ನೈರುತ್ಯ ಪದವೀಧರ ಚುನಾವಣೆ- ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಮನವಿ;   ಕ್ರಿಯಾಶೀಲ ರಾಜಕಾರಣಿ ನಾನು; ಅವಕಾಶ ಮಾಡಿಕೊಡಿ

ನೈರುತ್ಯ ಪದವೀಧರ ಚುನಾವಣೆ-
ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಮನವಿ;
ಕ್ರಿಯಾಶೀಲ ರಾಜಕಾರಣಿ ನಾನು; ಅವಕಾಶ ಮಾಡಿಕೊಡಿ
 ಕೆಲಸ ಮಾಡುವ ಹುಮ್ಮಸ್ಸಿದೆ, ಸಮಯವು ಇದೆ, ಸಾಧನೆಗಳನ್ನು ಮಾಡಿರುವೆ ಹಾಗಾಗಿ ಈ ಬಾರಿ ನನಗೊಂದು ಅವಕಾಶಕೊಡಿ ಮತ್ತಷ್ಟು ಕೆಲಸ ಮಾಡುವೆ ಎಂದು ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆ.ರಘುಪತಿಭಟ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಲ್ಲಿ ನಾನು ಟಿಕೇಟ್ ಆಕಾಂಕ್ಷಿಯಾಗಿದ್ದೆ ಆದರೆ ಅದು ಏಕೋ ಟಿಕೇಟ್ ತಪ್ಪಿದೆ. ಬಿಜೆಪಿಯಲ್ಲಿ ಪಕ್ಷದ ಸುತ್ತ ಸುತ್ತುವವರಿಗೆ ಆದ್ಯತೆ ನೀಡುತ್ತಿರುವುದರಿಂದ ಬೇಸರವಾಗಿದೆ. ನನಗೆ ಟಿಕೇಟ್ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಸಿಗಲಿಲ್ಲ. ಹೋಗಲಿ ನಿಷ್ಠಾವಂತ ಕಾರ್ಯಕರ್ತರಿಗೆ ಸಿಕ್ಕಿದ್ದರೂ ಕೂಡ ನಾನು ಚುನಾವಣೆಗೆ ಸ್ಪರ್ಧಿಸುತ್ತಿರಲಿಲ್ಲ ಎಂದರು.
ಬಿಜೆಪಿಯ ಪರಿವಾರದ ಜೊತೆ ಮಾತನಾಡುವ ಸಂಪ್ರಧಾಯ ಮತ್ತು ಸೌಜನ್ಯವೇ ಈಗ ಇಲ್ಲವಾಗಿದೆ. ಮೊದಲು ಪಕ್ಷದ ಮಂಡಲ ಮಟ್ಟದಿಂದ ಅಭ್ಯರ್ಥಿಯನ್ನು ಆಯ್ಕೆಮಾಡಲಾಗುತ್ತಿತ್ತು. ಈಗ ಆ ಪದ್ಧತಿ ಇಲ್ಲವಾಗಿದೆ. ಯಾರಿಗೂ ಬೇಕೋ ಅವರಿಗೆ ಟಿಕೇಟ್ ಕೊಡಲಾಗುತ್ತಿದೆ. ಇದು ಬಿಜೆಪಿಯ ಸಂಸ್ಕೃತಿಯಲ್ಲ, ಪಕ್ಷ ಈ ರೀತಿ ಮಾಡಿದರೆ ಮುಂದೊಂದು ದಿನ ಬೆಲೆತ್ತೆತ್ತ ಬೇಕಾಗುತ್ತದೆ ಎಂದರು.
೨೦೦೧ರಿಂದ ನನ್ನ ರಾಜಕೀಯ ಜೀವನ ಆರಂಭವಾಗಿದೆ. ೩ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಶಾಸಕನಾಗಿದ್ದಾಗ ಪೂರ್ಣಾವಾಧಿಯಲ್ಲಿ ಕೆಲಸ ಮಾಡಿದ್ದೇನೆ. ವಿವಿಧ ಹುದ್ದೆಗಳಿಗೆ ನ್ಯಾಯ ನೀಡಿದ್ದೇನೆ. ನನ್ನ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಿದ್ದೇನೆ. ಸಾಕಷ್ಟು ಸಮಸ್ಯೆಗಳಿಗೆ ಉತ್ತರ ಕೊಟ್ಟಿದ್ದೇನೆ. ಹಲವು ಟ್ರಸ್ಟ್‌ಗಳ ಮೂಲಕ ಕೆಲಸ ಮಾಡಿದ್ದೇನೆ. ಈ ಎಲ್ಲಾ ಕೆಲಸಗಳು ಪದವೀಧರ ಮತದಾರರಿಗೆ ಗೊತ್ತಿದೆ. ಹಾಗಾಗಿ ನಾನು ಈ ಬಾರಿ ಗೆಲ್ಲುತ್ತೇನೆ ಎಂದರು.
ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ನನಗೆ ಗೊತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಕೆಲಸಗಳನ್ನು ನಾನು ಮಾಡಿದ್ದೇನೆ. ಇದು ನನ್ನ ಆಸಕ್ತಿಯ ವಿಷಯವಾಗಿದೆ. ಸಾಧಕ ಶಿಕ್ಷಕ ಪ್ರಶಸ್ತಿಯನ್ನು ಆರಂಭಿಸಿದವನು ನಾನು. ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಎಲ್ಲಾ ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಬೇತಿಯನ್ನು ನೀಡಿದ್ದೇನೆ. ಉಡುಪಿಯಲ್ಲಿ ಸ್ನಾತಕೋತ್ತರ ಪದವಿ ಕಾಲೇಜನ್ನು ಆರಂಭಿಸಲು ಪ್ರಯತ್ನಿಸಿದ್ದೇನೆ ಎಂದರು.
ನಾನು ಗೆದ್ದರೆ ನೈರುತ್ಯ ಪದವೀಧರರ ಸಮಸ್ಯೆಗಳಿಗೆ ಸ್ಪಂಧಿಸುವೆ, ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ನನ್ನ ಮೊದಲ ಆದ್ಯತೆ ಇದೆ. ಪದವೀಧರರಿಗೆ ಕೌಶಲ್ಯ ತರಬೇತಿ ನೀಡುವುದು, ಉದ್ಯಮ ವಲಯಗಳನ್ನು ಸ್ಥಾಪಿಸುವುದು ಸೇರಿದಂತೆ ಹಲವು ಅಭಿವೃದ್ಧಿಗಳನ್ನು ಸರ್ಕಾರದ ಮಟ್ಟದಲ್ಲಿ ಜಾರಿಗೆ ತರಲು ನಾನು ಖಂಡಿತ ಪರಿಷತ್‌ನಲ್ಲಿ ಧ್ವನಿಯೆತ್ತುತ್ತೇನೆ ಎಂದರು.
ಬಿಜೆಪಿಯಿಂದ ಸ್ಪರ್ಧಿಸಿರುವ ಡಾ.ಧನಂಜಯ ಸರ್ಜಿಯವರು ಸೌಜನ್ಯಕ್ಕಾಗಿಯಾದರು ನನ್ನ ಭೇಟಿಯಾಗಲಿಲ್ಲ, ಮಾತು ಆಡಲಿಲ್ಲ ಹೋಗಲಿ ಅವರಿಗೆ ಟಿಕೇಟ್ ನೀಡುವುದನ್ನು ಬಿಟ್ಟು ಪಕ್ಷಕ್ಕಾಗಿ ದುಡಿದ ದತ್ತಾತ್ರಿಯವರಿಗೂ, ಗಿರೀಶ್ ಪಟೇಲ್ ಅವರಿಗೂ ಅಥವಾ ಮತ್ಯಾಯಾವುದೇ ನಿಷ್ಟಾವಂತ ಕಾರ್ಯಕರ್ತರಿಗೆ ನೀಡಿದ್ದರೆ ನಾನು ಅವರ ಪರವಾಗಿ ನಿಲ್ಲುತ್ತಿದ್ದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಶಂಕರ್, ದೇವದಾಸ್‌ನಾಯಕ್, ಕಾಚಿನಕಟ್ಟೆ ಸತ್ಯನಾರಾಯಣ, ವಕೀಲ ವಾಗೀಶ್, ಅ.ಮಾ.ಪ್ರಕಾಶ್, ರಾಜಯ್ಯ, ಪ್ರದೀಪ ಚಂದ್ರ, ಮೋಹನ್ ಜಾದವ್, ಎಚ್.ಶಂಕರ್, ಚಂದ್ರಶೇಖರ್, ನರೇಶ್ ಜೈನ್, ಸುಬ್ರಹ್ಮಣ್ಯ ಇದ್ದರು.