನೇ ಶತಮಾನದಲ್ಲಿ ಹೇಗೆ ದಮನಿತರು, ಹಿಂದುಳಿದವರನ್ನು ಮುಂಚೂಣಿಗೆ ತರಲು ಅನುಭವ ಮಂಟಪದ ಮೂಲಕ ಬಸವಾದಿ ಶರಣರು ಕ್ರಾಂತಿ ನಡೆಸಿದರೋ ಅದೇ ರೀತಿಯಲ್ಲಿ ಅರಸುರವರು ಮುಖ್ಯಮಂತ್ರಿಯಾಗಿ ನಮ್ಮ ಸಂವಿಧಾನದ ಆಶಯಗಳನ್ನು, ಮಾರ್ಗಸೂಚಿಗಳನ್ನು ಅನುಷ್ಟಾನಗೊಳಿಸುವ ಮೂಲಕ ಅನೇಕ ಸುಧಾರಣೆಗಳನ್ನು ರಾಜ್ಯದಲ್ಲಿ ತಂದರು. ಇವರು ಹಿಂದುಳಿದವರು, ದಲಿತರು, ನೊಂದವರ ಏಳ್ಗೆಗಾಗಿ ಅನೇಕ ಕಾಯ್ದೆ, ಕಾರ್ಯಕ್ರಗಳು, ಯೋಜನೆಗಳನ್ನು ಜಾರಿಗೊಳಿಸಿ, ಸುಧಾರಣೆ ತಂದರು. ಇವರ ಸಾಧನೆಯನ್ನು ಎಷ್ಟು ಹೇಳಿದರೂ ಸಾಲದು.

ಎಲ್ಲ ವರ್ಗಗಳನ್ನು ಗೌರವಿಸುತ್ತಿದ್ದ ಅರಸುರವರು ಹಿಂದುಳಿದ ವರ್ಗಗಳಿಗಾಗಿ ಹಾವನೂರು ವರದಿ ಜಾರಿಗೆ ತರುವ ಮೂಲಕ ಸಾಕಷ್ಟು ಸುಧಾರಣೆ ತಂದರು. ಜೀತ, ಮಲ ಹೊರುವ ಪದ್ದತಿ ನಿಷೇಧ, ಉಳುವವನೇ ಭೂ ಒಡೆಯ, ಭೂಸುಧಾರಣಾ ಕಾಯ್ದೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿನಿಲಯಗಳು, ಗ್ರಾಮಾಂತರ ಮಕ್ಕಳ ಆರೋಗ್ಯ ರಕ್ಷಣೆ, ಭಾಗ್ಯಜ್ಯೋತಿ ಯೋಜನೆ, ವೃದ್ಯಾಪ್ಯ ವೇತನ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರು.

ತಮ್ಮ ಅಧಿಕಾರ ಅವಧಿಯಲ್ಲಿ ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿರುವ ಇವರು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ಅವಕಾಶ ದೊರೆತಾಗ ಹಿಂದುಳಿದ ವರ್ಗಗಳ ವ್ಯಕ್ತಿಗಳಿಗೆ ಟಿಕೆಟ್ ನೀಡಿ ವಿಧಾನಸೌಧಕ್ಕೆ ಪ್ರವೇಶಿಸುವಂತೆ ಮಾಡಿದರು ಎಂದು ಸ್ಮರಿಸಿದರು.

ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಮಾತನಾಡಿ, ಅರಸುರವರನ್ನು ನಾವು ಕಣ್ಣಿಂದ ಕಾಣದಿದ್ದರೂ ಅವರ ಸಾಧನೆ, ಕೊಡುಗೆಗಳನ್ನು ಕಾಣುತ್ತಿದ್ದೇವೆ. ಅವರ ಮುಂದಾಲೋಚನೆಯಿAದಾಗಿ ಹಿಂದುಳಿದ ವರ್ಗಗಳು, ಎಸ್‌ಸಿ ಎಸ್‌ಟಿ ಹಾಗೂ ಹೆಣ್ಣುಮಕ್ಕಳಿಗೆ ರಾಜ್ಯಾದ್ಯಂತ ವಸತಿನಿಲಯಗಳ ಸೌಲಭ್ಯ ಕಲ್ಪಿಸಿ, ವಿದ್ಯೆ ಪಡೆಯಲು ಅತ್ಯಂತ ಸಹಕಾರಿಯಾಗಿದೆ. ಭೂ ಸುಧಾರಣೆ ಕಾಯ್ದೆಯಿಂದ ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ಜನರಿಗೆ ಭೂಮಿ ಲಭಿಸಿದೆ. ಎಲ್ಲ ವರ್ಗಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದ ಅವರು ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯನ್ನಾಗಿ ಮಾಡಲು ಸಹ ಅಡಿಗಲ್ಲು ಹಾಕಿದ್ದರು. ಎಲ್ಲರ ಅಭಿವೃದ್ಧಿಯಾದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದು ನಂಬಿದ್ದ ಅವರ ಮಾರ್ಗದಲ್ಲಿ ನಾವೆಲ್ಲ ಸಾಗೋಣ ಎಂದು ತಿಳಿಸಿದರು.

ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ.ಜಿ.ಪ್ರಶಾಂತ್ ನಾಯಕ್ ಅರಸುರವರ ಜೀವನ ಚರಿತ್ರೆ ಮತ್ತು ಸಾಧನೆಗಳು ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅರಸುರಂತಹ ಮಹಾನ್ ವ್ಯಕ್ತಿಗಳ ಜನ್ಮ ದಿನಗಳು ಆತ್ಮಾವಲೋಕನದ ದಿನಾಚರಣೆಗಳಾಗಬೇಕು. ಅವಲೋಕನದ ಮೂಲಕ ಎಚ್ಚರಗೊಳ್ಳಬೇಕಿದೆ. ಡಿ.ದೇವರಾಜ ಅರಸುರವರು ರಾಜ್ಯದ ಅಸ್ಮಿತೆ ಹಾಗೂ ಹೆಮ್ಮೆ. ಅವರ ವ್ಯಕ್ತಿತ್ವ, ಅಧಿಕಾರದ ಅವಧಿಯಲ್ಲಿ ಕೈಗೊಂಡ ಸಾಧನೆಗಳು ನಿರಂತರವಾಗಿ ನಮ್ಮನ್ನು ಕಾಡುತ್ತಿವೆ. ಇವರ ಬಗ್ಗೆ ಇರುವಷ್ಟು ಬರಹಗಳು, ಪುಸ್ತಕಗಳು ಬೇರೆ ಯಾವ ರಾಜಕಾರಣಿಗಳ ಬಗ್ಗೆ ಇರಲಿಕ್ಕಿಲ್ಲ. ಇದು ಇವರ ಕಾಡುವಿಕೆಗೆ ಸಾಕ್ಷಿಯಾಗಿದೆ.
ಇತಿಹಾಸದುದ್ದಕ್ಕೂ ಆಗಾಗ್ಗೆ ಸತ್ವಶಾಲಿ ವ್ಯಕ್ತಿಗಳ ಉಗಮವಾಗಿತ್ತದೆ. ಬುದ್ದ, ಬಸವ ,ಗಾಂಧಿ, ಅಂಬೇಡ್ಕರ್ , ಇದೇ ರೀತಿಯಲ್ಲಿ ಹೀಗೊಬ್ಬ ಅರಸು ಹುಟ್ಟುತ್ತಾರೆ. ಜಾತಿಗಳನ್ನು ಮೀರಿ ಏನನ್ನೋ ಕಟ್ಟಬೇಕಿದೆ ಎಂದು ಜಾತ್ಯಾತೀತ ಕನಸು ಕಟ್ಟುತ್ತಾರೆ. ಆದರೆ ಜಾತಿಗಳು ಅಹಂಕಾರವಾಗಿ ಪರಿವರ್ತನೆ ಆಗಿವೆ. ಜಾತಿ ವ್ಯವಸ್ಥೆ ದುರ್ಗತಿಗೆ ಬಂದು ನಿಂತಿದೆ.

ಸಂವಿಧಾನವನ್ನು ಅರಿತು ದಿಟ್ಟ ಹೆಜ್ಜೆ ಇಟ್ಟ ಅರಸು ನಿಜವಾದ ಸಾಂಸ್ಕೃತಿಕ ರಾಜಕಾರಣ ನಡೆಸಿದರು. ಓರ್ವ ಮುಖ್ಯಮಂತ್ರಿಯಾಗಿ ಹಲವಾರು ಸಂಕಟಗಳನ್ನು ನುಂಗಿ ನಿಜ ಹಾದಿಯಲ್ಲಿ ಸಾಗಿದರು. 1972 ರಲ್ಲಿ ಟಿಕೆಟ್ ಹಂಚುವ ಅಧಿಕಾರ ದೊರೆತಾಗ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ 133 ಪರಿಶಿಷ್ಟರಿಗೆ, ಹಿಂದುಳಿದ ವರ್ಗಗಳು, ಮತೀಯ ಅಲ್ಪಸಂಖ್ಯಾತರಿಗೆ 133 ಸೀಟುಗಳು ಮತ್ತು ಲಿಂಗಾಯತ ಇತರೆ ವರ್ಗದವರಿಗೆ 9 ಸೀಟ್‌ಗಳನ್ನು ಹಂಚಿ,. ಪ್ರಬಲರಲ್ಲದವರನ್ನು ನಿಲ್ಲಿಸಿ ಗೆಲ್ಲಿಸಿದರು.

ಅವರ ಹಾವನೂರು ವರದಿ ಇಂದಿಗೂ ತಲ್ಲಣ ಮೂಡಿಸಿದೆ. ಜೀತ ನಿಷೇಧ, ವಿದ್ಯಾರ್ಥಿಗಳ ಕಲ್ಯಾಣ ಯೋಜನೆಗಳು, ಮಲಹೊರುವ ಪದ್ಧತಿಯ ನಿಷೇಧ, ಉಳುವವನೇ ಒಡೆಯ, ಗರೀಬಿ ಹಠಾವೋ, ಭಾಗ್ಯಜ್ಯೋತಿ, ಕನಿಷ್ಟ ಕೂಲಿ ನಿಗದಿ, ಋಣ ಪರಿಹಾರ ಹೀಗೆ ನೊಂದವರಿಗೆ, ಹಿಂದುಳಿದವರಿಗಾಗಿ ಅನೇಕ ಜನಪರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದ ಅರಸುರವರು ಒಳ್ಳೆಯ ಓದುಗ. ಅವರು ನಿರಂತರವಾಗಿ ಜನಪ್ರಾತಿನಿಧ್ಯಕ್ಕೆ ಹೊಸ ಭಾಷ್ಯ ಬರೆಯುತ್ತಾ ಬಂದರು.
ನಾಡು ಎಂಬುದು ಪ್ರದೇಶ ಒಂದರ ರೂಪಕ ಆಗಬಾರದೆಂಬ ಕಾರಣದಿಂದ ಮೈಸೂರನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು. ನಾಯಕರ ಸೃಷ್ಟಿಗೆ ಬಹಳ ರೂಪಕಗಳು ಇವೆ. ಇದರ ಮಧ್ಯದಲ್ಲಿ ಹಿಂದುಳಿದವರ, ನೊಂದವರ, ದಲಿತರ, ಸಂಕಟಕ್ಕೀಡಾದವರಿಗೆ ಧ್ವನಿಯಾಗುವ ಮೂಲಕ ಅರಸುರವರು ನಿಜವಾದ ಸಾಂಸ್ಕೃತಿಕ ನಾಯಕನಾಗಿ ನಮ್ಮ ಎದೆಯೊಳಗೆ ಉಳಿದಿದ್ದಾರೆ.

ವಿದ್ಯಾರ್ಥಿಗಳೇ, ಜ್ಞಾನ ಪುಸ್ತಕಗಳಲ್ಲಿದೆ. ನಮ್ಮೊಳಗೆ ಇದೆ. ಮೊಬೈಲ್‌ಯಿಂದ ಹೊರಬನ್ನಿ. ನೀವು ಜಾಗೃತಿಗೊಂಡರೆ ಮಾತ್ರ ಸಮಾಜ ಜಾಗೃತಗೊಳ್ಳುತ್ತದೆ ಎಂದು ಕರೆ ನೀಡಿದರು.
ಜಾತಿ ಒಕ್ಕೂಟದ ಅಧ್ಯಕ್ಷರಾದ ವಿ. ರಾಜು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಪ್ರತಿಭಾ ಪುರಸ್ಕಾರ:
ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಹಾಗೂ ವಸತಿ ಶಾಲೆಗಳಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ, ರಸಪ್ರಶ್ನೆ, ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಮಾಜಿಕ ಸೇವಾ ಕಾರ್ಯಕರ್ತರಾದ ಶಂಕರಪ್ಪ ಡಿ, ಶೈಕ್ಷಣಿಕ ಸೇವಾ ಕಾರ್ಯಕರ್ತರಾದ ಬಿ.ಎ ಉಮಾಪತಿ, ಜಾನಪದ ಕಲಾವಿದರಾದ ಎಂ.ಯಲ್ಲಪ್ಪ ಭಾಗವತ್, ಉದ್ಯಮಿ ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತರಾದ ಇಕ್ಬಾಲ್ ಹಬೀಬ್ ಸೇಠ್, ಚಿತ್ರಕಲಾವಿದರಾದ ಸಿ.ಎಸ್.ಗರಗ್, ಸಾಮಾಜಿಕ ಸೇವಾ ಕಾರ್ಯಕರ್ತರಾದ ಅಶೋಕ್, ರಂಗ ಕಲಾವಿದ ಮಂಜುನಾಥ ಸ್ವಾಮಿ ಇವರನ್ನು ಅಭಿನಂದಿಸಲಾಯಿತು ಹಾಗೂ ಇಂಜಿಯರಿAಗ್ ನಲ್ಲಿ ಸ್ವರ್ಣ ಪದಕ ಪಡೆದ ವಂದನಾ ಆರ್ ಇವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಸದ್ಬಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶೋಭಾ ಕೆ ಆರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎಎಸ್‌ಪಿ ರಮೇಶ್ ಕುಮಾರ್ ಎಸ್, ಜಿ.ಪಂ. ಉಪ ಕಾರ್ಯದರ್ಶಿ ಸುಜಾತ, ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.