ರಾಜಕೀಯ ಗಂಡಸ್ತನವಿದ್ರೆ ಈಶ್ವರಪ್ಪ ಬಂಡಾಯ ಏಳಲಿ- ಆಯನೂರು ಮಂಜುನಾಥ್ ಸವಾಲು*

*ರಾಜಕೀಯ ಗಂಡಸ್ತನವಿದ್ರೆ ಈಶ್ವರಪ್ಪ ಬಂಡಾಯ ಏಳಲಿ- ಆಯನೂರು ಮಂಜುನಾಥ್ ಸವಾಲು*

ಕೆ.ಎಸ್.ಈಶ್ವರಪ್ಪನವರಿಗೆ ರಾಜಕೀಯ ಗಂಡಸ್ತನವಿಲ್ಲ. ಅವರೊಬ್ಬ ಹೇಡಿ, ಉತ್ತರ ಕುಮಾರ, ಬ್ಲಾಕ್‌ಮೇಲ್ ಮಾಡುವ ರಾಜಕಾರಣಿ, ಬೊಗಳೆಬಿಡುತ್ತಾರೆ, ಅವರಿಗೆ ನಿಜವಾಗಿಯೂ ಧೈರ್ಯವಿದ್ದರೆ ಬಂಡಾಯ ಏಳಲಿ ಎಂದು ಆಯನೂರು ಮಂಜುನಾಥ್ ವ್ಯಂಗ್ಯವಾಗಿ ಕೆಣಕಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಮತ್ತು ಅವರ ಪುತ್ರರಿಗೆ ನಿಜವಾಗಿಯೂ ಅನ್ಯಾಯವಾಗಿದೆ ಎನ್ನುವುದಾದರೆ ಬ್ಲಾಕ್‌ಮೇಲ್ ತಂತ್ರ ಬಿಟ್ಟು ಬಂಡಾಯವೆದ್ದು ಸ್ಪರ್ಧೆ ಮಾಡಲಿ. ನನ್ನ ಒಂದು ಓಟನ್ನು ಅವರಿಗೆ ಹಾಕುತ್ತೇನೆ. ಅದನ್ನು ಬಿಟ್ಟು ಗಂಡಸುತನವಲ್ಲದ ಮಾತನಾಡಬಾರದು. ಸಭೆ ಕರೆಯುತ್ತಾರಂತೆ ಆ ಸಭೆಗೆ ಜಿಲ್ಲೆಯ ಬಿಜೆಪಿ ಮುಖಂಡರು ಯಾರು ಹೋಗುತ್ತಾರೆ ನಾನು ನೋಡುತ್ತೇನೆ ಎಂದರು.

ಅವರನ್ನು ನಾವು ರಾಜಕಾರಣದಿಂದ ದೂರ ಮಾಡಲಿಲ್ಲ. ಅದು ಶೇ.೪೦ರಷ್ಟರ ಭ್ರಷ್ಟಚಾರದ ಕೊಡುಗೆ. ಶೇ.೪೦ಕ್ಕೆ ಅವರು ಬಲಿದಾನ ಮಾಡಿಕೊಂಡಿದ್ದಾರೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಮತ್ತಷ್ಟು ವಿಜೃಂಭಿಸುತ್ತಿದೆ. ಡಿ.ಎಸ್. ಶಂಕರಮೂರ್ತಿ, ಬಿ.ಎಸ್.ಯಡಿಯೂರಪ್ಪ, ಭಾನುಪ್ರಕಾಶ್ ಇವರೆಲ್ಲರೂ ಕುಟುಂಬ ರಾಜಕಾರಣದ ಪ್ರೇಮಿಗಳೇ. ಅದರಲ್ಲೂ ಈಶ್ವರಪ್ಪನವರಂತು ಕಾಂಗರೂ ರೀತಿಯ ಪ್ರೀತಿ. ಮಡಿಲಲ್ಲಿ ಮರಿಯನ್ನು ಇಟ್ಟುಕೊಂಡ ಹಾಗೆ ಮಗ ಕಾಂತೇಶ್‌ನನ್ನು ಇಟ್ಟುಕೊಂಡಿದ್ದಾರೆ. ಅವರು ಜಿ.ಪಂ. ಬಿಟ್ಟು ಹೊರಗೆ ಬರುವುದಿಲ್ಲ ಎಂದರು.

ಈಶ್ವರಪ್ಪನವರಿಗೆ ಯಾವುದೋ ಬೋರ್ಡ್ ಅಧ್ಯಕ್ಷ ಸ್ಥಾನ ಕೊಟ್ಟರೂ ಸಾಕಾಗಿದೆ. ಅವರಿಗೆ ಬಿಜೆಪಿಯನ್ನು ವಿರೋಧಿಸುವ ಶಕ್ತಿಯಂತೂ ಇಲ್ಲವೇ ಇಲ್ಲ. ಹಿಂದೆಲ್ಲ ಯಡಿಯೂರಪ್ಪನವರಿಗೆ ಬೈದು ಒಂದು ಸಮಾರಂಭದಲ್ಲಿ ಯಡಿಯೂರಪ್ಪನವರ ಕಾಲಿಗೆ ಬಿದ್ದಿದ್ದನ್ನು ಇಡೀ ರಾಜ್ಯವೇ ನೋಡಿದೆ. ಇವರ ದೇಶ ಪ್ರೇಮವೆಂದರೆ ಇವರ ಕುಟುಂಬವೇ ಹೊರತು ಬೇರೆ ಏನು ಅಲ್ಲ ಎಂದರು.

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ಕಾಂಗ್ರೆಸ್ ಗೆಲ್ಲುವುದು ಖಚಿತವಾಗಿದೆ. ಚುನಾವಣಾ ಯುದ್ಧ ಆರಂಭವಾಗಿದೆ. ಗೆಲ್ಲಲ್ಲು ನಾವು ರಾಜಕೀಯ ಜಾಲವನ್ನೇ ಎಳೆಯುತ್ತಿದ್ದೇವೆ. ಈಗಾಗಲೇ ಅನೇಕ ಗುಪ್ತ ಸಭೆಗಳು ನಡೆದಿವೆ. ಒಮ್ಮೆ ಗ್ರಾಮಪಂಚಾಯಿತಿಗಳ ಭೇಟಿಯಾಗಿದೆ ಎಂದರು.

ಗೀತಾಶಿವರಾಜ್‌ಕುಮಾರ್ ಫಿಲ್ಡ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ ಈಗಾಗಲೇ ಅವರು ಚುನಾವಣೆಗೆ ಸಿದ್ದರಾಗಿದ್ದಾರೆ. ರಂಗ ಸಜ್ಜಿಕೆಯೂ ಸಿದ್ದವಾಗಿದೆ. ಅವರು ಇನ್ನೇನು ಬರುತ್ತಾರೆ. ಬೈಂದೂರಿನಲ್ಲಿ ವ್ಯಾಪಾಕವಾಗಿ ಪ್ರಚಾರ ಕೈಗೊಳ್ಳಲು ಸಿದ್ಧವಾಗಿದ್ದಾರೆ. ಅಲ್ಲಿನ ಮಾಜಿ ಶಾಸಕ ಸುಕುಮಾರ್ ಶೆಟ್ಟಿಯವರು ಕಾಂಗ್ರೆಸ್‌ಗೆ ಸೇರಿದ್ದಾರೆ. ಈ ಬಾರಿ ರಾಘವೇಂದ್ರರ ಗೆಲುವು ಸಾಧ್ಯವಿಲ್ಲ. ಕಾಂಗ್ರೆಸ್ಸಿನ ಗೀತಾ ಶಿವರಾಜ್‌ಕುಮಾರ್ ಗೆದ್ದೆ ಗೆಲ್ಲುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಏಸುದಾಸ್, ಜಿ.ಪದ್ಮನಾಬ್, ಶಿ.ಜು.ಪಾಶ, ತಿಮ್ಲಾಪುರ ಲೋಕೇಶ್, ಕೃಷ್ಣ, ಎಸ್.ಬಿ.ಪಾಟೀಲ್, ಸೈಯ್ಯದ್ ಅಡ್ಡು, ಆಯನೂರು ಸಂತೋಷ್ ಸೇರಿದಂತೆ ಮುಂತಾದವರು ಇದ್ದರು.