ಸೂಡಾ ಅಧ್ಯಕ್ಷ ಗಾದಿಯಲ್ಲಿ ಕನಸುಗಾರ ಸುಂದರೇಶ್

ಸೂಡಾ ಅಧ್ಯಕ್ಷ ಗಾದಿಯಲ್ಲಿ ಕನಸುಗಾರ ಸುಂದರೇಶ್

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ಹೆಚ್.ಎಸ್.ಸುಂದರೇಶ್ ರವರಿಗೆ ಕೊನೆಗೂ ಸೂಡಾ ಅಧ್ಯಕ್ಷ ಸ್ಥಾನ ಹುಡುಕಿಕೊಂಡು ಬಂದಿದೆ. ಐದು ವರ್ಷಕ್ಕೂ ಹೆಚ್ಚು ಕಾಲ ಅಧ್ಯಕ್ಷರಾಗಿ ಬಿಜೆಪಿ ವಿರುದ್ಧದ ಹೋರಾಟಗಳಲ್ಲಿ ತೊಡಗಿಸಿಕೊಂಡು ಕಾಂಗ್ರೆಸ್‌ನ್ನು ಕ್ರಿಯಾಶೀಲವಾಗಿ ಇಟ್ಟುಕೊಂಡಿದ್ದಕ್ಕೆ ಈ ಅಧ್ಯಕ್ಷ ಸ್ಥಾನ ಅವರಿಗೆ ಗೌರವಯುತವಾಗಿ ಲಭಿಸಿದಂತಿದೆ.
1987-93 ರವರೆಗೆ ಎನ್‌ಎಸ್‌ಯುಐ ಅಧ್ಯಕ್ಷರಾಗಿ, ಅದೇ ಸಂದರ್ಭದಲ್ಲಿ ಎಸ್.ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಾರ್ಪೊರೇಟರ್ ಆಗಿ, 11 ವರ್ಷಗಳ ಕಾಲ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿ, ಕಾಡಾ ಅಧ್ಯಕ್ಷರಾಗಿ- ತಮ್ಮನ್ನು ತಾವು ಪ್ರತೀ ಹಂತದಲ್ಲೂ ಕ್ರಿಯಾಶೀಲವಾಗಿಯೇ ಇಟ್ಟುಕೊಂಡು ಬಂದಿರುವ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಈಗ ಸೂಡಾ ಅಧ್ಯಕ್ಷರಾಗಿ ತಮ್ಮದೇ ಕನಸುಗಳನ್ನು ಸಾಕಾರ ರೂಪಕ್ಕೆ ಇಳಿಸಲು ಹೊರಟಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಪಕ್ಷದಲ್ಲಿ ಶಿಸ್ತು ತಂದವರು. ಎಲ್ಲ ವರ್ಗದ ಜನರಿಗೂ ಒಂದೇ ರೀತಿಯ ಸಮಾನತೆ ನೀಡಿದವರು. ಪಕ್ಷದ ಕಚೇರಿಯಲ್ಲಿ ಮನೆ ವಾತಾವರಣ ನಿರ್ಮಿಸಿದವರು. ಬೆಳಿಗ್ಗೆ 11ರಿಂದ ರಾತ್ರಿ 10ರವರೆಗೆ ಬಂದ ಜನರ ಕಷ್ಟ-ಸುಖ ಕೇಳಿ ಕೈಲಾದ ಸಹಾಯ ಮಾಡುತ್ತಿರುವವರು. ಹೀಗೆ, ಸುಂದರೇಶ್‌ರವರನ್ನು ಕೊಂಡಾಡುವ ಹಲವರಿದ್ದಾರೆ. ಕೊರೋನಾ ಸಂದರ್ಭದಲ್ಲಿ ಮನೆ ಮನೆಗೆ ಸಹಾಯಹಸ್ತ ಚಾಚಿದ್ದಾರೆ. ಇದೆಲ್ಲವನ್ನು ತಮ್ಮ ಖಾತೆಯಲ್ಲಿ ಜಮೆ ಮಾಡಿಕೊಂಡಿರುವ ಹೆಚ್.ಎಸ್.ಸುಂದರೇಶ್ ಅದೇ ಆಧಾರದ ಮೇಲೆ ಈಗ ಸೂಡಾ ಅಧ್ಯಕ್ಷರಾಗಿಯೂ ಅಧಿಕಾರ ವಹಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹೆಚ್.ಎಸ್.ಸುಂದರೇಶ್ ಬಂದ ನಂತರ ಶಿಕಾರಿಪುರ ಪುರಸಭೆಯಲ್ಲಿ ೮ ಸ್ಥಾನವನ್ನು, ಶಿರಾಳಕೊಪ್ಪ ಪಟ್ಟಣ ಪಂಚಾಯತ್‌ನಲ್ಲಿ 7ಸ್ಥಾನಗಳನ್ನು, ತೀರ್ಥಹಳ್ಳಿ ಪಟ್ಟಣ ಪಂಚಾಯತ್‌ನಲ್ಲಿ 25 ವರ್ಷಗಳ ನಂತರ ಅಧಿಕಾರವನ್ನು ಪಡೆದುಕೊಂಡರು. ಭದ್ರಾವತಿಯಲ್ಲಿ 18 ಸ್ಥಾನಗಳು ಕಾಂಗ್ರೆಸ್‌ಗೆ ಒಲಿದವು. ಗ್ರಾಮಪಂಚಾಯತ್ ಚುನಾವಣೆಗಳಲ್ಲಿಯೂ ಹೆಚ್. ಎಸ್.ಸುಂದರೇಶ್ ಪ್ರಭಾವ ದಿಂದಾಗಿ ಬಹಳಷ್ಟು ಜನ ಗೆಲುವಿನ ಮುಖ ನೋಡುವಂತಾಯಿತು. ಕಾಂಗ್ರೆಸ್ ಸರ್ಕಾರ ಈಗ ರಾಜ್ಯದಲ್ಲಿದೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಸುಂದರೇಶ್‌ರವರಿಗೂ ಈಗ ಗೌರವ ಸಿಕ್ಕಂತಾಗಿದೆ.
ಸೂಡಾ ಅಧ್ಯಕ್ಷರಾಗುತ್ತಿದ್ದಂತೆಯೇ ಬಡ ಮತ್ತು ಮಧ್ಯಮ ವರ್ಗದವರಿಗೆ ಅತಿ ಕಡಿಮೆ ದರದಲ್ಲಿ ನಿವೇಶನಗಳನ್ನು ನೀಡುವ ಮಾತನ್ನಾಡಿದ್ದಾರೆ. ಹಲವು ವರ್ಷಗಳಿಂದ ಸೂಡಾ ಕೇವಲ ಖಾಸಗಿ ಲೇಔಟ್‌ಗಳ ನಿರ್ಮಾಣದ ಜಾಗವೇನೋ ಎಂಬಂತೆ ಆಗಿಹೋಗಿದೆ. ಸುಂದರೇಶ್‌ರವರ ಅವಧಿ ಯಲ್ಲಾದರೂ ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲಕರ ದರದಲ್ಲಿ ನಿವೇಶನಗಳು ಲಭ್ಯವಾಗಬೇಕು. ಈಗಾಗಲೇ ಊರಗಡೂರಿನಲ್ಲಿ ವಸತಿ ಬಡಾವಣೆ ನಿರ್ಮಾಣವಾಗಿದೆ. ಅಂತಿಮ ಹಂತದ ಕೆಲಸಗಳು ಮುಗಿದ ಕೂಡಲೇ 684 ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲು ಸೂಡಾ ಸಿದ್ಧವಾಗಿದೆ.
ಸೋಮಿನಕೊಪ್ಪದ ಜೆಹೆಚ್ ಪಟೇಲ್ ಬಡಾವಣೆಯಲ್ಲಿ 1.09 ಎಕರೆ ಪ್ರದೇಶದಲ್ಲಿ ಜಿ+3 ವಸತಿ ಸಮುಚ್ಛಯ ಹಾಗೂ ಊರಗಡೂರು ವಸತಿ ಬಡಾವಣೆಯ4 ಎಕರೆ ಜಾಗದಲ್ಲಿ ವಸತಿ ಸಮುಚ್ಛಯವನ್ನು ನಿರ್ಮಿಸಲು ಸುಂದರೇಶ್ ಒಲವು ತೋರಿಸಿದ್ದಾರೆ.ಪ್ರಾಧಿಕಾರದ ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, 35 ಕೋಟಿ ರೂ.ಗಳ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ, ಪ್ರಾಧಿಕಾರದ ಬಡಾವಣೆಗಳಲ್ಲಿ ಲಭ್ಯವಿರುವ ವಾಣಿಜ್ಯ ನಿವೇಶನಗಳಲ್ಲಿ ವಾಣಿಜ್ಯ ಸಂಕೀ ರ್ಣಗಳನ್ನು ನಿರ್ಮಿಸುವ ಮಾತನ್ನಾಡಿದ್ದಾರೆ.
ಇಂತಹ ಹಲವು ಕನಸುಗಳನ್ನು ಹೊತ್ತಿರುವ ಹೆಚ್.ಎಸ್.ಸುಂದರೇಶ್ ಆ ಕನಸುಗಳನ್ನು ವಾಸ್ತವಕ್ಕಿಳಿಸಬಲ್ಲ ಶಕ್ತಿ ಹೊಂದಿದ್ದಾರೆ.