ಜೂನ್ 1ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ: ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ ಕೆಪಿಎಸ್ ಶಾಲೆಗೆ ಮುಖ್ಯಮಂತ್ರಿಗಳಿಂದ ಶಿವಮೊಗ್ಗದಲ್ಲಿ ಉದ್ಘಾಟನೆ* – *46,000 ಸರ್ಕಾರಿ ಶಾಲೆಗಳ ಶಿಕ್ಷಕರು, ಪ್ರಾಂಶುಪಾಲರು ಮತ್ತು ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ವಿಡಿಯೋ ಸಂವಾದ*

ಜೂನ್ 1ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ:

ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ ಕೆಪಿಎಸ್ ಶಾಲೆಗೆ ಮುಖ್ಯಮಂತ್ರಿಗಳಿಂದ ಶಿವಮೊಗ್ಗದಲ್ಲಿ ಉದ್ಘಾಟನೆ*

– *46,000 ಸರ್ಕಾರಿ ಶಾಲೆಗಳ ಶಿಕ್ಷಕರು, ಪ್ರಾಂಶುಪಾಲರು ಮತ್ತು ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ವಿಡಿಯೋ ಸಂವಾದ*

ಬೆಂಗಳೂರು: ಹೊಸ ಶೈಕ್ಷಣಿಕ ವರ್ಷದ ಸಿದ್ಧತೆಗಳ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರು ರಾಜ್ಯದ 46,000 ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಿಯು ಕಾಲೇಜು ಪ್ರಾಂಶುಪಾಲರು ಹಾಗೂ ಡಿಡಿಪಿಐ, ಡಿಡಿಪಿಯು, ಬಿಇಒ ಸೇರಿದಂತೆ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆಸಿದರು.

*ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವ:*

ಮುಂಬರುವ ಜೂನ್ 1ರಂದು ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲಿದ್ದಾರೆ, ಎಂದು ಸಚಿವರು ಹೇಳಿದರು. ಇದೇ ಸಂದರ್ಭದಲ್ಲಿ, ಮುಖ್ಯಮಂತ್ರಿಗಳು ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯುವ ‘ಮಹಾ ಪೋಷಕ-ಶಿಕ್ಷಕರ ಸಭೆ’ (Mega PTM) ಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ ಎಂದು ಸಚಿವರು ಪ್ರಕಟಿಸಿದರು.

*ಶಿವಮೊಗ್ಗದಲ್ಲಿ ಕೆಪಿಎಸ್ (KPS) ಶಾಲೆಗೆ ಶಂಕುಸ್ಥಾಪನೆ:*

ಇದೇ ಶಾಲಾ ಪ್ರಾರಂಭೋತ್ಸವದ ಶುಭ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗದಲ್ಲಿ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ (KPS) ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೆಪಿಎಸ್ ಶಾಲೆಗಳ ಉದ್ದೇಶ, ಗುಣಮಟ್ಟ ಮತ್ತು ಅಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ ಪೋಷಕರಿಗೆ ಸ್ಪಷ್ಟ ಮಾಹಿತಿ ಒದಗಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

*ಅತ್ಯುತ್ತಮ ಫಲಿತಾಂಶಕ್ಕೆ ಸಚಿವರ ಅಭಿನಂದನೆ* :

ಇತ್ತೀಚಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ದಾಖಲಾದ ಐತಿಹಾಸಿಕ ಹಾಗೂ ಅತ್ಯುತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಹಾಗೂ ಅಧಿಕಾರಿಗಳ ಹಗಲಿರುಳಿನ ಶ್ರಮವನ್ನು ಸಚಿವ ಮಧು ಬಂಗಾರಪ್ಪ ಅವರು ಶ್ಲಾಘಿಸಿದರು. ಇಲಾಖೆಯ 29-ಅಂಶಗಳ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು, ಪಾರದರ್ಶಕ ಮೌಲ್ಯಮಾಪನ ಮತ್ತು ರಾಜ್ಯಮಟ್ಟದಲ್ಲಿ ಸಿದ್ಧಪಡಿಸಿದ ಪ್ರಶ್ನೆಪತ್ರಿಕೆಗಳ ಮೂಲಕ ಉಚಿತವಾಗಿ ನಡೆಸಲಾದ ಪೂರ್ವಸಿದ್ಧತಾ ಪರೀಕ್ಷೆಗಳು ಈ ಸಾಧನೆಗೆ ಕಾರಣವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

*ಹೊಸ ಶೈಕ್ಷಣಿಕ ವರ್ಷಕ್ಕೆ ಇಲಾಖೆಯ ಪ್ರಮುಖ ಆದ್ಯತೆಗಳು:*

ಸಭೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಆಡಳಿತಾತ್ಮಕ ಜವಾಬ್ದಾರಿಗಳ ಬಗ್ಗೆ ಸಚಿವರು ಸ್ಪಷ್ಟ ನಿರ್ದೇಶನಗಳನ್ನು ನೀಡಿದರು:

*ದಾಖಲಾತಿ ಅಭಿಯಾನ* : ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಗರಿಷ್ಠ ಮಟ್ಟಕ್ಕೆ ಏರಿಸುವುದು ಮೊದಲ ಆದ್ಯತೆಯಾಗಬೇಕು. ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಗುರುತಿಸಿ, ಜಾಗೃತಿ ಮೂಡಿಸಿ ಮರಳಿ ಶಾಲೆಗೆ ತರಬೇಕು.

*ಬಿಸಿಯೂಟ ಯೋಜನೆ* : ಶಾಲಾ ಬಿಸಿಯೂಟ (Mid Day Meals) ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದರಲ್ಲಿ ಯಾವುದೇ ರೀತಿಯ ಲೋಪದೋಷಗಳಾಗದಂತೆ (no lapses) ಎಚ್ಚರವಹಿಸುವುದು ಕಡ್ಡಾಯ.

*ಸೌಲಭ್ಯಗಳ ಸಕಾಲಿಕ ವಿತರಣೆ* : ಶಾಲಾ ಪ್ರಾರಂಭದಲ್ಲೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಎಲ್ಲಾ ಅಗತ್ಯ ಸಾಮಗ್ರಿಗಳನ್ನು ಸಕಾಲದಲ್ಲಿ (In-time distribution) ವಿತರಿಸಬೇಕು.

*ನಿಯಮಿತ ಮೇಲ್ವಿಚಾರಣೆ* : ಡಿಡಿಪಿಐ, ಬಿಇಒ, ಸಿಆರ್‌ಪಿ ಮತ್ತು ಬಿಆರ್‌ಪಿ ಅಧಿಕಾರಿಗಳು ಕೇವಲ ಕಡತಗಳ ಪರಿಶೀಲನೆ ಮಾಡದೆ, ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಗುಣಮಟ್ಟದ ಬೋಧನೆ ಮತ್ತು ಶಿಕ್ಷಕರ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಬೇಕು.

“ಎಸ್‌ಎಸ್‌ಎಲ್‌ಸಿ ಒಂದು ಅರ್ಹತಾ ಪರೀಕ್ಷೆಯಾಗಿದ್ದು, ಉನ್ನತ ಶಿಕ್ಷಣಕ್ಕೆ ಸೇತುವೆಯಂತಿದೆ. ವಿದ್ಯಾರ್ಥಿಗಳೇ ಕರ್ನಾಟಕದ ಮಾನವ ಸಂಪನ್ಮೂಲದ ಮೂಲಾಧಾರವಾಗಿದ್ದಾರೆ. ಹೀಗಾಗಿ, ಎಸ್ಎಸ್ಎಲ್ಸಿ ಫಲಿತಾಂಶದ ಸಂಪೂರ್ಣ ಸುಧಾರಣೆಗೆ ಪ್ರತಿಯೊಬ್ಬ ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಬೇಕು” ಎಂಬ ಮುಖ್ಯಮಂತ್ರಿಗಳ ಆಶಯವನ್ನು ಸಚಿವರು ಸಭೆಯಲ್ಲಿ ಪುನರುಚ್ಚರಿಸಿದರು.