ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ *ಅತ್ಯುತ್ತಮ ಸಹಕಾರ ನೀಡಿ ಉತ್ತಮ ಜಿಲ್ಲಾಧಿಕಾರಿಯನ್ನಾಗಿ ಮಾಡಿದ್ದೀರಿ : ಗುರುದತ್ತ ಹೆಗಡೆ*

ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ

*ಅತ್ಯುತ್ತಮ ಸಹಕಾರ ನೀಡಿ ಉತ್ತಮ ಜಿಲ್ಲಾಧಿಕಾರಿಯನ್ನಾಗಿ ಮಾಡಿದ್ದೀರಿ : ಗುರುದತ್ತ ಹೆಗಡೆ*

ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಮಾಧ್ಯಮದವರು, ಸಾರ್ವಜನಿಕರು ಅತ್ಯುತ್ತಮ ಸಹಕಾರ ನೀಡಿ ನನ್ನನ್ನು ಉತ್ತಮ ಜಿಲ್ಲಾಧಿಕಾರಿಯಾಗಿ ಮಾಡಿದ್ದಾರೆಂದು ಆರೋಗ್ಯ ಇಲಾಖೆ ಆಯುಕ್ತರಾಗಿ ಪದೋನ್ನತಿ ಹೊಂದಿದ ನಿಕಟಪೂರ್ವ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ನುಡಿದರು.

ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಶಿವಮೊಗ್ಗ ಜಿಲ್ಲೆಯ ವತಿಯಿಂದ ಶನಿವಾರ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ನಿಕಟಪೂರ್ವ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಮತ್ತು ನೂತನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ಅವರಿಗೆ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪರಿಭಾವಿತ(ಡೀಮ್ಡ್) ಅರಣ್ಯ ಪ್ರದೇಶ ಸುಮಾರು 7000 ಎಕರೆಗೆ ಸಂಬAಧಿಸಿದ ವಿಷಯ ಬಗೆಹರಿಸಲು ಸಾಕಷ್ಟು ಕೆಲಸಗಳಾಗಿದ್ದು ಇದೀಗ ತಂಡ ರಚಿಸಲಾಗಿದೆ. ಹಾಗೂ ನೆನೆಗುದಿಗೆ ಬಿದ್ದಿದ್ದ ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಕೆಲಸ ತಾರ್ಕಿಕ ಅಂತ್ಯ ತಲುಪುತ್ತಿರುವುದು ಉತ್ತಮ ವಿಷಯ. ಅರಣ್ಯ ಇಲಾಖೆಯಲ್ಲಿ ಎಲ್ಲ ಅಧಿಕಾರಿಗಳು ಅತ್ಯುತ್ತಮವಾಗಿ ಬೆಂಬಲ ನೀಡಿದ್ದಾರೆ. ಸುಲಭವಾಗಿ ಕೆಲಸಗಳನ್ನು ಮಾಡುವ ಮೂಲಕ ಸಹಕಾರ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಜಿಲ್ಲೆಯ ಎಸ್‌ಪಿ ಯಾಗಿದ್ದ ಮಿಥುನ್ ಕುಮಾರ್ ನನಗೆ ಶಕ್ತಿ ಮತ್ತು ಸಹಕಾರ ನೀಡಿದ್ದರು. ಅವರು ಕಷ್ಟಕರವಾದ ಕೆಲಸಗಳನ್ನು ಕೈಗೆತ್ತಿಕೊಂಡು ಮಾಡುತ್ತಿದ್ದರು. ಡ್ರಗ್ಸ್ ಮತ್ತು ಅಪರಾಧ ವಿಷಯ ನಿರ್ವಹಣೆಯಲ್ಲಿ ಉತ್ತಮ ನಿರ್ಣಯ ತೆಗೆದುಕೊಳ್ಳುತ್ತಿದ್ದರು. ಅವರಿಗೆ ಧನ್ಯವಾದಗಳು.
ಜಿ.ಪಂ ಸಿಇಓ ಹೇಮಂತ್, ಕೆಲಸದಲ್ಲಿ ಅತಿ ಆಸಕ್ತಿ ಇರುವ ಅಧಿಕಾರಿ. ತುಂಬಾ ಮುತುವರ್ಜಿ ತೆಗೆದುಕೊಂಡು ಕೆಲಸ ಮಾಡುವ ಗುಣ ಹೊಂದಿದ್ದಾರೆ. ವಿನೂತನವಾದ ಕೆಲಸಗಳನ್ನು ಶ್ರಮ ವಹಿಸಿ ಮಾಡುತ್ತಾರೆ. ಮಿಷನ್ ಸುರಕ್ಷಾ ಅಭಿಯಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತಮವಾಗಿ ಕೆಲಸ ಮಾಡುತ್ತಿದೆ. ನೌಕಕರಿಗೆ ಉತ್ತೇಜನ ನೀಡುತ್ತಿದೆ. ಎಲ್ಲ ಇಲಾಖೆಗಳು ಅತ್ಯುತ್ತಮ ಕೆಲಸ ಮಾಡಿ ಬೆಂಬಲ ನೀಡಿದ್ದೀರಿ. ನೂತನವಾಗಿ ಬಂದಿರುವ ಡಿಸಿ ಮತ್ತು ಎಸ್‌ಪಿ ಗಳು ಉತ್ತಮ ಅನುಭವ ಇರುವ ಅಧಿಕಾರಿಗಳು. ಜಿಲ್ಲೆಯಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಾರೆ. ಅವರಿಗೂ ಸಹ ನಿಮ್ಮೆಲ್ಲರ ಬೆಂಬಲ ಹೀಗೇ ಇರಲಿ.
ನನ್ನ ಹೆಸರಿಗೆ ಕಾರಣ ಈ ಜಿಲ್ಲೆ: ಸಾಗರ ಹತ್ತಿರ ವರದಾಶ್ರಮದ ಶ್ರೀಧರ ಸ್ವಾಮಿಗಳ ಅನುಯಾಯಿಗಳು ನನ್ನ ತಂದೆ ತಾಯಿ. ನಾನು ದತ್ತ ಜಯಂತಿಯAದು ಹುಟ್ಟಿದ ಕಾರಣ ಗುರುದತ್ತ ಎಂದು ಹೆಸರಿಟ್ಟಿದ್ದು ಈ ಜಿಲ್ಲೆ ನನಗೆ ಹೆಸರನ್ನು ನೀಡಿರುವುದನ್ನು ಸದಾ ಸ್ಮರಿಸುತ್ತೇನೆ ಎಂದರು.

==
ಗುರುದತ್ ಹೆಗಡೆ ಸರ್ ಜಿಲ್ಲೆಯ ಅರಣ್ಯ ವಿಷಯಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದು, ಉತ್ತಮ ಬೆಂಬಲ ನೀಡಿದ್ದರು. ಅವರು ಸಹೃದಯಿಯಾಗಿದ್ದು ಜಿಲ್ಲೆಯ ಯಾವುದೇ ರೀತಿಯ ಸಮಸ್ಯೆಗಳು, ಕೆಲಸಗಳಲ್ಲಿ ಸಹಕಾರಿಯಾಗಿದ್ದರು. ಡೀಮ್ಡ್ ಫಾರೆಸ್ಟ್ ವಿಷಯದಲ್ಲಿ ಸಮನ್ವಯ ಸಾಧಿಸಿ, ತಂಡಗಳನ್ನು ರಚಿಸುವ ಮೂಲಕ ಕಾರ್ಯವನ್ನು ಸುಲಲಿತಗೊಳಿಸಿದರು. ಹಾಗೂ ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ವಿಷಯದಲ್ಲಿ ಸಹ ಉತ್ತಮ ಕಾರ್ಯವೆಸಗಿ ಈ ವಿಷಯ ಒಂದು ತಾರ್ಕಿಕ ಹಂತಕ್ಕೆ ತಲುಪಿಸಲು ಸಹಕಾರಿಯಾಗಿದ್ದಾರೆ. ದೀರ್ಘ ಕಾಲೀಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಹಾಗೆಯೇ ನೂತನ ಜಿಲ್ಲಾಧಿಕಾರಿಗಳು ಮತ್ತು ವರಿಷ್ಟಾಧಿಕಾರಿಗಳು ಸಹ ಜಿಲ್ಲೆಯಲ್ಲಿ ಉತ್ತಮ ಆಡಳಿತ ನಡೆಸುವರೆಂಬ ಭರವಸೆ
– ಕೆ.ಟಿ.ಹನುಮಂತಪ್ಪ, ಸಿಸಿಎಫ್
==
ಗುರುದತ್ತ ಹೆಗಡೆಯವರು ‘ಮ್ಯಾನ್ ಆಫ್ ಗ್ರೇಟ್ ವ್ಯಾಲ್ಯೂಸ್’ ಎನ್ನಬಹುದು. ಕರ್ತವ್ಯ ಮತ್ತು ಕುಟುಂಬ ಎರಡನ್ನು ಸಮತೋಲನದಲ್ಲಿ ತೆಗೆದುಕೊಂಡು ಹೋಗುವ ವ್ಯಕ್ತಿತ್ವ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಪೊಲೀಸ್ ಇಲಾಖೆಗೆ ಬೆನ್ನೆಲುಬಾಗಿ ಜೊತೆ ನಿಂತಿದ್ದರು. ಅವರು ಅಧೀನ ಅಧಿಕಾರಿ, ನೌಕರರಿಗೆ ಉತ್ತಮವಾಗಿ ಕೆಲಸ ಹಂಚಿಕೆ, ನಿಯೋಜನೆ ಮಾಡುತ್ತಾ ಎಲ್ಲರಿಗೂ ಸ್ಪೂರ್ತಿಯಾಗಿದ್ದರು.
– ಜಿ.ಕೆ.ಮಿಥುನ್ ಕುಮಾರ್, ಡಿಸಿಪಿ ಈಶಾನ್ಯ(ಶಿವಮೊಗ್ಗದಿಂದ ವರ್ಗಾವಣೆಗೊಂಡ ಎಸ್‌ಪಿ-ವಿಡಿಯೋ ಮೂಲಕ)
==
‘ದಿ ಬೆಸ್ಟ್ ಡಿಸಿ’ ಜೊತೆ ಕೆಲಸ ಮಾಡುವ ಅವಕಾಶ ನನಗೆ ದೊರೆತಿದ್ದು ನನ್ನ ಪುಣ್ಯ. ಯಾವುದೇ ರೀತಿಯ ಕ್ಲಿಷ್ಟಕರ ಸಮಸ್ಯೆಗಳಿದ್ದರೂ ಸರಳವಾದ ಪರಿಹಾರಗಳನ್ನು ಹುಡುಕುತ್ತಿದ್ದರು. ಕಿರಿಯ ಅಧಿಕಾರಿಗಳಿಗೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸ್ವಾತಂತ್ರö್ಯ ನೀಡಿದ್ದು, ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ನಿಡುತ್ತಿದ್ದುದು ನಮಗೆ ಸ್ಪೂರ್ತಿಯಾಗಿತ್ತು. ಅವರು ಸದ್ಗುಣಿ ಮತ್ತು ಸರಳ ಜೀವಿಗಳು. ಕೆಲಸಗಳ ಆದ್ಯತೆಯನ್ನು ಚೆನ್ನಾಗಿ ಅರಿತಿದ್ದರು. ಡಿಸಿ ಮತ್ತು ಎಸ್ಪಿ ಇಬ್ಬರೂ ಜೋಡೆತ್ತಿನ ರೀತಿಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾರೆ. ನೂತನವಾಗಿ ಆಗಮಿಸಿರುವ ಡಿಸಿ ಮತ್ತು ಎಸ್‌ಪಿ ಗಳು ಸಹ ಅನುಭವಿಗಳು. ನಮಗೆ ಉತ್ತಮವಾಗಿ ಸಹಕರಿಸಿ ಅತ್ಯುತ್ತಮ ಆಡಳಿತ ನಡೆಸುತ್ತಾರೆಂಬ ನಂಬಿಕೆ ಇದೆ.
– ಹೇಮಂತ್ ಎನ್, ಜಿ.ಪಂ. ಸಿಇಓ

ಗುರುದತ್ತ ಹೆಗಡೆಯವರು ಓರ್ವ ದಕ್ಷ, ಪ್ರಾಮಾಣಿಕ ಆಡಳಿತಗಾರ. ಜನರ ಸೇವೆಯಲ್ಲಿ ಅತ್ಯಂತ ಕಳಕಳಿ, ಬದ್ದತೆ ಹೊಂದಿದ್ದು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಾ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ. ಸರ್ಕಾರಿ ನೌಕರರ ವಿಚಾರದಲ್ಲಿ ಅವರ ನಿಲುವು ಸಹ ಉತ್ತಮವಾಗಿದೆ.
ಸಿ.ಎಸ್.ಷಡಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು(ವಿಡಿಯೋ ಮೂಲಕ ಸಂದೇಶ)

ಗುರುದತ್ತ ಹೆಗಡೆಯವರು, ಜಿಲ್ಲೆಯಲ್ಲಿನ ಸಮಸ್ಯೆಗಳ ವಿಷಯಗಳನ್ನು ಸಮರ್ಥವಾಗಿ ಎದುರಿಸಿ, ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಕಾರಾತ್ಮಕ ಗುಣಗಳನ್ನು ಹೊಂದಿರುವ ಇವರು ಎಲ್ಲ ಕೆಲಸ ಕಾರ್ಯಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ, ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ. ಹಾಗೂ ನೂತನ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಮತ್ತು ನೂತನ ಎಸ್‌ಪಿ ನಿಖಿಲ್ ಅವರು ಸಹ ಉತ್ತಮ ಅಧಿಕಾರಿಗಳಾಗಿದ್ದು, ತಮ್ಮ ಸಹಕಾರ ಸದಾ ಇರಲಿ.
– ಮೋಹನ್ ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ
=
ಜಿಲ್ಲೆಯಲ್ಲಿನ ಅರಣ್ಯ ವಿಷಯಗಳು ಜಟಿಲವಾಗಿದ್ದು, ಅರಣ್ಯ ಮತ್ತು ಕಂದಾಯ ಇಲಾಖೆಗಳ ಸಮನ್ವಯತೆ ಹೇಗಿರಬೇಕೆಂದು ಒಂದು ನಿರ್ದಿಷ್ಟ ಮಾನದಂಡ ಒದಗಿಸಿದ್ದರು. ಒಂದು ತಂಡವಾಗಿ ಕೆಲಸ ನಿರ್ವಹಿಸುವ ರೀತಿ ಅತ್ಯುತ್ತಮವಾಗಿತ್ತು.
– ಅಜ್ಜಯ್ಯ, ಡಿಸಿಎಫ್

ಗುರುದತ್ತ ಹೆಗಡೆ ಸರ್ ಅತ್ಯುತ್ತಮ ಆಡಳಿತಗಾರ ಎಂದೂ ಯಾವ ಅಧಿಕಾರಿಗೂ ಗದರಿಸದೇ ವಿಶ್ವಾಸದಿಂದ ಕೆಲಸ ಪಡೆಯುವ ವಿಶಿಷ್ಟ ಶೈಲಿ ರೂಢಿಸಿಕೊಂಡಿದ್ದರು. ಕಿರಿಯ ಅಧಿಕಾರಿಗಳಲ್ಲಿ ನಂಬಿಕೆ ಹೊಂದಿದ್ದರು. ಆರೋಗ್ಯ ಇಲಾಖೆಯಲ್ಲಿನ ಅವರ ಮುಂದಿನ ಹುದ್ದೆ ಪ್ರಮುಖ ಮತ್ತ ಸವಾಲಿನ ಹುದ್ದೆಯಾಗಿ ಸಮರ್ಥವಾಗಿ ನಿರ್ವಹಿಸಲಿದ್ದಾರೆ.
– ಡಾ.ನಟರಾಜ್, ಡಿಹೆಚ್‌ಓ

ಹೆಗಡೆ ಸರ್, ಶಾಂತಿ ಮಂತ್ರದಿAದಲೇ ಜಿಲ್ಲೆಯಲ್ಲಿ ಅತ್ಯುತ್ತಮ ಆಡಳಿತ ನಡೆಸಿ ಸಮೃದ್ದಿ ನೀಡಿದ್ದಾರೆ. ಉತ್ತಮ ಆಡಳಿತ ಕೌಶಲ್ಯ ಹೊಂದಿದ್ದಾರೆ. ಎಲ್ಲರೊಟ್ಟಿಗೆ ಸ್ನೇಹದಿಂದ ಕೆಲಸ ತೆಗೆದುಕೊಳ್ಳುತ್ತಿದ್ದರು. ಜಿಲ್ಲಾಡಳಿತವೇ ಒಂದು ಕುಟುಂಬ ಎಂದು ಕಾರ್ಯ ನಿರ್ವಹಿಸಬೇಕೆಂಬುದನ್ನು ತೋರಿಸಿಕೊಟ್ಟ ಮಾದರಿ ಆಡಳಿತಗಾರ.
– ಧರ್ಮಪ್ಪ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ

ನೂತನ ಎಸ್ ಪಿ ನಿಖಿಲ್ ಬಿ ಮಾತನಾಡಿ, ಗುರುದತ್ತ ಹೆಗಡೆಯವರು ಎಲ್ಲರಿಗೂ ನಿಲುಕುವಂತಹ ದಕ್ಷ ಅಧಿಕಾರಿ. ಹಾಗೂ ಉತ್ತÀ್ತಮ ಮಾರ್ಗದರ್ಶಕರು ಕೂಡ ಆಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಐಚ್ಚಿಕ ತೆಗೆದುಕೊಳ್ಳಲು ಅವರೇ ಸ್ಪೂರ್ತಿ. ಜಿಲ್ಲೆಯಲ್ಲಿ ಅವರು ಅಧ್ಬುತ ಕೆಲಸ ಮಾಡಿದ್ದು ಅದು ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದ್ದು, ಮುಂದೆಯೂ ಕೂಡ ನಿಮ್ಮ ಸಹಕಾರ ಪೊಲೀಸ್ ಇಲಾಖೆ ಜೊತೆ ಸದಾ ಇರಲಿ ಎಂದು ಕೋರಿದರು.
ನೂತನ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಎಲ್ಲ ಇಲಾಖೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಮಾಧ್ಯಮಗಳೊಂದಿಗೆ ಅನ್ಯೋನ್ಯತೆ ಮತ್ತು ಸಮನ್ವಯತೆಯೊಂದಿಗೆ ಕೆಲಸ ಮಾಡುವ ಹಂಬಲ ಹೊಂದಿದ್ದು ಎಲ್ಲ ಇಲಾಖೆಗಳು ಒಂದು ಕುಟುಂಬವಾಗಿ ಕಾರ್ಯವೆಸಗೋಣ ಎಂದರು.
ಕಾರ್ಯಕ್ರಮದಲ್ಲಿ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್, ಪ್ರೊಬೇಷನರಿ ಅಧಿಕಾರಿ ನಾಗೇಂದ್ರದ್ರ ಬಾಬು, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಸಿಗಳಾದ ಸತ್ಯನಾರಾಯಣ, ಯತೀಶ್, ಜಿಲ್ಲೆಯ ಅಧಿಕಾರಿಗಳು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು, ನೌಕರರು ಪಾಲ್ಗೊಂಡಿದ್ದರು.