ಸಂಗೀತ ರವಿರಾಜ್ ಇಂದಿನ ಅಂಕಣ- ಕಡಲ ತಡಿಯ ಭಾರ್ಗವದ ವಿದ್ಯಾಲಯದಲ್ಲಿ ಅರಳಿದ ಮಹಿಳಾ ದಿನಾಚರಣೆ

         ಕಡಲ ತಡಿಯ ಭಾರ್ಗವದ ವಿದ್ಯಾಲಯದಲ್ಲಿ ಅರಳಿದ ಮಹಿಳಾ ದಿನಾಚರಣೆ

ವಿದ್ಯಾಲಯವೆಂದರೆ   ಹೀಗಿರಬೇಕು ಎನ್ನುವ ಉದ್ಘಾರ ದೊಂದಿಗೆ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವೊಂದನ್ನು ಮುಗಿಸಿ  ಪೆರುವಾಜೆಯ ಡಾ . ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ವಿದ್ಯಾಲಯದಿಂದ ಬೀಳ್ಗೊಂಡೆವು.
ಇಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಇದೆ. ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿದ ಕಾರಂತರು,  ತಮ್ಮ ಹೆಸರಿಟ್ಟ ಈ ವಿದ್ಯಾಲಯವನ್ನು , ಅದರ  ಪರಿಸರವನ್ನು ಸ್ವರ್ಗದಿಂದಲೇ(ಅವರದನ್ನು ನಂಬುತ್ತಿರಲಿಲ್ಲ ಎಂಬುದು ಬೇರೆ ಮಾತು) ನೋಡುತ್ತಾ ಎಷ್ಟು ಆನಂದ ಪಡುತ್ತಿರುವರೋ ಎಂದೊಮ್ಮೆ ನನಗೆ ಭಾಸವಾಯಿತು. ಹತ್ತಿರದ ಪುತ್ತೂರು ಕಾರಂತರ ಹುಟ್ಟಿದೂರು.
ವಿದ್ಯಾಲಯದ ಹಾದಿ ಏರುತ್ತಾ ಬಂದಂತೆ ಅತ್ಯಂತ ವಿಶಾಲವಾದ ಒಂದು ಎಕರೆ ದಾಟಬಹುದಷ್ಟು ದೊಡ್ಡದಾದ ಮೈದಾನದ ಸ್ವಾಗತ ನಮಗೆ ದಕ್ಕುತ್ತದೆ. ಅದರ ವಿಸ್ತಾರವೇ ವಿದ್ಯಾದೇಗುಲಕ್ಕೆ  ಶೋಭೆ ತರುವಂತಿತ್ತು. ಸುತ್ತ ಮುತ್ತ ಕಾಡಿನ ನಡುವೆ ಇರುವ ಈ ವಿದ್ಯಾಲಯಕ್ಕೆ ಪ್ರತಿದಿನ ಬಂದರು ಮನಸ್ಸಿಗೆ ಮುದ ಕೊಡುವುದರಲ್ಲಿ ಸಂಶಯವಿಲ್ಲ. ಕಾಲೇಜ್ ತಪ್ಪಿಸಿ ಓಡಾಡುವ ಈಗಿನ ಧಾವಂತದ ಬದುಕಿನ ಮಧ್ಯದಲ್ಲಿ , ಇಲ್ಲಿ ಬರದೆ ತಪ್ಪಿಸುವವರು ಇರಲಿಕ್ಕಿಲ್ಲ ಎಂಬುದು ನನ್ನ ಭಾವನೆ. ಅಖಂಡ ಅಧಿಕಾರವಿದ್ದರು ಅತ್ಯಂತ ವಿನಯವಾಗಿ ವರ್ತಿಸುವುದು ಪ್ರಕೃತಿ ಮಾತ್ರ ಎಂಬ ಮಾತು ಇಲ್ಲಿಗೆ ಅತ್ಯಂತ ಸೂಕ್ತವಾಗಿದೆ.
ಎದುರಿಗೆ ಆವರಣದಲ್ಲೇ ಡಾ. ಶಿವರಾಮ ಕಾರಂತರ  ವಿಗ್ರಹವಿದೆ. ಮನಸಿನಲ್ಲಿ ಕಾರಂತಜ್ಜ ಎಂದು ಆಶೀರ್ವಾದ ಬೇಡಿ , ಹೆಮ್ಮೆಯಿಂದ   ತಲೆ‌  ಎತ್ತಿ  ನಿಂತಿರುವ ವಿದ್ಯಾಲಯವನ್ನೊಮ್ಮೆ ಕಣ್ತುಂಬಿಕೊಂಡೆವು. ಅರೆಭಾಷೆಯ ಅಕ್ಷರದವ್ವ ಪ್ರೀತಿಯ ಅಕ್ಕ ಚಂದ್ರಾವತಿ ಬಡ್ಡಡ್ಕರವರು ಎಷ್ಟೊಂದು ಆಕರ್ಷಣೀಯ ಸರಕಾರಿ ವಿದ್ಯಾಲಯ ಎಂಬಂತೆ ಸುತ್ತ ಮುತ್ತ ಎಲ್ಲವನ್ನೂ ವೀಕ್ಷಿಸತೊಡಗಿದರು. ಪಟ್ಟಣದಲ್ಲಿ ಕೋಟಿಗಟ್ಟಲೆ ಖರ್ಚು ಮಾಡಿ , ಲಕ್ಷಗಟ್ಟಲೆ ಫೀಸು ಭರಿಸಿಕೊಳ್ಳುವ ಅದೆಷ್ಟೋ ಖಾಸಗಿ ಕಾಲೇಜುಗಳೆಲ್ಲವೂ ನಾಚುವಂತೆ ಸುಂದರವಾದ ಹಳ್ಳಿ ಪರಿಸರದಲ್ಲಿ ತಲೆ ಎತ್ತಿ ನಿಂತಿರುವ ಈ ಆಧುನಿಕ ಕಾಲೇಜ್ , ಹಳ್ಳಿಯ ಮಕ್ಕಳಿಗೆ ಅತ್ಯುತ್ತಮ ಭೋದನೆಯೊಂದಿಗೆ ಶಿಸ್ತನ್ನು ಕಲಿಸುತ್ತಿದೆ ಎಂಬುದು ನಮಗರಿವಾಯಿತು. ಊರಿನ ವಿದ್ಯಾರ್ಥಿಗಳಲ್ಲದೆ ದೂರದೂರಿನ ಗ್ರಾಮದ ಹಲವಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗಾಗಿ ಬಂದಿದ್ದಾರೆ. ಬಿ ಸಿ ಎಂ ವಸತಿ ಗೃಹದ ವ್ಯವಸ್ಥೆಯು ಈ ಗ್ರಾಮದಲ್ಲಿದೆ.
ಇಪ್ಪತ್ತು ವರ್ಷದ ಹಿಂದೆ ನನಗೆ  ಉಪನ್ಯಾಸಕರಾಗಿದ್ದ ನೆಚ್ಚಿನ ದಾಮೋದರ ಸರ್ ಕಣಜಾಲು ಪ್ರಸ್ತುತ ಇಲ್ಲಿ ಪ್ರಾಂಶುಪಾಲರಾಗಿದ್ದಾರೆ.  ಸರಳ , ಸಜ್ಜನಿಕೆಯ ಪ್ರಾಂಶುಪಾಲರಿಗೆ ಎಷ್ಟೊಂದು ಸುಂದರವಾದ ಪ್ರಕೃತಿಯ ಮಡಿಲು ದೊರೆತಿದೆ ಎಂದು ಮನಸಿಗೆ ಹಿತವಾಯಿತು. ನಾವು ಊಟದ ಸಮಯಕ್ಕೆ ಸರಿಯಾಗಿ ತಲುಪಿದೆವು ಎನ್ನುವುದಕ್ಕಿಂತ ಊಟಕ್ಕೆ ಹೋದೆವು ಎಂದರು ಸರಿ.  ಶುಚಿಯಾದ , ರುಚಿಯಾದ, ಬಿಸಿಯಾದ ಊಟ ಹಸಿದ ನಮಗೆ ಅಮೃತದ ಸವಿಯುಣಿಸಿತು.  ವಿಶೇಷವೆಂದರೆ ಸಂಪೂರ್ಣ ಕರ್ನಾಟಕ ರಾಜ್ಯದಲ್ಲೇ ಸರಕಾರಿ  ಪದವಿ ವಿದ್ಯಾಲಯವೊಂದರಲ್ಲಿ ವಿದ್ಯಾರ್ಥಿಗಳಿಗಾಗಿ ಬಿಸಿಯೂಟ ಪ್ರಾರಂಭ ಮಾಡಿರುವುದು ಇಲ್ಲಿನ ಹೆಗ್ಗಳಿಕೆ.  ಸುಮಾರು ಹದಿನೇಳು  ವರ್ಷದ ಹಿಂದೆ ಪ್ರಾರಂಭವಾದಂದಿನಿಂದ ಅದೇ ಶಿಸ್ತಿನಿಂದ ಈಗಲೂ ಮುಂದುವರೆಸಿಕೊಂಡು ಬಂದಿರುವುದು ಶ್ಲಾಘನೀಯ. ಪ್ರಾರಂಭದ ಅಡುಗೆಯವರು ಈಗಲೂ ಇದ್ದು, ಸರಳವಾಗಿದ್ದರೂ ತುಂಬ ಸ್ವಚ್ಛವಾಗಿ ಅಡುಗೆ ಮನೆ, ಊಟದ ಮನೆಯ ಪರಿಸರವನ್ನು ಕಾಯ್ದುಕೊಂಡು ಮಕ್ಕಳಿಗೆ ಮಾದರಿಯಾಗಿದ್ದಾರೆ. ನಮಗೆ ಭೋದನೆ ಮಾಡದೆ ಇರುವವರಿಂದಲು ನಾವು ಕಲಿಯುವಂತದ್ದು ತುಂಬಾ ಇರುತ್ತದೆ ಅಲ್ಲವೇ? ಇನ್ನೊಂದು ಪ್ರಮುಖ ಅಂಶವೆಂದರೆ ಬಿಸಿಯೂಟದ ಮುನ್ನೂರು ಮಕ್ಕಳಿಗೆ ಇಲ್ಲಿ ವಿದ್ಯಾಲಯದ ಅಂಗಳದಲ್ಲೆ ಬೆಳೆದ ತೋಟದಿಂದಲೇ,  ತರಕಾರಿ ಬೆಳೆಸಲಾಗುತ್ತದೆ. ಹದಿಹರೆಯದ ವಿದ್ಯಾರ್ಥಿಗಳಿಗೆ ಇಂತಹ ತೋಟದ ಪಾಠ ದೊರೆತಿರುವುದು ಅವರಲ್ಲೊಂದು ಅರಿವು ಉದಿಸಲು ಕಾರಣವಾಗಬಹುದು.

ಅಲ್ಲದೆ ವಿದ್ಯಾರ್ಥಿಗಳಿಗೆ ಅವರೇ ಬೆಳೆದ ಕೈತೋಟದ ತಾಜಾ ತರಕಾರಿ ಬಳಸುವುದರಿಂದ ಇರುವ ಸದುದ್ದೇಶಗಳು , ಉಪಯೋಗಗಳು ಎಲ್ಲವೂ ಮನದಟ್ಟಾಗಿ ಭವಿಷ್ಯದಲ್ಲಿ ಅವರಿಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಅಲ್ಲದೆ ವಿದ್ಯಾಲಯದ ಆವರಣದಲ್ಲಿ ‘ ವಾರದ ಜೋಳಿಗೆ ‘ ಎಂಬ ಬರಹದ ದೊಡ್ಡ ಪಾತ್ರೆಯೊಂದು ಎದುರಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಮನೆಯಿಂದ ತಂದ ತರಕಾರಿಗಳನ್ನು ತುಂಬುವಂತಹ ಪಾತ್ರೆ. ಮನೆಯಲ್ಲಿ ಬೆಳೆದ ಹೆಚ್ಚಿನ ತರಕಾರಿಗಳಿದ್ದರೆ , ಇದರಲ್ಲಿ ತಂದು ಹಾಕಿದನ್ನು ಬಿಸಿಯೂಟದ ಅಡುಗೆಗೆ ಬಳಸಿಕೊಳ್ಳಲಾಗುತ್ತದೆ. ಇಂತಹ ಸೇವಾ ಮನೋಭಾವಗಳು ಹದಿಹರೆಯದ ಮಕ್ಕಳಿಗೆ ಕಡ್ಡಾಯವಾಗಿ ಬೇಕು.
ಇನ್ನು ಡಾ . ಬಿ . ಆರ್. ಅಂಬೇಡ್ಕರ್ ಹೆಸರಿಟ್ಟ ವಿದ್ಯಾಲಯದ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಉಪನ್ಯಾಸ ಏರ್ಪಡಿಸಿದರು. ಇಲ್ಲಿದ್ದ ಬಾಬಾ ಸಾಹೇಬರ ದೊಡ್ದ ಭಾವಚಿತ್ರವು ತುಂಬಾ ಚೆನ್ನಾಗಿದ್ದು ಸಂವಿಧಾನಕ್ಕೆ ಗೌರವ ಸೂಚಿಸುವಂತಿತ್ತು.  ಅಲ್ಲಿನ ವಿದ್ಯಾರ್ಥಿನಿಯರೇ   ಸ್ವಾಗತ ,  ನಿರೂಪಣೆ, ವಂದನೆ , ಪ್ರಾರ್ಥನೆ , ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರು. ಉಪನ್ಯಾಸಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ . ಅನುರಾಧ ಕುರುಂಜಿ
ಆಗಮಿಸಿದರು .  2,114  ನೇ ಉಪನ್ಯಾಸ ಕೊಡುತ್ತಿರುವ ಅವರ ಮಾತುಗಳು,  ಮಕ್ಕಳನ್ನು ಕೆಲ ಹೊತ್ತು ತಲ್ಲೀನಗೊಳಿಸಿತು ಜೊತೆಗೆ ಕ್ರಿಯಾಶೀಲವಾಗಿರಿಸಿತು. ನನಗೆ ಆಶ್ಚರ್ಯವೆನಿಸಿದ್ದು ತಾವು  ನೀಡಿರುವ  ಭಾಷಣದ ಸಂಖ್ಯೆಗಳನ್ನು ಅಷ್ಟು ಕರಾರುವಕ್ಕಾಗಿ ಲೆಕ್ಕ ಇಟ್ಟುಕೊಂಡಿರುವ ಇವರ ಜಾಣ್ಮೆ ಎಲ್ಲರೂ ಮೆಚ್ಚುವಂಥದ್ದು. ಇದೂ  ಮಕ್ಕಳಿಗೆ ಆದರ್ಶಣೀಯ   ಆಗುತ್ತದೆ ಎಂದರು ತಪ್ಪಲ್ಲ.  ಸುಳ್ಯದ ಚಂದನ ಸಾಹಿತ್ಯ ವೇದಿಕೆ , ಮಹಿಳಾ ದಿನಾಚರಣೆಗೆ ಜೊತೆಗೂಡಿ ಇದರ ರೂವಾರಿಯಾದ ಬಹುಮುಖ ಪ್ರತಿಭೆಯ ಭೀಮರಾವ್ ವಾಷ್ಠರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಚಂದಗಾಣಿಸಿದರು. ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ ಕವಿಗೋಷ್ಠಿಗೆ ಚಂದ್ರಾವತಿ ಬಡ್ಡಡ್ಕ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಸ್ಫೂರ್ತಿಯ , ಪ್ರೇರಣೆಯ ಮಾತುಗಳನ್ನಾಡಿ ಗಮನ ಸೆಳೆದರು. ಪ್ರಾಸ್ತಾವಿಕ ಮಾತುಗಳನ್ನು ಉಪನ್ಯಾಸಕಿ ಶ್ರೀಮತಿ ಸುನೀತ ನಾಯ್ಕ್ ರು ನೆರವೇರಿಸಿದರು.
ಸುಂದರ ಪರಿಸರದ ಪೆರುವಾಜೆ ಎಂಬ ಗ್ರಾಮದ ಸ್ಥಳನಾಮದ ಹಿನ್ನಲೆ ಆಸಕ್ತಿದಾಯಕವಾಗಿದೆ . ಇಲ್ಲಿ ತುಳುವಿನ ಪೇರಜ್ಜ , ಪೆರುವಾಜೆ ಆಗಿದೆ ಎಂಬುದು ಪ್ರತೀತಿ.  ಅಜ್ಜ ಮತ್ತು ಪುಳ್ಳಿ ಜಲದುರ್ಗದೇವಿ ಉದ್ಭವ ರೂಪದಲ್ಲಿ ಸಿಕ್ಕ ಸ್ಥಳವಾದ  ದೇವರಮಾರು ಗದ್ದೆ ಬದಿಯ ಎತ್ತರದ ಗುಡ್ಡೆ  ಪ್ರದೇಶದಲ್ಲಿ  ನರೆ ಗಡ್ಡೆ ಅಗೆಯುತ್ತಿದ್ದರು. ಆಗ ಗಡ್ಡೆಗೆ  ಏಟಾಗಿ  ಮಣ್ಣಿನೊಳಗಿನಿಂದ ನರೆಯ  ಹಾಲು ಒಮ್ಮೆಲೆ ಚಿಮ್ಮಿತು. ಆಗ ಮೊಮ್ಮಗ  ತುಳುವಿನಲ್ಲಿ ಪೇರ್   ಅಜ್ಜಾ  (ಪೇರ್ = ಹಾಲು)  ಎಂದು ಒಮ್ಮಿಂದೊಮ್ಮೆಲೆ ಹೌಹಾರಿ ಕಿರುಚಿ ಹೇಳಿದ.    ಪೇರ್ – ಅಜ್ಜ  ಎಂದು  ಹೇಳಿದ ಪರಿಣಾಮ ಆದು ಪೇರಜ್ಜ  ಎಂದಾಯಿತು. ಕ್ರಮೇಣ   ತುಳುವಿನ ಪೇರಜ್ಜ , ಪೆರುವಾಜೆ ಆಗಿ ಪ್ರಚಲಿತದಲ್ಲಿದೆ  ಎಂಬುದು ಇಲ್ಲಿನ ಸ್ಥಳನಾಮದ ಪ್ರತೀತಿ.  ಇದೇ ಹಾಲು ಚಿಮ್ಮಿದ ಸ್ಥಳದ ತುಸು ದೂರದಲ್ಲಿ ದೇವಿ ಸಾನಿಧ್ಯವು ಗೋಚರಿಸಿ  ಆಗ ಆಡಳಿತದಲ್ಲಿದ್ದ ಬಲ್ಲಾಳ  ಅರಸರು ಮತ್ತು ಊರ ಪ್ರಮುಖರು ಸ್ಥಳಕ್ಕೆ  ಆಗಮಿಸಿ  ದೇವಸ್ಥಾನ ಕಟ್ಟಲು ನಿಶ್ಚಯಿಸಿದರು ಎನ್ನುತ್ತದೆ ಇತಿಹಾಸ. ಇಲ್ಲಿರುವ ಜಲದುರ್ಗಮಾತೆಯು ಊರಿನ ಎಲ್ಲರನ್ನೂ ಕಾಯುತ್ತಿದ್ದಾಳೆ. ಜಲದುರ್ಗದೇವಿಯ ಊರಿನಲ್ಲಿ , ಹೆಸರೇ ಹೇಳುವಂತೆ ಜಲ ಸಮೃದ್ಧಿಯಾಗಿ ಹಸಿರು ಸೊಂಪಾಗಿ ಬೆಳೆದು ಊರು ತಂಪಾಗಿದೆ.  ಹಿಂದೆ ಊರಿನಲ್ಲಿ  ಜಲಕ್ಷಾಮ ತಲೆದೋರಿದಾಗ   ರಾಜ ಮತ್ತು ಊರಿನ ಜನರು  ಬ್ರಹ್ಮರ್ಷಿ ಆಗಿದ್ದ ಮುನಿ ಶ್ರೇಷ್ಠರಲ್ಲಿ ಜಲಕ್ಷಾಮ ಆಗಿದೆ ಎಂದು ನಿವೇದಿಸಿಕೊಂಡಾಗ ಋಷಿಯ ತಪ್ಪಸ್ಸಿಗೆ ಒಲಿದ ದೇವಿ ಜಲದುರ್ಗೆಯಾಗಿ ಗೋಚರಿಸಿದಳೆಂದು ನಂಬಿಕೆ ಇದೆ.  ಶ್ರೀ ಕ್ಷೇತ್ರದಲ್ಲಿ ನೀರಿಗಾಗಿ ಪ್ರಾರ್ಥಿಸಿಕೊಂಡಲ್ಲಿ ಆದು ಈಡೇರಿದ ನೂರಾರು ಉದಾಹರಣೆಗಳಿವೆ.   ಗೌರಿ ಹೊಳೆ ಊರಿನ ಹೊಳೆಯಾಗಿದ್ದು  ಆದು ಕಲ್ಮಡ್ಕ ಪರಿಸರದಲ್ಲಿ ಹುಟ್ಟಿ ಪೆರುವಾಜೆ ಮೂಲಕ ಹರಿದು ಕುಮಾರಧಾರ ನದಿಗೆ ಸೇರುತ್ತದೆ.  ವಿದ್ಯಾಲಯದ ಸನಿಹದಲ್ಲೇ  ಗೌರಿ ಹರಿದು ಹೋಗುತ್ತಾಳೆ .
ಏನೇ ಆಗಲಿ ಕಾರಂತರ ಹೆಸರಿನ ಕಾಲೇಜ್ ನಲ್ಲಿ ಮಹಿಳಾ ದಿನಾಚರಣೆ ಸಂಪನ್ನವಾಯಿತು. ಇಲ್ಲಿನ ಊರ , ಪರವೂರ ಉಪನ್ಯಾಸಕರು ನಮ್ಮನ್ನು ಆತ್ಮೀಯವಾಗಿ ಮಾತನಾಡಿಸಿದರು. ಮಹಿಳಾ ದಿನಾಚರಣೆಯ ಕುರಿತು ನಾನೀಗ ಏನು ಹೇಳಲು ಬಯಸುವುದಿಲ್ಲ. ಏಕೆಂದರೆ ನಮಗೆಂದೇ ಒಂದು ದಿನವನ್ನು ಯಾವುದೋ ಅನಿವಾರ್ಯ ಕಾರಣಗಳಿಗಾಗಿ ಕೊಟ್ಟುಬಿಟ್ಟಿದ್ದಾರೆ. ಅದನ್ನು ಇನ್ಯಾವುದೋ ರೀತಿಯಲ್ಲಿ ಸ್ವೀಕರಿಸೋಣ. ಈ ನೆಪದಲ್ಲಿ ನಾವೊಂದು ದಿನ ಮನೆಕೆಲಸ , ತೋಟದ ಕೆಲಸದ ಏಕತಾನತೆಯಿಂದ ಹೊರಬಂದು ಏನೋ ಒಂದು ಹೊಸತನ್ನು ಕಲಿತು ಬಂದಿದ್ದೇವೆ , ಹೊಸ ಊರು ನೋಡಿದ್ದೇವೆ, ರುಚಿಯಾದ ಪಾಯಸದೂಟ ಮಾಡಿದ್ದೇವೆ, ಹೊಸಬರೊಂದಿಗೆ ಮುಕ್ತವಾಗಿ ಮಾತನಾಡಿದ್ದೇವೆ ಮತ್ತು ನಾನಂತೂ ಗೆಳತಿ ಸುಧಾಳನ್ನು ಭೇಟಿಯಾದೆ. ಇದೂ ಒಂದು ರೀತಿಯಲ್ಲಿ ಮಹಿಳಾ ದಿನಾಚರಣೆ ಸಾರ್ಥಕವಾದಂತೆ ಅಲ್ಲವೇ?ಈಗ ಹೆಚ್ಚಿನೆಲ್ಲ ಮಹಿಳೆಯರು ಉದ್ಯೋಗದಲ್ಲಿ ಸೇರಿದಂತೆ , ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿರುವಾಗ  ಗಂಡಸರು ಅವರಿಗೆ ಅವಕಾಶ ಮತ್ತು ಪ್ರೋತ್ಸಾಹ  ಕೊಡುತ್ತಿದ್ದಾರೆ ಎಂಬುದು ಸತ್ಯ ತಾನೇ?  ಸಂಪನ್ಮೂಲ ವ್ಯಕ್ತಿಗಳು , ಯಾವ ವಿದ್ಯಾರ್ಥಿಗಳಿಗೆ ಮಹಿಳಾ ದಿನಾಚರಣೆ ಬೇಕು ಎಂದಾಗ ಯಾರು ಕೈ ಎತ್ತಲು ಸಿದ್ಧರಿರಲಿಲ್ಲ. ಮಹಿಳಾ ದಿನಾಚರಣೆ ಪ್ರಾರಂಭ ಮಾಡುವಾಗ ಇದು ಬೇಕಾಗಿತ್ತು ನಿಜ . ಆದರೆ ಈಗ ಇದರ ಅವಶ್ಯಕತೆ ಕಡಿಮೆ ಇದೆ. ಇದೂ ನಿಜ. ಹದಿಹರೆಯದ ಮಕ್ಕಳ ಈ ಮನೋಭಾವ ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆಯಲಿ ಎಂಬುದಾಗಿ ಆಶಿಸೋಣ ಅಲ್ಲವೇ?

    – ಸಂಗೀತ ರವಿರಾಜ್
                                        ಚೆಂಬು.