65 ಲಕ್ಷದ ನಿಧಿಯಲ್ಲಿ ಕುಟುಂಬಕ್ಕೆ ಸಿಗುವ ಪಾಲು ಎಷ್ಟು?* *ನಿಧಿ ಪತ್ತೆಯಾದ ಲಕ್ಕುಂಡಿ ಜನರಿಗೆ ಆತಂಕ*
*65 ಲಕ್ಷದ ನಿಧಿಯಲ್ಲಿ ಕುಟುಂಬಕ್ಕೆ ಸಿಗುವ ಪಾಲು ಎಷ್ಟು?*
*ನಿಧಿ ಪತ್ತೆಯಾದ ಲಕ್ಕುಂಡಿ ಜನರಿಗೆ ಆತಂಕ*
ಚಾಲುಕ್ಯರ ಕಾಲದ ಐತಿಹಾಸಿಕ ದೇವಾಲಯಗಳ ತವರೂರು, ‘ಶಿಲ್ಪಕಲೆಯ ನೆಲೆವೀಡು’ ಎಂದೇ ಪ್ರಖ್ಯಾತಿ ಪಡೆದಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಈಗ ‘ನಿಧಿ’ಯ ಚರ್ಚೆ ತೀವ್ರಗೊಂಡಿದೆ.
ಇತ್ತೀಚೆಗೆ ಗ್ರಾಮದ ರಿತ್ತಿ ಕುಟುಂಬದ ಮನೆಯ ಪಾಯ ಅಗೆಯುವಾಗ ಅನಿರೀಕ್ಷಿತವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಿಧಿ ಪತ್ತೆಯಾದ ಬೆನ್ನಲ್ಲೇ, ಸರ್ಕಾರಕ್ಕೆ ಸಂತಸವಾದರೆ-ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ.
ಲಕ್ಕುಂಡಿಯ ಹೊರವಲಯದಲ್ಲಿರುವ ಪುರಾತನ ಗೋಣಿ ಬಸವೇಶ್ವರ ದೇವಸ್ಥಾನ ಈಗ ನಿಧಿಗಳ್ಳರ ಪ್ರಮುಖ ಗುರಿಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳು ದೇವಸ್ಥಾನದ ಗರ್ಭಗುಡಿಯ ಬಳಿ ಇರುವ ಬಸವಣ್ಣನ ಮೂರ್ತಿಯ ಪಕ್ಕದಲ್ಲಿ ಸುಮಾರು 6-7 ಅಡಿಗಳಷ್ಟು ಆಳದ ಗುಂಡಿ ಅಗೆದು ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಘಟನಾ ಸ್ಥಳದಲ್ಲಿ ನಿಂಬೆಹಣ್ಣು, ಕುಂಕುಮ ಸೇರಿದಂತೆ ಮಾಟ-ಮಂತ್ರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಇತ್ತೀಚೆಗೆ ನಿಧಿ ಪತ್ತೆಯಾದ ರಿತ್ತಿ ಕುಟುಂಬಕ್ಕೆ ಈಗ ಮತ್ತೊಂದು ರೀತಿಯ ಭಯ ಕಾಡುತ್ತಿದೆ. ‘ನಿಧಿ ಇರುವ ಜಾಗದಲ್ಲಿ ದೊಡ್ಡ ಸರ್ಪ ವಾಸವಿರುತ್ತದೆ ಮತ್ತು ಅದು ನಿಧಿಯನ್ನು ಕಾಯುತ್ತಿರುತ್ತದೆ. ನಮಗೆ ನಿಧಿ ಸಿಕ್ಕಿದ್ದಕ್ಕೆ ಆ ಸರ್ಪ ಬಂದು ನಮ್ಮ ಕುಟುಂಬದವರನ್ನು ಕಚ್ಚಿ ಸಾಯಿಸುತ್ತದೆ’ ಎಂಬ ಭಯದಲ್ಲಿ ಆ ಕುಟುಂಬವಿದೆ.
ಈ ಹಿನ್ನೆಲೆಯಲ್ಲಿ, ‘ನಮಗೆ ನಿಧಿ ಸಿಕ್ಕ ಜಾಗದಲ್ಲಿ ಸರ್ಕಾರವೇ ದೇವಸ್ಥಾನ ಕಟ್ಟಲಿ, ನಮಗೆ ವಾಸಿಸಲು ಬೇರೆಡೆ ಜಾಗ ನೀಡಲಿ’ ಎಂದು ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ, ಅವರಿಗೆ ಬೇರೆ ಜಾಗವನ್ನು ಮಂಜೂರು ಮಾಡುವ ಭರವಸೆ ನೀಡಿದೆ.
ಈ ಹಿಂದೆ ಕೂಡ ಲಕ್ಕುಂಡಿಯಲ್ಲಿ ಇಂತಹ ಹಲವು ಪ್ರಕರಣಗಳು ವರದಿಯಾಗಿದ್ದವು. ‘ಲಕ್ಕುಂಡಿಯಲ್ಲಿ ಎಲ್ಲಿ ಅಗೆದರೂ ಚಿನ್ನ ಸಿಗುತ್ತದೆ’ ಎಂಬ ನಂಬಿಕೆ ಬಲವಾಗಿರುವುದರಿಂದ, ಇಲ್ಲಿನ ಪ್ರತಿಯೊಂದು ಪುರಾತನ ಕಲ್ಲುಗಳ ಅಡಿಯಲ್ಲೂ ನಿಧಿ ಇರುತ್ತದೆ ಎಂದು ನಿಧಿಗಳ್ಳರು ನಂಬಿದ್ದಾರೆ. ಇದರಿಂದಾಗಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಶಿಲ್ಪಕಲೆಗಳು ಮತ್ತು ದೇವಾಲಯಗಳು ನಾಶವಾಗುವ ಭೀತಿ ಎದುರಾಗಿದೆ. ಒಟ್ಟಾರೆ ಲಕ್ಕುಂಡಿಯ ಪುರಾತನ ದೇವಸ್ಥಾನಗಳ ಮೇಲೆ ನಿಧಿಗಳ್ಳರ ಕಣ್ಣು ಬಿದ್ದಿದೆ. ಇದು ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಪುರಾತತ್ವ ಇಲಾಖೆಯ ಮಾಹಿತಿಯಂತೆ, ರಿತ್ತಿ ಕುಟುಂಬದ ಮನೆಯಲ್ಲಿ ಸಿಕ್ಕಿರುವ ಚಿನ್ನಾಭರಣಗಳ ಒಟ್ಟು ಮೌಲ್ಯ ಅಂದಾಜು 65 ಲಕ್ಷ ರೂಪಾಯಿಗಳು. ಸರ್ಕಾರದ ನಿಯಮಾವಳಿಯ ಪ್ರಕಾರ, ಖಾಸಗಿ ಜಾಗದಲ್ಲಿ ನಿಧಿ ಪತ್ತೆಯಾದಾಗ ಆ ವ್ಯಕ್ತಿ ಅಥವಾ ಕುಟುಂಬಕ್ಕೆ ನಿಧಿಯ ಒಟ್ಟು ಮೌಲ್ಯದ ಶೇ. 20 ರಷ್ಟು (1/5 ಭಾಗ) ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ. ಈ ಲೆಕ್ಕಾಚಾರದಂತೆ ಸರ್ಕಾರವು ರಿತ್ತಿ ಕುಟುಂಬಕ್ಕೆ 13 ಲಕ್ಷ ರೂಪಾಯಿ ಹಣವನ್ನು ನೀಡಲಿದೆ.


