ಕೆ.ಎಸ್.ಈಶ್ವರಪ್ಪ ಮತ್ತೆ ಘೋಷಣೆ;* *ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ* *ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಖಚಿತ; ನನ್ನ ಪ್ರಯತ್ನ ಮೋದಿ ಮೆಚ್ತಾರೆ*
*ಕೆ.ಎಸ್.ಈಶ್ವರಪ್ಪ ಮತ್ತೆ ಘೋಷಣೆ;*
*ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ*
*ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಖಚಿತ; ನನ್ನ ಪ್ರಯತ್ನ ಮೋದಿ ಮೆಚ್ತಾರೆ*
ಚುನಾವಣೆಗೆ ಸ್ಪರ್ಧಿಸ್ತಿರೋ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಮಾ.18 ಕ್ಕೆ ನಡೆಯಲಿರೋ ಕಾರ್ಯಕ್ರಮಕ್ಕೆ ಹೇಗೆ ಹೋಗಲಿ? ಎಂದು ಬಿಜೆಪಿಯಲ್ಲಿ ಬಂಡಾಯ ಹೂಡಿರುವ ಕೆ.ಎಸ್.ಈಶ್ವರಪ್ಪ ಉಚ್ಛರಿಸಿದ್ದಾರೆ.
ಮೋದಿಯವರ ಕೈಯನ್ನು ಯಾವ ಕಾರಣಕ್ಕೂ ನಾನು ಬಿಡಲ್ಲ. ಅವರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಾರದ ಸಂದಿಗ್ಧ ಸ್ಥಿತಿಯಲ್ಲಿದ್ದೇನೆ ಎಂದರು.
ನಾನು ತೆಗೆದುಕೊಂಡಿರೋ ನಿರ್ಧಾರದ ಹಿಂದೆ ಬಿಜೆಪಿ ಪಕ್ಷ ಉಳಿಸುವ, ಸಿದ್ಧಾಂತ ಉಳಿಸುವ, ಏಕ ಕುಟುಂಬದ ಕೈಯಲ್ಲಿರುವ ಪಕ್ಷವನ್ನು ಕಾಪಾಡುವ ಪ್ರಯತ್ನವಿದೆ. ಈ ನನ್ನ ಪ್ರಯತ್ನವನ್ನು ನರೇಂದ್ರ ಮೋದಿಯವರು ಮೆಚ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಬಿಜೆಪಿ ಯಡಿಯೂರಪ್ಪ ಮತ್ತವರ ಮಕ್ಕಳ ಕೈಯಲ್ಲಿ ನರಳುತ್ತಿದೆ ಎಂದರು.
ಯಡಿಯೂರಪ್ಪ ಹಾಗೂ ವಿಜಯೇಂದ್ರರ ಕಪಿ ಮುಷ್ಟಿಯಲ್ಲಿ ರಾಜ್ಯ ಬಿಜೆಪಿ ಇದೆ. ಇದನ್ನು ಬಿಡುಗಡೆಗೊಳಿಸಲು ನಾನು ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, “ಮೊನ್ನೆ ನಡೆದ ಸಭೆಯ ನಂತರ ನಿರೀಕ್ಷೆ ಮೀರಿ ಸ್ಪಂದನೆ ದೊರೆತಿದೆ. ನಾನು ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಭೆಯ ಬಳಿಕ ಯಡಿಯೂರಪ್ಪನವರು ಸಂಧಾನಕ್ಕಾಗಿ ಆರಗ ಜ್ಞಾನೇಂದ್ರ ಅವರನ್ನು ಕಳುಹಿಸಿದ್ದರು. ನಾನು ಅವರ ಸಂಧಾನಕ್ಕೆ ಒಪ್ಪಿಲ್ಲ. ನನ್ನ ಮಗನಿಗೆ ಟಿಕೆಟ್ ತಪ್ಪಿಸಿದ್ದು ಮಾತ್ರವಲ್ಲ, ನನಗೆ ಅವರು ಮೋಸ ಮಾಡಿದ್ದಾರೆ. ಯಡಿಯೂರಪ್ಪ ಹಾಗೂ ಅವರ ಮಗನ ಕೈಯಲ್ಲಿ ಪಕ್ಷ ನಲುಗುತ್ತಿದೆ. ಲಿಂಗಾಯತರೆಲ್ಲರೂ ಯಡಿಯೂರಪ್ಪನವರ ಕೈಯಲ್ಲಿದ್ದಾರೆಂಬ ಭ್ರಮೆಯಲ್ಲಿ ಕೇಂದ್ರದ ನಾಯಕರಿದ್ದಾರೆ. ಲಿಂಗಾಯತರೇ ಬೇಕಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಅಧ್ಯಕ್ಷ ಸ್ಥಾನ ನೀಡಬಹುದಿತ್ತು. ಒಕ್ಕಲಿಗರಿಗೆ ಅಧ್ಯಕ್ಷ ಸ್ಥಾನ ನೀಡಬಹುದಿತ್ತು. ಸಿ.ಟಿ.ರವಿಗೆ ಅಧ್ಯಕ್ಷ ಸ್ಥಾನ ನೀಡಬಹುದಿತ್ತು. ಹಿಂದುಳಿದ ನಾಯಕನಾದ ನನ್ನನ್ನು ಅಧ್ಯಕ್ಷ ಮಾಡಬಹುದಿತ್ತು. ನಾನು ನನ್ನ ಪಕ್ಷಕ್ಕೆ ನಿಯತ್ತಾಗಿ ಇದ್ದೇನೆ” ಎಂದರು.
“ಅವರು ಹೇಳಿದ ಹಾಗೆ ಕೇಳಿದ್ದೇನೆ. ಪಕ್ಷ ನಿಷ್ಠೆಯಿಂದ ಹಲವಾರು ವರ್ಷಗಳಿಂದ ಇದ್ದೇನೆ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರರದ್ದೇ ಕಾರುಬಾರು ಆಗಿ ಹೋಗಿದೆ. ನೊಂದ ಕಾರ್ಯಕರ್ತರು ಇವರಿಂದ ನಲುಗಿ ಹೋಗಿದ್ದಾರೆ. ರಾಜ್ಯದಲ್ಲಿ ನೊಂದ ಕಾರ್ಯಕರ್ತರು ನನಗೆ ದೂರವಾಣಿ ಕರೆ ಮಾಡಿ, ಏನ್ ಸಾರ್ ಕೆಟ್ಟ ರಾಜಕಾರಣ ನಡೀತಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ನಾನು ಈ ರಾಜಕಾರಣದ ವಿರುದ್ಧ ಚುನಾವಣೆಗೆ ಸ್ಪರ್ದಿಸುತ್ತಿದ್ದೇನೆ” ಎಂದು ತಿಳಿಸಿದರು. ನನಗೆ ವಿವಿಧ ಮಠಾಧೀಶರು ಸಹ ಆಶೀರ್ವಾದ ಮಾಡಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.