ಮಹಿಳಾ ದಿನಾಚರಣೆ ಪ್ರಯುಕ್ತ ಹೆಣ್ಣಿನ ನೂರೆಂಟು ಸವಾಲುಗಳ ಬಗ್ಗೆ ಚರ್ಚಿಸಿದ್ದಾರೆ ಲೇಖಕಿ ವಿಮಲಾರುಣ ಪಡ್ಡಂಬೈಲು; ಹೆಣ್ಣು- ನೂರೆಂಟು ಸವಾಲುಗಳ ನಡುವೆ…
*ಹೆಣ್ಣು – ನೂರೆಂಟು ಸವಾಲುಗಳ ನಡುವೆ*
ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನ. ಪ್ರಾದೇಶಿಕತೆಯ ಗಡಿಯನ್ನು ಮೀರಿ ವಿಶ್ವ ಮಟ್ಟದಲ್ಲಿ ಮಹಿಳೆಯ ಕುರಿತು ಚಿಂತನ ಮಂಥನಕೆ ಅಧಿಕೃತತೆ ಪಡೆದ ದಿನವಿದು. ಮಹಿಳೆ ಎಂದರೆ ಯಾರು..? ಹುಟ್ಟಿದ ಒಂದು ದಿನದ ಹೆಣ್ಣು ಮಗುವಿನಿಂದ ವೃದ್ಧೆಯರವರೆಗೂ ಹೆಣ್ಣು ಜೀವವನ್ನು ಮಹಿಳೆ ಎಂದು ಕರೆಯುತ್ತೇವೆ. ಒಂದು ಹೆಣ್ಣು ಮಗು ಜನಿಸಿತೆಂದರೆ ಅದರ ಪಾಲನೆ ಪೋಷಣೆ ರಕ್ಷಣೆ ಇಡೀ ಸಮಾಜದ ಜವಾಬ್ದಾರಿ. ಗಂಡು ಮತ್ತು ಹೆಣ್ಣು ಸೃಷ್ಟಿಯ ಎರಡು ಚಮತ್ಕಾರಗಳು. ಸಮಾಜದಲ್ಲಿ ಹೆಣ್ಣಿಗೆ ತನ್ನದೇ ಆದ ಸ್ಥಾನಮಾನ, ಗೌರವವಿದೆ. ತನ್ನ ಕಾರ್ಯಕ್ಷಮತೆಯೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತ ಉನ್ನತ ಸ್ಥಾನವನ್ನು ಅಲಂಕರಿಸಿ ಬಹಳ ಎತ್ತರಕ್ಕೆ ಇಂದು ಆಕೆ ಬೆಳೆದಿದ್ದಾಳೆ. ಆದರೂ ದೈಹಿಕ ಸಾಮರ್ಥ್ಯವನ್ನು ಆಧರಿಸಿ ಗಂಡು ಶ್ರೇಷ್ಠ ಎಂದು ಬಿಂಬಿಸುವುದು ವಿಷಾದನೀಯ ವಿಚಾರ.
ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಮಹಿಳಾ ಆಯೋಗಗಳು, ಮಾನವ ಹಕ್ಕು ಆಯೋಗ, ಲಕ್ ಪತಿ ದೀದಿ ಯೋಜನೆ ಹೀಗೆ ವಿವಿಧ ರೀತಿಯಲ್ಲಿ ಸರ್ಕಾರ ಬೆಂಬಲವಾಗಿ ನಿಂತಿದೆ. ಆದರೂ ಆಧುನಿಕ ಸಮಾಜದ ನಡುವೆ ಹಲವು ಹೆಣ್ಣು ಮಕ್ಕಳು ಅಸಹಾಯಕರಾಗಿ ಅನಾದರಕ್ಕೆ ಒಳಗಾಗಿರುವುದು ಆಧುನಿಕ ಸಮಾಜಕ್ಕೆ ಒಂದು ಶಾಪವಾಗಿ ಪರಿಣಮಿಸಿದೆ. ಒಂದೆಡೆ ಮಹಿಳೆ ರಾಜಕೀಯವಾಗಿ, ಔದ್ಯೋಗಿಕವಾಗಿ, ಸಾಹಿತ್ಯಕವಾಗಿ, ಕ್ರೀಡಾಪಟುವಾಗಿ, ಐಎಎಸ್ ಅಧಿಕಾರಿ, ಪೈಲೆಟ್, ರಾಷ್ಟ್ರಪತಿ, ಪ್ರಧಾನಮಂತ್ರಿ ಅಷ್ಟೇ ಅಲ್ಲದೆ ಸೇನೆಯಲ್ಲಿಯೂ ತನ್ನ ಸಾಮರ್ಥ್ಯ ಮೆರೆದಿದ್ದಾಳೆ. ವಿವಿಧ ರಂಗಗಳಲ್ಲಿ ಮುಂಚೂಣಿಯಲ್ಲಿದ್ದಾಳೆ. ಯಾವುದೇ ಭಯ ಆತಂಕಗಳಿಲ್ಲದೆ ತನ್ನನ್ನು ತಾನು ಸಮಾಜಕ್ಕೆ ಒಡ್ಡಿಕೊಂಡು ಗೌರವಾನ್ವಿತ ಮಹಿಳೆಯಾಗಿ ಹಲವು ಕೀರ್ತಿ ಪತಾಕೆಗಳನ್ನು ಹಾರಿಸಿದ್ದಾಳೆ. ಗ್ರಾಮೀಣ ಮಹಿಳೆಯರು ಕೂಡ ವಿವಿಧ ಸ್ವಸಹಾಯ ಸಂಘಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮಗೆ ಬೇಕಾದ ಮೂಲಭೂತ ಸೌಕರ್ಯಗಳಿಗಾಗಿ ಯಾರ ಅಧೀನಕ್ಕೂ ಒಳಗಾಗದೆ ಅಲ್ಲಿ ಕೊಡುವ ಸಾಲವನ್ನು ಸದುಪಯೋಗಪಡಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಇಂದು ಬ್ಯಾಂಕ್ ವ್ಯವಹಾರದೊಂದಿಗೆ ಸ್ವತಂತ್ರವಾಗಿ ಬಾಳ್ವೆ ನಡೆಸುವ ಛಲವನ್ನು ಹೆಣ್ಣು ಅರಿತಿದ್ದಾಳೆ. ಹಿಂದೆ ಗ್ರಾಮೀಣ ಮಹಿಳೆಯರು ಮನೆ ಕೆಲಸಕ್ಕೆ ಸೀಮಿತವಾಗಿದ್ದರು. ಆದರೆ ಇಂದು ಸಮಾಜಮುಖಿಯಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಭಾಗವಹಿಸಿ ತನ್ನ ವ್ಯಾಪ್ತಿಯನ್ನು ಮಹಿಳೆ ವಿಸ್ತರಿಸಿದ್ದಾಳೆ. ಇವೆಲ್ಲವೂ ಸಂತಸದ ವಿಚಾರಗಳು.
ಮಹಿಳಾ ದಿನದಲ್ಲಿ ಸಾಮಾನ್ಯವಾಗಿ ಮಹಿಳೆಯರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಅವಳ ಸಾಮಾಜಿಕ ವ್ಯವಹಾರವೆಲ್ಲವೂ ಕಣ್ಣ ಮುಂದೆ ನಿಲ್ಲುತ್ತದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಹೆಣ್ಣು ತಾನು ಎಷ್ಟು ಅನಿವಾರ್ಯವೆಂದು ಸಾಬೀತುಪಡಿಸಿದ್ದಾಳೆ. ಮಹಿಳೆಯ ಈ ಧ್ಯೇಯ ನಿನ್ನೆ ಇಂದಿನದಲ್ಲ. ಪುರಾತನ ಕಾಲದಿಂದಲೂ ಅವಳು ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡು ಬಂದಿದ್ದಾಳೆ. ಎಲ್ಲ ರಂಗಗಳಲ್ಲಿಯೂ ತನ್ನ ಹೆಜ್ಜೆ ಗುರುತನ್ನು ಮೂಡಿಸಿದ್ದಾಳೆ. ವಿಷಾದದ ಸಂಗತಿ ಎಂದರೆ ಈ ವೈಜ್ಞಾನಿಕ ಯುಗದಲ್ಲಿಯೂ ಹೆಣ್ಣು ಶೋಷಣೆಗೆ ಒಳಗಾಗುತ್ತಿರುವುದು!
ಮೊಟ್ಟ ಮೊದಲಿಗೆ ದೈಹಿಕ ದೌರ್ಬಲ್ಯದ ವಿಚಾರ: ದೈಹಿಕ ಸಾಮರ್ಥ್ಯದಲ್ಲಿ ಗಂಡಿಗಿಂತ ಹೆಣ್ಣು ದುರ್ಬಲಳಾಗಿರುವುದರಿಂದ ಅತ್ಯಾಚಾರ, ಕೊಲೆ ನಿರಂತರವಾಗಿ ನಡೆಯುತ್ತಿದೆ. ಅವಳನ್ನು ಭೋಗದ ವಸ್ತು ಎಂದು ಪರಿಗಣಿಸಿ ನೋಡುವ ದೃಷ್ಟಿಕೋನ ಇನ್ನೂ ಬದಲಾಗಿಲ್ಲ. ಇವುಗಳಿಗೆ ಪರಿಹಾರ ಏನು? ನಾವು ನಮ್ಮ ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಕರಾಟೆ ಕಲಿಸಬೇಕು. ಇದು ಅನಿವಾರ್ಯವಾಗಿದೆ. ಹೆಣ್ಣು ಮಕ್ಕಳಿಗೆ ಅರ್ಧ ರಾತ್ರಿಯಲ್ಲಿಯೂ ಏಕಾಂಗಿಯಾಗಿ ಓಡಾಡುವ ಸಾಮರ್ಥ್ಯವೂ ಧೈರ್ಯವೂ ಹೆಚ್ಚುತ್ತದೆ. ರಾಮರಾಜ್ಯದ ಕನಸು ಈ ಮುಖಾಂತರ ಸಾಕ್ಷಾತ್ಕಾರಗೊಳ್ಳುವುದರಲ್ಲಿ ಸಂಶಯವಿಲ್ಲ. ಅಷ್ಟೇ ಅಲ್ಲ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವ ಪುರುಷರಿಗೆ ಕಠಿಣ ಶಿಕ್ಷೆ ಕಡ್ಡಾಯವಾಗಬೇಕು. ಪ್ರಸಾರ ಮಾಧ್ಯಮದ ಮುಖಾಂತರ ಅವರ ಹೀನ ಕೃತ್ಯ ಜನರಿಗೆ ತಲುಪಬೇಕು. ಇದರಿಂದಾಗಿ ಮುಗ್ಧ ಹೆಣ್ಣಿಗಾಗುವ ಕಿರುಕುಳ, ಯಾತನೆ ಕೊಂಚ ಕಡಿಮೆಯಾಗಬಹುದು, ಜನರಲ್ಲಿ ಕಾನೂನಿನ ಭಯ ಹೆಚ್ಚಬಹುದು.
ಆರ್ಥಿಕ ಶೋಷಣೆ: ಸದಾ ಕ್ರಿಯಾಶೀಲರಾಗಿರುವ ಹೆಣ್ಣು ಹೊರಗೆ ದುಡಿಯುತ್ತಿದ್ದರೂ ಅವಳ ಆರ್ಥಿಕ ಸ್ಥಿತಿ ಇನ್ನೂ ಭದ್ರವಾಗಿಲ್ಲ. ಅವಳಿಷ್ಟದಂತೆ ಹಣಕಾಸಿನ ಯೋಜನೆ ರೂಪಿಸಿಕೊಂಡು ವ್ಯವಹಾರ ಮಾಡಲು ಸ್ವಾತಂತ್ರ್ಯ ಸಿಕ್ಕಿಲ್ಲ. ಉದ್ಯೋಗಸ್ಥ ಹಲವು ಮಹಿಳೆಯರು ತಮ್ಮ ಎಟಿಎಂ ಕಾರ್ಡನ್ನೇ ತಮ್ಮ ಗಂಡಂದಿರ ಕೈಯಲ್ಲಿ ಒಪ್ಪಿಸಿ ಅವರಿಗೆ ಅನಿವಾರ್ಯವಾದ ಸಮಯದಲ್ಲಿ ಹಣದ ಆವಶ್ಯಕತೆ ಇದ್ದರೆ ಗಂಡಿನಲ್ಲಿ ಮೊರೆ ಹೋಗಿ ಮನಸ್ತಾಪಕ್ಕೆ ಕಾರಣ ಆಗುವ ಸಂಭವವಿದೆ. ಇದರಿಂದ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದಾರೆ. ಕೂಲಿ ಕೆಲಸ ಮಾಡುವ ಮಹಿಳೆಯು ಕೂಡ ತನ್ನ ಹಣದಲ್ಲಿಯೇ ಸಂಸಾರವನ್ನು ನಿಭಾಯಿಸುವುದನ್ನು ನಾವು ಕಾಣಬಹುದು. ಗಂಡ ಕುಡುಕನಾದರೆ ಅವನ ದುಡಿತದ ಹಣವು ಹೆಂಡ ಸರಾಯಿಗೆ ಮೀಸಲಾಗಿ ಅವಳ ಬಳಿ ಇರುವ ಹಣವೂ ಅವನ ಪಾಲಾಗುವುದಲ್ಲದೆ ದೈಹಿಕ ಕಿರುಕುಳ ನೀಡಿ ಮನೆಯಿಂದ ಮಹಿಳೆಯರನ್ನು ಹೊರಗಟ್ಟಿದ ಘಟನೆಯು ನಡೆದಿದೆ. ಅವಳಿಗೆ ಶಾಲಾ ಜಗಲಿಯೆ ಆಸರೆಯಾಗಿರುವ ಪರಿಸ್ಥಿತಿಯು ಹಲವು ಮಹಿಳೆಯರಲ್ಲಿ ಕಾಣಬಹುದು. ಹಾಗಾಗಿ ಮಹಿಳೆಯರು ತಮ್ಮ ದುಡಿತದ ಹಣಕ್ಕೆ ತಾವೇ ಹಕ್ಕುದಾರರಾಗಬೇಕು. ಹೀಗಿದ್ದರೆ ಗಟ್ಟಿಗಿತ್ತಿಯಾಗಿ ನಿಲ್ಲುವ ಆತ್ಮಸ್ಥೈರ್ಯ ಹೆಣ್ಣಿನಲ್ಲಿ ಮೂಡುತ್ತದೆ.
ಹೆಣ್ಣು ತನ್ನ ಹಕ್ಕುಗಳನ್ನು ಪಡೆದುಕೊಳ್ಳುವ ಧೈರ್ಯ ಮಾಡಬೇಕು: ಸಮಾನತೆ ಮತ್ತು ಸ್ವಾತಂತ್ರ್ಯ ಪ್ರತಿ ಜೀವಿಗೆ ಜನ್ಮಸಿದ್ಧ ಹಕ್ಕು. ಆದರೆ ಈ ಸಮಾನತೆಯ ವಿಚಾರದಲ್ಲಿ ಹೆಣ್ಣನ್ನು ದುರ್ಬಲಳಾಗಿ ಮಾಡುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಮೀಸಲಾತಿ ಸೀಟ್ ಮಾತ್ರ ಲಭಿಸುತ್ತದೆ ವಿನಾ ಜನರಲ್ ಸೀಟ್ ಗಾಗಿ ಅವಳು ಹವಣಿಸುವುದಿಲ್ಲ. ಹಾಗಾಗಿ ಮಹಿಳೆಯರು ಧೈರ್ಯ ಮಾಡಿ ತಮ್ಮದೇ ಒಂದು ಪಕ್ಷವನ್ನು ಕಟ್ಟಿ, ಪುರುಷರೆದುರು ನಿಲ್ಲುವ ಧೈರ್ಯ ಮಾಡಬೇಕು. ಇದರಿಂದ ಮಹಿಳೆಯರಿಗೆ ಅವರು ಎದುರಿಸುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಬೆಳೆಸಿಕೊಂಡು ಹೋರಾಡಲು ಅನುಕೂಲವಾಗುತ್ತದೆ. ಮಹಿಳೆಯರು ಸದೃಢರಾಗಲು ತಮ್ಮ ಹಕ್ಕಿಗಾಗಿ ನಿರಂತರ ಪ್ರಯತ್ನ ಮಾಡಲೇಬೇಕು. ಇದರಿಂದ ಮುಂದೆ ಅವರ ಬದುಕು ಉತ್ತಮವಾಗುವುದರಲ್ಲಿ ಸಂಶಯವಿಲ್ಲ.
ಉತ್ತಮ ವಿದ್ಯಾಭ್ಯಾಸದ ಜೊತೆ ಆತ್ಮಸ್ಥೈರ್ಯ ತುಂಬುವಂತಹ ಶಿಕ್ಷಣ ಕೊಡಬೇಕು: ಯಾವ ಹೆಣ್ಣು ಮಗು ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಅವಳ ಮುಂದಿನ ಬದುಕು, ಸುಗಮವಾಗಿರಲು ಶಿಕ್ಷಣ ಅತ್ಯಾವಶ್ಯಕ. ಅದರಂತೆ ಅವಳಲ್ಲಿ ಎಳವೆಯಲ್ಲಿಯೆ ಆತ್ಮಸ್ಥೈರ್ಯವನ್ನು ಮೂಡಿಸಿದರೆ ಮುಂದಿನ ಬದುಕನ್ನು ಜಾಗೃತವಾಗಿ ನಿಭಾಯಿಸಬಲ್ಲಳು. ಎಂತಹ ಸಂದಿಗ್ಧ ಪರಿಸ್ಥಿತಿಯನ್ನೂ ಯಾವುದೇ ಅಳುಕಿಲ್ಲದೆ ಎದುರಿಸುವ ಸ್ಥೆರ್ಯ ಅವಳಲ್ಲಿ ಮೂಡುತ್ತದೆ.
ಹೆಣ್ಣು ಹೆಣ್ಣಿನಿಂದಲೇ ಶೋಷಣೆಗೆ ಒಳಗಾಗುವುದು: ಇತ್ತೀಚಿನ ದಿನಗಳಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಮಾತುಗಳು ಕೇಳಿ ಬರುತ್ತಿರುವುದು ಹೆಚ್ಚು. ಅತ್ತೆ ಸೊಸೆಯರ ನಡುವೆಯೇ ಈ ಬಿರುಕು. ಸೊಸೆಯಾದವಳು ಅತ್ತೆಯಿಂದಾಗಿ ಮನೆ ಬಿಟ್ಟು ಹೋಗುವ ಕಾರಣ ಎನ್ನುವಳೆ ವಿನಾ ಮಾವನನ್ನು ದೂಷಿಸುವುದು ವಿರಳ. ಅತ್ತೆ ಸೊಸೆಯನ್ನು ತನ್ನ ಮಗಳು ಎಂದು ಭಾವಿಸಬೇಕು. ಹಾಗೆ ಸೊಸೆಯೂ ಸಹ ಹೆಣ್ಣೆ. ಅವಳು ಅನುಸರಿಸಿಕೊಂಡು ಹೋಗುವ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ಒಳ ಹೊರಗೂ ಮನೆಯವರು ಹಾಗೂ ಬಂಧುಗಳ ಸಂಪೂರ್ಣ ಜವಾಬ್ದಾರಿ ಅವಳ ಹೆಗಲ ಮೇಲಿರಿರುವುದರಿಂದ ಪ್ರೀತಿಯಿಂದ ಸಂಬಂಧವನ್ನು ಕಾಯ್ದಿರಿಸಿಕೊಳ್ಳವ ಭರದಲ್ಲಿ ಹಲವು ಭಾರಿ ಖಿನ್ನತೆಗೆ ಗುರಿಯಾಗುವ ಸಂಭವ ವಿರುತ್ತದೆ. ಹಾಗಾಗಿ ಯಾರು ಯಾರನ್ನೂ ದೂಷಣೆ ಮಾಡದೆ ಜವಾಬ್ಧಾರಿ ನಿಭಾಹಿಸುವಲ್ಲಿ ಭೇದ ಭಾವ ಎಣಿಸದೆ ಮನೆಯ ಸದಸ್ಯರು ಸಹಕರಿಸಬೇಕು. ಹೆಣ್ಣಿನ ಭಾವನೆಗಳಿಗೆ ಸ್ಪಂದಿಸುವ ಮನ ಮನೆಯೊಳಗಿರಬೇಕು. ಅವಳು ಸದಾ ಆ ನಿರೀಕ್ಷೆಯಲ್ಲಿ ಇರುತ್ತಾಳೆ. ಆಗ ಮಾತ್ರ
ಆ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ.
ಹೆಣ್ಣು ಪೂಜೆಗೆ ಅರ್ಹಳು :
“ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ” ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೋ ಅಲ್ಲಿ ದೇವರು ನೆಲೆಯಾಗಿರುತ್ತಾನೆ, ಸಂತೋಷಪಡುತ್ತಾನೆ. ಹಾಗಾಗಿ ಮನೆಯಲ್ಲಿ ಅಥವಾ ಸಮಾಜದಲ್ಲಿ ಅವಳಿಗೆ ಕೊಡುವಂತಹ ಗೌರವ ಕೊಡಲೇಬೇಕು. ಸಂಘ-ಸಂಸ್ಥೆಗಳ ವತಿಯಿಂದ ಶ್ರಮದಾನ ಮಾಡುವಾಗ ಕೆಲವು ನಿಗದಿತ ಕೆಲಸಗಳಿಗೆ ಸೀಮಿತವಾಗಿರಬಾರದು, ಸಮಾನತೆಯನ್ನು ಕಾಣುವಾಗ ಪುರುಷರು ಆ ಕೆಲಸಗಳಿಗೆ ಕೈಜೋಡಿಸಬೇಕು. ಪುರಾಣದಲ್ಲಿ ಯಾಗಗಳಲ್ಲಿ ಸ್ತ್ರೀಯರು ಭಾಗವಹಿಸುತ್ತಿದ್ದರು. ಪೌರಾಹಿತ್ಯ ವೃತ್ತಿಯನ್ನು ಸ್ತ್ರೀಯರು ಮಾಡಬಹುದು. ಆ ಅವಕಾಶವನ್ನು ಆಸಕ್ತಿ ಇರುವವರು ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಬೇಕು.
ಹೆಣ್ಣಿಗೆ ಇರುವ ಸವಾಲುಗಳು ಹಲವು: ಸಮಾಜದಲ್ಲಿ ಪುರುಷನಿಗೆ ಸರಿ ಸಮಾನವಾಗಿ ನಿಲ್ಲಬೇಕೆಂಬ ಉದ್ದೇಶದಿಂದ ಸ್ವೇಚ್ಛೆಯಿಂದ ವರ್ತಿಸಬಾರದು. ವೈಯಕ್ತಿಕ ಅಹಂಕಾರವನ್ನು ತೊರೆಯಬೇಕು. ತನ್ನ ಎದುರು ಎಂತಹ ಕಠಿಣ ಸಮಸ್ಯೆಗಳು ಎದುರಾದರೂ ಬಗೆಹರಿಸಿಕೊಳ್ಳುವ ಮನೋಧರ್ಮ ಬೆಳೆಸಿಕೊಳ್ಳಬೇಕು. ಕೀಳರಿಮೆಯನ್ನು ಬಿಡಬೇಕು. ತಾನು ದುರ್ಬಲಳು ಎಂದು ತೋರಿಸಿಕೊಳ್ಳಬಾರದು. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಸಾಮಾನ್ಯ ಹೆಂಗಸರನ್ನು ಪ್ರಗತಿ ಕಂಡ ಮಹಿಳೆಯರು ಗುರುತಿಸಬೇಕು. ಅವರು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಬೆಳೆಯಲು ಪ್ರೋತ್ಸಾಹಿಸಬೇಕು. ಮುಖವಾಡಗಳನ್ನು ಧರಿಸಿ ವ್ಯವಹರಿಸಬಾರದು.
ಮುಂದಿನ ಶತಮಾನದ ಹೆಣ್ಣು ಹೇಗಿರಬೇಕು? ಭಾರತೀಯ ಸಂಸ್ಕೃತಿಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕು. ನಂಬಿಕೆ ಇಡಬೇಕು. ಮೂಢನಂಬಿಕೆಗಳ ಗಡಿಯನ್ನು ದಾಟಬೇಕು. ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆಧುನಿಕ ವಿಜ್ಞಾನದ ಒಲವಿರಬೇಕು. ಮಹಿಳೆ ಎರಡನೇ ಭಾಗವಾಗಿರದೆ ಅನಿವಾರ್ಯ ಭಾಗವೆಂದು ಪರಿಗಣಿಸಬೇಕು. ಕ್ರಿಯಾಶೀಲಳಾಗಿರಬೇಕು. ತಂತ್ರಜ್ಞಾನದ ಅರಿವನ್ನು ಬೆಳೆಸಿಕೊಳ್ಳಬೇಕು. ಯಾವುದೇ ವಿಚಾರವನ್ನು ವಿಶ್ವಕ್ಕೆ ತಲುಪಿಸಲು ಸಮರ್ಥರಾಗಿರಬೇಕು. ಎಲ್ಲ ರಂಗದಲ್ಲಿ ತಮ್ಮ ಹೆಜ್ಜೆ ಗುರುತನ್ನು ಮೂಡಿಸಬೇಕು.
ಹಾಗೆಯೇ ಸಮಾಜವು ಅವಳ ಗುಣಗಾನ ಮಾಡುವುದಕ್ಕಿಂತ ಅವಳ ತ್ಯಾಗ ದುಡಿಮೆ ನೋವು ಹತಾಶೆ ಎಲ್ಲವನ್ನು ಪರಿಗಣಿಸಿ ಅವಳ ಆತ್ಮಗೌರವಕ್ಕೆ ಕುಂದು ಬರದಂತೆ ನಡೆದು ಕೊಂಡರೆ ಸಮಾನತೆಯ ದಾರಿ ಗುರಿ ಮುಟ್ಟಬಹುದು. ಅವಳ ಬದುಕು ಸರ್ವಾಂಗ ಸುಂದರಾಗಲು ಪರಸ್ಪರ ಗೌರವ ಅನಿವಾರ್ಯ ಹಾಗೂ ಅವಳಿಗೆ ಸಮಾಜದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕು. ಆಗ ಮಾತ್ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಚರಣೆಗೆ ಅರ್ಥವಿರುತ್ತದೆ.
*ವಿಮಲಾರುಣ ಪಡ್ಡoಬೈಲ್*
*ಸುಳ್ಯ*
*ಕಿರುಪರಿಚಯ*
ಹೆಸರು:- ವಿಮಲಾರುಣ ಪಡ್ಡಂಬೈಲು
ವಿದ್ಯಾರ್ಹತೆ : ಎಂ.ಎ. ಬಿ.ಎಡ್ (ಹಿಂದಿ)
*ಹವ್ಯಾಸ*:-. ಕನ್ನಡ ಹಾಗು ಅರೆಭಾಷೆಗಳಲ್ಲಿ ಕಥೆ, ಕವನ , ಲೇಖನ, ಲಲಿತ ಪ್ರಬಂಧ ರಚನೆ, ಓದುವುದು ಹಾಗೂ ಕೃಷಿ ಚಟುವಟಿಕೆ.
ಪ್ರಕಟಿತ ಕವನಸಂಕಲನಗಳು :ಇಬ್ಬನಿಯ ಹನಿ ಮತ್ತು ಮಿಂಚುಹುಳು.
ಪ್ರಶಸ್ತಿಗಳು :ಕಾವ್ಯಸಿರಿ ಪ್ರಶಸ್ತಿ, ಸಾಹಿತ್ಯ ವಿಕಾಸ ರತ್ನ ರಾಜ್ಯ ಪ್ರಶಸ್ತಿ, ಚಂದನ ಸಾಹಿತ್ಯ ರತ್ನ ಪ್ರಶಸ್ತಿ.
ಕಥೆ,ಕವನ,ಲೇಖನ, ಲಲಿತ ಪ್ರಬಂಧ ಹಾಗೂ ಅವಲೋಕನ ಸ್ಥಳೀಯ ಪತ್ರಿಕೆಗಳಾದ ಸುದ್ದಿ ಬಿಡುಗಡೆ ಮತ್ತು ಅಮರ ಸುಳ್ಯ ಸುದ್ದಿ, ದೀಪಾವಳಿ ವಿಶೇಷಾಂಕಗಳಲ್ಲಿ ಹಾಗೂ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿವೆ.
ಮಡಿಕೇರಿ ಆಕಾಶವಾಣಿಯಲ್ಲಿ ಕಥೆ,ಲಲಿತ ಪ್ರಬಂಧ, ಕವನ ವಾಚನ, ಪ್ರಸಾರಗೊಂಡಿದೆ. ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಹಾಗೂ ಆನ್ಲೈನ್ ಕವನ ವಾಚನ, ಬಹುಭಾಷಾ ಕವಿಗೋಷ್ಠಿ, ದಸರಾ ಕವಿಗೋಷ್ಠಿ, ಹಲವಾರು ಸಾಹಿತಿಕ ವೇದಿಕೆಗಳಲ್ಲಿ ಕವನವಾಚಿಸಿದ ಅನುಭವ.
ಸಾಹಿತ್ತಿಕ ಚಟುವಟಿಕೆಗಳಿಗಾಗಿ ಬಹುಮಾನ ಹಾಗೂ ಸನ್ಮಾನ ಲಭಿಸಿದೆ.