ಟಿಕೆಟ್ ತಪ್ಪಿಸಿದ್ದು ನಾನಲ್ಲ- ಈಶ್ವರಪ್ಪ ಎಲ್ಲೂ ಹೋಗಲ್ಲ; ಬಿ.ಎಸ್.ಯಡಿಯೂರಪ್ಪ
ಟಿಕೆಟ್ ತಪ್ಪಿಸಿದ್ದು ನಾನಲ್ಲ. ಟಿಕೆಟ್ ಗಳನ್ನೆಲ್ಲ ಫೈನಲ್ ಮಾಡಿದ್ದು ಬಿಜೆಪಿ ಕೇಂದ್ರದವರು. ಟಿಕೆಟ್ ಸಿಗದಿದ್ದಕ್ಕೆ ಕೆ.ಎಸ್.ಈಶ್ವರಪ್ಪ ಬೇಸರಪಟ್ಟುಕೊಂಡಿರಬಹುದು. ಅವರನ್ನು ವಾಪಸ್ ಕರೆತರುವ ಪ್ರಯತ್ನವನ್ನು ಹಿರಿಯರು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು
ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆಂದು ಅಲ್ಲಮ ಪ್ರಭು ಮೈದಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಎಸ್ ವೈ ಮಾತನಾಡಿದರು.
ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿಕೊಂಡ ಹಿನ್ನೆಲೆಯಲ್ಲಿ ಮಾತನಾಡಿರುವ ಬಿಎಸ್ ವೈ, ಮೋದಿಯವರ ಕಾರ್ಯಕ್ರಮದಲ್ಲಿ ಈಶ್ವರಪ್ಪ ಭಾಗಿಯಾಗಿ ಮಾತನಾಡಲಿದ್ದಾರೆ. ಅವರ ಮನವೊಲಿಸುವ ಪ್ರಯತ್ನವನ್ನು ಹೈಕಮಾಂಡ್ ಮಾಡುತ್ತಿದೆ ಎಂದರು.
ಪಕ್ಷಕ್ಕಾಗಿ ಈಶ್ವರಪ್ಪ ಬಹಳಷ್ಟು ದುಡಿದಿದ್ದಾರೆ. ಅವರ ಮಗ ಕಾಂತೇಶ್ ಗೆ ಟಿಕೆಟ್ ಸಿಕ್ಕಿಲ್ಲ ಎಂಬ ನೋವು ಅವರಲ್ಲಿದೆ. ಅದರಲ್ಲಿ ನನ್ನ ಪಾತ್ರ ಏನಿಲ್ಲ ಎಂದರು.