ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;* *ಜಾತಿ ಗಣತಿಯಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಸಿದ್ದರಾಮಯ್ಯ*

*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;*

*ಜಾತಿ ಗಣತಿಯಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಸಿದ್ದರಾಮಯ್ಯ*

ರಾಜ್ಯದಲ್ಲಿ ಅಸಂವಿಧಾನಿಕವಾಗಿ ನಡೆಸಲು ಉದ್ದೇಶಿಸಿದ್ದ ಜಾತಿ ಗಣತಿ ಸಿದ್ದರಾಮಯ್ಯನವರ ಸರ್ಕಾರದ ಪತನಕ್ಕೆ ಕಾರಣವಾಗಬಹುದು ಎಂದು ಈ ಹಿಂದೆ ನಾನು ಹೇಳಿದ್ದ ಮಾತು ಸತ್ಯವಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ನಿನ್ನೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಸರ್ಕಾರದ ವಿರುದ್ಧ ಸ್ವತಃ ಸಚಿವರೇ ತಿರುಗಿ ಬಿದ್ದಿರುವುದು ಸಿದ್ದರಾಮಯ್ಯನವರ ಹಿಂದೂ ವಿರೋಧಿ ಹಾಗೂ ಧರ್ಮ ಒಡೆಯುವ ಹಿಡನ್ ಅಜೆಂಡಾದ ಸಿದ್ಧಾಂತ ಜಗಜ್ಜಾಹಿರಗೊಳಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜ್ ವರದಿಗೆ ಬೆಂಕಿ ಹಾಕಿದ್ದಾರೆ.ಸರ್ಕಾರದ ಬಹುತೇಕ ಮಂತ್ರಿಗಳೂ ಅದರಲ್ಲೂ ಹಿರಿಯ ಮಂತ್ರಿಗಳು ಜಾತಿ ಗಣತಿಯ ವಿರುದ್ಧ ಧ್ವನಿ ಎತ್ತುವುದರ ಮೂಲಕ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ತಿಳಿಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯವಾಗಿ ಅಂದು ನಾನು ಹಿಂದೂ ಜಾತಿಗಳ ಜೊತೆಗೆ ಕ್ರಿಶ್ಚಿಯನ್ ಧರ್ಮದ ಹೆಸರನ್ನು ಸೇರಿಸಿದ್ದನ್ನು ಬಲವಾಗಿ ವಿರೋಧಿಸಿದ್ದೆ. ಅದನ್ನು ತೆಗೆದು ಹಾಕುವಂತೆಯೂ ಒತ್ತಾಯಿಸಿದ್ದೆ, ಈಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಹುತೇಕ ಸಚಿವರು ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡಿರುವುದು ಸ್ಪಷ್ಟವಾಗಿದೆ ಎಂದರು.

ಸಚಿವರ ಈ ನಡೆಯು ತಮ್ಮಲ್ಲಿರುವ ಸನಾತನ ಹಿಂದೂ ಧರ್ಮದ ಬಗೆಗಿನ ಜಾಗೃತಿಯನ್ನು ತೋರಿಸುತ್ತದೆ. ಈ ವಿಷಯವಾಗಿ ಧ್ವನಿ ಎತ್ತಿರುವ ಎಲ್ಲಾ ಸಚಿವರುಗಳಿಗೆ ನಾನು ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.

ಯಾವುದೇ ಪೂರ್ವಸಿದ್ಧತೆ ಇಲ್ಲದೆ ತುರಾತುರಿಯಲ್ಲಿ ಜಾತಿ ಗಣತಿ ಮಾಡಲು ಹೊರಟಿರುವುದು ಅಸಂವಿಧಾನಿಕವೂ ಹೌದು ಮತ್ತು ಧರ್ಮ ಒಡೆಯುವ ಕುತಂತ್ರವೂ ಆಗಿತ್ತು. ಈ ಹಿಂದೆ ಶ್ರೀ ಕಾಂತರಾಜು ಆಯೋಗ 160 ಕೋಟಿ ಹಣ ವ್ಯಯಿಸಿ ನಡೆಸಿದ ಜಾತಿ ಗಣತಿಯನ್ನು ಹೈಕಮಾಂಡ್ ನಿರ್ದೇಶನದಂತೆ ಕಸದ ಬುಟ್ಟಿಗೆ ಎಸೆದು ಮತ್ತೆ 420 ಕೋಟಿ ವೆಚ್ಚದಲ್ಲಿ ಜಾತಿ ಗಣತಿ ಮಾಡಲು ಹೊರಟಿರುವ ಸಿದ್ದರಾಮಯ್ಯನವರ ತೀರ್ಮಾನವನ್ನು ರಾಜ್ಯದ ಜನತೆ ಒಕ್ಕೊರಳಿನಿಂದ ವಿರೋಧಿಸಿದ್ದು ಸಮಾಜದಲ್ಲಿ ಧರ್ಮ ಜಾಗೃತಿಯನ್ನು ತೋರಿಸುತ್ತದೆ. ಜಾತಿ ಗಣತಿ ವಿಷಯವಾಗಿ ಅದರಲ್ಲೂ ಹಿಂದೂ ಜಾತಿಗಳ ಜೊತೆಗೆ ಕ್ರಿಶ್ಚಿಯನ್ ಎಂದು ಸೇರಿಸಿದ್ದನ್ನು ಸಮಾಜದ ಹಲವು ಮುಖಂಡರು ಮಠ ಮಾನ್ಯಗಳ ಸ್ವಾಮಿಗಳು ಸಹಾ ಸ್ಪಷ್ಟವಾಗಿ ವಿರೋಧಿಸಿದ್ದರು.

ಕೇಂದ್ರ ಸರ್ಕಾರವೇ ಅಧಿಕೃತವಾಗಿ ಜಾತಿಗಣತಿಯನ್ನು ನಡೆಸುವುದಾಗಿ ಹೇಳಿರುವುದರಿಂದ ರಾಜ್ಯ ಸರ್ಕಾರ ಜಾತಿ ಗಣತಿ ಮಾಡುವ ಅವಶ್ಯಕತೆಯೇ ಬರುವುದಿಲ್ಲ. ಆದರೆ, ಕಾಂಗ್ರೆಸ್ಸಿನ ಒಡೆದಾಳುವ ನೀತಿಯ ಭಾಗವಾಗಿ ರಾಜ್ಯದಲ್ಲಿ ಹಿಂದೂಗಳನ್ನು ಜಾತಿ, ಉಪಜಾತಿಗಳನ್ನಾಗಿ ವಿಂಗಡಿಸಿ ಅವರ ಜನಸಂಖ್ಯೆಯನ್ನು ಅಧಿಕೃತವಾಗಿ ತಗ್ಗಿಸಿ ಅಲ್ಪಸಂಖ್ಯಾತರ ಜನಸಂಖ್ಯೆಯನ್ನು ಹೆಚ್ಚಿಸಿ ಅವರ ಓಲೈಕೆ ಮಾಡಿ ತನ್ನ ರಾಜಕೀಯ ವೋಟ್ ಬ್ಯಾಂಕ್ ಭದ್ರಗೊಳಿಸಿಕೊಳ್ಳುವುದು ಈ ಜಾತಿ ಗಣತಿಯ ಹಿಂದಿನ ದುರುದ್ದೇಶವಾಗಿದೆ. ಹಿಂದೂ ಸಮಾಜವನ್ನು ದುರ್ಬಲಗೊಳಿಸಲು ಮಾಡುವ ನಿಮ್ಮ ಎಲ್ಲಾ ಕುತಂತ್ರಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದರು.

ಈಗಾಗಲೇ ಹಿಂದುಳಿದ ವರ್ಗಗಳ ಆಯೋಗ ಸಿದ್ದಪಡಿಸಿರುವ ಜಾತಿ ಪಟ್ಟಿಯಲ್ಲಿ ಅನಧಿಕೃತವಾಗಿ ಸೇರ್ಪಡಿಗೊಂಡಿರುವ 50 ಕ್ಕೂ ಹೆಚ್ಚು ಕ್ರಿಶ್ಚಿಯನ್ ಹೆಸರಿರುವ ಹಿಂದೂ ಜಾತಿಗಳ ಹೆಸರನ್ನು ತೆಗೆದುಹಾಕಬೇಕು, ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಗಣತಿ ಹೆಸರಲ್ಲಿ ಜಾತಿ ಗಣತಿ ಮಾಡಿ ಹಿಂದೂಗಳ ಒಳಗೆ ಒಡಕು ಮೂಡಿಸುವುದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಅಂತಹ ಷಡ್ಯಂತ್ರವನ್ನು ತಡೆಯಲು ರಾಜ್ಯದ ಜನತೆ ಜಾಗೃತರಾಗಿ ಸಿಡಿದೇಳುತ್ತಾರೆ ಎಂದು ಹೇಳಿದ ಈಶ್ವರಪ್ಪ ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.

ಕೆ ಇ ಕಾಂತೇಶ್, ಇ ವಿಶ್ವಾಸ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.